Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು -26: ಗಣಪಯ್ಯನವರು ಹಾರ್ಲೆ ತೋಟ ಕೊಂಡಿದ್ದು ಹೀಗೆ..

ಕಳೆದುಹೋದ ದಿನಗಳು -26: ಗಣಪಯ್ಯನವರು ಹಾರ್ಲೆ ತೋಟ ಕೊಂಡಿದ್ದು ಹೀಗೆ..

- Advertisement -
- Advertisement -

ಗಣಪಯ್ಯನವರ ಕಾಲದ ಮತ್ತು ಬದುಕಿನ ಒಂದು ಬಹುಮುಖ್ಯ ಸಂಗತಿಯಿದು.

ಗಣಪಯ್ಯ ಸಹೋದರರು, ಹಾರ್ಲೆ ತೋಟವನ್ನು ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಅಂದಿನ ಹಾರ್ಲೆ ಎಸ್ಟೇಟಿನ ಮ್ಯಾನೇಜರ್ (ಹೆನ್ರಿ ಗಾಡ್ ಫ್ರೆಯ ಮ್ಯಾನೇಜರ್) ಆಗಿದ್ದ ಮಿಡ್ಲ್‌ಟನ್‌ನ ಸಹಾಯ ಮುಖ್ಯವಾಗಿತ್ತು. ಹಾರ್ಲೆ ಎಸ್ಟೇಟನ್ನು ಗಾಡ್‌ಫ್ರೆ ಮಾರಲು ಹೊರಟಾಗ ಅದರ ಜವಾಬ್ದಾರಿಯನ್ನು ಕೊಟ್ಟದ್ದು ಮದರಾಸಿನ ಒಂದು ಕಂಪೆನಿಗೆ. ಅವರು ಹಾರ್ಲೆ ಎಸ್ಟೇಟಿನ ಮಾರಾಟಕ್ಕೆ ಟೆಂಡರ್ ಕರೆದರು. ಮಿಡ್ಲ್ ಟನ್ ಗೆ ಆಗಲೇ ಗಣಪಯ್ಯನವರ ಪರಿಚಯ ಇತ್ತು. ಇವರು ಟೆಂಡರ್ ಹಾಕುತ್ತಾರೆಂದು ತಿಳಿದಾಗ ಮಿಡ್ಲ್‌ಟನ್‌ ಗಣಪಯ್ಯನವರಿಗೆ “ಹಾರ್ಲೆ ತೋಟ ಖರೀದಿಗೆ ಪಿಯರ್ಸ್ ಲೆಸ್ಲೀ ಕಂಪೆನಿಯೂ ಟೆಂಡರ್ ಹಾಕುತ್ತಿದೆ, ನೀವು ಸ್ವಲ್ಪ ಟೆಂಡರ್ ಹಣವನ್ನು ಹೆಚ್ಚು ನಮೂದಿಸುವುದು ಒಳ್ಳೆಯದು” ಎಂದು ಸೂಚನೆ ಕೊಟ್ಟರಂತೆ. ಅಂತೆಯೇ ಇವರು ಅಂದಾಜಿನ ಮೇಲೆ ಸ್ವಲ್ಪ ಹೆಚ್ಚು ಬೆಲೆ ನಮೂದಿಸಿದರಂತೆ, ಹಾಗಾಗಿ ಹಾರ್ಲೆ ತೋಟ ಇವರಿಗೆ ಸಿಕ್ಕಿತು. ಗಣಪಯ್ಯನವರಿಗೆ ತೋಟ ಸಿಕ್ಕಿದ್ದರಿಂದ ಮಿಡ್ಲ್‌ಟನ್‌ಗೆ ಸಂತೋಷವಾಗಿತ್ತು ಎನ್ನುವುದು ಆತನ ಮಾತುಗಳಲ್ಲಿ ವ್ಯಕ್ತವಾಗಿದೆ.

ಮುಂದೆ ಗಣಪಯ್ಯ ಹಾರ್ಲೆ ತೋಟದ ಪಕ್ಕದಲ್ಲಿ ಉದ್ಯಾನವನ (ಹಾರ್ಲೆ ಪಾರ್ಕ್) ಈಜುಕೊಳ ಮುಂತಾದವನ್ನು ನಿರ್ಮಾಣ ಮಾಡುತ್ತಿದ್ದಾಗ, ಕೆಲವರು ತಕರಾರು ಮಾಡುತ್ತಿದ್ದರು. ಆ ಪಾರ್ಕಿನ ಮುಖ್ಯ ಭಾಗವಾದ ಈಜುಕೊಳ, ಊಟದ ಸ್ಥಳ, ಶೌಚಾಲಯ ಮುಂತಾದ ಜಾಗಗಳು ಅವರ ಹಿಡುವಳಿಯಲ್ಲಿದ್ದರೂ ಪಾರ್ಕಿನ ಮುಂಭಾಗದ ಪ್ರವೇಶದ್ವಾರದ ಸ್ಥಳ ಸರ್ಕಾರಿ ನೆಲದಲ್ಲಿತ್ತು. ಈ ಪಾರ್ಕು ಸಾರ್ವಜನಿಕರಿಗಾಗಿ ನಿರ್ಮಾಣ ಮಾಡುತ್ತಿರುವುದರಿಂದ ಅದನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಹೀಗೆ ಕೆಲವರು ತಕರಾರು ಮಾಡುವಾಗ “ನಮಗೆ ದನ ಮೇಯಿಸಲು ಜಾಗ ಇಲ್ಲ. ಎಲ್ಲಾ ಕಡೆ ದಲಿತರಿಗೆ ಮನೆ ಕಟ್ಸಿ ಗಿಡ ಹಾಕುಸ್ತಾರೆ. ಈಗ ಇಲ್ಲಿ ಪಾರ್ಕ್ ಮಾಡ್ತಾ ಇದ್ದಾರೆ” ಎಂದು ದೂರುತ್ತಿದ್ದರು.

ಪಿಯರ್ಸ ಮತ್ತು ಲೆಸ್ಲಿ

ಇದಕ್ಕೆ ಕಾರಣಗಳು ಬೇರೆಯೇ ಇದ್ದವು. ಊರಿನಲ್ಲಿ ಹಲವಾರು “ಗಣ್ಯರು” ಸರ್ಕಾರಿ ಜಾಗಕ್ಕೆ ಬೇಲಿಸುತ್ತಿ ಗಿಡಹಾಕಿದಾಗ ಇವರ ತಕರಾರುಗಳೇನೂ ಇರಲಿಲ್ಲ.

ಗಣಪಯ್ಯನವರು ಹಾರ್ಲೆಗೆ ಬಂದ ಕೆಲವೇ ಸಮಯದಲ್ಲಿ ಅಲ್ಲೇ ಪಕ್ಕದ ಒಂದು ಕುಟುಂಬದವರು ದುರಭ್ಯಾಸಗಳಿಂದ ಸಾಲ ಮಾಡಿ ಜಮೀನು ಅಡವಿಟ್ಟು ಕಷ್ಟದಲ್ಲಿದ್ದರು. ನಂತರ ಅವರು ಗಣಪಯ್ಯನವರಲ್ಲಿ ಬಂದು ಏನೋ ಆಗಿಹೋಯಿತು ಸಹಾಯ ಮಾಡಿ ಎಂದು ಕೇಳಿದಾಗ ಅದನ್ನು ಗಣಪಯ್ಯ ಬಿಡಿಸಿಕೊಟ್ಟಿದ್ದರು. ನಂತರವೂ ಇದು ಹಾಗೆಯೇ ಮುಂದುವರೆದಾಗ ಆ ಮನೆಯ ಹೆಣ್ಣುಮಗಳು ಬಂದು ಗಣಪಯ್ಯನವರಲ್ಲಿ ಕಷ್ಟ ಹೇಳಿಕೊಂಡರು. ಮತ್ತೊಮ್ಮೆ ಗಣಪಯ್ಯ ಅವರನ್ನೆಲ್ಲ ಒಟ್ಟುಸೇರಿಸಿ ಬುದ್ಧಿ ಹೇಳಿದರೂ ಪ್ರಯೋಜನವಾಗಲಿಲ್ಲ. ಆಗ ಗಣಪಯ್ಯ ಅವರ ಒಂದಷ್ಟು ಜಮೀನನ್ನು ತಾವೇ ಕೊಂಡು, ಸಾಲವನ್ನೂ ತೀರಿಸಿ ಉಳಿದ ಆ ಹಣಕ್ಕೆ ತಮ್ಮ ಕೈಯಿಂದ ಸ್ವಲ್ಪ ಸೇರಿಸಿ ಬ್ಯಾಂಕಿನಲ್ಲಿ ಇಟ್ಟದ್ದೂ ಅಲ್ಲದೆ ಆಕೆಯ ಬದುಕಿಗೆ ಸಹಾಯವಾಗುವಂತೆ ಮಾಡಿದ್ದರು. ಹಾಗೆ ಬ್ಯಾಂಕಿನಲ್ಲಿ ಇಟ್ಟ ಹಣ ಮುಂದೆ ಬೆಳೆದು ಆಕೆಯ ವೃದ್ಧಾಪ್ಯದಲ್ಲಿ ಒಂದು ಇಡುಗಂಟಾಗಿ ದೊರೆಯಿತು. ಇದು ಆ ಮನೆಯ ಕೆಲವು ಹಿರಿಯ ಗಂಡಸರನ್ನು ಕೆರಳಿಸಿತ್ತು. ಅವರು ಆ ಬಗ್ಗೆ ಹಲವು ವರ್ಷಗಳ ಕಾಲ ದ್ವೇಷ ಸಾಧಿಸುತ್ತಿದ್ದರು ಮತ್ತು ಗಣಪಯ್ಯನವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ಕೊಟ್ಟು ಪ್ರಯೋಜನವಾಗದೆ ನಿರಾಶರಾದರು. ನಂತರ ಹೀಗೆ ಅಲ್ಲಿ ಇಲ್ಲಿ ಮೂಗರ್ಜಿ ಬರೆಯುತ್ತ ತಕರಾರು ಮಾಡುತ್ತ ಇದ್ದರು. ಪಾರ್ಕಿನ ಜಾಗದ ತಕರಾರಿಗೂ ಇವರೇ ಕಾರಣರಾಗಿದ್ದರು.

