ರಾಜ್ಯಸಭೆಯಲ್ಲಿ ಗದ್ದಲದ ನಡುವೆಯೇ ಅಂಗೀಕಾರಗೊಂಡ ಕೃಷಿ ಮಸೂದೆಗಳನ್ನು ವಿರೋಧ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದರೆ ಪ್ರಧಾನಿ ಮೋದಿಯವರು ‘ಈ ಮಸೂದೆಗಳು ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರುವ ಶಕ್ತಿ ನೀಡಲಿವೆ’ ಎಂದು ಬಣ್ಣಿಸಿದ್ದಾರೆ.
ಬಿಹಾರದ ‘ಘರ್ ತಕ್ ಫೈಬರ್’ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿಯವರು “ಈ ರೈತ ಮಸೂದೆಗಳು ರೈತರ ಮಂಡಿ ಮಾರುಕಟ್ಟೆಗೆ ವಿರುದ್ಧವಿವೆ ಎಂಬುದು ಸುಳ್ಳು ಎಂದು ನಾನು ಸ್ಪಷ್ಟಪಡಿಸುತ್ತೇನೆ. ಇದು ಕೃಷಿಮಂಡಿಗಳನ್ನು ಮತ್ತಷ್ಟು ಅಭಿವೃದ್ದಿಪಡಿಸಲಿದೆ. ಈ ಸಂದರ್ಭಕ್ಕೆ ತುರ್ತು ಅಗತ್ಯವಿದ್ದ ಕಾರಣಕ್ಕೆ ನಮ್ಮ ಸರ್ಕಾರ ಇವುಗಳನ್ನು ಅಂಗೀಕರಿಸಿದೆ. ಈಗ ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಲಾಭದ ದರಕ್ಕೆ ಮಾರುವ ಅಧಿಕಾರ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಮಸೂದೆಗಳಿಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮಂಡಿ ಮಾರುಕಟ್ಟೆ ವ್ಯವಸ್ಥೆ ನಶಿಸಿಹೋಗಲಿದೆ ಎಂದು ಕೆಲವರು ಹೆದುರಿಸುತ್ತಿದ್ದಾರೆ. ಆದರೆ ಹಾಗೆ ಆಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಕನಿಷ್ಟ ಬೆಂಬಲ ಬೆಲೆ ಪದ್ಧತಿಯು (ಎಂಎಸ್‌ಪಿ) ಈ ಹಿಂದಿನಂತಯೇ ಮುಂದುವರೆಯಲಿದೆ ಎಂದು ಈ ದೇಶದ ಪ್ರತಿ ರೈತರಿಗೂ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿಯವರು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.
ಈ ಮಸೂದೆಗಳ ಕುರಿತಾಗಿ ಪ್ರತಿಪಕ್ಷಗಳು ಸುಳ್ಳು ಹೇಳುತ್ತಿವೆ. ಇವು 21ನೇ ಶತಮಾನಕ್ಕೆ ಅತೀ ಅಗತ್ಯವಿದ್ದರಿಂದ ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ಮೋದಿಯವರು ತಿಳಿಸಿದ್ದಾರೆ.
ಆದರೆ ಕೃಷಿ ಮಸೂದೆಗಳ ವಿರುದ್ಧ ರೈತರ ಹೋರಾಟ ತೀವ್ರಗೊಂಡಿದೆ. ದೇಶದ ಹಲವು ರಾಜ್ಯಗಳಲ್ಲಿ ರೈತರು ಈ ಕಾಯ್ದೆಗಳನ್ನು ತಿರಸ್ಕರಿಸಿದ್ದಾರೆ. ಇಂದು ಕರ್ನಾಟಕದಲ್ಲಿಯೂ ಸಹ ಸಾವಿರಾರು ರೈತರು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ್ದಾರೆ. ಇಂದಿನಿಂದ ಆರಂಭವಾಗಿರುವ ರಾಜ್ಯ ವಿಧಾನಸಭಾ ಅಧಿವೇಶನಕ್ಕೆ ಪರ್ಯಾಯವಾಗಿ ಜನತಾ ಅಧಿವೇಶನ ನಡೆಸಲು ತೀರ್ಮಾನಿಸಿದ್ದಾರೆ.
ಇನ್ನು ನಿನ್ನೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಅಂಗೀಕಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 8 ಪ್ರತಿಪಕ್ಷಗಳ ಸಂಸದರನ್ನು ಒಂದು ವಾರಗಳ ಕಾಲ ಅಧಿವೇಶನದಿಂದ ಅಮಾನತ್ತು ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ವಿರೋಧಿಸಿ ಗದ್ದಲ: ಅಧಿವೇಶನದಿಂದ 8 ಸಂಸದರ ಅಮಾನತು