Homeಕಥೆಅನುವಾದಿತ ಕತೆ; ಗಮಾರನೊಬ್ಬ ಅಧಿಕಾರಿಗಳನ್ನು ಸಾಕಿದ್ದು!

ಅನುವಾದಿತ ಕತೆ; ಗಮಾರನೊಬ್ಬ ಅಧಿಕಾರಿಗಳನ್ನು ಸಾಕಿದ್ದು!

- Advertisement -
- Advertisement -

ಒಂದಾನೊಂದು ಕಾಲದಲ್ಲಿ ಇಬ್ಬರು ಆಧಿಕಾರಿಗಳು ಇದ್ದರು. ಅವರಿಬ್ಬರೂ ಖಾಲಿ ತಲೆಯವರಾಗಿದ್ದರು. ಹೀಗಿರುತ್ತಾ ಒಂದು ದಿನ, ಮಾಯಾ ಜಮಖಾನದಲ್ಲಿಯೋ ಎಂಬಂತೆ ತಮ್ಮನ್ನು ಒಂದು ನಿರ್ಜನ ದ್ವೀಪಕ್ಕೆ ವರ್ಗಾಯಿಸಲಾಗಿರುವುದು ಅವರ ಅರಿವಿಗೆ ಬಂತು.

ತಮ್ಮ ಇಡೀ ಜೀವನವನ್ನು ಅವರು, ದಾಖಲೆಗಳನ್ನು ಇಡುವ ಸರಕಾರಿ ಇಲಾಖೆಯೊಂದರಲ್ಲಿ ಕಳೆದಿದ್ದರು: ಅಲ್ಲಿಯೇ ಹುಟ್ಟಿದ್ದರು, ಅಲ್ಲಿಯೇ ಬೆಳೆದಿದ್ದರು, ಅಲ್ಲಿಯೇ ಮುದುಕರಾಗಿದ್ದರು. ಪರಿಣಾಮವಾಗಿ ಅವರಿಗೆ
ತಮ್ಮ ಇಲಾಖೆಯ ಹೊರಗಿನ ಯಾವುದರ ಬಗ್ಗೆಯೂ ಕನಿಷ್ಟ ತಿಳಿವಳಿಕೆಯೂ ಇರಲಿಲ್ಲ. ಅವರಿಗೆ ಗೊತ್ತಿದ್ದ ಪದಗಳೆಂದರೆ: “ಅತ್ಯಂತ ಗೌರವದಿಂದ ಹೇಳುತ್ತೇನೆ, ನಾನು ನಿಮ್ಮ ವಿನಮ್ರ ಸೇವಕ”.

ಆದರೆ, ಇಲಾಖೆಯನ್ನು ಬರಖಾಸ್ತುಗೊಳಿಸಲಾಯಿತು. ಈ ಇಬ್ಬರೂ ಅಧಿಕಾರಿಗಳ ಸೇವೆ ಇನ್ನು ಮುಂದೆ ಬೇಡವಾಗಿದ್ದುದರಿಂದ ಅವರಿಗೆ ಸ್ವಾತಂತ್ರ್ಯ ನೀಡಲಾಯಿತು. ಆದುದರಿಂದ, ಈ ನಿವೃತ್ತ ಅಧಿಕಾರಿಗಳು ಸೈಂಟ್ ಪೀಟರ್ಸ್‌ಬರ್ಗ್‌ನ ಪೊದ್ಯಚೆಸ್ಕಾಯ ಸ್ಟ್ರೀಟಿಗೆ ವಲಸೆಹೋದರು. ಇಬ್ಬರಿಗೂ ಸ್ವಂತ ಮನೆಯಿತ್ತು, ಸ್ವಂತ ಅಡುಗೆಯವರಿದ್ದರು ಮತ್ತು ಪಿಂಚಣಿ ಬರುತ್ತಿತ್ತು.

ಆ ನಿರ್ಜನ ದ್ವೀಪದಲ್ಲಿ ಎದ್ದಾಗ ತಾವಿಬ್ಬರೂ ಒಂದೇ ಹೊದಿಕೆಯ ಒಳಗೆ ಮಲಗಿರುವುದು ಗೊತ್ತಾಯಿತು. ಸಹಜವಾಗಿಯೇ, ನಡೆದದ್ದು ಏನು ಎಂಬುದು ಅವರಿಗೆ ಅರ್ಥವಾಗಲಿಲ್ಲ. ಹಾಗಾಗಿ, ಅಸಾಧಾರಣವಾದದ್ದೇನೂ ನಡೆದೇ ಇಲ್ಲ ಎಂಬಂತೆ ಅವರು ಮಾತನಾಡಿಕೊಂಡರು.

“ನಿನ್ನೆ ರಾತ್ರಿ ನನಗೆ ಬಿದ್ದ ಕನಸು ಎಂತಹ ವಿಚಿತ್ರ ಅಂತೀರಿ ಮಹಾಸ್ವಾಮಿ!” ಒಬ್ಬ ಅಧಿಕಾರಿ ಹೇಳಿದ, “ನಾನೊಂದು ನಿರ್ಜನ ದ್ವೀಪದಲ್ಲಿ ಇರುವಂತೆ ಅನಿಸಿತು…”

ಅವನು ದಢಕ್ಕನೇ ನೆಗೆದುನಿಂತು ಈ ಮಾತುಗಳನ್ನು ಹೇಳಿ ಮುಗಿಸಿದ್ದನೋ ಇಲ್ಲವೋ, ಇನ್ನೊಬ್ಬನೂ ದಢಕ್ಕನೇ ನೆಗೆದುನಿಂತ.

“ದೇವರೇ, ಇದರ ಅರ್ಥ ಏನು! ಎಲ್ಲಿದ್ದೇವೆ ನಾವು?” ಅವರು ಅತ್ಯಾಶ್ಚರ್ಯದಿಂದ ಕೂಗಿದರು. ತಾವು ಇನ್ನೂ ಕನಸು ಕಾಣುತ್ತಿಲ್ಲ ಎಂದು ಖಾತರಿಪಡಿಸಲು ಒಬ್ಬರು ಇನ್ನೊಬ್ಬರನ್ನು ಮುಟ್ಟಿಕೊಂಡರು. ಕೊನೆಗೂ ಈ ದುಃಖಕರ ವಾಸ್ತವವನ್ನು ತಮಗೇ ಮನದಟ್ಟು ಮಾಡಿಕೊಂಡರು.

ಅವರ ಮುಂದಕ್ಕೆ ಸಾಗರವು ಮೈಚಾಚಿತ್ತು. ಅವರ ಹಿಂದಕ್ಕೆ ಸ್ವಲ್ಪ ನೆಲವಿತ್ತು. ಅದರಾಚೆಗೆ ಮತ್ತೆ ಸಾಗರವು ಮೈಚಾಚಿತ್ತು. ತಮ್ಮ ಇಲಾಖೆಯನ್ನು ಮುಚ್ಚಿದ ಬಳಿಕ ಮೊದಲ ಬಾರಿಗೆ ಅವರು ಅತ್ತರು.

“ಈ ಸಮಯಕ್ಕೆ ನಿಜವಾಗಿಯೂ ನಾವು ಕಾಫಿ ಕುಡೀತಿರ್ಬೇಕಿತಿತ್ತು” ಎಂದು ಒಬ್ಬ ಅಧಿಕಾರಿ ಹೇಳಿದ. ತಕ್ಷಣವೇ ತಾನಿರುವ ವಿಚಿತ್ರ ಪರಿಸ್ಥಿತಿಯ ಬಗ್ಗೆ ಚಿಂತಿಸಿ, ಎರಡನೆಯ ಸಲ ಅಳಲು ಆರಂಭಿಸಿದ.

“ನಾವೀಗ ಮಾಡುವುದಾದ್ರೂ ಏನು?” ಎಂದವನು ಬಿಕ್ಕಿದ, “ನಾವೀಗ ಒಂದು ವರದಿ ಬರೀಬೇಕು ಎಂದು ಊಹಿಸಿಕೊಂಡರೂ, ಅದ್ರಿಂದ ಏನು ಪ್ರಯೋಜನ”?