ಗಣಪಯ್ಯನವರು ಇದರಿಂದ ವಿಚಲಿತರಾಗಲಿಲ್ಲ. ಇಂತಹ ಹಲವಾರು ಪ್ರಸಂಗಗಳನ್ನು ಅವರು ಎದುರಿಸಿದ್ದರು.

ಗಣಪಯ್ಯನವರ ಕಾಲಾನಂತರ ಆ ಹೆಣ್ಣುಮಗಳು ರವೀಂದ್ರನಾಥರಿಗೂ, ನನಗೂ ಬರೆದ ಜಂಟಿ ಪತ್ರ ಬರೆದರು. ಆ ವಿಚಾರಗಳನ್ನು ಹೀಗೆ ವಿವರಿಸುತ್ತದೆ.

ಆ ಪತ್ರ ಹೀಗಿದೆ……

ಆ ತಾಯಿ ಯೊಬ್ಬರ ಪತ್ರ

ರವೀಂದ್ರನಾಥರವರಿಗು ಮತ್ತು ಪ್ರಶಾದನವರಿಗು ನಮಸ್ಕಾರಗಳು. ಏನೆಂದರೆ ವಿಸಿಆ, (ವಿಷಯ) ಮದ್ಲುಗೆ (ಮೊದಲಿಗೆ) ತೋಟ ಬೋಗ್ಯ ಮಾಡಿದ್ರು (ನಮ್ಮ ಮಾವ) ಬಿಡಿಸಿಕೊಂಡ್ರು. ನಾವು ದೇವಲಕೆರೆ ಹತ್ತಿರ ಬೆಂಬಳೆಯವರಂತೆ. ನಮ್ಮ ಮಾವನವರಿಗೂ ಸಹ ಇಲ್ಲಿಗೆ ಬಂದಿದ್ದು ಗೊತ್ತಿಲ್ಲ. ಹಿಂದೆ ಇಲ್ಲಿ ಏಳು ಎಕರೆ ಆಸ್ತಿ ಮಾರಿದ್ರು. ನಮ್ಮ ಮಕ್ಕಳು ಚಿಕ್ಕವು. ಮಾವ ಇರಲಿಲ್ಲ (ತೀರಿಕೊಂಡಿದ್ದರು) ತಾಯಿ ಮಗ ಸೈನ್ ಹಾಕಿದ್ದು. (ಗಂಡ ಮತ್ತು ಅತ್ತೆ) ನನಗೆ ಗೊತ್ತಿಲ್ಲ. ಆಮೇಲೆ ಗದ್ದೆ ಬಸಪ್ಪ ಗೌಡನಿಗೆ ಬೊಗ್ಯ ಮಾಡಿದ್ದು ಅದನ್ನು ಮಕ್ಕಳ ಸ್ಥಿತಿ ನೋಡಲಾಗದೆ ಇದೇ ಸಾವುಕಾರರು (ಗಣಪಯ್ಯ) ಬಿಡಿಸಿಕೊಟ್ರು. ಆಮೇಲೆ ಎರಡು ಎಕರೆ ಮಾರಿದ್ರು. ಸಾವುಕಾರರಲ್ಲಿ ದೂರು ಕೊಟ್ಟೆ. ಅವರು ಎಲ್ಲರನ್ನು ಕರೆಸಿ ಮಕ್ಕಳ ಹೆಸರಿಗೆ (ಉಳಿದ ಆಸ್ತಿ) ಮಾಡಿದರು.

ಅತ್ತೆಯ ಹತ್ತಿರ ಏಟು ತಿನ್ನಲು ಸಾದ್ಯವಾಗಲಿಲ್ಲ. ಕೊವಿ ಇತ್ತು ಅದನ್ನೆ ಎತ್ತಿ ಬರುತಿದ್ರು. ನನ್ನ ಗಂಡನ ಆಸ್ತಿ ಹೇಳುತಿದ್ರು. ಇಲ್ಲೇ ಕರೆಸಿ ಸಾವುಕಾರರು (ಗಣಪಯ್ಯ) ಬೈದ್ರು ಕೇಳಲಿಲ್ಲ. ಮಕ್ಕಳನ್ನು ಎಲ್ಲೆಲ್ಲೊ ಬಿಟ್ಟು ಹತ್ತನೆ ಕ್ಲಾಸು ಒದಿಸಿದೆ. ಆ ಮಿಡ್ಲ್‌ಟನ್‌ ಸಾಹೇಬರಿದ್ದಾಗ ನಮ್ಮ ಮಾವನವರನ್ನು ಸಿಕಾರಿಗೆ ಕರೆಯುತ್ತಿದ್ದರಂತೆ. ಈ ಸಾವುಕಾರರು ಒಳ್ಳೆ ಜನ(ಗಣಪಯ್ಯ) ಇವರನ್ನು ನೀವು ಬಿಡಬೇಡಿ ಎಂದು ಹೇಳಿದ್ರಂತೆ. ಬ್ಯಾಂಕಿನಿಂದ ಹಣ ತೆಗೆದದ್ದು (ಸಾಲ) ಹೌದು, ತೀರ್ಮಾನವಾಗಿದೆ. (ಸಾಲ ತೀರಿಸಿ ಆಗಿದೆ) ಡಾಕ್ಟುರು (ರವೀಂದ್ರನಾಥ) ಸುಮಾರು ಬಡ್ಡಿ ಉಳಿಸಿಕೊಟ್ಟಿದ್ದಾರೆ.

ಸಾವುಕಾರು (ಗಣಪಯ್ಯ) ನಿಮ್ಮ ಹತ್ತಿರ ದುಡ್ಡಿದ್ದರೆ ಬ್ಯಾಂಕಿಗೆ ಇಟ್ಟುಕೊಳ್ಳಿ ಎಂದು ಹೇಳಿದು, ಹಾಳಾಗುತ್ತೆ ಹೇಳಿದರು. ಒಂಬೈನೂರಿತ್ತು ಅವರೇ ನೂರು ಸೇರಿಸಿ ಇಟ್ಟರು. ನಾನು (ಜೊತೆಯಲ್ಲಿಬ್ಯಾಂಕಿಗೆ) ಹೊದೆ.

