ನಿನ್ನೆ 65ನೇ ಕನ್ನಡ ರಾಜ್ಯೋತ್ಸವ ಜರುಗಿದೆ. ಪ್ರತಿ ವರ್ಷವು ಕನ್ನಡದ ಹಬ್ಬದಂತೆ ವಿಜೃಂಭಣೆಯಿಂದ ಆಚರಿಸುತ್ತಿದ್ದ ಕನ್ನಡಿಗರ ಪಾಲಿಗೆ ಈ ವರ್ಷ ಕೊರೊನಾ ಸಣ್ಣ ತಡೆಯಾದರೆ ಬಿಜೆಪಿ ಸರ್ಕಾರ ದೊಡ್ಡ ಬಂಡೆಯಂತೆ ಅಡ್ಡನಿಂತಿದೆ. ರಾಜ್ಯೋತ್ಸವದಂದೇ ಜಿಲ್ಲಾಕೇಂದ್ರಗಳಲ್ಲಿ ಕನ್ನಡ ಧ್ವಜ ಹಾರಿಸದೆ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಿದ ಸರ್ಕಾರದ ನಡೆಗೆ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ.
ಮೊದಲಿಗೆ ಕೊರೊನಾ ಮಾರ್ಗಸೂಚಿಗಳ ಅನ್ವಯ 100 ಜನಕ್ಕಿಂತ ಹೆಚ್ಚು ಸೇರಬಾರದು, ಮೆರವಣಿಗೆ ಮಾಡಬಾರದು, ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕೆಂದು ನಿಯಮಗಳನ್ನು ಹೇರಿದ ಸರ್ಕಾರ, ಉಪಚುನಾವಣೆಯ ಪ್ರಚಾರಕ್ಕೆ ಮಾತ್ರ ನಿಷೇಧ ಹೇರಿಲ್ಲ ಎಂದು ಹಲವು ಕನ್ನಡಿಗರು ಕಿಡಿಕಾರಿದ್ದಾರೆ.

ಇನ್ನು ಕನ್ನಡ ರಾಜ್ಯೋತ್ಸವದ ದಿನವಾದ ನಿನ್ನೆ ಹಲವಾರು ಜಿಲ್ಲಾಕೇಂದ್ರಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡ ಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಶ್ನಿಸಿದೆ.
ರಾಜ್ಯೋತ್ಸವದ ದಿನವಾದ ನಿನ್ನೆ ಹಲವು ಜಿಲ್ಲಾಕೇಂದ್ರಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡಧ್ವಜ ಹಾರಿಸದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು? #ನಮ್ಮಧ್ವಜ_ನಮ್ಮಹೆಮ್ಮೆ pic.twitter.com/XrNvDyRCgS
— ಕರವೇ (KRV) (@karave_KRV) November 2, 2020
ಸರ್ಕಾರದ, ಸಚಿವರುಗಳ ಉದ್ಧಟತನದ, ಅಭಿಮಾನಶೂನ್ಯ ನಡೆಯನ್ನು ಖಂಡಿಸಲು ಇಂದು ಸಂಜೆ 5 ಗಂಟೆಯಿಂದ #ನಮ್ಮಧ್ವಜ_ನಮ್ಮಹೆಮ್ಮೆ ಹೆಸರಿನಲ್ಲಿ ಟ್ವಿಟರ್ ಆಂದೋಲನಕ್ಕೆ ಕರೆ ನೀಡಿದೆ.
ಕರ್ನಾಟಕ ಏಕೀಕರಣದ 65 ವರ್ಷಗಳ ಇತಿಹಾಸದಲ್ಲಿ ರಾಜ್ಯೋತ್ಸವದಂದು ಕನ್ನಡ ಧ್ವಜ ರಾರಾಜಿಸುತ್ತಿತ್ತು. ಆದರೆ 2017 ರಿಂದ ಬಿಜೆಪಿ ಪಕ್ಷ ಮತ್ತು ಸಂಘಪರಿವಾರ ಒಂದು ದೇಶ- ಒಂದು ಧ್ವಜ ಎಂಬ ಹೆಸರಿನಲ್ಲಿ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಬೇಕು ಎಂಬ ಪ್ರಚಾರ ಆರಂಭಿಸಿತು. ಅಲ್ಲಿಂದ ಆರಂಭವಾಗಿ ದೇಶಕ್ಕೆ ಒಂದೇ ಧ್ವಜ ಸಾಕು, ಕನ್ನಡ ಧ್ವಜದ ಅವಶ್ಯಕತೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಚರ್ಚೆಗಳು ನಡೆದಿವೆ. ದೇಶದ ಏಕತೆ, ಏಕ ರಾಷ್ಟ್ರ-ಏಕ ಸಂಸ್ಕೃತಿ ಎಂಬಂತೆ ರಾಷ್ಟ್ರಧ್ವಜವೇ ಸಾಕು ಎಂಬುದು ಸಂಘಪರಿವಾರದ ಅಭಿಪ್ರಾಯ.
ಇದಕ್ಕೆ ವಿರುದ್ಧವಾಗಿ ನಮಗೆ ರಾಷ್ಟ್ರಧ್ವಜ ಮತ್ತು ನಾಡಧ್ವಜ ಎರಡೂ ಬೇಕು. ಕನ್ನಡ ಧ್ವಜ ನಮ್ಮ ಸ್ವಾಭಿಮಾನದ ಸಂಕೇತ. ಕನ್ನಡ ರಾಜ್ಯೋತ್ಸವದಂದು ನಾಡಧ್ವಜ ಹಾರಬೇಕು ಎಂದು ಕನ್ನಡಿಗರು ಮತ್ತು ಪ್ರಗತಿಪರರು ಒತ್ತಾಯಿಸಿದ್ದರು.
ಕಳೆದ ವರ್ಷ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೆಲ ತಹಶೀಲ್ದಾರ್‌ಗಳು ಕನ್ನಡ ಧ್ವಜ ಹಾರಿಸದಂತೆ ಸುತ್ತೋಲೆ ಹೊರಡಿಸಿದ್ದರು. ಇದರಿಂದ ಹಲವು ಜಿಲ್ಲಾಕೇಂದ್ರಗಳಲ್ಲಿ ಕೇವಲ ರಾಷ್ಟ್ರಧ್ವಜ ಹಾರಿಸಿ ರಾಜ್ಯೋತ್ಸವ ಮಾಡಲಾಗಿತ್ತು. ಇದರಿಂದ ಸಿಡಿದೆದ್ದ ಕನ್ನಡಿಗರು ರಾಜ್ಯದ್ಯಂತ ಪ್ರತಿಭಟನೆ ನಡೆಸಿದ್ದರು. ಅಷ್ಟು ಮಾತ್ರವಲ್ಲದೇ ಸ್ವಾತಂತ್ರ್ಯ ದಿನಾಚರಣೆಯಂದು ಕೇವಲ ಕನ್ನಡ ಬಾವುಟ ಹಾರಿಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದರು.
ಈ ವರ್ಷವೂ ಸಹ ಬಿಜೆಪಿ ಸರ್ಕಾರ ಜಿಲ್ಲಾ ಕೇಂದ್ರಗಳಲ್ಲಿ ಕೇವಲ ರಾಷ್ಟ್ರಧ್ವಜ ಹಾರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಕೇವಲ ಧ್ವಜದ ವಿಷಯ ಮಾತ್ರವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನ್ನಡಿಗರ ಅಸ್ಮಿತೆಯನ್ನು ಪ್ರಶ್ನಿಸುವ ಕೆಲಸದಲ್ಲಿ ನಿರತವಾಗಿವೆ ಎಂದು ಕನ್ನಡಿಗರು ಸಿಡಿದೆದ್ದಿದ್ದಾರೆ.
ಇದನ್ನೂ ಓದಿ: ಕನ್ನಡ ಧ್ವಜಾರೋಹಣವಿಲ್ಲದೇ ಕನ್ನಡ ರಾಜ್ಯೋತ್ಸವ: ಸರ್ಕಾರದ ವಿರುದ್ಧ ಕಿಡಿ ಕಾರಿದ ನೆಟ್ಟಿಗರು


