ಇಂದಿನಿಂದ (ಮಾ.3) ಮಾರ್ಚ್ 21ರವರೆಗೆ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಯಲಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಮಂಡಲದ ಉಭಯ ಸದನಗಳ ಸದಸ್ಯರುಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ.
ಆ ಬಳಿಕ ಅಧಿವೇಶನ ಮುಂಡೂಡಿಕೆಯಾಗಲಿದ್ದು, ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಕಾರ್ಯಕಲಾಪಗಳ ಸಲಹಾ ಸಮಿತಿಗಳ ಜಂಟಿ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ.
ಮಾರ್ಚ್ 7ರಂದು ಬಜೆಟ್ ಮಂಡನೆ : ಮಾರ್ಚ್ 6 ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಳಿಕ ಬಜೆಟ್ ಮೇಲಿನ ಚರ್ಚೆಗಳು ನಡೆಯಲಿವೆ.
ದಾಖಲೆಯ 16ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ : ರಾಜ್ಯದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಈ ಬಾರಿ 16ನೇ ಬಜೆಟ್ ಮಂಡಿಸಲು ಅಣಿಯಾಗಿದ್ದಾರೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಈ ಬಾರಿಯ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಪಾಯಿ ಮೀರುವ ಸಾಧ್ಯತೆ ಇದೆ. ವೆಚ್ಚದ ಒತ್ತಡ ಹಾಗೂ ಸೀಮಿತ ಆದಾಯ ಸಂಗ್ರಹದ ಹಿನ್ನೆಲೆ ಸಿಎಂ ರಾಜಸ್ವ ಕೊರೆತಯ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚಿದೆ.
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಂತ್ರ : ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕಲಾಪದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ತಂತ್ರ ರೂಪಿಸಿವೆ.
ದರ ಏರಿಕೆ, ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಳಂಬ, ಕಾನೂನು ಸುವ್ಯವಸ್ಥೆ ರಕ್ಷಣೆಯಲ್ಲಿ ವೈಫಲ್ಯ, ಭ್ರಷ್ಟಾಚಾರ ಆರೋಪಗಳು, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಇತ್ಯಾದಿಗಳು ಸದನದಲ್ಲಿ ಗದ್ದಲಕ್ಕೆ ಕಾರಣವಾಗಬಹುದು.
ಪ್ರಮುಖವಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿ ಮಾಡಿದೆ. ಅದನ್ನು ಮುಂದಿಟ್ಟುಕೊಂಡು ಸಮರ್ಥಿಸಿಕೊಳ್ಳಬಹುದು.
ಹಕ್ಕೊತ್ತಾಯ ಪರಿಗಣಿಸುತ್ತಾ ಸರ್ಕಾರ? ಬಜೆಟ್ ಪೂರ್ವ ಸುದ್ದಿಗೋಷ್ಟಿ ನಡೆಸಿರುವ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಮತ್ತು ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾದ ಸಂಯುಕ್ತ ಹೋರಾಟ ಸರ್ಕಾರದ ಮುಂದೆ 15 ಹಕ್ಕೊತ್ತಾಯಗಳನ್ನು ಮಂಡಿಸಿದೆ. ಈ ಬಾರಿಯ ಬಜೆಟ್ ಬರೀ ಘೋಷಣೆ ಸೀಮಿತವಾಗದೆ ಹಕ್ಕೊತ್ತಾಯಗಳಲ್ಲಿ ಇರುವ ವಿಷಯಗಳ ಸಂಬಂಧ ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಸಿಎಂಗೆ ಆಗ್ರಹಿಸಿದೆ. ಸರ್ಕಾರ ಈ ಹಕ್ಕೊತ್ತಾಯಗಳ ಸಂಬಂಧ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.


