Homeಕಥೆಓ, ನಮ್ಮನ್ನೂ ಎಣಿಸಬಾರದೇ?; ಎರಡು ಅಬ್ರಿವೇಶನ್‌ಗಳ ಕಥೆ

ಓ, ನಮ್ಮನ್ನೂ ಎಣಿಸಬಾರದೇ?; ಎರಡು ಅಬ್ರಿವೇಶನ್‌ಗಳ ಕಥೆ

- Advertisement -
- Advertisement -

ನಮ್ಮ ಸಮಕಾಲೀನ ಇತಿಹಾಸದ ಈ ಪ್ರಸಕ್ತ ಕ್ಷಣವು ವಿರೋಧಾಭಾಸಗಳಿಂದ ತುಂಬಿದೆ. ಒಂದು ಸ್ವತಂತ್ರ ದೇಶವಾಗಿ ನಮ್ಮ ಅಸ್ತಿತ್ವದ ಪ್ರಾರಂಭವನ್ನು 2021ರ ವರ್ಷವು ನೆನಪಿಸುತ್ತದೆ. ಇದು ಸಹಜವಾಗಿಯೇ ಭಾರತದ ಸ್ವಾತಂತ್ರ್ಯದ ಹೋರಾಟವನ್ನು ನೆನಪಿಸಿ ಅದರೊಂದಿಗೆ ಬರಲಿರುವ ದೇಶದ ಸ್ವಾತಂತ್ರದ ಕನಸು ಕಾಣುತ್ತ ತಮ್ಮ ಜೀವಗಳನ್ನು ತ್ಯಾಗ ಮಾಡಿದ ಹುತಾತ್ಮರ ನೆನಪನ್ನು ಕಣ್ಣುಮುಂದೆ ತರುತ್ತದೆ. ಒಂದು ದೀರ್ಘ ನಿದ್ರೆಗೆ ಜಾರಿದ್ದ ದೇಶದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಬಿತ್ತಿ, ಸ್ವಾತಂತ್ರಕ್ಕೆ ಹಾತೊರೆಯುವಂತೆ ಮಾಡಿದ ಧೀಮಂತ ನಾಯಕರ ವಿಚಾರಗಳನ್ನು ಮತ್ತು ಅವರ ಜೀವನಗಳನ್ನು ಮತ್ತೆ ನೋಡುವಂತೆ ಮಾಡಿದೆ. ಆದರೆ 2021ರ ವರ್ಷದಲ್ಲಿಯೇ ದೇಶದ ಪ್ರಧಾನಿ ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾತ್ಮ ಗಾಂಧಿಯ ಹೆಸರು ಒಂದೂ ಸಲ ಕೇಳಿಸಲಿಲ್ಲ.

ಸರಿಯಾಗಿ 2021ಕ್ಕೆ 100 ವರ್ಷಗಳ ಹಿಂದೆ ಬ್ಯಾರಿಸ್ಟರ್ ಗಾಂಧಿಯು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದು, 1921ರ ಕಲ್ಕತ್ತಾ ಅಧಿವೇಶನದಲ್ಲಿ ಅದರ ಅಧ್ಯಕ್ಷರಾಗಿದ್ದನ್ನೂ ನಮಗೆ ನೆನಪಿಸುತ್ತದೆ. ಅವರ ನಾಯಕತ್ವವು ಕಾಂಗ್ರೆಸ್ಸಿಗೆ ಒಂದು ಸೈದ್ಧಾಂತಿಕ ಹುರುಪನ್ನು ನೀಡಿ, ಅದರಿಂದ ವಸಾಹತುಶಾಹಿ ಸರಕಾರವು ಅಳಗಾಡುವಂತೆ ಮಾಡಿತು. 2021ರಲ್ಲಿಯೇ ಈಗಿನ ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತದ ಬಗ್ಗೆ ತನ್ನಷ್ಟಕ್ಕೆ ತಾನು ಒಂದಿಷ್ಟು ಗೊಣಗಿಕೊಳ್ಳುವದನ್ನು ಮಾಡದೇ ದಿನೇದಿನೇ ಶಿಥಿಲವಾಗುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. 100 ವರ್ಷಗಳ ಹಿಂದೆ ಇದೇ ವರ್ಷ ಅಂಬೇಡ್ಕರ್ ಅವರ ಮೂಕನಾಯಕ ಪತ್ರಿಕೆಯ ಆರಂಭಕ್ಕೆ ಈ ದೇಶವು ಸಾಕ್ಷಿಯಾಗಿತ್ತು; ಕಳೆದ ನೂರು ವರ್ಷಗಳಲ್ಲಿ ಸಾಮಾಜಿಕ ಹಕ್ಕುಗಳಿಗಾಗಿ ನಡೆದ ಎಲ್ಲಾ ಹೋರಾಟಗಳಿಗೆ ಅಡಿಪಾಯವನ್ನು ಒದಗಿಸಿದ್ದು ಇದೇ ಮೂಕನಾಯಕ. ವಿಪರ್ಯಾಸವೇನೆಂದರೆ, ಹಿಂದೆಗಿಂತಲೂ ಅತೀ ಹೆಚ್ಚು ದಲಿತರು ಮಾಬ್‌ಲಿಂಚಿಂಗ್‌ಗೆ ಒಳಗಾದ ವರ್ಷವೂ ಇದೇ 2021.

ಒಂದು ಶತಮಾನದ ಹಿಂದೆಯೇ, ಏಷಿಯಾದ ಜನರು ಬ್ರಿಟಿಷರ ಪ್ರಬಲ ಮಿಲಿಟರಿ ಶಕ್ತಿಯನ್ನು ಮಣಿಸಬಹುದೆಂದು ಅಫ್ಘನ್ ಸಮರವು ವಿಶ್ವದ ಜನರಿಗೆ ತೋರಿಸಿತು, ಅದು ಭಾರತೀಯರು ಮತ್ತು ಅಫ್ಘನ್ನರ ಮಧ್ಯೆ ಒಂದು ನಿಕಟ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಕಾರಣವಾಯಿತು. ಇದಕ್ಕೆ ತದ್ವಿರುದ್ಧವಾಗಿ 2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಸ್ವಾಧೀನಪಡಿಸಿಕೊಂಡಿದ್ದು ಭಾರತದಲ್ಲಿನ ಮುಸ್ಲಿಂ ದ್ವೇಷಿಗಳಿಗೆ ಈ ಉಪಖಂಡದ ಎಲ್ಲಾ ಮುಸ್ಲಿಮರನ್ನು ರಾಕ್ಷಸೀಕರಣಗೊಳಿಸಲು ಒಂದು ಅನುಕೂಲಕರವಾದ ಹತಾರ ನೀಡಿದಂತಾಗಿದೆ. ಸರಿಯಾಗಿ 50 ವರ್ಷಗಳ ಹಿಂದೆ 1971 ರಲ್ಲಿ ಬಾಂಗ್ಲಾದೇಶವು ಒಂದು ಸ್ವತಂತ್ರ ದೇಶವಾಗಲು ಭಾರತ ನೆರವಿಗೆ ಧಾವಿಸಿತು. 2021ರಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದ ವಿಧಾನಸಭೆ ಚುನಾವಣೆಯನ್ನು ಯಾವ ರೀತಿಯಲ್ಲಿ ನಡೆಸಲಾಯಿತು ಎಂದರೆ ಕೇಂದ್ರದ ನಾಯಕರು ಮತ್ತು ಬೆಂಗಾಳದ ನಾಯಕರು ಎರಡು ಬೇರೆ ಬೇರೆ ಗ್ರಹಗಳಿಗೆ ಸೇರಿದವರಂತೆ ಕಚ್ಚಾಡಿದರು.

PC : You Tube

ಎಣಿಸುತ್ತಾ ಹೋದರೆ ವಿರೋಧಾಭಾಸಗಳು ಬಹಳಷ್ಟಿವೆ. ಆದರೆ ನನ್ನನ್ನು ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಕ್ಷೋಭೆಗೊಳಿಸುವುದು, ಇದೇ 2021ರ ವರ್ಷಕ್ಕೆ ಮೊದಲ ಅಪರಾಧಿ ಬುಡಕಟ್ಟು ಕಾಯಿದೆ (ಕ್ರಿಮಿನಲ್ ಟ್ರೈಬ್ಸ್ ಆಕ್ಟ್) 1871 ಜಾರಿಗೊಳಿಸಿ 150 ವರ್ಷಗಳು ತುಂಬುತ್ತವೆ ಹಾಗೂ ಭಾರತಕ್ಕೆ ಸ್ವಾತಂತ್ರ ಸಿಕ್ಕು 75 ವರ್ಷಗಳ ನಂತರವೂ, ನೂರಾಐವತ್ತು ವರ್ಷಗಳಾದ ನಂತರವೂ ಈ ಸಿಟಿಎ (ಕ್ರಿಮನಲ್ ಟ್ರೈಬ್ಸ್ ಆಕ್ಟ್) ದ ಬಲಿಪಶುಗಳಿಗೆ ಯಾವುದೇ ಭರವಸೆಯ ಕಿರಣಗಳು ಕಾಣಲು ಸಾಧ್ಯವಾಗಿಲ್ಲ. ಇದರ ಭೀಭತ್ಸ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆ.

ಸಾಮಾನ್ಯವಾಗಿ ಸಮಕಾಲೀನ ಭಾರತೀಯರಿಗೆ ಬ್ರಿಟಿಷ್ ಅಧಿಕಾರಿಯಾದ ಜೆನರಲ್ ವಿಲಿಯಮ್ ಹೆನ್ರಿ ಸ್ಲೀಮನ್(1788-1856) ಅವರನ್ನು ನೆನಪಿಸಿಕೊಳ್ಳಲು ಅಂಥಾ ಕಾರಣಗಳಿಲ್ಲ. ಈ ಅಧಿಕಾರಿಯು ತನ್ನ 21ನೇ ವಯಸ್ಸಿನಲ್ಲಿ ಪ್ರಾರಂಭಿಸಿ, 1809ರಿಂದ 1856ವರೆಗೆ ನಾಲ್ಕು ದಶಕಗಳ ಕಾಲ ವಸಾಹತುಶಾಹಿ ಆಡಳಿತಕ್ಕಾಗಿ ಸೇವೆ ಸಲ್ಲಿಸಿದರು. ಈ ಸ್ಲೀಮನ್ ಎಂಬಾತನೇ ನಶಿಸಿಹೋದ ನರ್ಮದಾ ಕಣಿವೆಯ ಡೈನಾಸಾರ್‌ನ ಪಳೆಯುಳಿಕೆಯನ್ನು ಗುರುತಿಸಿದ್ದು ಎಂಬುದರ ಬಗ್ಗೆ ಕೆಲವು ಪುರಾತತ್ವಶಾಸ್ತ್ರಜ್ಞರಿಗೆ ಬಿಟ್ಟರೆ ಮಿಕ್ಕವರಿಗೆ
ಆಸಕ್ತಿ ಇರಲಾರದು. ಆದರೆ ಈ ವ್ಯಕ್ತಿಯೇ ಭಾರತದ ಒಂದು ನಿರ್ದಿಷ್ಟ ವರ್ಗಕ್ಕೆ ಒಂದು ಕಟ್ಟುಕಥೆಯನ್ನು ಸೃಷ್ಟಿಸಿದವನು. 1830ರ ದಶಕದಲ್ಲಿ ಇವನನ್ನು ’ಕಮಿಷನರ್ ಫಾರ್ ದಿ ಸಪ್ರೆಷನ್ ಆಫ್ ಥಗ್ಗಿ ಆಂಡ್ ಡಕಾಯಿತಿ’ (ಕಳ್ಳತನ ಮತ್ತು ದರೋಡೆಯ ಹತ್ತಿಕ್ಕುವಿಕೆಯ ಕಮಿಷನರ್) ಎಂದು ನಿಯುಕ್ತಿಗೊಳಿಸಲಾಯಿತು.

