ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಪಕ್ಷಾಂತರಿಗಳನ್ನು ಶತಾಯಗತಾಯ ಸೋಲಿಸಬೇಕೆಂದು ಪಟತೊಟ್ಟಿದ್ದ ಮಾಜಿ ಸಿಎಂ ಕಮಲ್‌ನಾಥ್‌ಗೆ ಚುನಾವಣಾ ಆಯೋಗ ಅಡ್ಡಗಾಲು ಹಾಕಿದೆ. ಚುನಾವಣೆಗೆ ಕೇವಲ ಮೂರು ದಿನ ಇರುವಾಗ ಕೊನೆಕ್ಷಣದಲ್ಲಿ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಆಯೋಗ ತಿಳಿಸಿದೆ.
ಹಲವು ಎಚ್ಚರಿಕೆಗಳ ಹೊರತಾಗಿಯೂ ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಆಯೋಗ ಈ ಕ್ರಮ ಕೈಗೊಂಡಿದೆ. ರಾಜಕೀಯ ಪಕ್ಷದ ಮುಖಂಡರಾಗಿದ್ದುಕೊಂಡು ಕಮಲ್ ನಾಥ್‌ರವರು ನೈತಿಕ ಮತ್ತು ಘನತೆಯ ನಡವಳಿಕೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗ ದೂರಿದೆ.
ಆಯೋಗದ ಈ ನಿರ್ಧಾರದಿಂದಾಗಿ ಈಗ ಯಾವುದೇ ಅಭ್ಯರ್ಥಿಯ ಪರವಾಗಿ ಕಮಲ್ ನಾಥ್ ಪ್ರಚಾರದಲ್ಲಿ ಭಾಗಿಯಾದರೆ ಆ ಕಾರ್ಯಕ್ರಮದ ಪೂರ್ತಿ ಖರ್ಚು ಅಭ್ಯರ್ಥಿಯ ಮಿತಿಗೆ ದಾಖಲಾಗುತ್ತದೆ. ಸ್ಟಾರ್ ಪ್ರಚಾರಕರಾಗಿ ಭಾಗಿಯಾದರೆ ಆ ಖರ್ಚು ಪಕ್ಷದ ಖಾತೆಗೆ ದಾಖಲಾಗುತ್ತದೆ. ಪಕ್ಷಕ್ಕೆ ಇಂತಿಷ್ಟೇ ಖರ್ಚು ಮಾಡಬೇಕೆಂಬ ಮಿತಿ ಇರುವುದಿಲ್ಲ.
ಈ ಕುರಿತು ಕೆಂಡಾಮಂಡಲವಾಗಿರುವ ಕಮಲ್‌ನಾಥ್ ಆಯೋಗದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನು ನೇಮಿಸುವುದು ಎಲ್ಲಾ ಪಕ್ಷಗಳ ಹಕ್ಕು. ಪಕ್ಷದ ತೀರ್ಮಾನಗಳಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡುವಂತಿಲ್ಲ. ಆಯೋಗದ ಈ ನಿರ್ಧಾರವು ಅಭಿವ್ಯಕ್ತಿ ಮತ್ತು ಚಳವಳಿಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ನನ್ನನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡುವ ಕುರಿತು ಆಯೋಗ ಮುಂಚಿತವಾಗಿ ಯಾವುದೇ ನೋಟಿಸ್ ನೀಡಿಲ್ಲ ಎಂದು ಕಮಲ್‌ನಾಥ್ ಆರೋಪಿಸಿದ್ದಾರೆ.
ಮಧ್ಯಪ್ರದೇಶ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಪರವಾಗಿ ಮಾಜಿ ಮುಖ್ಯಮಂತ್ರಿ ಕಮಲನಾಥ್, ದಾಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಭಾಷಣದಲ್ಲಿ ಸುರೇಶ್ ರಾಜೆ ಅವರ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರನ್ನು ಐಟಂ ಎಂದು ಕರೆದಿದ್ದರು. ಇದಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಅವರು ನಾನು 9 ಬಾರಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಲೋಕಸಭೆಯಲ್ಲಿ ಅಜೆಂಡಾ ಶೀಟ್ ಮಂಡಿಸುತ್ತಾರೆ. ಅದರಲ್ಲಿ ಐಟಂ ನಂಬರ್ 1, ಐಟಂ ನಂಬರ್ 2… ಎಂದು ಬರೆದಿರುತ್ತದೆ. ಅದು ನನ್ನ ಮನಸ್ಸನಲ್ಲಿತ್ತು. ನಾನು ಯಾರಿಗೂ ನೋವಾಗುವ ಉದ್ದೇಶದಿಂದ ಅದನ್ನು ಬಳಸಿರಲಿಲ್ಲ. ಆದರೂ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು.
ಅಲ್ಲದೇ ಅಕ್ಟೋಬರ್ 13 ರಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ನೌಟಂಕಿ ಕಲಾಕಾರ್ ಎಂದು ಕರೆದಿದ್ದರು. ಈ ಹೇಳಿಕೆಗಳಿಗೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.
ನವೆಂಬರ್ 3 ರಂದು ರಾಜ್ಯದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಅದರಲ್ಲಿ 22 ಜನ ಕಾಂಗ್ರೆಸ್ ಸದಸ್ಯರು ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ‘ಐಟಂ’ ಹೇಳಿಕೆಗೆ ಕಮಲನಾಥ್ ವಿವರಣೆ ನೀಡಬೇಕು ಎಂದ ಚುನಾವಣಾ ಆಯೋಗ!