ಆ ಮೇಲೆ ನಾಲ್ಕು ಎಮ್ಮೆ ತೆಗೆದು ನಾನೆ ಕಾಯುವುದು ಹಾಲು ಕೊಡಲು ಮಾಡಿದೆ. ಎಮ್ಮೆ ತಗಲು ಸಾವುಕಾರರೆ ಎರಡು ಸಾವಿರ ಹೀಗೆ ದುಡ್ಡು ಕೊಡೆಂದು ಅಮ್ಮನಿಗೆ ಹೇಳುತಿದ್ರು. ಸ್ವಲ್ಪ ವರುಶದಲ್ಲಿ ಅವರ ದುಡ್ಡು ಕೊಟ್ಟೆ. ಡಾಕ್ಟ್ರು ಬೆಂಗಳೂರಿನಲಿದ್ರು. ಇವರೆಲ್ಲ ನನ್ನ ತಂದೆ ಅಣ್ಣನ ಹಾಗೆ ಸಾಕಿದರು. ನನ್ನ ಎರಡು ಮಕ್ಕಳು ಹೋದ ಮೇಲೆ ವ್ಯತೆಯು ಜಾಸ್ತಿ ಆಯಿತು. ಏನು ಬೇಡ ಮಾಡಲು ಆಗುವುದಿಲ್ಲ (ಅದಕ್ಕೆ) ಮಾರಬೇಕೆಂದು ಮಾಡಿದ್ದು. ಆವಾಗಿನ ಸಾವಿರ ರೂಪಾಯಿ ಈಗಿನ ಲಕ್ಷ ಕೂಡುವುದಿಲ್ಲ (ಸಮನಲ್ಲ)

ಮುಂದೆ ದೇವರಿಚ್ಛೆ, ಸಾವುಕಾರು ಯಾವಾಗಲೂ ಹೇಳುತಿದ್ರು, ನಿಮ್ಮ ಜಮೀನಿನ ಮಣ್ಣು ಹಾರ್ಲೆ ತೋಟದಲ್ಲಿ ಸಿಕ್ಕಿ ಹಾಳು ಮಾಡಿದಿರಿ ಎಂದು. (ನಿಮ್ಮ ಜಮೀನು ನನಗೆ ಮಾರಿ ನನ್ನನ್ನು ದೂರುವಂತೆ ಮಾಡಿದಿರಿ ಎಂದರ್ಥ)

ಪುರಾಣವೆಂದು ಬೇಸರ ಮಾಡಬೇಡಿ ಓದಿ ನೋಡಿ.

(ಆವರಣದೊಳಗಿನ ವಿವರಣೆಗಳು ನನ್ನದು)

ಅನೇಕ ಸಲ ನಾನು ಅವರನ್ನು ಬ್ಯಾಂಕಿಗೆ ಕರೆದೊಯ್ದು ಬಡ್ಡಿ ತೆಗೆಸಿ ಕೊಡುತ್ತಿದ್ದೆ. ನಂತರ ಅವರು ಬ್ಯಾಂಕಿನಲ್ಲಿದ್ದ ಹಣವನ್ನು ಪಡೆದು ದೂರದಲ್ಲಿದ್ದ ಬಂಧುಗಳ ಮನೆಗೆ ಹೋದರು. ಈಗ ಎಲ್ಲಿದ್ದಾರೆಂದು ತಿಳಿಯದು.

ಬಾಲ ನಿಕೇತನದ ಸಾರ್ಥಕತೆಯ ಸಾಕ್ಷಿ

ಇಂತಹ ಹಲವಾರು ಪ್ರಸಂಗಗಳನ್ನು ಗಣಪಯ್ಯ ಮುಂದೆಯೂ ಎದುರಿಸಿದರು.

ಅವರು ಒಮ್ಮೆ ಹಾರ್ಲೆ ತೋಟದ ಟಿಂಬರ್ ಮಾರಾಟ ಮಾಡಿದರು. ಟಿಂಬರ್‌ನ ಜೊತೆಯಲ್ಲಿ ಒಂದಷ್ಟು ಸೌದೆ ಸಾಗಾಣಿಕೆ ಪರ್ಮಿಟ್ಟುಗಳು ದೊರೆಯುತ್ತವೆ. ಆಗ ಸ್ಥಳೀಯ ರಾಜಕಾರಣಿಯೊಬ್ಬರು ಗಣಪಯ್ಯನವರಲ್ಲಿ ತನಗೊಂದಷ್ಟು ಪರ್ಮಿಟ್ಟುಗಳನ್ನು ಕೊಡುವಂತೆ ಕೇಳಿದರು. ಸಾಮಾನ್ಯವಾಗಿ ಇಂತ ಪರ್ಮಿಟ್ಟುಗಳು ಬೇರೆ ಸ್ಥಳದಲ್ಲಿ, ಹೆಚ್ಚಿನ ಸಲ ಸರ್ಕಾರಿ ಜಾಗದಲ್ಲಿ ಮರಕಡಿದು ಸೌದೆ ಸಾಗಾಣಿಕೆಗೆ ಬಳಕೆಯಾಗುತ್ತವೆ. ಗಣಪಯ್ಯನವರು ಅದನ್ನು ಕೊಡಲಿಲ್ಲ.