“ಏನು ಗೊತ್ತಾ ಮಹಾಸ್ವಾಮೀ”, ಇನ್ನೊಬ್ಬ ಅಧಿಕಾರಿ ಉತ್ತರಿಸಿದ, “ನೀವು ಪೂರ್ವಕ್ಕೆ ಹೋಗಿ, ನಾನು ಪಶ್ಚಿಮಕ್ಕೆ ಹೋಗುತ್ತೇನೆ. ಸಂಜೆಯ ಹೊತ್ತಿಗೆ ನಾವು ಮತ್ತೆ ಇಲ್ಲಿಗೇ ಬರೋಣ. ಬಹುಶಃ ಆ ಹೊತ್ತಿಗೆ ನಮಗೆ ಏನಾದ್ರೂ ಸಿಕ್ಕಿರಲೂಬಹುದು”.

ಈಗ ಅವರು ಯಾವುದು ಪೂರ್ವ, ಯಾವುದು ಪಶ್ಚಿಮ ಎಂದು ತಿಳಿದುಕೊಳ್ಳಲು ಆರಂಭಿಸಿದರು. ಅವರ ಇಲಾಖೆಯ ಮುಖ್ಯಸ್ಥರು ಹಿಂದೊಮ್ಮೆ ತಮಗೆ ಹೇಳಿದ್ದು ನೆನಪಾಯಿತು: “ನಿಮಗೆ ಪೂರ್ವ ಯಾವುದೆಂದು ತಿಳಿಯಬೇಕೆಂದಿದ್ದರೆ, ಉತ್ತರಕ್ಕೆ ಮುಖಮಾಡಿ. ನಿಮ್ಮ ಬಲಕ್ಕೆ ಇರುವುದೇ ಪೂರ್ವ. ಆದರೆ, ಉತ್ತರ ಯಾವುದು ಎಂದು ತಿಳಿದುಕೊಳ್ಳಲು ಯತ್ನಿಸಿ ಎಡ, ಬಲ, ಸುತ್ತಮುತ್ತಲೆಲ್ಲಾ ತಿರುಗಿದರು. ಆದರೆ, ಇಡೀ ಜೀವನವನ್ನೇ ದಾಖಲೆಗಳ ಇಲಾಖೆಯಲ್ಲಿ ಕಳೆದಿದ್ದುದರಿಂದ, ಅವರ ಪ್ರಯತ್ನ ವಿಫಲವಾಯಿತು.

“ನನ್ನ ಯೋಚನೆ ಏನೆಂದರೆ ಮಹಾಸ್ವಾಮೀ, ಒಳ್ಳೆಯ ಕೆಲಸವೆಂದ್ರೆ, ನೀವು ಬಲಕ್ಕೆ ಹೋಗುವುದು, ಮತ್ತು ನಾನು ಎಡಕ್ಕೆ ಹೋಗುವುದು” ಎಂದು ದಾಖಲೆಗಳ ಇಲಾಖೆಯಲ್ಲಿ ಮಾತ್ರವಲ್ಲದೇ, ಮೀಸಲು ಪ್ರದೇಶಗಳ ಶಾಲೆಯಲ್ಲಿ ಬರವಣಿಗೆ ಕಲಿಸುವ ಶಿಕ್ಷಕನಾಗಿಯೂ ಕೆಲಸ ಮಾಡಿದ್ದ ಅಧಿಕಾರಿ ಹೇಳಿದ; ಆದುದರಿಂದಲೇ ಅವನು ಸ್ವಲ್ಪ ಹೆಚ್ಚು ಜಾಣನಾಗಿದ್ದ.

ಹೀಗೆ ಹೇಳಲಾಯಿತು; ಮತ್ತು ಹೀಗೆಯೇ ನಡೆಯಿತು: ಒಬ್ಬ ಅಧಿಕಾರಿ ಬಲಕ್ಕೆ ಹೋದ. ಅವನಿಗೆ ಎಲ್ಲಾ ರೀತಿಯ ಹಣ್ಣುಗಳಿರುವ ಮರಗಳು ಸಿಕ್ಕಿದವು. ಅವನು ತುಂಬಾ ಸಂತೋಷದಿಂದ ಒಂದು ಸೇಬನ್ನು ಕೀಳಲು ಯತ್ನಿಸಿದ.
ಆದರೇನು ಮಾಡುವುದು; ಅವೆಲ್ಲವೂ ಎಷ್ಟು ಎತ್ತರದಲ್ಲಿ ತೂಗಾಡುತ್ತಿದ್ದವು ಎಂದರೆ, ಅವನು ಮರವನ್ನು ಹತ್ತಲೇಬೇಕಾಗಿತ್ತು. ಅವನು ಮರ ಹತ್ತಲು ಪ್ರಯತ್ನಿಸಿ ವಿಫಲನಾದ. ಅವನು ಮಾಡಲು ಯಶಸ್ವಿಯಾದ ಒಂದೇ ಕೆಲಸವೆಂದರೆ, ತನ್ನ ರಾತ್ರಿಯ ಅಂಗಿಯನ್ನು ಹರಿದುಕೊಂಡದ್ದು. ನಂತರ ಅವನಿಗೊಂದು ತೊರೆ ಸಿಕ್ಕಿತು. ಅದು ಮೀನುಗಳಿಂದ ತುಳುಕುತ್ತಿತ್ತು.

“ಈ ಎಲ್ಲಾ ಮೀನು ನಮ್ಮ ಪೊದ್ಯಚೆಸ್ಕಾಯ ಸ್ಟ್ರೀಟಿನಲ್ಲೇ ಸಿಗ್ತಿದ್ರೆ ಎಷ್ಟು ಅದ್ಭುತವಾಗಿರ್ತಿತ್ತು, ಅಲ್ಲವೇ!” ಎಂದವನು ಯೋಚಿಸಿದ; ಅವನ ಬಾಯಲ್ಲಿ ನೀರೂರಿತು. ನಂತರ ಅವನು ಕಾಡೊಂದನ್ನು ಪ್ರವೇಶಿಸಿದ. ಅಲ್ಲಿ ಅವನು ಕಾಡುಕೋಳಿಗಳು, ಮೊಲಗಳನ್ನು ಕಂಡ.

“ಓ ದೇವರೇ, ಎಂತಹ ಆಹಾರ ಸಮೃದ್ಧಿ!” ಎಂದವನು ಉದ್ಘರಿಸಿದ; ಅವನ ಹಸಿವು ಭಯಂಕರವಾಗಿ ಏರುತ್ತಿತ್ತು. ಆದರೆ ಅವನು ಬರಿಗೈಯಲ್ಲೇ ನಿಗದಿತ ಸ್ಥಳಕ್ಕೆ ಮರಳಬೇಕಾಯಿತು. ಅಲ್ಲಿ ಅವನಿಗೆ ಕಾಯುತ್ತಿದ್ದ ಇನ್ನೊಬ್ಬ ಅಧಿಕಾರಿ ಸಿಕ್ಕಿದ.

“ಸರಿ ಮಹಾಸ್ವಾಮೀ, ಏನಾಯ್ತು? ನಿಮಗೆ ಏನಾದ್ರೂ ಸಿಕ್ಕಿತೆ”?

“ಏನೂ ಇಲ್ಲ, ಮಾಸ್ಕೋ ಗೆಜೆಟ್ ಪತ್ರಿಕೆಯ ಹಳೆಯ ಸಂಚಿಕೆಯ ಹೊರತು ಬೇರೇನೂ ಸಿಗ್ಲಿಲ್ಲ”.

ಇಬ್ಬರು ಅಧಿಕಾರಿಗಳೂ ಮಲಗಿದರು. ಆದರೆ, ಅವರ ಖಾಲಿಹೊಟ್ಟೆಗಳು ಅವರಿಗೆ ಯಾವ ಆರಾಮವನ್ನೂ ಕೊಡಲಿಲ್ಲ. ತಮ್ಮ ಪಿಂಚಣಿಯನ್ನು ಈಗ ಯಾರು ತಿನ್ನುತ್ತಿರಬಹುದು ಎಂಬ ಚಿಂತೆಯೂ ಭಾಗಶಃ ಅವರ ನಿದ್ದೆಯನ್ನು ಕಸಿದುಕೊಂಡಿತು ಮತ್ತು ಭಾಗಶಃ ಅವರು ಹಗಲಲ್ಲಿ ಕಂಡ ಹಣ್ಣು, ಮೀನು, ಕಾಡುಕೋಳಿ, ಮೊಲಗಳ ನೆನಪುಗಳು ಕೂಡ ಕಾಡಿದವು.

“ಮನುಷ್ಯನ ಮೂಲಾಹಾರ ಹಾರ್ತದೆ, ಈಜ್ತದೆ ಮತ್ತು ಮರಗಳಲ್ಲಿ ಬೆಳೀತದೆ. ಇದನ್ನು ಯಾರು ಯೋಚಿಸಲು ಸಾಧ್ಯ ಇತ್ತು ಮಹಾಸ್ವಾಮೀ?” ಎಂದು ಒಬ್ಬ ಅಧಿಕಾರಿ ಕೇಳಿದ.

“ನಿಜ ಹೇಳಬೇಕೆಂದ್ರೆ”, ಇನ್ನೊಬ್ಬ ಅಧಿಕಾರಿ ಉತ್ತರಿಸಿದ, “ನಮ್ಮ ಬೆಳಗ್ಗಿನ ಉಪಾಹಾರದ ದೋಸೆ ಕೂಡಾ, ಮೇಜಿನ ಮೇಲೆ ಕಾಣುವ ರೂಪದಲ್ಲೇ ಪ್ರಪಂಚಕ್ಕೆ ಬರುವುದು ಅಂತ ನಾನು ಕಲ್ಪಿಸಿದ್ದೆ”.

“ಇದರಿಂದ ಏನು ತರ್ಕಿಸಬಹುದು ಎಂದ್ರೆ, ಕಾಡುಕೋಳಿ ತಿನ್ನಲು- ಮೊದ್ಲು ನಾವು ಅದನ್ನು ಹಿಡೀಬೇಕು, ಕೊಲ್ಬೇಕು, ಅದರ ಪುಕ್ಕ ಕೀಳ್ಬೇಕು ಮತ್ತು ಹುರೀಬೇಕು. ಆದರೆ, ಇದನ್ನೆಲ್ಲಾ ಮಾಡೋದು ಹೇಗೆ”?

“ಹೌದು, ಅದನ್ನು ಮಾಡೋದು ಹೇಗೆ?” ಇನ್ನೊಬ್ಬ ಆಧಿಕಾರಿ ಆದನ್ನೇ ಮತ್ತೆ ಹೇಳಿದ.

ಅವರು ಮೌನವಾದರು ಮತ್ತು ನಿದ್ದೆ ಮಾಡಲು ಪ್ರಯತ್ನಿಸಿದರು. ಆದರೆ, ಅವರ ಹಸಿವು ನಿದ್ದೆಯನ್ನು ಬೆದರಿಸಿ ಓಡಿಸಿತು. ಅವರ ಕಣ್ಣುಗಳ ಮುಂದೆ ಮಂದೆಮಂದೆ ಕಾಡುಕೋಳಿಗಳು, ಹಂದಿಮರಿಗಳು ಓಡಾಡಿದವು. ಮತ್ತು ಅವುಗಳೆಲ್ಲವೂ ಬಾಯಲ್ಲಿ ನೀರೂರುವಂತಿದ್ದವು; ಅವುಗಳನ್ನು ಅಷ್ಟು ಮೃದುವಾಗುವಂತೆ ಹುರಿಯಲಾಗಿತ್ತು; ಆಲಿವ್ ಹಣ್ಣು ಮತ್ತು ಕೇಪರ್ ಚಿಗುರುಗಳು, ಉಪ್ಪಿನಕಾಯಿಗಳಿಂದ ಅವುಗಳನ್ನು ಅಲಂಕರಿಸಲಾಗಿತ್ತು.

“ನಾನೀಗ ನನ್ನದೇ ಬೂಟುಗಳನ್ನು ತಿನ್ಬಹುದು ಅನಿಸ್ತಿದೆ” ಎಂದು ಒಬ್ಬ ಆಧಿಕಾರಿ ಹೇಳಿದ.

“ಕೈ ಗವಸುಗಳೂ ಪರ್ವಾಗಿಲ್ಲ; ಅದೂ, ಆವು ಸಾಕಷ್ಟು ಮೆತ್ತಗಾಗಿದ್ದರೆ” ಎಂದು ಇನ್ನೊಬ್ಬ ಅಧಿಕಾರಿ ಉತ್ತರಿಸಿದ.

ಇಬ್ಬರೂ ಅಧಿಕಾರಿಗಳು ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿದರು. ಆವರ ದೃಷ್ಟಿಗಳಲ್ಲಿ ದುಷ್ಟತೆಯ ಬೆಂಕಿಯ ಹೊಳಪಿತ್ತು. ಅವರ ಹಲ್ಲುಗಳು ಕಟಕಟನೇ ಅಲ್ಲಾಡುತ್ತಿದ್ದವು. ಅವರ ಎದೆಗಳಿಂದ ನರಳಾಟದ ಸದ್ದು ಹೊರಡುತ್ತಿತ್ತು. ನಿಧಾನವಾಗಿ ಅವರು ಒಬ್ಬರು ಇನ್ನೊಬ್ಬರತ್ತ ತೆವಳಿದರು. ಏಕಾಏಕಿಯಾಗಿ ಭಯಂಕರ ಹುಚ್ಚಾಟ, ಕಚ್ಚಾಟ ಕಟ್ಟೆಯೊಡೆಯಿತು, ಬೊಬ್ಬೆ ನರಳಾಟ ಕೇಳಿತು, ಚಿಂದಿಗಳು ಹಾರಿದವು. ಬರವಣಿಗೆಯ ಶಿಕ್ಷಕನಾಗಿದ್ದವನು ತನ್ನ ಸಹೋದ್ಯೋಗಿಗೆ ಕಚ್ಚಿ, ಬಾಯಿಗೆ ಬಂದದ್ದನ್ನು ನುಂಗಿದ. ರಕ್ತ ಕಂಡು ಇಬ್ಬರೂ ಪ್ರಜ್ಞೆಗೆ ಮರಳಿದರು.

PC : The Boston Globe

“ದೇವರೇ ನಮ್ಮನ್ನು ಕಾಪಾಡಲಿ!” ಇಬ್ಬರೂ ಒಂದೇ ಹೊತ್ತಿಗೆ ಕೂಗಿದರು; “ಖಂಡಿತಾ ನಾವು ಒಬ್ಬರನ್ನೊಬ್ಬರು ತಿನ್ನಲು ಹೊರಟಿಲ್ಲ. ನಾವು ಇಂತಹ ಸ್ಥಿತಿಗೆ ಬಂದುದಾದರೂ ಹೇಗೆ? ಯಾವ ಜಾಣ ಶೈತಾನ ನಮ್ಮೊಂದಿಗೆ ಆಟ ಆಡ್ತಿದ್ದಾನೆ”?

“ನಾವು ಖಂಡಿತವಾಗಿ ಒಬ್ಬರನ್ನೊಬ್ರು ರಂಜಿಸ್ಬೇಕು. ಇಲ್ಲಾಂದ್ರೆ ಕೊಲೆ, ಸಾವು ಖಂಡಿತ” ಎಂದು ಒಬ್ಬ ಅಧಿಕಾರಿ ಹೇಳಿದ.

“ನೀವು ಆರಂಭಿಸಿ” ಇನ್ನೊಬ್ಬ ಹೇಳಿದ.

“ಸೂರ್ಯ ಮೊದ್ಲು ಉದಯಿಸಿ, ನಂತ್ರ ಮುಳುಗ್ತಾನೆ. ಇದನ್ನು ವಿವರಿಸಬಲ್ಲಿರಾ? ಅದು ಅದಲುಬದಲು ಯಾಕಾಗ್ಬಾರ್ದು”?

“ನೀವು ತಮಾಷೆಯ ಮನುಷ್ಯ, ಅಲ್ವೇ ಮಹಾಸ್ವಾಮೀ? ನೀವು ಮೊದ್ಲು ಏಳ್ತೀರಿ. ನಂತ್ರ ನೀವು ಆಪೀಸಿಗೆ ಹೋಗ್ತೀರಿ. ಅಲ್ಲಿ ಕೆಲಸ ಮಾಡ್ತೀರಿ. ರಾತ್ರಿ ಮಲಗ್ತೀರಿ ಅಲ್ವೇ”?

“ಆದ್ರೆ ನೀವು ತದ್ವಿರುದ್ಧ ಯಾಕೆ ಯೋಚಿಸ್ಬಾರ್ದು? ಆಂದ್ರೆ, ಮೊದ್ಲು ನೀವು ಮಲಗ್ತೀರಿ, ಎಲ್ಲ ರೀತಿಯ ಕನಸು ಕಾಣ್ತೀರಿ. ನಂತ್ರ ಏಳ್ತೀರಿ”.

