ಕೊರೊನಾ ಸೋಂಕಿನ ಕಾರಣ 50 ರಿಂದ 60 ಸದಸ್ಯರು ಅಧಿವೇಶನಕ್ಕೆ ಹಾಜರಾಗಲು ಆಗುತ್ತಿಲ್ಲ. ಹೀಗಾಗಿ ವಿಧಾನಸಭೆ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಈ ಕುರಿತು ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರ ಜೊತೆಗೆ ಮಾತನಾಡಿ ಅಧಿವೇಶನ ನಿಲ್ಲಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಈಗಿನ ಸಂದರ್ಭದಲ್ಲಿ ಅಧಿವೇಶನವನ್ನು ಹೆಚ್ಚು ದಿನ ನಡೆಸಲು ಸಾಧ್ಯವಾಗಿಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಹ ಬೇಗ ಅಧಿವೇಶನ ಮುಗಿಸಬೇಕೆಂದು ತಿಳಿಸಿದ್ದಾರೆ. ಹಾಗಾಗಿ ಮೂರು ದಿನದಲ್ಲಿ ಅಧಿವೇಶನ ಮುಗಿಸಬೇಕೆಂದುಕೊಂಡಿದ್ದೇವೆ. ದಯವಿಟ್ಟು ನೀವು ಸಹ ಸಹಕಾರ ನೀಡಬೇಕು” ಎಂದು ಸಿಎಂ ಬಿಎಸ್‌ವೈ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, “ನೀವು ಅಧಿವೇಶನದಲ್ಲಿ ಯಾವುದೇ ಮಸೂದೆಗಳನ್ನು ಮಂಡಿಸುವುದಿಲ್ಲ ಎಂಬ ಭರವಸೆ ನೀಡಬೇಕು. ಈ ಕೊರೊನಾ ಸಂದರ್ಭದಲ್ಲಿ ಯಾವುದೇ ಮಸೂದೆಗಳು ಚರ್ಚೆಯೇ ಇಲ್ಲದೇ ಅಂಗೀಕಾರವಾಗುವುದನ್ನು ನಾವು ವಿರೋಧಿಸುತ್ತೇವೆ. ಈ ಕುರಿತು ನೀವು ಸ್ಪಷ್ಟನೆ ನೀಡಿದರೆ ನಾವು ಯೋಚಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾಗಿರುವ ಐವರು ಸಚಿವರು, 13 ಶಾಸಕರು ಮತ್ತು ವಯಸ್ಸಿನ ಕಾರಣದಿಂದ ಹಿರಿಯ ಶಾಸಕರು ಅಧಿವೇಶನಕ್ಕೆ ಬರುತ್ತಿಲ್ಲ. ಇವರನ್ನೆಲ್ಲಾ ಹೊರಗಿಟ್ಟು ಅಧಿವೇಶನ ನಡೆಸಲು ಆಗುವುದಿಲ್ಲ. ಹೀಗಾಗಿ ಪ್ರಮುಖ ವಿಷಯಗಳನ್ನು ಮಾತ್ರ ಚರ್ಚೆ ಮಾಡಿ ಅಧಿವೇಶನ ಬೇಗ ಮುಗಿಸಲು ವಿರೋಧ ಪಕ್ಷಗಳ ಸಹಕಾರ ಕೋರುತ್ತೇನೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ: ಕುಮಾರಸ್ವಾಮಿ
ಅಧಿವೇಶನ ಮೊಟಕುಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕಲಾಪ ಮೊಟಕುಗೊಳಿಸಲು ಬಿಡಲ್ಲ, ಇನ್ನೂ ಮೂರು ವಾರ ಅಧಿವೇಶನ ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಸುಮಾರು 30 ರಿಂದ 40 ವಿಧೇಯಕಗಳನ್ನು ತಂದಿದ್ದಾರೆ. ಅವನ್ನೆಲ್ಲಾ ವಾಪಾಸು ಪಡೆಯಲಿ ಆಗ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ನೋಡೋಣ ಎಂದಿದ್ದಾರೆ.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಕೂಡ ಕೊರೊನಾ ನಡುವೆ ಜನಜೀವನ ನಡೆಯುತ್ತಿದೆ. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಮೊಟಕುಗೊಳ್ಳಬಾರದು, ಅದು ಮುಂದುವರಿಯಬೇಕು ಎಂಬುದು ಜೆಡಿಎಸ್ ಪಕ್ಷದ ನಿಲುವು ಎಂದಿದ್ದಾರೆ.