ಬ್ರಿಟಿಷ್ ಆಳ್ವಿಕೆಯು ಕಾನೂನು ಮತ್ತು ಸುವ್ಯವಸ್ಥೆಯ ನಿಯಮವನ್ನು ಸೃಷ್ಟಿಸುವ ಕಲ್ಪನೆಯನ್ನು ಹೊಂದಿದ್ದರಿಂದ ಈ ಆಯೋಗಕ್ಕೆ ನೀಡಿದ ಭವ್ಯ ಹೆಸರು ವಸಾಹತುಶಾಹಿ ಕಥನಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತಿತ್ತು. ಸ್ಲೀಮನ್ ಈ ಕೆಲಸವನ್ನು ಅತ್ಯಂತ ಉತ್ಸಾಹದಿಂದ ಕೈಗೆತ್ತಿಕೊಂಡ. ಮಧ್ಯ ಭಾರತದಲ್ಲಿ ನಡೆಯುತ್ತಿದ್ದ ಅಪರಾಧದ ಮತ್ತು ಗಲಭೆಗಳ ಎಲ್ಲಾ ಪ್ರಕರಣಗಳ ಪಟ್ಟಿಯನ್ನು ಮಾಡಿದ್ದಲ್ಲದೇ ಅವನು ಅವರೆಲ್ಲರನ್ನು ತುರ್ತು ವಿಚಾರಣೆಗೂ ಒಳಪಡಿಸಿದ. ಆ ವಿಚಾರಣೆಗಳು ಸ್ಲೀಮನ್‌ನ ಅಧಿಕಾರಾವಧಿಯಲ್ಲಿ 1,400 ಜನರನ್ನು ಗಲ್ಲಿಗೇರಿಸಲು ಕಾರಣವಾದವು. ಆವರಲ್ಲಿ ಯಾರಿಗಾದರೂ ವಸಾಹತುಶಾಹಿ ಸರಕಾರದಿಂದ ಕಾನೂನು ಸಹಾಯ ಸಿಕ್ಕಿತೆ ಎಂಬುದು ಯಾರಿಗೂ ಗೊತ್ತಿಲ್ಲ. ಆ ದಿನಗಳಿನ್ನೂ ಕಂಪನಿ ಸರಕಾರದ ದಿನಗಳು ಹಾಗಾಗಿ ಇಂತಹ ನಿರೀಕ್ಷೆಗಳನ್ನಿಟ್ಟುಕೊಳ್ಳುವುದೂ ಅವಾಸ್ತವವಾಗುತ್ತದೆ.

ಸ್ಲೀಮನ್‌ನ ಮಿಷನ್‌ನ ಪರಿಣಾಮವೇನಾಯಿತೆಂದರೆ, ಈ ಅಪರಾಧಿಗಳಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳನ್ನು ಸೃಷ್ಟಿಸಿ ಹರಿಬಿಡಲಾಯಿತು, ಅವುಗಳಲ್ಲಿ ಎಷ್ಟು ಸತ್ಯ ಎಷ್ಟು ಕಾಲ್ಪನಿಕ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಆದರೆ ಕೆಲವು ನಿರ್ದಿಷ್ಟ ಸಮುದಾಯಗಳ ಕೆಲವು ಸದಸ್ಯರ ಬದಲಿಗೆ ಆ ಇಡೀ ಸಮುದಾಯಗಳು ತಮ್ಮ ನಿರಂತರ ದೈನಂದಿನ ಹೊಟ್ಟೆಪಾಡಿಗಾಗಿ ಅಪರಾಧ ಕೃತ್ಯಗಳನ್ನೇ ಎಸಗುತ್ತಾರೆ ಎಂಬ ಪರಿಕಲ್ಪನೆ ಆಳುವವರ ತಲೆಯಲ್ಲಿ ಆಳವಾಗಿ ಬೇರುಬಿಟ್ಟಿತು. ಸ್ಲೀಮನ್‌ನ ಮಿಷನ್‌ಗೆ ಇನ್ನೊಂದು ಬಹಿರಂಗಗೊಳಿಸದ ಉದ್ದೇಶವೂ ಇತ್ತು; ಭಾರತದಲ್ಲಿಯ ಸೋಲುಂಡ ರಾಜರ ಸೈನಿಕರು, ಅಲೆದಾಡುವ ಸೈನಿಕರನ್ನು ನಿಶ್ಯಸ್ತ್ರಗೊಳಿಸುವುದು; ಹಾಗೂ ಆ ಕಾರಣಕ್ಕಾಗಿ ಸ್ಲೀಮನ್‌ನ ಕಣ್ಗಾವಲಿನಲ್ಲಿದ್ದ ಸಮುದಾಯಗಳೆಲ್ಲವೂ ಅಲೆಮಾರಿ ಸಮುದಾಯಗಳೇ ಆಗಿದ್ದವು.

