ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರು ಹಲ್ಲೆ ಮಾಡಿರುವುದು, ಎಂಇಎಸ್ ಸಂಘಟನೆ ಪದೇ ಪದೇ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವುದು ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಗುಂಪು ಇಂದು (ಶನಿವಾರ) ‘ಕರ್ನಾಟಕ ಬಂದ್’ಗೆ ಕರೆ ನೀಡಿದೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್‌ಗೆ ಬೆಂಬಲ ನೀಡುವಂತೆ ವಾಟಾಳ್ ನಾಗರಾಜ್ ಜನರಿಗೆ ಮನವಿ ಮಾಡಿದ್ದಾರೆ.
ಬಂದ್‌ಗೆ ಓಲಾ, ಊಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್, ಕೆಲ ಆಟೊ ರಿಕ್ಷಾ ಸಂಘಟನೆಗಳು ಬೆಂಬಲ ನೀಡಿವೆ. ಕೆಎಸ್‌ಆರ್‌ಟಿಸಿ ಮತ್ತು ಇತರ ಸಾರಿಗೆ ನಿಗಮಗಳು, ಬಿಎಂಟಿಸಿ ಮತ್ತು ಮೆಟ್ರೋ ಬೆಂಬಲ ನೀಡಿಲ್ಲ. ಹೋಟೆಲ್ ಮಾಲೀಕರು ನೈತಿಕ ಬೆಂಬಲ ಮಾತ್ರ ನೀಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಇಂದು ಏಕೆ ಬಂದ್ ಮಾಡಲಾಗುತ್ತಿದೆ?.. ಯಾರು ಬಂದ್ ಮಾಡುತ್ತಿದ್ದಾರೆ? ಎಂದು ಹಲವರು ನಮ್ಮನ್ನು ಪ್ರಶ್ನಿಸಿದ್ದಾರೆ. ಜನರಿಗೆ ಇಂದಿನ ಬಂದ್ ಬಗ್ಗೆ ಹಲವು ಗೊಂದಲಗಳಿವೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಬಂದ್ ಪರಿಸ್ಥಿತಿ ಹೇಗಿತ್ತು ಎಂಬ ಮಾಹಿತಿ ಇಲ್ಲಿದೆ.
- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ಎಂದಿನಂತೆ ಇದೆ. ಮುಂಜಾನೆಯೇ ಜನರು ತಮ್ಮ ದೈನಂದಿನ ಕೆಲಸ, ಕಾರ್ಯಗಳಲ್ಲಿ ತೊಡಗಿದ್ದಾರೆ. ನಗರದ ಜೀವನಾಡಿ ಬಿಎಂಟಿಸಿ ಬಸ್‌ಗಳು ಎಂದಿನಂತೆ ಓಡಾಡುತ್ತಿವೆ. ನಗರದಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಕೆಎಸ್‌ಆರ್‌ಟಿಸಿ ಮತ್ತು ಇತರ ನಿಗಮಗಳ ಬಸ್ ಸಂಚಾರ ಎಂದಿನಂತೆ ಇದೆ.
- ನಗರದ ಪ್ರಮುಖ ಪ್ರದೇಶಗಳಾದ ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಟೌನ್ ಹಾಲ್, ಕಾರ್ಪೋರೇಶನ್ ಬಸವನಗುಡಿ, ಚಾಮರಾಜಪೇಟೆ, ಜಯನಗರ, ಆರ್.ಟಿ ನಗರ, ವಿಧಾನಸೌಧ, ಕಂಟೋನ್‌ಮೆಂಟ್, ಶಿವಾಜಿನಗರ ಸೇರಿದಂತೆ ಎಲ್ಲೆಡೆ ಪರಿಸ್ಥಿತಿ ಎಂದಿನಂತೆ ಇದೆ. ಪ್ರಮುಖ ಆಸ್ಪತ್ರೆಗಳಾದ ವಿಕ್ಟೋರಿಯಾ, ವಾಣಿ ವಿಲಾಸ, ಕಿಮ್ಸ್, ಬೌರಿಂಗ್ ಎಲ್ಲವೂ ಕಾರ್ಯ ನಿರ್ವಹಿಸುತ್ತಿವೆ.
- ಪ್ರತಿಭಟನೆಯ ಕೇಂದ್ರ ಬಿಂದುವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಎಂದಿನಂತೆ ಇದೆ. ಬೆಳಗಾವಿ ನಗರದಿಂದ ಗ್ರಾಮೀಣ ಭಾಗಗಳು ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ.
- ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಮತ್ತು ಬೆಳಗಾವಿ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಗಡಿಭಾಗ ನಿಪ್ಪಾಣಿಯವರೆಗೆ ಮಾತ್ರ ಎರಡೂ ಕಡೆಯ ಬಸ್‌ಗಳು ಸಂಚರಿಸುತ್ತಿವೆ.
- ಕನ್ನಡ ನೆಲ, ಜಲ ವಿಷಯದ ಹೋರಾಟದಲ್ಲಿ ಸದಾ ಮುಂದಿರುವ ಮಂಡ್ಯ ಜಿಲ್ಲೆಯಲ್ಲೂ ಪರಿಸ್ಥಿತಿ ಎಂದಿನಂತೆ ಇದೆ. ಬಸ್‌ಗಳು ಯಥಾಸ್ಥಿತಿಯಲ್ಲಿ ಓಡಾಡುತ್ತಿವೆ. ಆದರೆ, ಆಟೋಗಳ ಓಡಾಟ ವಿರಳವಿದೆ. ಬೆಳಿಗ್ಗೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
- ಮಂಡ್ಯ ಜಿಲ್ಲೆಯ ಕನ್ನಡ ಪರ ಮತ್ತು ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಕನ್ನಡ ಪರ ಸಂಘಟನೆಗಳ ಕಾರ್ಯರ್ತರು ಬೆಳಿಗ್ಗೆಯೇ ಮಂಡ್ಯ ನಗರದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಿಗ್ಗೆಯೇ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ಆರಂಭಿಸಿವೆ. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಬಸ್, ಆಟೋ ಮತ್ತು ಇತರ ವಾಹನಗಳ ಸಂಚಾರ ಎಂದಿನಂತೆ ಇದೆ. ಅಂಗಡಿ, ಮುಂಗಟ್ಟುಗಳು ತೆರದಿವೆ.
- ಕೊಪ್ಪಳ, ದಾವಣಗೆರೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ತುಮಕೂರು, ಧಾರವಾಡ, ಹುಬ್ಬಳ್ಳಿ ನಗರ ಸೇರಿದಂತೆ ವಿವಿದೆಡೆ ಪರಿಸ್ಥಿತಿ ಎಂದಿನಂತೆ ಇದೆ. ಎಲ್ಲಿಯೂ ಬಂದ್ ಬಿಸಿ ತಟ್ಟಿರುವುದು ಕಂಡು ಬಂದಿಲ್ಲ.
- ಆದರೆ, ದಾವಣಗೆರೆ, ಕೊಪ್ಪಳ ಮತ್ತು ಚಿಕ್ಕಮಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಬೆಳಿಗ್ಗೆ ಪ್ರತಿಭಟನೆ ನಡೆಸಿವೆ. ದಾವಣಗೆರೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಗಿದೆ.
- ಮಂಗಳೂರು, ಉಡುಪಿಯಲ್ಲಿ ಎಂದಿನಂತೆ ಖಾಸಗಿ ಬಸ್‌ಗಳ ಓಡಾಟ ಇದ್ದು, ಅಂಗಡಿ, ಮುಂಗಟ್ಟುಗಳು ತೆರೆದಿವೆ. ಈ ಭಾಗದಲ್ಲಿ ಬಂದ್ ಯಾವುದೇ ಪರಿಣಾಮ ಬೀರಿಲ್ಲ.
ಬೆಳಿಗ್ಗೆ 9 ಗಂಟೆಯವರೆ ವಿವಿಧ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೀಗಿತ್ತು. ಇನ್ನುಮುಂದೆ ಬದಲಾದರೂ ಆಗಬಹುದು.