“ಸರಿ, ಹೌದು, ಖಂಡಿತಾ. ಆದ್ರೆ ನಾನು ಇನ್ನೂ ಅಧಿಕಾರಿಯಾಗಿದ್ದಾಗ, ಯಾವತ್ತೂ ಈ ರೀತಿ ಯೋಚಿಸ್ತಿದ್ದೆ: ಮುಂಜಾವು ಬರ್ತದೆ, ನಂತ್ರ ದಿನ ಬರ್ತದೆ, ನಂತ್ರ ರಾತ್ರಿ ಊಟ, ನಂತ್ರ ಮಲಗುವ ಸಮಯ”.

ರಾತ್ರಿಯೂಟ ಎಂಬ ಶಬ್ದವು, ಇಡೀ ದಿನದ ತಿರುಗಾಟವನ್ನು ನೆನಪಿಸಿತು. ಅದರ ಯೋಚನೆ ಅವರನ್ನು ಮಂಕಾಗಿಸಿತು. ಆದುದರಿಂದ ಮಾತುಕತೆ ನಿಲುಗಡೆಗೆ ಬಂತು.

“ಒಬ್ಬ ಡಾಕ್ಟ್ರು ಒಮ್ಮೆ ನನ್ಗೆ ಹೇಳಿದ್ರು: ಮನುಷ್ಯರು ತಮ್ಮ ಸ್ವಂತ ದ್ರವದಲ್ಲೇ ತುಂಬಾ ಕಾಲ ಬದುಕ್ಬಹುದು ಅಂತ” ಒಬ್ಬ ಅಧಿಕಾರಿ ಮತ್ತೆ ಆರಂಭಿಸಿದ.

“ಅದರ ಅರ್ಥ ಏನು”?

“ಅದು ತುಂಬಾ ಸರಳ. ನೋಡಿ, ಒಬ್ಬನ ಸ್ವಂತ ದ್ರವವು ಬೇರೆ ರೀತಿಯ ದ್ರವವನ್ನು ಉತ್ಪಾದನೆ ಮಾಡ್ತದೆ; ಅದು ಮತ್ತೊಂದು ರೀತಿಯ ದ್ರವವನ್ನು. ಇದು ಕೊನೆಗೆ ದ್ರವವೆಲ್ಲಾ ಮುಗಿಯೋ ತನ್ಕ ಮುಂದುವರೀತದೆ”.

“ನಂತ್ರ ಏನಾಗ್ತದೆ”?

“ನಂತ್ರ ನಮ್ಮ ಸಿಸ್ಟಮಿಗೆ ಮತ್ತೆ ಆಹಾರ ತಗೊಳ್ಬೇಕು”.

“ಎಂತ ಸಾವು! ಸೈತಾನ!” ಒಬ್ಬ ಶಾಪ ಹಾಕಿದ.

ಅವರು ಯಾವ ವಿಷಯವನ್ನು ಬೇಕಾದರೆ ಚರ್ಚೆಗೆ ಎತ್ತಿಕೊಳ್ಳಲಿ, ಮಾತುಕತೆ ತಪ್ಪದೇ ತಿನ್ನುವ ವಿಷಯಕ್ಕೇ ತಿರುಗುತ್ತಿತ್ತು. ಇದು ಅವರ ಹಸಿವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಿತಷ್ಟೇ. ಆದುದರಿಂದ ಅವರು ಮಾತುಕತೆಯನ್ನೇ ನಿಲ್ಲಿಸಲು ನಿರ್ಧರಿಸಿದರು. ಅವರಲ್ಲಿ ಒಬ್ಬನಿಗೆ ಸಿಕ್ಕಿದ್ದ ಮಾಸ್ಕೋ ಗೆಜೆಟ್ ಪತ್ರಿಕೆಯ ಹಳೆಯ ಸಂಚಿಕೆಯ ನೆನಪು ಬಂದು, ಅದನ್ನು ಕೈಗೆತ್ತಿಕೊಂಡ. ಇಬ್ಬರೂ ಆತುರದಿಂದ ಓದಲಾರಂಭಿಸಿದರು.

’ಮೇಯರ್ ನೀಡಿದ ಔತಣಕೂಟ!’

“ನೂರು ಜನರಿಗೆ ಮೇಜುಗಳನ್ನು ಸಿದ್ಧಪಡಿಸಲಾಗಿತ್ತು. ಭವ್ಯತೆಯು ಎಲ್ಲಾ ನಿರೀಕ್ಷೆಗಳನ್ನು ಮೀರಿತ್ತು. ದೇವರ ಈ ಹಬ್ಬದಲ್ಲಿ ಅತ್ಯಂತ ದೂರದ ಪ್ರಾಂತ್ಯದವರೂ ಅತ್ಯಂತ ಬೆಲೆಬಾಳುವ ಉಡುಗೊರೆಗಳೊಂದಿಗೆ ಪ್ರತಿನಿಧಿಸಿದ್ದರು. ಶೆಕ್ಸ್ನಾದ ಚಿನ್ನದ ಬಣ್ಣದ ಸ್ಟರ್ಜನ್ ಮೀನು ಮತ್ತು ಕಾಕಸಿಯನ್ ಅರಣ್ಯಗಳ ಬೆಳ್ಳಿಬಣ್ಣದ ಕಾಡುಕೋಳಿಗಳು- ನಮ್ಮ ಪ್ರದೇಶದಲ್ಲಿ ಚಳಿಗಾಲದಲ್ಲಿ ಅಪರೂಪವಾದ ಸ್ಟ್ರಾಬೆರಿ ಹಣ್ಣುಗಳೊಂದಿಗೆ ಮಿಲಾಪ ನಡೆಸಿದ್ದವು…”

“ಎಂತ ಸಾವು! ಸೈತಾನ! ದೇವರಾಣೆಯಾಗಿ ಓದೋದು ನಿಲ್ಸಿ ಮಹಾಸ್ವಾಮಿ! ನಿಮ್ಗೆ ಓದಲು ಬೇರೆ ಏನೂ ಸಿಗ್ಲಿಲ್ವೆ?” ಇನ್ನೊಬ್ಬ ಅಧಿಕಾರಿ ಹತಾಶೆಯಿಂದ ಕೂಗಿದ. ಅವನು ತನ್ನ ಸಹೋದ್ಯೋಗಿಯ ಕೈಯಿಂದ ಪತ್ರಿಕೆ ಕಸಿದು ಬೇರೇನನ್ನೋ ಓದಲು ಆರಂಭಿಸಿದ.

“ಟುಲಾದಲ್ಲಿರುವ ನಮ್ಮ ಬಾತ್ಮೀದಾರ ನೀಡಿದ ಮಾಹಿತಿಯ ಪ್ರಕಾರ, ನಿನ್ನೆ ಉಪಾದಲ್ಲಿ ಭಾರೀ ಗಾತ್ರದ ಸ್ಟರ್ಜನ್ ಮೀನು ಸಿಕ್ಕಿತು. (ಅತ್ಯಂತ ಹಳೆಯ ನಿವಾಸಿಗಳು ಕೂಡಾ ಇಂತಹ ಒಂದು ಘಟನೆಯನ್ನು ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನೂ ವಿಶೇಷವೆಂದರೆ ಅವರು ಈ ಸ್ಟರ್ಜನ್‌ನಲ್ಲಿ ಮಾಜಿ ಪೊಲೀಸ್ ಕ್ಯಾಪ್ಟನ್‌ರನ್ನು ಕಂಡದ್ದು). ಇದು ಕ್ಲಬ್ಬಿನಲ್ಲಿ ಔತಣಕೂಟ ಏರ್ಪಡಿಸಲು ಒಂದು ಶುಭ ಸಂದರ್ಭವಾಯಿತು. ಈ ಔತಣಕೂಟಕ್ಕೆ ಮೂಲ ಕಾರಣವಾದ ಮೀನನ್ನು ವಿನೆಗರ್ ಉಪ್ಪಿನಕಾಯಿಗಳಿಂದ ಅಲಂಕರಿಸಿ, ಮರದ ದೊಡ್ಡ ಬಟ್ಟಲಿನಲ್ಲಿಟ್ಟು ಬಡಿಸಲಾಯಿತು. ಅದರ ಬಾಯಿಗೆ ಪಾರ್ಸ್‌ಲಿ ಚಿಗುರಿನ ಗೊಂಚಲೊಂದನ್ನು ಸಿಕ್ಕಿಸಲಾಗಿತ್ತು. ಟೋಸ್ಟ್ ಮಾಸ್ಟರ್ ಆಗಿದ್ದ ಡಾಕ್ಟರ್ ಪಿ….. ಅವರು ಹಾಜರಿದ್ದ ಪ್ರತಿಯೊಬ್ಬರಿಗೂ ಸ್ಟರ್ಜನ್‌ನ ಒಂದೊಂದು ತುಂಡಾದರೂ ಸಿಗುವಂತೆ ಖಾತರಿಪಡಿಸಿದರು. ಅದರ ಜೊತೆಗೆ ಇದ್ದ ಚಟ್ನಿಗಳು ಅಸಾಧಾರಣವಾಗಿ, ವೈವಿಧ್ಯಮಯವಾಗಿ ಮತ್ತು ಆಹ್ಲಾದಕರ…”