1871ರ ಸಿ.ಟಿ.ಎ.ನಲ್ಲಿನ ಸಾಹಿತ್ಯದಲ್ಲಿ ಮತ್ತು ಆಸಕ್ತಿಯಲ್ಲಿ ಈ ಉದ್ದೇಶ ಮತ್ತು ಮಿಥ್‌ಗಳು
ಮೈತಳೆದವು. ಈ ಕಾಯಿದೆಯ ಪ್ರಕಾರ ಇಡೀ ಒಂದು ಸಮುದಾಯವೇ ಅಪರಾಧ ಮಾಡುವುದರ ಕಡೆಗೆ ಒಲವನ್ನು ಹೊಂದಿವೆ ಎನ್ನಲಾಯಿತು. ಇವರು ಅಂದುಕೊಂಡ ಅಪರಾಧಿ ಮನೋಭಾವವನ್ನು ಹೋಗಲಾಡಿಸಲು ಸಿಟಿಎ ಸೂಚಿಸಿದ ಉಪಾಯವೇನೆಂದರೆ ಈ ಸಮುದಾಯಗಳು ತಮ್ಮ ಅಲೆಮಾರೀ ಜೀವನವನ್ನು ಮುಂದುವರೆಸದಂತೆ ತಡೆಯುವುದು. ಹಾಗಾಗಿ, ಸಿಟಿಎ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳೆಲ್ಲವೂ ಮೂಲತಃ ಅಲೆಮಾರಿ ಮತ್ತು ಹಳ್ಳಿಗಾಡಿನ ಸಮುದಾಯಗಳಾಗಿದ್ದರಿಂದ, ಅವರನ್ನು ಸುಧಾರಣಾ ಸೆಟಲ್‌ಮೆಂಟ್‌ಗಳಲ್ಲಿ ಕೂಡಿಹಾಕಿಟ್ಟರು, ಅಂದರೆ ಒಂದು ರೀತಿಯ ಜೈಲಿನಲ್ಲಿ ಇರಿಸಲಾಯಿತು. ಅದರಿಂದ ಆಗಿದ್ದೇನೆಂದರೆ, ಅವರು ಅಂದರೆ ಆ ಸಮುದಾಯದ ಯಾವುದೇ ಒಬ್ಬ ಸದಸ್ಯರು ಯಾವುದೇ ಒಂದು ಸಣ್ಣ ಅಥವಾ ದೊಡ್ಡ ಅಪರಾಧದಲ್ಲಿ ಭಾಗಿಯಾಗಿರಲಿ ಬಿಡಲಿ ಅವರೆಲ್ಲರನ್ನೂ ಶಾಶ್ವತವಾಗಿ ಕಳಂಕಿತಗೊಳಿಸಲಾಯಿತು. ಬ್ರಿಟಿಷ್ ಆಳ್ವಿಕೆಯಲ್ಲಿ ಈ ಸಿಟಿಎಅನ್ನು ಹಲವಾರು ಬಾರಿ ಪರಿಷ್ಕರಿಸಲಾಯಿತು, ಹಾಗೆ ಆದಾಗೆಲ್ಲ ಅದರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚೆಚ್ಚು ಸಮುದಾಯಗಳನ್ನು ಸೇರಿಸಲಾಯಿತು. ಸಾವಿರಾರು ಜನರು ಈ ಸೆಟಲ್‌ಮೆಂಟ್‌ಗಳಲ್ಲಿ ಸಾವನ್ನಪ್ಪಿದರು, ಅವರನ್ನು ಯಾವುದೇ ವೇತನವಿಲ್ಲದ ಅತ್ಯಂತ ಕಠಿಣ ಶ್ರಮಕ್ಕೆ ದೂಡಲಾಯಿತು.

ಜೆನರಲ್ ವಿಲಿಯಮ್ ಹೆನ್ರಿ ಸ್ಲೀಮನ್

ಹಲವಾರು ತಲೆಮಾರುಗಳು ಈ ರೀತಿಯಲ್ಲೇ ಮುಂದುವರೆದವು ಹಾಗೂ ಅವರಿಗೆ ಅಂಟಿಕೊಂಡಿದ್ದ ಕಳಂಕ ಇನ್ನಷ್ಟು ಗಟ್ಟಿಯಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇವರನ್ನು ಎಲ್ಲರೂ ಮರತೇಬಿಟ್ಟಿದ್ದರು. ಈ ಸಮುದಾಯಗಳು ಬ್ರಿಟಿಷರು ನಿರ್ಮಿಸಿದ್ದ ಸೆಟಲ್‌ಮೆಂಟ್‌ಗಳಲ್ಲಿ ಕೊಳೆತುಹೋಗುವುದು ಮುಂದುವರೆಯಿತು. 1952ರಲ್ಲಿ, ಐಯ್ಯಂಗಾರ್ ಸಮಿತಿಯ ವರದಿ ಬಂದ ಮೇಲೆಯೇ ಸಿಟಿಎಅನ್ನು ಹಿಂಪಡೆಯಲಾಯಿತು ಹಾಗೂ ಅದರ ಬದಲಿಗೆ ಹ್ಯಾಬಿಚುವಲ್ ಆಫೆಂಡರ್ ಆಕ್ಟ್‌ನ್ನು (ರೂಢಿಗತ ಅಪರಾಧಿಗಳ ಕಾಯಿದೆ) ತರಲಾಯಿತು, ಈ ಹೊಸ ಕಾಯಿದೆಯಲ್ಲಿ ಸಮುದಾಯಗಳ ಬದಲಿಗೆ ವ್ಯಕ್ತಿಗಳನ್ನು ಗುರಿ ಮಾಡಲಾಗಿತ್ತು.

ಇದಕ್ಕೂ ಮುಂಚಿನ ಅಧಿಸೂಚನೆಗಳನ್ನು ಹಿಂಪಡೆದುದ್ದರಿಂದ ಈ ಸಮುದಾಯಗಳನ್ನು ಡಿನೋಟಿಫೈಡ್ ಸಮುದಾಯಗಳೆಂದು (ವಿಮುಕ್ತ ಬುಡಕಟ್ಟುಗಳು) ಕರೆಯಲಾಯಿತು, ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶದ ಅಲೆಮಾರಿ ಸಮುದಾಯಗಳಾಗಿದ್ದವು. ಹಾಗಾಗಿ ಅವುಗಳನ್ನು ಡಿಎನ್‌ಟಿ ಎಂದು ಕರೆಯಲಾಯಿತು. ಈ ಹಳ್ಳಿಗಾಡಿನ ಮತ್ತು ಅರೆ-ಅಲೆಮಾರಿ ಸಮುದಾಯಗಳನ್ನು ಎಸ್‌ಎನ್‌ಟಿಗಳೆಂದು (ಸೆಮಿ ನೊಮ್ಯಾಡಿಕ್ ಟ್ರೈಬ್ಸ್) ಕರೆಯಲಾಯಿತು. ಭಾರತದ ಎಲ್ಲಾ ರಾಜ್ಯಗಳಲ್ಲಿ ಕೂಲಂಕಷವಾಗಿ ಎಣಿಕೆ ಮಾಡಿದಲ್ಲಿ 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯಗಳು ಕಂಡುಬರಲಿವೆ. ಹಾಗೂ ಅವರ ಜನಸಂಖ್ಯೆ ಎಷ್ಟಿರಬಹುದು? ಅವರ ನಿರ್ದಿಷ್ಟ ಸಂಖ್ಯೆ ಗೊತ್ತಿಲ್ಲವಾದರೂ 1931ರ ಜನಗಣತಿಯನ್ನು ಆಧಾರದಲ್ಲಿಟ್ಟುಕೊಂಡು ಲೆಕ್ಕ ಹಾಕಿದರೆ ಅವರ ಸಂಖ್ಯೆ 8 ರಿಂದ 15 ಕೋಟಿಗಳಷ್ಟು ಇರಬಹುದಾಗಿದೆ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಪಟ್ಟಿಯನ್ನು ರಚಿಸುವ ಪ್ರಕ್ರಿಯೆಯು ಡಿಎನ್‌ಟಿ ಡಿನೋಟಿಫಿಕೇಷನ್ ಪ್ರಕ್ರಿಯೆ ಮತ್ತು ಎಸ್‌ಎನ್‌ಟಿ ಶುರುವಾಗುವುದಕ್ಕೂ ಮುನ್ನ ಪ್ರಾರಂಭವಾಗಿದ್ದರಿಂದ ಈ ಸಮುದಾಯಗಳು ಶತಮಾನಗಳಿಂದ ಸಾಮಾಜಿಕ ಅನ್ಯಾಯಕ್ಕೆ ಒಳಗಾಗಿದ್ದ ಸಮುದಾಯಗಳಿಗೆ ಒಂದಿಷ್ಟು ನ್ಯಾಯ ಒದಗಿಸುವ ಮೀಸಲಾತಿಯಂತಹ ಸಕಾರಾತ್ಮಕ ಕ್ರಮಗಳ ಚೌಕಟ್ಟಿನ ಹೊರಗೇ ಉಳಿದವು. ಅವರಿಗೆ ಭೂಮಿ ಇಲ್ಲ, ಹೊಟ್ಟೆಪಾಡಿಗೆ ಉದ್ಯೋಗವಿಲ್ಲ ಹಾಗೂ ಸರಕಾರದ ಆಶ್ರಯವೂ ಇಲ್ಲದೇ ಹಳ್ಳಿಯಿಂದ ಹಳ್ಳಿಗೆ ಓಡಿಸಲಾಗುತ್ತಿದೆ ಹಾಗೂ ನಗರಗಳಲ್ಲಿ ಮಾಬ್‌ಲಿಂಚಿಂಗ್ ಮಾಡಲಾಗುತ್ತಿದೆ. ಅವರಲ್ಲಿ ಸಾವಿರಾರು ಜನರನ್ನು ಅಪರಾಧದ ಜೀವನಕ್ಕೆ ದೂಡಲಾಗುತ್ತಿದೆ ಹಾಗೂ ಅಪರಾಧದ ಜಗತ್ತಿನಲ್ಲಿ ದೊಡ್ಡ ಕುಳಗಳನ್ನು ರಕ್ಷಿಸಲು ಬೇಕಾಗುವ ಬಲಿಪಶುಗಳನ್ನಾಗಿ ಬಳಸಲಾಗುತ್ತದೆ. ಹೆಚ್ಚಿನವರು ಜೈಲಿನಲ್ಲಿ ಕೊಳೆಯುತ್ತಾರೆ ಹಾಗೂ ಅನೇಕರು ಯಾವುದೇ ಮಾಧ್ಯಮದ ಕಣ್ಣಿಗೆ ಕಾಣದೇ, ಗಮನ ಇಲ್ಲದೇ ಕಸ್ಟಡಿಯಲ್ಲಿಯೇ ಸಾವನ್ನಪ್ಪುತ್ತಾರೆ. ಸರಕಾರದ ಸೌಕರ್ಯಗಳನ್ನು ಪಡೆಯಲು ಅವರ ಎಣಿಕೆಯೇ ಮೊದಲ ಹೆಜ್ಜೆಯಾಗಿದ್ದರಿಂದ ಕಳೆದ ಹಲವಾರು ದಶಕಗಳಿಂದ ಅವರು ಒಂದು ಸೂಕ್ತವಾದ ಜನಗಣತಿಗೆ ಬೇಡಿಕೆಯನ್ನಿಟ್ಟಿದ್ದಾರೆ. ದಶಕಗಳಾದರೂ ಅದಿನ್ನೂ ಆಗಿಲ್ಲ. 2021ರ ಜನಗಣತಿಯಲ್ಲಿ ಭಾರತವು ಈ ಕರೆಗಳಿಗೆ ಕಿವಿಗೊಟ್ಟಿತೇ ಅಥವಾ ಕಿವುಡುತನ ತೋರಿಸುವುದೇ? 2021ರ ಈ ವಿರೋಧಾಭಾಸಗಳ ವರ್ಷದಲ್ಲಿ ಏನಾಗಬಹುದು ಎಂಬುದನ್ನು ನೀವೇ ಊಹಿಸಿ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಡಿನೋಟಿಫೈಡ್ ಆಂಡ್ ನೊಮ್ಯಾಡಿಕ್ ಟ್ರೈಬ್ಸ್ ರೈಟ್ಸ್ ಆಕ್ಷನ್ ಗ್ರೂಪ್‌ನ ಸಂಸ್ಥಾಪಕ ಹಾಗೂ ಸಾಂಸ್ಕೃತಿಕ ಹೋರಾಟಗಾರ


ಇದನ್ನೂ ಓದಿ: ಹಳಿಯಾಳ: ಅರಣ್ಯ ಸಿಬ್ಬಂದಿಯಿಂದ ಗೌಳಿ ಬುಡಕಟ್ಟು ಜನರ ಮೇಲೆ ದಾಳಿ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...