ರಾಜ್ಯ ಮುಖ್ಯ ಚುನಾವಣಾಧಿಕಾರಿ ಭಾನುವಾರ (ಆ.10) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ ಎಂದು ವರದಿಯಾಗಿದೆ.
ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ ನಮಗೆ ಈ ಬಗ್ಗೆ ತನಿಖೆ ನಡೆಸಲು ಸಹಕಾರಿಯಾಗುತ್ತದೆ ಎಂದು ಚುನಾವಣಾ ಆಯುಕ್ತರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎರಡು ದಿನಗಳ ಹಿಂದೆ ದೆಹಲಿಯಲ್ಲಿ ವಿಶೇಷ ಸಂವಾದ ಏರ್ಪಡಿಸಿದ್ದ ರಾಹುಲ್ ಗಾಂಧಿ, 2024ರ ಲೋಕಸಭೆ ಚುನಾವಣೆಯಲ್ಲಿ ವ್ಯಾಪಕ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಈ ಕುರಿತ ದಾಖಲೆ ಬಿಡುಗಡೆ ಮಾಡಿದ್ದರು.
“ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶಕುನ್ ರಾಣಿ ಎಂಬವರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ನಮ್ಮ ವಿಚಾರಣೆ ವೇಳೆ ಶಕುನ್ ರಾಣಿ ಅವರು ನೀವು ಆರೋಪಿಸಿದಂತೆ ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ” ಎಂದು ರಾಹುಲ್ ಗಾಂಧಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಮುಖ್ಯ ಚುನಾವಣಾಧಿಕಾರಿಯ ಕಚೇರಿ ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ರಾಹುಲ್ ಗಾಂಧಿ ತೋರಿಸಿದ ಟಿಕ್-ಗುರುತು ಮಾಡಿದ ದಾಖಲೆಯನ್ನು ಚುನಾವಣಾ ಅಧಿಕಾರಿ ನೀಡಿಲ್ಲ ಎಂಬುವುದು ತಿಳಿದುಬಂದಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
“ಆದ್ದರಿಂದ, ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಮಾಡಿರುವ ಆರೋಪಕ್ಕೆ ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ವಿನಂತಿಸುತ್ತೇವೆ. ಇದರಿಂದ ಚುನಾವಣಾಧಿಕಾರಿ ಕಚೇರಿ ವಿವರವಾದ ವಿಚಾರಣೆಯನ್ನು ಕೈಗೊಳ್ಳಬಹುದು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಲೋಕಸಭೆ ಚುನಾವಣೆ ವೇಳೆ ಮತಗಳ್ಳತನ ನಡೆಸಲು ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಕೈ ಜೋಡಿಸಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸಲಾಗುತ್ತಿದೆ ಎಂದಿದ್ದರು. ತನ್ನ ಆರೋಪಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಪುರಾವೆಯಾಗಿ ಉಲ್ಲೇಖಿಸಿದ್ದರು.
ಮಹದೇವಪುರದಲ್ಲಿ 6.5 ಲಕ್ಷ ಮತಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ನಕಲಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಕಾಂಗ್ರೆಸ್‌ನ ಆಂತರಿಕ ಪರಿಶೀಲನೆಯಲ್ಲಿ 11,965 ನಕಲಿ ಮತದಾರರು, 40,009 ನಕಲಿ ಅಥವಾ ಅಮಾನ್ಯ ವಿಳಾಸಗಳನ್ನು ಹೊಂದಿರುವವರು, 10,452 ಬೃಹತ್ ಮತದಾರರು ಒಂದೇ ವಿಳಾಸದಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಮತ್ತು 4,132 ಅಮಾನ್ಯ ಫೋಟೋಗಳನ್ನು ಹೊಂದಿರುವವರು ಕಂಡುಬಂದಿದ್ದಾರೆ ಎಂದಿದ್ದರು. 33,692 ಮತದಾರರು ಹೊಸ ನೋಂದಣಿಗಾಗಿ ಉದ್ದೇಶಿಸಲಾದ ಫಾರ್ಮ್ 6 ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಆರಂಭದಲ್ಲಿ ಕಾಂಗ್ರೆಸ್ ನ ಮನ್ಸೂರ್ ಅಲಿ ಖಾನ್ ಮುನ್ನಡೆಯಲ್ಲಿದ್ದರು, ನಂತರ ಬಿಜೆಪಿಯ ಪಿ.ಸಿ ಮೋಹನ್ 32,707 ಮತಗಳಿಂದ ಗೆದ್ದರು. ಕ್ಷೇತ್ರದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೆ, ಮಹದೇವಪುರದಲ್ಲಿ 1,14,000 ಮತಗಳನ್ನು ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಕ್ಷೇತ್ರದಲ್ಲಿ ಮತಗಳ್ಳತನದ ನಡೆದಿದೆ ಎಂದು ಅವರು ಆರೋಪಿಸಿದ್ದರು.
ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಮತದಾರರ ಪಟ್ಟಿಗಳನ್ನು ಒದಗಿಸದಿದ್ದಕ್ಕಾಗಿ ಅವರು ಚುನಾವಣಾ ಆಯೋಗವನ್ನು ಟೀಕಿಸಿದ್ದರು. ಮೆಶಿನ್ ರೀಡೇಬಲ್ ಡೇಟಾದಿಂದ 30 ಸೆಕೆಂಡುಗಳಲ್ಲಿ ಆಪಾದಿತ ವಂಚನೆಯನ್ನು ಬಹಿರಂಗಪಡಿಸಬಹುದಿತ್ತು. ಆದರೆ,ಚುನಾವಣಾ ಆಯೋಗವು ಮೆಶಿನ್ ರೀಡೇಬಲ್ ಅಲ್ಲದ ಮತದಾರರ ಪಟ್ಟಿಗಳನ್ನು ಕೊಟ್ಟಿತ್ತು. ಇದರಿಂದಾಗಿ, ಪರಿಶೀಲನೆಗಾಗಿ ಪಕ್ಷಕ್ಕೆ ಆರು ತಿಂಗಳು ಸಮಯ ಬೇಕಾಯಿತು ಎಂದು ಹೇಳಿದ್ದರು.
ಚುನಾವಣಾ ಆಯೋಗವು ಆರೋಪಗಳನ್ನು ತಿರಸ್ಕರಿಸಿದೆ, ಮೂಲಗಳು ರಾಹುಲ್ ಗಾಂಧಿಯವರನ್ನು ಸಹಿ ಮಾಡಿದ ಪುರಾವೆಗಳನ್ನು ಸಲ್ಲಿಸುವಂತೆ ಅಥವಾ “ಆಧಾರರಹಿತ ಆರೋಪಗಳನ್ನು” ಮಾಡದಂತೆ ಕೇಳಿಕೊಂಡಿವೆ ಎಂದು ಹೇಳಿವೆ. ಕರ್ನಾಟಕ ಚುನಾವಣಾ ಪ್ರಾಧಿಕಾರವು ಅವರ ಹಕ್ಕುಗಳನ್ನು ವಿವರಿಸುವ ಸಹಿ ಮಾಡಿದ ಅಫಿಡವಿಟ್ ಅನ್ನು ಸಹ ಕೋರಿದೆ ಮತ್ತು ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪ್ರಶ್ನಿಸಿದೆ.
ಚುನಾವಣಾ ಆಯೋಗವು ರಾಹುಲ್ ಗಾಂಧಿಯ ಆರೋಪಗಳನ್ನು ತಿರಸ್ಕರಿಸಿದೆ. ರಾಹುಲ್ ಗಾಂಧಿಯವರು ತಾವು ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಹಿ ಮಾಡಿ ಸಲ್ಲಿಸುವಂತೆ ಅಥವಾ ಹೇಳಿದೆ ಅಥವಾ ಆಧಾರರಹಿತ ಆರೋಪಗಳನ್ನು ಮಾಡದಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ.ಕರ್ನಾಟಕ ಚುನಾವಣಾ ಆಯೋಗ ಕೂಡ ತಮ್ಮ ಆರೋಪವನ್ನು ಸಹಿ ಮಾಡಿದ ಅಫಿಡವಿಟ್ ಮೂಲಕ ಸಲ್ಲಿಸುವಂತೆ ರಾಹುಲ್ ಗಾಂಧಿಯನ್ನು ಕೋರಿದೆ. ಯಾವುದೇ ಔಪಚಾರಿಕ ದೂರು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ.
ಮತಗಳ್ಳತನ ವಿರುದ್ಧ ಅಭಿಯಾನ ಆರಂಭಿಸಿದ ಕಾಂಗ್ರೆಸ್: ಡಿಜಿಟಲ್ ಮತದಾರರ ಪಟ್ಟಿ ನೀಡಲು ಆಗ್ರಹ


