ಮೈ ಲಾರ್ಡ್
ನನ್ನ ದೊರೆಯೇ
ನಾ ಮಾಡಿದ ಅಪರಾಧ ದೊಡ್ಡದು ದೊರೆಯೇ,
ಬಹಳ ಗಂಭೀರ.
ಎಲ್ಲರೂ ಬಾಯಿ ಮುಚ್ಚಿಕೊಂಡಿರಲೇಬೇಕಾದ ಈ ಕಾಲದಲ್ಲಿ
ನಾನು ಬಾಯಿ ತೆಗೆಯುವ ಉದ್ಧಟತನ ಮಾಡಿದೆ
ಅದು ಅಪರಾಧವೆ ಸರಿ
ಅದಕ್ಕೆ ನೀವು ಯಾವ ಶಿಕ್ಷೆಯಾದರೂ ಕೊಡಿ ನನ್ನ ದೊರೆಯೇ ,
ಎಷ್ಟಾದರೂ ನೀವು ದೈವೀ ಛಾಯೆಯವರು.
ನ್ಯಾಯದಾನ ನಿಮ್ಮ ಕೆಲಸ, ನೀವು ಅದನ್ನು ಮಾಡಿ
ನೀವು ಸ್ವತಂತ್ರರು,
ನೀವು ನ್ಯಾಯಕ್ಕೆ ಯಾವುದೇ ರೂಪ ಕೊಡಬಹುದು
ಅದಕ್ಕೆ ನಮ್ಮ ಒಪ್ಪಿಗೆ ಇದೆ
ಅದನ್ನು ನೀವು ಬೇಕಾದಹಾಗೆ ಬದಲಾಯಿಸಿ,
ಅಥವಾ ತೆರೆದ ತುಟಿ ಹೊಲಿಯುವ ಸೂಜಿಯನ್ನಾಗಿಸಿ
ಹಗೆ ತೀರಿಸಿಕೊಳ್ಳಿ,
ನಮಗೆ ಒಪ್ಪಿಗೆ.

ನ್ಯಾಯ ಖಡ್ಗದಿಂದ ನಿಮ್ಮೆಡೆ ತೋರಿದ ಪ್ರತಿ ಬೆರಳನ್ನು ಕತ್ತರಿಸಿ ಬಿಸಾಕಿ,
ಇನ್ನೊಮ್ಮೆ ಯಾವ ನಿಯಾಮಕನ ಕಡೆ ಯಾರೂ ತೋರಿರಬಾರದು,
ಹಾಗೆ ಕತ್ತರಿಸಿ.
ನೀವು ಸ್ವತಂತ್ರರು
ನೀವು ನ್ಯಾಯದಾನ ಮಾಡಿ,
ಅದನ್ನು ನೀವು ಉಡಾಳ ಹುಡುಗರಿಗೆ ಪೆಟ್ಟು ಕೊಡುವ
ನಾಗರ ಬೆತ್ತವನ್ನಾಗಿಸಿ.
ನಾ ಮಾಡಿದ ಅಪರಾಧ ದೊಡ್ಡದು ದೊರೆಯೇ
ಬಹಳ ಗಂಭೀರ
ನೀವು ಯಾವ ಶಿಕ್ಷೆ ಯಾದರೂ ಕೊಡಿ ನನಗೆ.
ಆದರೆ
ನೀವು ಅವಕಾಶ ಕೊಟ್ಟರೆ
ಒಂದು ಮಾತು ಹೇಳಲೇ,
ಮೈ ಲಾರ್ಡ್,
ಇತಿಹಾಸದ ಒಂದು ಪಾಠ ನೆನಪಿಸಿಕೊಳ್ಳೋಣವೇ.
ಪ್ರತಿ ಶರತ್ಕಾಲದಲ್ಲಿ
ಹೂವು ಅರಳುತ್ತಲೇ ಇರುತ್ತವೆ
ಒಂದು ತುಂಡು ಮೋಡ ಎಲ್ಲಿಂದಲೋ
ಬಂದು ಬರಡು ಭೂಮಿಯ ಮೇಲೆ ಮಳೆ ಸುರಿಸುತ್ತದೆ
ನಗ್ನ ಗಿಡವೊಂದರ ಮೇಲಿನ ಮಗ್ನ ಕೋಗಿಲೆ ಹಾಡುತ್ತಲೇ ಇರುತ್ತದೆ
ಪ್ರತಿ ದಿಕ್ಕಿನಿಂದ ಕೇಳುತ್ತಿರುತ್ತದೆ ಒಂದೇ ಕೂಗು
ನದಿ ಕೊಳ್ಳದ ತುಂಬೆಲ್ಲ ಅದೇ ಹಾಡು
ಆ ಹಾಡನ್ನು ಬಂಧಿಸಲಾದೀತೇ?
ಹಾಡು ಸ್ವತಂತ್ರ
ಎಲ್ಲ ದಿಕ್ಕಿಗೆ ಹರಿದು ಹೋದೀತು,
ಅಷ್ಟೇ.
-ಗೌಹರ್ ರಾಜ಼,
ಭಾರತೀಯ ವಿಜ್ಞಾನಿ, ಉರ್ದು ಕವಿ, ಸಾಮಾಜಿಕ ಕಾರ್ಯಕರ್ತ, ಸಾಕ್ಷ್ಯಚಿತ್ರ ನಿರ್ದೇಶಕ
ಕನ್ನಡಕ್ಕೆ: ಹೃಷಿಕೇಶ ಬಹದ್ದೂರ ದೇಸಾಯಿ
ವಿಡಿಯೊ ನೋಡಿ:
Gauhar Raza ki Nayi nazm – my lord #HumDekhenge #PrashantBhushan
Posted by Gauhar Raza on Thursday, August 20, 2020
ಓದಿ:


