ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತದ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಶನ್ ಆಡಳಿತವು, ಕನ್ವರ್ ಯಾತ್ರಾ 2024 ಮಾರ್ಗದಲ್ಲಿನ ಅಂಗಡಿ ಮಾಲೀಕರಿಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಪುರಾತನ ನಗರದಲ್ಲಿರುವ ತಮ್ಮ ಸಂಸ್ಥೆಗಳ ಹೊರಗೆ ಪ್ರದರ್ಶಿಸುವಂತೆ ಸೂಚಿಸಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಇದೇ ರೀತಿಯ ಆದೇಶ ನೀಡಿದ ನಂತರ ಈ ನಿರ್ದೇಶನ ಬಂದಿದೆ.
ಕಾರ್ಪೊರೇಷನ್ ಆದೇಶವನ್ನು ಮೊದಲ ಬಾರಿಗೆ ಉಲ್ಲಂಘಿಸಿದರೆ ₹2,000 ದಂಡ ಮತ್ತು ಎರಡನೇ ಬಾರಿಗೆ ಈ ಆದೇಶವನ್ನು ಉಲ್ಲಂಘಿಸಿದರೆ ₹5,000 ದಂಡ ಪಾವತಿಸಬೇಕಾಗುತ್ತದೆ ಎಂದು ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಶನಿವಾರ (ಜುಲೈ 20) ತಿಳಿಸಿದ್ದಾರೆ. ಈ ಆದೇಶವು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಮತ್ತು ಮುಸ್ಲಿಂ ಅಂಗಡಿ ಮಾಲೀಕರನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಮೇಯರ್ ಹೇಳಿದ್ದಾರೆ.
ಸೆಪ್ಟೆಂಬರ್ 26, 2002 ರಂದು ಅಂಗಡಿಯವರು ತಮ್ಮ ಹೆಸರನ್ನು ಪ್ರದರ್ಶಿಸಲು ಉಜ್ಜಯಿನಿಯ ಮೇಯರ್-ಇನ್-ಕೌನ್ಸಿಲ್ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ, ನಂತರ, ಕಾರ್ಪೊರೇಷನ್ ಹೌಸ್ ಅದನ್ನು ಆಕ್ಷೇಪಣೆಗಳು ಮತ್ತು ಔಪಚಾರಿಕತೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ತತ್ವಾಲ್ ಹೇಳಿದರು.
“ಎಲ್ಲಾ ವಿಧಿವಿಧಾನಗಳು ಈಗಾಗಲೇ ಪೂರ್ಣಗೊಂಡಿವೆ. ಆರಂಭದಲ್ಲಿ ನಾಮಫಲಕಗಳು ಒಂದೇ ಗಾತ್ರ ಮತ್ತು ಬಣ್ಣದಲ್ಲಿ ಇರಬೇಕಾಗಿದ್ದರಿಂದ ಅನುಷ್ಠಾನವು ವಿಳಂಬವಾಯಿತು. ಈಗ ನಾವು ಈ ನಿಯಮಗಳನ್ನು ಸಡಿಲಿಸಿದ್ದೇವೆ. ಅಂಗಡಿಕಾರರ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಿದರೆ ಸಾಕು” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕ್ರಮವು ‘ಮಧ್ಯಪ್ರದೇಶ ಶಾಪ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ ಅಥವಾ ಗುಮಾಸ್ತಾ ಪರವಾನಗಿಗೆ’ಮಸಂಬಂಧಿಸಿದೆ ಎನ್ನಲಾಗಿದ್ದು, ಇದು ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.
“ಉಜ್ಜಯಿನಿ ಧಾರ್ಮಿಕ ಮತ್ತು ಪವಿತ್ರ ನಗರವಾಗಿದೆ. ಜನರು ಧಾರ್ಮಿಕ ಆಸ್ಥೆ (ನಂಬಿಕೆ)ಯೊಂದಿಗೆ ಇಲ್ಲಿಗೆ ಬರುತ್ತಾರೆ. ಅವರು ಯಾರ ಸೇವೆಯನ್ನು ಪಡೆಯುತ್ತಿದ್ದಾರೆಂದು ಅವರು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಗ್ರಾಹಕರು ಅತೃಪ್ತರಾಗಿದ್ದರೆ ಅಥವಾ ಮೋಸ ಹೋದರೆ, ಪರಿಹಾರ ಪಡೆಯಲು ಅವರು ಅಂಗಡಿಯ ಮಾಲೀಕರ ವಿವರಗಳನ್ನು ತಿಳಿದುಕೊಳ್ಳುವುದು ಸಹಾಯ ಮಾಡುತ್ತದೆ” ಎಂದು ಮೇಯರ್ ಹೇಳಿದರು.
ಕುಂಭಮೇಳ
ಉಜ್ಜಯಿನಿಯು 2028 ರಲ್ಲಿ ಸಿಂಹಸ್ಥ (ಕುಂಭ) ಮೇಳವನ್ನು ಆಯೋಜಿಸಲಿದೆ, ಇದು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಧಾರ್ಮಿಕ ಜಾತ್ರೆಯಾಗಿದೆ. ಈ ಕ್ರಮವು ಉತ್ತರ ಪ್ರದೇಶದಲ್ಲಿ ಇತ್ತೀಚಿನ ನಿರ್ದೇಶನವನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಕನ್ವರ್ ಯಾತ್ರಾ ಮಾರ್ಗದಲ್ಲಿರುವ ಎಲ್ಲಾ ತಿನಿಸುಗಳ ಮಾರಾಟಗಾರರ ಮಾಲೀಕರ ಹೆಸರನ್ನು ಪ್ರದರ್ಶಿಸಲು ಕೇಳಲಾಯಿತು.
ಉತ್ತರ ಪ್ರದೇಶ ಸರ್ಕಾರವು ಶುಕ್ರವಾರ (ಜುಲೈ 19) ರಾಜ್ಯಾದ್ಯಂತ ಈ ಆದೇಶವನ್ನು ವಿಸ್ತರಿಸಿದೆ. ಆದರೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ರಾಜ್ಯದಲ್ಲಿ ಈಗಾಗಲೇ ಇದೇ ರೀತಿಯ ಸೂಚನೆಗಳು ಜಾರಿಯಲ್ಲಿವೆ ಎಂದು ಹೇಳಿದರು. ಈ ಆದೇಶವು ವಿರೋಧ ಪಕ್ಷಗಳು ಮತ್ತು ಆಡಳಿತ ಮೈತ್ರಿಕೂಟದ ಕೆಲವು ಸದಸ್ಯರಿಂದ ಟೀಕೆಗಳನ್ನು ಎದುರಿಸಿದೆ, ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸುತ್ತದೆ ಎಂದು ವಾದಿಸುತ್ತಾರೆ.
ಇದನ್ನೂ ಓದಿ; ಮೂಡಾ ಹಗರಣ ಆರೋಪ : ಸಿಎಂ ಸಿದ್ದರಾಮಯ್ಯ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು


