ವಿವಾದಿತ ಹಿಂದಿ ಚಲನಚಿತ್ರ ‘ಹಮಾರೆ ಬಾರಹ್’ ಬಿಡುಗಡೆಗೆ ಒಂದು ದಿನ ಮುನ್ನ, ಕರ್ನಾಟಕದಲ್ಲಿ ಅದರ ಪ್ರದರ್ಶನವನ್ನು ಸರ್ಕಾರ ನಿಷೇಧಿಸಿದೆ.
ವಿವಿಧ ಮುಸ್ಲಿಂ ಸಂಘಟನೆಗಳ ಮನವಿ ಮೇರೆಗೆ ಗೃಹ ಇಲಾಖೆ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿ ಗುರುವಾರ ಆದೇಶ ಹೊರಡಿಸಿದೆ. ಹಿರಿಯ ನಟ ಅಣ್ಣು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇಂದು (ಜೂನ್ 7, ಶುಕ್ರವಾರ) ಬಿಡುಗಡೆಯಾಗಲಿದೆ.
ವಿವಿಧ ಜಿಲ್ಲೆಗಳು ಮತ್ತು ತಾಲೂಕುಗಳ ಮುಸ್ಲಿಂ ಗುಂಪುಗಳು ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಸಿನಿಮಾದ ನಿರ್ಮಾಪಕರು ಮುಸ್ಲಿಂ ಸಮುದಾಯದವನ್ನು ಅವಮಾನಿಸಿದ್ದಾರೆ. ಕುರಾನ್‌ನ ಸೂರಾ ಅಲ್-ಬಕರಾದಲ್ಲಿನ ಶ್ಲೋಕಗಳನ್ನು ತಪ್ಪಾಗಿ ವಿವರಿಸಿದ್ದಾರೆ. ಚಿತ್ರ ಬಿಡುಗಡೆಯಾದರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು.
ಗುರುವಾರ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಬಿ ಕೆ ಭುವನೇಂದ್ರ ಕುಮಾರ್ ಅವರು, ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಸಿನಿಮಾ ಥಿಯೇಟರ್‌ಗಳು, ಖಾಸಗಿ ಟೆಲಿವಿಷನ್ ಚಾನೆಲ್‌ಗಳು ಮತ್ತು ಇತರ ಮಾಧ್ಯಮಗಳಲ್ಲಿ ‘ಹಮಾರೆ ಬಾರಹ್’ ಸಿನಿಮಾ ಮತ್ತು ಅದರ ಟ್ರೇಲರ್ ಬಿಡುಗಡೆಯನ್ನು ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಿನಿಮಾಗಳ ನಿಯಂತ್ರಣ ಕಾಯಿದೆ, 1964 ರ ಸೆಕ್ಷನ್ 15(1) ಮತ್ತು 15(5) ಅಡಿಯಲ್ಲಿ ನಿಷೇಧ ಹೇರಲಾಗಿದೆ.
ಕಾಯ್ದೆಯ ಸೆಕ್ಷನ್ 15(2) ರ ಪ್ರಕಾರ ನಿಷೇಧ ಹೇರುವ ಮುನ್ನ ಚಿತ್ರ ನಿರ್ಮಾಪಕರಿಗೆ ಸರ್ಕಾರ ನೋಟಿಸ್ ಜಾರಿ ಮಾಡಬೇಕಾಗಿದ್ದರೂ, ಈ ಅಗತ್ಯವನ್ನು ಪೂರೈಸಲು ಸಾಕಷ್ಟು ಸಮಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಏಕೆಂದರೆ ಚಿತ್ರದ ನಿರ್ದೇಶಕ ಕಮಲ್ ಚಂದ್ರ ಮತ್ತು ನಿರ್ಮಾಪಕರಾದ ಬೀರೇಂದ್ರ ಭಗತ್, ರವಿ ಎಸ್ ಗುಪ್ತಾ, ಶಿಯೋ ಬಾಲಕ್ ಸಿಂಗ್, ಸಂಜಯ್ ನಾಗ್ಪಾಲ್ ಮತ್ತು ಇತರರು ಕರ್ನಾಟಕದ ಹೊರಗೆ ನೆಲೆಸಿದ್ದಾರೆ.
ಬಾಂಬೆ ಹೈಕೋರ್ಟ್ ಕೂಡ ಜೂನ್ 14 ರವರೆಗೆ ಚಿತ್ರದ ಬಿಡುಗಡೆಯನ್ನು ತಡೆಹಿಡಿದಿದೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ ಅವಧಿ ವಿಸ್ತರಣೆ


