ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಕೊನೆಗೂ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಅವರೊಂದಿಗೆ ಕ್ಷಮೆ ಕೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ನಟಿ ಕಂಗನಾ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಶುಕ್ರವಾರ ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಕ್ಷಮೆ ಯಾಚಿಸಿದ ಕಂಗನಾ
ಮುಂಬೈಯಲ್ಲಿ ಶುಕ್ರವಾರ ಇಬ್ಬರು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ದೂರುಗಳನ್ನು ಹಿಂಪಡೆಯುವ ನಿರ್ಧಾರವನ್ನು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದ ನಂತರ, ಅಖ್ತರ್ ಜೊತೆಗೆ ತಾನು ಇರುವ ಪೋಟೋ ಪೋಸ್ಟ್ ಮಾಡಿರುವ ಕಂಗನಾ, ಕಾನೂನು ವಿವಾದವನ್ನು ಪರಿಹರಿಸಿದ್ದೇವೆ ಎಂದು ಹೇಳಿದ್ದಾರೆ. ಕ್ಷಮೆ ಯಾಚಿಸಿದ ಕಂಗನಾ
ಈ ಬಗ್ಗೆ ಕಂಗನಾ ಅವರು ತನ್ನ ಇನ್ಸ್‌ಟಾಗ್ರಾಂನಲ್ಲಿ ಬರೆದಿದ್ದು, “ಇಂದು, ಜಾವೇದ್ ಅವರು ಮತ್ತು ನಾನು ನಮ್ಮ ನಡುವಿನ ಕಾನೂನು ಪ್ರಕರಣವನ್ನು (ಮಾನನಷ್ಟ ಪ್ರಕರಣ) ಮಧ್ಯಸ್ಥಿಕೆಯ ಮೂಲಕ ಪರಿಹರಿಸಿದ್ದೇವೆ. ಮಧ್ಯಸ್ಥಿಕೆಯಲ್ಲಿ ಜಾವೇದ್ ಅವರು ತುಂಬಾ ದಯೆ ಮತ್ತು ದಾಕ್ಷಿಣ್ಯ ಹೊಂದಿದ್ದರು. ಅವರು ನನ್ನ ಮುಂದಿನ ನಿರ್ದೇಶನದ ಚಿತ್ರಕ್ಕಾಗಿ ಹಾಡುಗಳನ್ನು ಬರೆಯಲು ಕೂಡಾ ಒಪ್ಪಿಕೊಂಡರು” ಎಂದು ಬರೆದಿದ್ದಾರೆ.
ಅದಾಗ್ಯೂ, ನ್ಯಾಯಾಲಯವು ನಂತರ ಈ ಬಗ್ಗೆ ಔಪಚಾರಿಕ ಆದೇಶವನ್ನು ನೀಡಲಿದೆ ಎಂದು ವರದಿಯಾಗಿದೆ. ತಪ್ಪು ತಿಳುವಳಿಕೆಯಿಂದಾಗಿ ಅಖ್ತರ್ ವಿರುದ್ಧ ಹೇಳಿಕೆ ನೀಡಿರುವುದಾಗಿ ನಟ ಹೇಳಿದ್ದು, ಅದರಿಂದ ಅವರಿಗೆ ಉಂಟಾದ ಅನಾನುಕೂಲತೆಗೆ ಕ್ಷಮೆಯಾಚಿಸಿದರು ಎಂದು TNIE ವರದಿ ಹೇಳಿದೆ.

2020 ರಲ್ಲಿ ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಆ ವರ್ಷದ ಜುಲೈನಲ್ಲಿ ಕಂಗನಾ ಅವರು ಸುದ್ದಿ ಚಾನೆಲ್‌ಗೆ ಸಂದರ್ಶನವೊಂದನ್ನು ನೀಡಿದ್ದರು. ಈ ವೇಳೆ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವಿಚಾರದಲ್ಲಿ ಜಾವೇದ್ ಹೆಸರನ್ನು ಎಳೆದು ತಂದಿದ್ದರು. ಈ ಬಗ್ಗೆ ದೂರು ದಾಖಲಿಸಿದ್ದ ಜಾವೇದ್ ಅವರು, ಕಂಗನಾ ತನ್ನ ‘ಖ್ಯಾತಿ’ಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದರ ನಂತರ ಕಂಗನಾ ಅವರು ಕೂಡಾ ಜಾವೇದ್ ಅಖ್ತರ್ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಘನತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ್ದರು. ತನ್ನ ದೂರಿನಲ್ಲಿ ಅವರು, 2016 ರಲ್ಲಿ ಜಾವೇದ್ ಅಖ್ತರ್ ಅವರನ್ನು ತಾನು ಭೇಟಿಯಾಗಿದ್ದೆ. ಈ ವೇಳೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕ್ರಿಮಿನಲ್ ರೀತಿಯಲ್ಲಿ ಬೆದರಿಸಿದ್ದಾರೆ ಎಂದು ಹೇಳಿಕೊಂಡಿದ್ದರು.
ಕಂಗನಾ ಅವರ ಪರ ವಕೀಲ ರಿಜ್ವಾನ್ ಸಿದ್ದಿಕಿ ಮತ್ತು ಜಾವೇದ್ ಅಖ್ತರ್ ಅವರ ವಕೀಲ ಜಯ ಕುಮಾರ್ ಭಾರದ್ವಾಜ್ ಅವರು ಬಾಂದ್ರಾದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಒಂದು ಗಂಟೆಯ ಮಧ್ಯಸ್ಥಿಕೆಯ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದ್ದಾರೆ. ತಾನು ತಪ್ಪು ತಿಳುವಳಿಕೆಯಿಂದಾಗಿ ಹೇಳಿಕೆ ನೀಡಿದ್ದೇನೆ ಎಂದು ಮಧ್ಯವರ್ತಿ ಮುಂದೆ ಕಂಗನಾ ಹೇಳಿದ್ದಾರೆ ಮತ್ತು ಅದನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಭಾರದ್ವಾಜ್ ಪಿಟಿಐಗೆ ತಿಳಿಸಿದ್ದಾರೆ.
ತನ್ನ ಹೇಳಿಕೆಯಿಂದ ಉಂಟಾದ ಅನಾನುಕೂಲತೆಗಾಗಿ ಕಂಗನಾ ಕ್ಷಮೆಯಾಚಿಸಿದ್ದು, ಭವಿಷ್ಯದಲ್ಲಿ ಅಂತಹ ಹೇಳಿಕೆ ನೀಡುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾವು ಬಹಳ ಸಮಯದಿಂದ ಮಧ್ಯಸ್ಥಿಕೆಗಾಗಿ ಹುಡುಕುತ್ತಿದ್ದೆವು. ನಾವು ಕರಡುಗಳನ್ನು ಸಹ ವಿನಿಮಯ ಮಾಡಿಕೊಂಡಿದ್ದೇವೆ. ಅಂತಿಮವಾಗಿ ನಾವು ಪ್ರಕರಣವನ್ನು ಪರಿಹರಿಸಿದ್ದೇವೆ ಎಂದು ಕಂಗನಾ ಪರ ವಕೀಲ ಸಿದ್ದಿಕ್ ಹೇಳಿದ್ದಾರೆ. “ಯಾವುದೇ ಸಮಸ್ಯೆಗಳಿರಲಿಲ್ಲ, ಪದಗಳನ್ನು ಮಾತ್ರ ನಿರ್ಧರಿಸಬೇಕಾಗಿತ್ತು, ಅದನ್ನು ಇಂದು ಮಾಡಲಾಯಿತು. ನಾವು ಕರಡನ್ನು ಸಿದ್ಧಪಡಿಸಿದ್ದು, ಅದಕ್ಕೆ ಸಹಿ ಹಾಕಿದ್ದೇವೆ. ಜೊತೆಗೆ ಎರಡೂ ಪ್ರಕರಣಗಳನ್ನು ಇಂದು ಹಿಂತೆಗೆದುಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
ಪ್ರಕರಣವನ್ನು ಆರಂಭದಲ್ಲಿ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆ ನಡೆಸಿತು. 2024 ರಲ್ಲಿ, ಕಂಗನಾ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ನಂತರ, ಪ್ರಕರಣವನ್ನು ಸಂಸದ ಮತ್ತು ಶಾಸಕರ ಪ್ರಕರಣಗಳಿಗಾಗಿ ಇರುವ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಬಾಲಿವುಡ್‌ನಲ್ಲಿ ಅಸ್ತಿತ್ವದಲ್ಲಿರುವ ‘ಕೂಟ’ವನ್ನು ಉಲ್ಲೇಖಿಸುವಾಗ ಕಂಗನಾ ಸಂದರ್ಶನವೊಂದರಲ್ಲಿ ತಮ್ಮ ಹೆಸರನ್ನು ಎಳೆದು ತಂದಿದ್ದಾರೆ ಎಂದು ಜಾವೇದ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೂರು ಮುಸ್ಲಿಂ ಹೆಸರುಗಳ ಬದಲಾವಣೆಗೆ ಬಿಜೆಪಿ ಶಾಸಕರಿಂದ ಒತ್ತಾಯ : ಸರ್ಕಾರಕ್ಕೆ ಪ್ರಸ್ತಾವನೆ
ಮೂರು ಮುಸ್ಲಿಂ ಹೆಸರುಗಳ ಬದಲಾವಣೆಗೆ ಬಿಜೆಪಿ ಶಾಸಕರಿಂದ ಒತ್ತಾಯ : ಸರ್ಕಾರಕ್ಕೆ ಪ್ರಸ್ತಾವನೆ