“ನಾನು ಹೇಳ್ತಿರುವುದಕ್ಕೆ ಕ್ಷಮೆ ಇರ್ಲಿ ಮಹಾಸ್ವಾಮೀ, ಆದ್ರೆ ನೀವು ಕೂಡಾ ಓದುವ ವಿಷಯದ ಆಯ್ಕೆಯಲ್ಲಿ ಜಾಗ್ರತೆ ವಹಿಸಿಲ್ಲ” ಎಂದು ತಡೆದ ಮೊದಲನೆಯ ಆಧಿಕಾರಿ, ಮತ್ತೆ ಪತ್ರಿಕೆಯನ್ನು ಇಸಿದುಕೊಂಡು ಓದಲು ಆರಂಭಿಸಿದ:

“ವೈಟ್ಕಾದ ಅತ್ಯಂತ ಹಳೆಯ ನಿವಾಸಿಯೊಬ್ಬರು ಮೀನಿನ ಸಾರಿನ ಅತ್ಯಂತ ಸೃಜನಶೀಲ ರೆಸೆಪಿಯೊಂದನ್ನು ಕಂಡುಹಿಡಿದಿದ್ದಾರೆ. ಜೀವಂತ ಕಾಡ್ (ಅoಜ) ಮೀನಿಗೆ ಅದರ ಲಿವರು ಕೋಪದಿಂದ ಬಾತುಕೊಳ್ಳುವ ತನಕ ಸರಳಿನಲ್ಲಿ ಹೊಡೆಯಬೇಕು…”

ಅಧಿಕಾರಿಗಳಿಬ್ಬರ ತಲೆ ಬಾಗಿತು. ಅವರ ಕಣ್ಣು ಯಾವುದರ ಮೇಲೆ ಬೇಕಾದರೆ ಬೀಳಲಿ, ಅದಕ್ಕೂ ತಿನ್ನುವುದಕ್ಕೂ ಏನಾದರೊಂದು ಸಂಬಂಧ ಇರುತ್ತಿತ್ತು. ಅವರ ಸ್ವಂತ ಯೋಚನೆಯು ಅದಕ್ಕಿಂತಲೂ ಮಾರಕವಾಗಿತ್ತು. ಬೀಫ್ ಸ್ಟೀಕ್ ಇತ್ಯಾದಿಗಳಿಂದ ತಮ್ಮ ಮನಸ್ಸನ್ನು ದೂರ ಇಡಲು ಅವರು ಎಷ್ಟೇ ಪ್ರಯತ್ನಪಟ್ಟರೂ, ಅವರ ಪ್ರಯತ್ನ ವಿಫಲವಾಗಿ, ಅವರ ಕಲ್ಪನಾವಿಲಾಸವು ತಡೆಯಲು ಸಾಧ್ಯವೇ ಇರದಷ್ಟು ಬಲದೊಂದಿಗೆ ಅವರು ಆಸೆಪಡುತ್ತಿರುವುದಕ್ಕೇ ಮರಳುತ್ತಿತ್ತು.

ಆಗ ಹಠಾತ್ತನೆ, ಹಿಂದೆ ಬರವಣಿಗೆ ಕಲಿಸುತ್ತಿದ್ದ ಆಧಿಕಾರಿಗೆ ಸ್ಫೂರ್ತಿ ಬಂತು.

“ನನ್ಗೆ ಸಿಕ್ಕಿತು!” ಎಂದವನು ಸಂತಸದಿಂದ ಕೂಗಿದ, “ನೀವಿದಕ್ಕೆ ಏನು ಹೇಳ್ತೀರಿ ಮಹಾಸ್ವಾಮೀ? ನಾವೊಬ್ಬ ಗಮಾರನನ್ನು ಹುಡುಕಿದ್ರೆ ಹೇಗೆ”?

“ಒಬ್ಬ ಗಮಾರನೇ ಮಹಾಸ್ವಾಮೀ? ಯಾವ ತರದ ಗಮಾರ”?

“ಯಾಕೆ! ಒಬ್ಬ ಸರಳ ಸಾಮಾನ್ಯ ಗಮಾರ. ಉಳಿದ ಗಮಾರರಂತೆಯೇ ಒಬ್ಬ ಗಮಾರ. ಅವ್ನು ತಕ್ಷಣವೇ ನಮ್ಗೆ ದೋಸೆ ಮಾಡಿಕೊಡುತ್ತಾನೆ. ಅವ್ನು ನಮ್ಗಾಗಿ ಕಾಡುಕೋಳಿ ಮತ್ತು ಮೀನನ್ನೂ ಹಿಡೀಬೌದು”.

“ಹ್ಂ! ಒಬ್ಬ ಗಮಾರ. ಆದ್ರೆ, ನಾವು ಅಂತಹ ಒಬ್ಬನನ್ನು ತರೋದು ಎಲ್ಲಿಂದ? ಇಲ್ಲಿ ಗಮಾರ ಇಲ್ದೇ ಇದ್ರೆ?

“ಇಲ್ಲಿ ಗಮಾರ ಯಾಕಿರ್ಬಾರ್ದು? ಗಮಾರರು ಎಲ್ಲೆಲ್ಲೂ ಇರ್ತಾರೆ. ನಾವು ಅವ್ರನ್ನು ಹುಡುಕ್ಬೇಕು ಅಷ್ಟೇ. ಕೆಲಸದಿಂದ ತಪ್ಪಿಸ್ಕೊಳ್ಳೋಕೆ ಅಡಗಿಕೂತ ಒಬ್ಬ ಗಮಾರನಾದ್ರೂ ಖಂಡಿತಾ ಇಲ್ಲಿರ್ಲೇಬೇಕು”.

ಈ ಯೋಚನೆ ಇಬ್ಬರು ಅಧಿಕಾರಿಗಳಿಗೂ ಎಷ್ಟು ಖುಷಿ ತಂದಿತು ಎಂದರೆ, ಇಬ್ಬರೂ ಪಟಕ್ಕನೇ ನೆಗೆದುನಿಂತು, ಗಮಾರನನ್ನು ಹುಡುಕಲು ಹೊರಟರು.

ತುಂಬಾ ಸಮಯ ಅವರು ಯಾವುದೇ ಉದ್ದೇಶಿತ ಕಾರ್ಯಸಾಧನೆಯಾಗದೇ ತಿರುಗಿದರು. ಕೊನೆಗೂ, ಕಪ್ಪು ರೊಟ್ಟಿ ಬೇಯುವ ಮತ್ತು ಹಳೆಯ ಕುರಿ ಚರ್ಮದ ಗಮಲು ಅವರ ಮೂಗಿನ ಮೇಲೆ ದಾಳಿ ಮಾಡಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿತು. ಅಲ್ಲಿ, ಒಂದು ಮರದ ಅಡಿಯಲ್ಲಿ ಒಬ್ಬ ದೈತ್ಯಗಾತ್ರದ ಗಮಾರ ಕೈಗಳನ್ನು ತಲೆಯ ಅಡಿಯಲ್ಲಿ ಇರಿಸಿಕೊಂಡು ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ. ತನ್ನ ಕೆಲಸದಿಂದ ತಪ್ಪಿಸಿಕೊಳ್ಳಲು, ಈ ದ್ವೀಪಕ್ಕೆ ಬಂದಿದ್ದಾನೆ ಎಂಬುದು ಸ್ಪಷ್ಟವಾಗಿತ್ತು. ಇಬ್ಬರು ಅಧಿಕಾರಿಗಳ ರೋಷಕ್ಕೆ ಮೇರೆಯೇ ಇರಲಿಲ್ಲ!

“ಏನು?! ಕೆಲ್ಸ ತಪ್ಪಿಸಿ, ಇಲ್ಲಿ ಮಲಗಿದ್ದೀಯಾ ಸೋಮಾರಿ”! ಅವರು ಅವನ ಮೇಲೆ ಮುಗಿಬಿದ್ದರು, “ಇಲ್ಲಿ ಇಬ್ರು ಅಧಿಕಾರಿಗಳು ಹಸಿವಿನಿಂದ ಸಾಯ್ತಿದ್ದಾರೆ ಅಂದ್ರೆ ನಿನ್ಗೇನೂ ಚಿಂತೆಯಿಲ್ಲ ಅಲ್ವೆ? ಏಳು! ಎದ್ದೇಳು! ನಡಿ! ಕೆಲಸ ಮಾಡು”!

ಗಮಾರ ಎದ್ದು ಇಬ್ಬರು ಗಂಭೀರ ಮಹಾಶಯರು ತನ್ನ ಎದುರು ನಿಂತಿರುವುದನ್ನು ನೋಡಿದ. ಅವನ ಮೊದಲ ಯೋಚನೆಯೆಂದರೆ, ಅಲ್ಲಿಂದ ಕಾಲುಕಿತ್ತು ತಪ್ಪಿಸಿಕೊಳ್ಳುವುದಾಗಿತ್ತು. ಆದರೆ, ಅಧಿಕಾರಿಗಳಿಬ್ಬರೂ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅವನು ತನ್ನ ಹಣೆಬರಹಕ್ಕೆ ಶರಣಾಗಬೇಕಿತ್ತು; ಕೆಲಸ ಮಾಡಬೇಕಿತ್ತು.

ಮೊದಲಿಗೆ ಅವನು ಮರವೊಂದಕ್ಕೆ ಹತ್ತಿ, ಕೆಲವು ಡಜನ್ ಅತ್ಯುತ್ತಮವಾದ ಸೇಬುಗಳನ್ನು ಕೊಯ್ದ. ಕೊಳೆತ ಒಂದನ್ನು ಅಭ್ಯಾಸದಂತೆ ತನಗಾಗಿ ಇಟ್ಟುಕೊಂಡ. ನಂತರ ನೆಲವನ್ನು ಅಗೆದು, ಕೆಲವು ಗಡ್ಡೆಗಳನ್ನು ಹೊರತೆಗೆದ. ನಂತರ ಎರಡು ಕಟ್ಟಿಗೆ ತುಂಡುಗಳನ್ನು ಉಜ್ಜಿ ಬೆಂಕಿ ಹೊತ್ತಿಸಿದ. ತನ್ನ ಉದ್ದ ಕೂದಲುಗಳಿಂದಲೇ ಉರುಳುಗಳನ್ನು ಮಾಡಿ ಪ್ಯಾಟ್ರಿಜ್ ಹಕ್ಕಿಗಳನ್ನು ಹಿಡಿದ. ಈ ಹೊತ್ತಿಗೆ ಪ್ರಕಾಶಮಾನವಾಗಿ ಉರಿಯುತ್ತಿದ್ದ ಬೆಂಕಿಯಲ್ಲಿ ಎಷ್ಟು ನಮೂನೆಯ ಅಡುಗೆ ಮಾಡಿದ ಎಂದರೆ, ಈ ಸೋಮಾರಿಗೂ ಸ್ವಲ್ಪ ಕೊಡಬೇಡವೆ ಎಂಬ ಪ್ರಶ್ನೆ ಅಧಿಕಾರಿಗಳ ಮನಸ್ಸಿನಲ್ಲಿ ಹುಟ್ಟಿತು.

ಈ ಗಮಾರನ ಪ್ರಯತ್ನದಿಂದ ಅವರು ಹೃದಯದಲ್ಲಿ ಖುಷಿಗೊಂಡರು. ಹಿಂದಿನ ದಿನವೇ ತಾವು ಹೇಗೆ ಹಸಿವಿನಿಂದ ಹೆಚ್ಚುಕಡಿಮೆ ಸಾಯುತ್ತಿದ್ದೆವು ಎಂಬುದನ್ನು ಅವರಾಗಲೇ ಮರೆತಿದ್ದರು. ಮತ್ತು ಅವರ ಮನಸ್ಸಿನಲ್ಲಿದ್ದ ಯೋಚನೆ ಕೇವಲ ಇಷ್ಟೇ: “ಅಧಿಕಾರಿಯಾಗಿರುವುದೆಂದರೆ ಎಷ್ಟು ಒಳ್ಳೆಯ ವಿಷಯ. ಒಬ್ಬ ಅಧಿಕಾರಿಗೆ ಯಾವತ್ತೂ ಕೆಟ್ಟದಾಗಲು ಸಾಧ್ಯವಿಲ್ಲ”.

“ನಿಮಗೆ ಸಮಾಧಾನವಾಯಿತೆ, ಮಹಾಶಯರೇ?” ಸೋಮಾರಿ ಗಮಾರ ಕೇಳಿದ.

“ಹೌದು. ನಿನ್ನ ಕೆಲಸ ಇಷ್ಟ ಆಯ್ತು”, ಅಧಿಕಾರಿಗಳು ಉತ್ತರಿಸಿದರು.

“ಹಾಗಾದ್ರೆ ಸ್ವಲ್ಪ ಆರಾಮ ಮಾಡ್ತೀನಿ, ತಾವು ಮನಸ್ಸು ಮಾಡಬೇಕು”!

“ಆಯ್ತು. ಸ್ವಲ್ಪ ಆರಾಮ ಮಾಡು. ಆದ್ರೆ, ಮೊದಲೊಂದು ಹಗ್ಗ ಹೆಣಿ”.

ಗಮಾರ, ಕಾಡು ಸೆಣಬುಹುಲ್ಲಿನ ದಂಟುಗಳನ್ನು ಕತ್ತರಿಸಿ, ನೀರಿನಲ್ಲಿ ನೆನೆಸಿ, ಅವುಗಳನ್ನು ಜಜ್ಜಿ, ನಾರು ತೆಗೆದ. ಸಂಜೆಯ ಹೊತ್ತಿಗೆ ಗಟ್ಟಿಯಾದ, ದಪ್ಪಗಿನ ಹಗ್ಗ ತಯಾರಾಯಿತು. ಅಧಿಕಾರಿಗಳು, ಹಗ್ಗವನ್ನು ಇಸಿದುಕೊಂಡು, ಅವನು ಓಡಿಹೋಗಬಾರದೆಂದು ಅವನನ್ನು ಒಂದು ಮರಕ್ಕೆ ಕಟ್ಟಿಹಾಕಿದರು. ನಂತರ ಅವರೂ ಮಲಗಿದರು.

ಹೀಗೆಯೇ ದಿನಗಳು ಉರುಳಿತು. ಗಮಾರ ಎಷ್ಟು ಕುಶಲಿಯಾದ ಎಂದರೆ, ಅವನು ಕಣ್ಣುಮುಚ್ಚಿಯೇ ಅವರಿಗಾಗಿ ಅತ್ಯುತ್ತಮ ಸೂಪು ತಯಾರಿಸಬಲ್ಲವನಾಗಿದ್ದ. ಇಬ್ಬರು ಅಧಿಕಾರಿಗಳೂ ಸರಿಯಾಗಿ ತಿಂದುಂಡು ದುಂಡಗಾಗಿ ಸುಖವಾಗಿದ್ದರು. ತಾವು ಯಾವುದೇ ಹಣ ಖರ್ಚು ಮಾಡಬೇಕಿಲ್ಲ ಮತ್ತು ತಮ್ಮ ಪಿಂಚಣಿ ಹಣ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸಂಗ್ರಹವಾಗುತ್ತಿದೆ ಎಂದು ಆವರಿಗೆ ಮತ್ತಷ್ಟು ಖುಷಿಯಾಯಿತು.

“ನಿಮ್ಮ ಅಭಿಪ್ರಾಯ ಏನು ಮಹಾಸ್ವಾಮೀ”, ಒಂದು ದಿನ ಬೆಳಗ್ಗಿನ ಉಪಾಹಾರದ ನಂತರ, ಒಬ್ಬ ಇನ್ನೊಬ್ಬನಲ್ಲಿ ಕೇಳಿದ, “ಬಾಬೆಲ್‌ನ ಗೋಪುರದ ಕತೆ ನಿಜವೆ? ಅದು ಬರೇ ದೃಷ್ಟಾಂತ ಕತೆ ಅನಿಸೋದಿಲ್ವೆ?

