ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ವದಂತಿ ಕಳೆದೊಂದು ವಾರದಿಂದ ರಾಜ್ಯದಲ್ಲಿ ಹರಿದಾಡುತ್ತಿದೆ. ಈ ನಡುವೆಯೇ ಸಿಎಂ ಬದಲಾವಣೆಯ ಊಹಾಪೋಹಗಳನ್ನು “ಗೊಂದಲ ಸೃಷ್ಟಿಸುವ ಪಿತೂರಿ” ಎಂದು ಭಾರತೀಯ ಜನತಾ ಪಕ್ಷ ಹೇಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯವರೆಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುತ್ತಾರೆ. ಎಲ್ಲಾ ವರದಿಗಳು ಊಹಾಪೋಹ ಎಂದು ಕರೆದಿದ್ದಾರೆ.
“ಮುಂದಿನ ಚುನಾವಣೆ ಅಂದರೆ 2023 ರ ವರೆಗೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರಲಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ” ಎಂದು ನಳಿನ್ ಕುಮಾರ್ ಕಟೀಲ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ‘ತೆರವು’ ಹೆಸರಿನಲ್ಲಿ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಜಜ್ಜಿ ಪುಡಿಮಾಡಿ ದರ್ಪ ಮೆರೆದ ಅಧಿಕಾರಿಗಳು
ಕಳೆದ ವಾರ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿ ಮಾತನಾಡುತ್ತಾ, ’ಅಧಿಕಾರದ ಎಲ್ಲಾ ಸ್ಥಾನಗಳು ತಾತ್ಕಾಲಿಕ, ಯಾವುದು ಶಾಶ್ವತವಲ್ಲ’ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು. ಇದು ಅವರು ಸಿಎಂ ಸ್ಥಾನದಿಂದ ಕೆಳಗಿಳೀಯುವ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.
“ಯಾವುದೂ ಶಾಶ್ವತವಲ್ಲ, ಈ ಜೀವನ ಶಾಶ್ವತವಲ್ಲ, ನಾವು ಎಷ್ಟು ದಿನ ಬದುಕುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರದ ಎಲ್ಲಾ ಹುದ್ದೆಗಳೂ ಶಾಶ್ವತವಲ್ಲ. ಈ ಬಗ್ಗೆ ನಾವು ನಿರಂತರವಾಗಿ ಜಾಗೃತರಾಗಿರಬೇಕು. ಕ್ಷೇತ್ರದ ಹೊರಗಡೆ ಮಾತ್ರ ನಾನು ಸಿಎಂ, ಇಲ್ಲಿ ಬಂದಾಗ ಕೇವಲ ಬಸವರಾಜ ಬೊಮ್ಮಾಯಿ” ಎಂದು ಲಿಂಗಾಯತ ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದರು.
ಈ ವದಂತಿಗೆ ಪ್ರತಿಕ್ರಿಯೆ ನೀಡಿರುವ ನಳೀನ್ ಕುಮಾರ್ ಕಟೀಲ್, “ಈ ಸುದ್ದಿ ಕೇವಲ ವದಂತಿ. ಇದು ರಾಜ್ಯ ರಾಜಕಾರಣದಲ್ಲಿ ಗೊಂದಲ, ಸಮಸ್ಯೆ ಸೃಷ್ಟಿಸಲು ಮತ್ತು ಬಿಜೆಪಿ ಸರ್ಕಾರದ ಮಾನಹಾನಿ ಮಾಡುವ ಷಡ್ಯಂತ್ರ ಎಂದು ನಾನು ಭಾವಿಸುತ್ತೇನೆ. ಇಂತಹ ಊಹಾಪೋಹದ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಆದರೆ ನಮ್ಮ ಪಕ್ಷದ ವರಿಷ್ಠರ ಮುಂದೆ ಇಂತಹ ಪ್ರಸ್ತಾವನೆ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.