ಆ ರಾಜಕಾರಣಿ ಸಿಟ್ಟಿಗೆದ್ದು ಗಣಪಯ್ಯ ಸರ್ಕಾರಿ ಜಾಗದಲ್ಲಿ ಮರ ಕಡಿದಿದ್ದಾರೆ ಎಂದು ಹುಯಿಲೆಬ್ಬೆಸಿ, ಅದು ವಿಧಾನ ಸಭೆಯಲ್ಲಿಯೂ ಪ್ರಸ್ತಾಪವಾಗುವಂತೆ ಮಾಡಿದರು. ಅದು ಪತ್ರಿಕೆಗಳಲ್ಲಿಯೂ ಸುದ್ದಿಯಾಗಿ, ಕೊನೆ ತನಿಖೆಯಾಗಿ ಸರ್ವೆ ನಡೆಯಿತು. ತನಿಖೆ ಮುಗಿದು ದೂರಿನಲ್ಲಿ ಹುರುಳಿಲ್ಲವೆಂದು ತೀರ್ಮಾನವಾಯಿತು. ಆದರೆ ಟಿಂಬರ್ ಕಡಿದು ಸಾಗಾಣಿಕೆ ಮಾಡಲು ಒಂದಷ್ಟು ತಿಂಗಳು ತಡವಾಗಿ ನಷ್ಟವಾಯಿತು. ಆದರೆ ಗಣಪಯ್ಯನವರಾಗಲೀ ರವೀಂದ್ರನಾಥರಾಗಲೀ ಅದಕ್ಕೆ ಜಗ್ಗಲಿಲ್ಲ.

ಗಣಪಯ್ಯನವರ ಕಾಲಾನಂತರ ಮುಂದೆಯೂ ಇಂಥ ಪ್ರಸಂಗಗಳು ನಡೆದಿವೆ.

ಸಕಲೇಶಪುರದಲ್ಲಿ ನಡೆಯುತ್ತಿದ್ದ ಬಾಲನಿಕೇತನ ಅನಾಥಾಶ್ರಮದಲ್ಲಿ ಅಡಿಗೆ ಮತ್ತು ಸ್ನಾನಕ್ಕೆಂದು ತೋಟದಿಂದ ಮರಗಸಿ ಮಾಡಿದ ಕೋಲು ಸೌದೆಯನ್ನು ಸಾಗಿಸುವಾಗ ಪೋಲಿಸ್ ಅಧಿಕಾರಿಯೊಬ್ಬರು, ಎಸ್ಟೇಟಿನ ಲಾರಿ (ಲಾರಿಯ ಕಾಲುಭಾಗವೂ ಸೌದೆ ಇರಲಿಲ್ಲ)ಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಅದಕ್ಕೂ ಕಾರಣ ಬೇರೆ ಇತ್ತು. ಆಗ ಅರಣ್ಯ ಇಲಾಖೆಯವರೇ ಪೋಲಿಸ್ ಅಧಿಕಾರಿಗೆ ಇದು ಬೇಡ ಬಿಡಿ ಎಂದರಂತೆ, ಆದರೆ ಅವರು ಹಠಕ್ಕೆ ಬಿದ್ದಿದ್ದರು.

ಲಾರಿ ಒಂದು ವಾರ ಅಲ್ಲೇ ಇದ್ದರೂ ರವೀಂದ್ರನಾಥರು ಅದನ್ನು ಬಿಡಿಸಿಕೊಳ್ಳಲು ಹೋಗಲಿಲ್ಲ. ಅದನ್ನು ನೋಡಿದವರೆಲ್ಲ ನಗಲಾರಂಭಿಸಿದ್ದರಿಂದ, ಅರಣ್ಯಾಧಿಕಾರಿಗಳಿಗೆ ಮುಜುಗರವಾಗತೊಡಗಿತು. ನಂತರ ಅವರವರೇ ಮಾತಾಡಿಕೊಂಡು ಲಾರಿಯನ್ನು ಬಿಟ್ಟು ಕಳುಹಿಸಿದರು. ಆ ನಂತರವೂ ಈ ರೀತಿಯ ಹಲವು ಘಟನೆಗಳು ನಡೆಯುತ್ತಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...