(ಹಳೆ ಒಡಂಬಡಿಕೆ ಪ್ರಕಾರ ರಾಜ ನಿಮ್ರೋದ್ ದೇವಲೋಕ ತಲುಪಲು ಬ್ಯಾಬಿಲೋನಿನಲ್ಲಿ ಗೋಪುರ ಕಟ್ಟಿ ಆಗಸಕ್ಕೆ ಬಾಣ ಬಿಟ್ಟ. ಸಿಟ್ಟಾದ ದೇವರ ಶಾಪದಿಂದ ಗೋಪುರ ನಾಶವಾಗಿ ಆವನ ಪ್ರಜೆಗಳು ಹಲವು ಗುಂಪುಗಳಾಗಿ ಒಡೆದುಹೋದರು. ಅವರು ಬೇರೆ ಬೇರೆ ಭಾಷೆ ಮಾತನಾಡುತ್ತಿದ್ದು, ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ಅರ್ಥವಾಗುತ್ತಿರಲಿಲ್ಲ.)

“ಖಂಡಿತವಾಗಿಯೂ ಅಲ್ಲ ಮಹಾಸ್ವಾಮೀ, ಅದು ನಿಜವಾಗ್ಲೂ ನಡೆದದ್ದೆಂದು ನನ್ನ ಭಾವನೆ. ಭೂಮಿ ಮೇಲೆ ಇಷ್ಟೊಂದು ರೀತಿಯ ಭಾಷೆಗಳು ಇರೋದಕ್ಕೆ ಬೇರೇನು ವಿವರಣೆ ಇದೆ”?

“ಹಾಗಾದ್ರೆ, ಮಹಾ ಪ್ರವಾಹವೂ ನಡೆದಿರ್ಬೇಕಲ್ವೆ”?

“ಖಂಡಿತ. ಇಲ್ಲದಿದ್ರೆ, ಇಷ್ಟೊಂದು ಪ್ರಳಯಪೂರ್ವ ಪ್ರಾಣಿಗಳು ಈಗ ಉಳಿದಿರೋದಕ್ಕೆ ಏನು ವಿವರಣೆಯಿದೆ? ಆದಲ್ಲದೇ, ಮಾಸ್ಕೋ ಗೆಜೆಟ್ ಹೇಳುತ್ತದೆ….”

ಅವರೀಗ ಮಾಸ್ಕೋ ಗೆಜೆಟ್ ಪತ್ರಿಕೆಯ ಆ ಹಳೆಯ ಸಂಚಿಕೆಯನ್ನು ಹುಡುಕಿ, ನೆರಳಿನಲ್ಲಿ ಕುಳಿತು, ಮೊದಲಿನಿಂದ ಹಿಡಿದು ಕೊನೆಯ ತನಕ ಓದಲಾರಂಭಿಸಿದರು. ಅವರು ಮಾಸ್ಕೋ, ಟುಲಾ, ಪೆನ್ಝಾ ಮತ್ತು ರಿಯಝಾನ್‌ನ ಹಬ್ಬ, ಜಾತ್ರೆಗಳ ಬಗ್ಗೆ ಓದಿದರು. ವಿಚಿತ್ರ ಎಂಬಂತೆ, ಅಲ್ಲಿ ಬಡಿಸಲಾದ ತಿಂಡಿತಿನಿಸುಗಳ ವಿವರಣೆಗಳು ಅವರನ್ನು ಅಷ್ಟಾಗಿ ಆಸ್ವಸ್ಥಗೊಳಿಸಲಿಲ್ಲ.

ಈ ಜೀವನ ಎಷ್ಟು ಕಾಲ ಮುಂದುವರಿಯುತ್ತಿತ್ತು ಎಂದು ಹೇಳಲು ಸಾಧ್ಯವಿಲ್ಲ. ಕೊನೆಗೂ ಅದು ಈ ಅಧಿಕಾರಿಗಳಿಗೆ ಬೇಸರ ಉಂಟುಮಾಡಲು ಆರಂಭಿಸಿತು. ಅವರು ಆಗಾಗ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ತಮ್ಮ ಬಾಣಸಿಗರ ಬಗ್ಗೆ ಯೋಚಿಸುತ್ತಿದ್ದರು. ಕೆಲವೊಮ್ಮೆ ಗುಟ್ಟಾಗಿ ಕಣ್ಣೀರನ್ನೂ ಹಾಕುತ್ತಿದ್ದರು.

“ಪೊದ್ಯಚೆಸ್ಕಾಯ ರಸ್ತೆ ಈಗ ಹೇಗೆ ಕಾಣ್ತಿರಬಹುದು ಅಂತ ಯೋಚಿಸ್ತೇನೆ ಮಹಾಸ್ವಾಮೀ” ಅವರಲ್ಲೊಬ್ಬ ಇನ್ನೊಬ್ಬನಿಗೆ ಹೇಳಿದ.

“ಓಹ್! ಅದನ್ನು ನೆನಪಿಸ್ಬೇಡಿ. ನಾನು ಮನೆಯ ನೆನಪಿಂದ ನರಳ್ತಿದ್ದೇನೆ”.

“ಇಲ್ಲಿ ಎಲ್ಲವೂ ಚೆನ್ನಾಗಿದೆ. ಈ ಜಾಗದಲ್ಲಿ ಯಾವುದೇ ಕುಂದುಕೊರತೆ ಕಂಡುಹಿಡಿಯೋದು ಸಾಧ್ಯವಿಲ್ಲ, ಆದ್ರೂ ಕುರಿಮರಿ ಕುರಿಗಾಗಿ ಹಾತೊರೆಯ್ತದೆ. ಅದಲ್ಲದೆ, ನಮ್ಮ ಚಂದದ ಸಮವಸ್ತ್ರ ಇಲ್ಲದಿರೋದು ಬೇಸರದ ವಿಷಯ”.

“ನಿಜವಾಗಿಯೂ ಹೌದು. ನಾಲ್ಕನೇ ದರ್ಜೆಯ ಸಮವಸ್ತ್ರ ಅಂದ್ರೆ ತಮಾಷೆಯ ವಿಷಯ ಅಲ್ಲ. ಒಬ್ಬನ ತಲೆ ತಿರುಗಿಸೋದಕ್ಕೆ ಆದರ ಚಿನ್ನದ ಕಸೂತಿಯೇ ಸಾಕು”.

ಇದೀಗ ಅವರು ಪೊದ್ಯಚೆಸ್ಕಾಯ ರಸ್ತೆಗೆ ತಮ್ಮನ್ನು ಕೊಂಡೊಯ್ಯುವ ಉಪಾಯ ಹುಡುಕುವಂತೆ ಗಮಾರನನ್ನು ಅಂಗಲಾಚಲು ಆರಂಭಿಸಿದರು. ವಿಚಿತ್ರವೆಂದರೆ, ಗಮಾರನಿಗೆ ಪೊದ್ಯಚೆಸ್ಕಾಯ ರಸ್ತೆ ಎಲ್ಲಿದೆ ಎಂದು ಗೊತ್ತಿತ್ತು. ಅವನು ಅಲ್ಲಿ ಬಿಯರ್ ಮತ್ತು ಮೀಡ್ (ಒಂದು ರೀತಿಯ ಮದ್ಯ) ಕುಡಿದಿದ್ದ.

ಆದರೇನು! ಆಡುಮಾತಿನಂತೆ, ಎಲ್ಲವೂ ಅವನ ಗಡ್ಡದಲ್ಲಿ ಇಳಿದಿತ್ತೇ ಹೊರತು ಬಾಯಿಯೊಳಗೆ ಹೋಗಿರಲಿಲ್ಲ! ಆಧಿಕಾರಿಗಳು ಸಂಭ್ರಮದಿಂದ ಘೋಷಿಸಿದರು: “ನಾವು ಪೊದ್ಯಚೆಸ್ಕಾಯ ರಸ್ತೆಯ ಅಧಿಕಾರಿಗಳು”!

“ನಾನು ಅವ್ರಲ್ಲಿ ಒಬ್ಬ ಜನ- ನಿಮ್ಗೆ ನೆನಪಿದ್ಯೆ- ತೂಗುವ ಹಗ್ಗಕ್ಕೆ ನೇತುಬಿದ್ದು, ಅಟ್ಟಣಿಗೇಲಿ ಕುಂತು ಕಟ್ಟಡಗಳಿಗೆ ಬಣ್ಣ ಕೊಡ್ತಾರಲ್ಲ, ಅವ್ನು. ನಾನು ಮಾಡಿನ ಮೇಲೆಲ್ಲಾ ನೊಣಗಳ ಹಾಗೆ ಹರಿದಾಡ್ತಾರಲ್ಲ- ಆವ್ನು. ಅವ್ನೇ ನಾನು” ಗಮಾರ ಉತ್ತರಿಸಿದ.

ತನ್ನಂತಹ ಸೋಮಾರಿಯನ್ನು ಅಷ್ಟು ಗೌರವದಿಂದ ನಡೆಸಿಕೊಂಡು, ತನ್ನ ಕೆಲಸಕ್ಕೆ ಬೈಯ್ಯದ ತನ್ನ ಅಧಿಕಾರಿಗಳನ್ನು ಭಾರೀ ಖುಷಿಯಲ್ಲಿ ಇಡುವುದು ಹೇಗೆ ಎಂದು ದೀರ್ಘವಾಗಿ ಮತ್ತು ಆಳವಾಗಿ ಗಮಾರನು ಈಗ ಯೋಚನೆ ಮಾಡಿದ. ಗಮಾರನು ವಾಸ್ತವವಾಗಿ ಒಂದು ಹಡಗನ್ನು ಕಟ್ಟುವುದರಲ್ಲಿ ಸಫಲನಾದ. ಅದು ನಿಜವಾಗಿಯೂ ಹಡಗಾಗಿರಲಿಲ್ಲ. ಆದರೂ ಅದು- ಅವರನ್ನು ಸಾಗರದ ಆಚೆ ಪೊದ್ಯಚೆಸ್ಕಾಯ ರಸ್ತೆಯ ಬಳಿಗೆ ಕೊಂಡೊಯ್ಯುವ ದೋಣಿಯಾಗಿತ್ತು.

“ಈಗ ಜಾಗ್ರತೆ ವಹಿಸು ನಾಯಿ! ನಮ್ಮನ್ನು ಎಲ್ಲಿಯಾದ್ರೂ ಮುಳುಗಿಸಿಬಿಟ್ಟೀಯ”! ಎಂದು ಅಧಿಕಾರಿಗಳು ಹೇಳಿದರು. ನಂತರ ಅವರು ಈ ತೆಪ್ಪವು ಅಲೆಗಳಲ್ಲಿ ಏರುತ್ತಾ ಇಳಿಯುತ್ತಾ ಇರುವುದನ್ನು ಕಂಡರು.

“ಹೆದರಬೇಡಿ. ಗಮಾರರು ನಮಗೆ ಇದೆಲ್ಲಾ ಅಭ್ಯಾಸ” ಎಂದ ಗಮಾರ, ಪ್ರಯಾಣಕ್ಕೆ ಎಲ್ಲಾ ಸಿದ್ಧತೆ ಮಾಡಿದ. ಅವನು ಹಂಸಗಳ ಪುಕ್ಕಗಳನ್ನು ಸಂಗ್ರಹಿಸಿ, ತನ್ನ ಇಬ್ಬರು ಅಧಿಕಾರಿಗಳಿಗೆ ಮೆತ್ತನೆಯ ಗಾದಿ ಮಾಡಿದ. ನಂತರ ಅವನು ಶಿಲುಬೆಯ ಸಂಜ್ಞೆ ಮಾಡಿ, ದಡದಿಂದ ದೂರಕ್ಕೆ ಹುಟ್ಟುಹಾಕಲು ತೊಡಗಿದ.

ದಾರಿಯಲ್ಲಿ ಅಧಿಕಾರಿಗಳು ಎಷ್ಟು ಹೆದರಿದ್ದರು, ಕಡಲ ಕಾಯಿಲೆಯಿಂದ ಎಷ್ಟು ಬಳಲಿದ್ದರು ಎಂದರೆ, ಅವರು ಒರಟು ಗಮಾರನ ಸೋಮಾರಿತನಕ್ಕಾಗಿ ಎಷ್ಟೊಂದು ಬೈದರು ಎಂದು ಹೇಳಲೂ ಸಾಧ್ಯವಿಲ್ಲ; ವಿವರಿಸಲೂ ಸಾಧ್ಯವಿಲ್ಲ. ಆದರೆ, ಗಮಾರ ಮಾತ್ರ ಹುಟ್ಟು ಹಾಕುತ್ತಲೇ ಇದ್ದ; ತನ್ನ ಅಧಿಕಾರಿಗಳಿಗೆ ಹೆರಿಂಗ್ ಮೀನುಗಳ ಖಾದ್ಯ ತಿನ್ನಿಸುತ್ತಲೇ ಇದ್ದ. ಕೊನೆಗೂ ಅವರು ಮದರ್ ನೇವಾ ಬಂದರನ್ನು ಕಂಡರು. ಬೇಗನೇ ಕ್ಯಾಥರಿನ್ ಕಾಲುವೆಯಲ್ಲಿದ್ದರು, ನಂತರ ಎಂತಹ ಸಂತೋಷ! ಅವರು ಪೊದ್ಯಚೆಸ್ಕಾಯ ರಸ್ತೆ ತಲುಪಿದರು. ಬಾಣಸಿಗರು ತಮ್ಮ ಧಣಿಗಳು ಚೆನ್ನಾಗಿ ತಿಂದುಂಡು ದುಂಡಗಾಗಿ, ಖುಷಿಯಿಂದ ಇರುವುದನ್ನು ಕಂಡು ತುಂಬಾ ಸಂತೋಷಗೊಂಡರು. ಅಧಿಕಾರಿಗಳು ಕಾಫಿ ಕುಡಿದು, ದೋಸೆ ತಿಂದು, ತಮ್ಮ ಕುದುರೆಗಾಡಿಗಳಲ್ಲಿ ಪಿಂಚಣಿ ಕಚೇರಿಗೆ ಹೋದರು. ಅವರು ಆಲ್ಲಿ ಎಷ್ಟೊಂದು ಹಣವನ್ನು ಪಡೆದರು ಎಂಬುದು ಬೇರೆಯೇ ವಿಷಯ. ಅದನ್ನು ಕೂಡಾ ಹೇಳಲೂ ಸಾಧ್ಯವಿಲ್ಲ; ವಿವರಿಸಲೂ ಸಾಧ್ಯವಿಲ್ಲ. ಗಮಾರನನ್ನೂ ಮರೆಯಲಿಲ್ಲ. ಅವನಿಗೆ ಅಧಿಕಾರಿಗಳು ಒಂದು ಗ್ಲಾಸು ವಿಸ್ಕಿ ಮತ್ತು ಐದೇ ಕೊಪೆಕ್ (ರೂಬಲ್ ರೂಪಾಯಿಯಾದರೆ, ಕೊಪೆಕ್ ಪೈಸೆ) ಚಿಲ್ಲರೆ ಹಣವನ್ನು ಕಳುಹಿಸಿಕೊಟ್ಟರು. ಈಗ ಗಮಾರನೇ, ಚೆನ್ನಾಗಿ ಮಜಾ ಮಾಡು!

ರಷ್ಯನ್ ಮೂಲ: ಎಂ.ವೈ. ಸಾಲ್ಟಿಕೋವ್
ಅನುವಾದ: ನಿಖಿಲ್ ಕೋಲ್ಪೆ

ಎಂ.ವೈ. ಸಾಲ್ಟಿಕೋವ್

ಎಂ.ವೈ. ಸಾಲ್ಟಿಕೋವ್
ನಿಕೋಲಾಯ್ ಷೆಡ್ರಿನ್ ಹೆಸರಿನಲ್ಲಿ ಬರೆಯುತ್ತಿದ್ದ, ಆ ಕಾಲದಲ್ಲೇ ಕ್ರಾಂತಿಕಾರಿ ಒಲವುಗಳಿದ್ದ ಸಾರ್ವಕಾಲಿಕ ಶ್ರೇಷ್ಠ ರಷ್ಯನ್ ವಿಡಂಬನಾ ಕತೆಗಾರರಲ್ಲಿ ಒಬ್ಬರಾದ ಮಿಖಾಯಿಲ್ ಯೆವ್‌ಗ್ರಾಫೋವಿಚ್ ಸಾಲ್ಟಿಕೋವ್ (1824-1889) ಅವರ “ಹೌ ಎ ಮುಝಿಕ್ ಫೆಡ್ ಟೂ ಅಫೀಷಿಯಲ್ಸ್?” ಕತೆಯ ಅನುವಾದ. ರಷ್ಯನ್ ಭಾಷೆಯಲ್ಲಿ ಮುಝಿಕ್ ಎಂದರೆ, ಬಡ ಒಕ್ಕಲು ರೈತರಿಗೆ ಇರುವ ತಾತ್ಸಾರದ ಹೆಸರು. ವಾಸ್ತವದಲ್ಲಿ ಗಮಾರನೆಂದೇ ಅರ್ಥ.


ಇದನ್ನೂ ಓದಿ: ಓ, ನಮ್ಮನ್ನೂ ಎಣಿಸಬಾರದೇ?; ಎರಡು ಅಬ್ರಿವೇಶನ್‌ಗಳ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...