ಮಂಗಳೂರು ಮಹಾನಗರ ಪಾಲಿಕೆ ಸತತ ಎರಡನೇ ದಿನವೂ ನಗರದ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿದ್ದು, ‘ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃಧಿ ಸಂಘ’ವು ಪಾಲಿಕೆಯ ಕ್ರಮವನ್ನು ಶುಕ್ರವಾರ ತೀವ್ರವಾಗಿ ಖಂಡಿಸಿದೆ.
ಅನಧಿಕೃತ ಗೂಡಂಗಡಿ ಮತ್ತು ಪುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲು ಕಳೆದ ಬುಧವಾರದಂದು ಪಾಲಿಕೆಯ ಮೇಯರ್ ಮತ್ತು ಕಮೀಷನರ್ ಆದೇಶ ಹೊರಡಿಸಿದ್ದರು ಎನ್ನಲಾಗಿದ್ದು, ಅದರಂತೆ ಗುರುವಾರದಿಂದ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಆದರೆ ಬೀದಿಬದಿ ವ್ಯಾಪಾರಿಗಳಿಗೆ ಸರಕಾರವೇ ನೀಡಿದ್ದ ಗುರುತಿನ ಚೀಟಿಯಿದ್ದರೂ ಅಂತಹ ವ್ಯಾಪಾರಿಗಳನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಹಲವು ವ್ಯಾಪಾರಿಗಳ ಗಾಡಿ ಮತ್ತಿತರ ವಸ್ತುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಬಾಹಿರವಾಗಿ ಜಜ್ಜಿ ಪುಡಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಕಂದಾಯ ಗ್ರಾಮಗಳಾಗಿ ಲಂಬಾಣಿ ತಾಂಡಗಳ ಪರಿವರ್ತನೆಗೆ ಸರ್ವೇ: ಸಿಎಂ
ಈ ಬಗ್ಗೆ ಆಕ್ರೊಶ ವ್ಯಕ್ತಪಡಿಸಿರುವ ಬೀದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ, “ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಇದ್ದವರಿಗೆ ತೊಂದರೆ ಕೊಟ್ಟಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ರೀತಿಯಾಗಿ ಏಕಾಏಕಿ ತೆರವು ಮಾಡಿದ್ದು ಎಷ್ಟು ಸರಿ? ಬೀದಿ ಬದಿಯ ನಿಯಮಾನುಸಾರ ಪಟ್ಟಣ ವ್ಯಾಪಾರ ಸಮಿತಿ ಸಭೆಯಲ್ಲಿ ಚರ್ಚಿಸದೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ” ಎಂದು ಹೇಳಿದ್ದಾರೆ.
ಗುರುತಿನ ಚೀಟಿ ಇಲ್ಲದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮಾಡಿಸುವುದಕ್ಕಾಗಿ ಮಹಾನಗರ ಪಾಲಿಕೆಯು ಇತ್ತೀಚೆಗೆ ಸರ್ವೆ ನಡೆಸಿತ್ತು. ಆದರೆ ಇಂದು ಸರ್ವೆ ನಡೆಸಿರುವ ಹಲವು ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದೆ ಎಂದು ಮುಸ್ತಫಾ ದೂರಿದ್ದಾರೆ.
“ಅಂಗಡಿಗಳ ತೆರವುಗೊಳಿಸಬೇಕಾದರೆ ‘ಪಟ್ಟಣ ವ್ಯಾಪಾರ ಸಮಿತಿ’ಯ ಸಭೆ ನಡೆಸಿ ಅಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಪಾಲಿಕೆಯು ಈ ರೀತಿಯ ಯಾವುದೆ ಸಭೆಯನ್ನು ನಡೆಸಿಲ್ಲ. ಅವವೇ ತೀರ್ಮಾನ ತೆಗೆದುಕೊಳ್ಳುವುದಾದರೆ ಪಟ್ಟಣ ವ್ಯಾಪಾರ ಸಮಿತಿ ಯಾಕೆ? ಅದೊಂದು ಚುನಾಯಿತ ಸಮಿತಿಯಾಗಿದ್ದು, ಅದರ ಸಭೆಯಲ್ಲಿ ಪಾಲಿಕೆಯು ತೆರವುಗೊಳಿಸುವ ವಿಚಾರವನ್ನು ಇಡಬೇಕಾಗಿತ್ತು” ಎಂದು ಮುಸ್ತಫಾ ಹೇಳಿದ್ದಾರೆ.
ಕಾನೂನಿನ ಪ್ರಕಾರ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕೆಂದರೆ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಯೂ ಮಾಡಿರಬೇಕು. ಜೊತೆಗೆ ತೆರವುಗೊಳಿಸಿದ ವಸ್ತುಗಳನ್ನು ದಂಡ ಕಟ್ಟಿಸಿ ಅದನ್ನು ಅವರಿಗೆ ವಾಪಾಸು ಕೊಡಬೇಕು. ಆದರೆ ಶುಕ್ರವಾರದಂದು ಎರಡು ಜೆಸಿಬಿ, ಎರಡು ಲಾರಿ ಮುಖಾಂತರ ಬಂದಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಜೆಸಿಬಿಯಲ್ಲಿ ಜಜ್ಜಿ ಪುಡಿಪುಡಿ ಮಾಡಿ ಲಾರಿಗೆ ತುಂಬಿಸಿದ್ದಾರೆ ಎಂದು ಮುಸ್ತಫಾ ಆರೋಪಿಸಿದ್ದಾರೆ.
ಸರ್ಕಾರ ಬೀದಿಬದಿ ವ್ಯಾಪಾರಿ ಎಂದು ಗುರುತಿಸಿ ಚೀಟಿ ಕೊಟ್ಟವರ ಮೇಲೆ ಕೂಡಾ ಪೊಲೀಸ್ ರಕ್ಷಣೆಯಲ್ಲಿ ದಬ್ಬಾಳಿಕೆ ಮಾಡಲಾಗಿದೆ. ಅಧಿಕಾರಿಗಳು ಬಡ ವ್ಯಾಪಾರಿಗಳೊಂದಿಗೆ ಮಾತನಾಡುವಷ್ಟು ವ್ಯಯಧಾನ ಇಟ್ಟುಕೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆರವು ಕಾರ್ಯಾಚರಣೆ ವಿರುದ್ದ ಸೋಮವಾರದಂದು ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರು ಮಹಾನಗರ ಪಾಲಿಕೆಯ ಆಯುಕ್ತರನ್ನು ಚೀಟಿಯಾಗಿ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ಇಲ್ಲದವರು ಮತ್ತು ಸರ್ವೆ ಆಗಿರುವ ಬಡ ಬೀದಿ ಬದಿ ವ್ಯಾಪಾರಸ್ಥರ ಪರವಾಗಿ ಚರ್ಚಿಸಲಿದ್ದೇವೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಹೇಳಿದ್ದಾರೆ.
ಈ ಬಗ್ಗೆ ಮಹಾನಗರ ಪಾಲಿಕೆಯ ಕಮಿಷನರ್ ಅಕ್ಷಯ್ ಶ್ರೀಧರ್ ಅವರಿಗೆ ನಾನುಗೌರಿ.ಕಾಂ ಕರೆ ಮಾಡಿದ್ದು, ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕಿದ ನಂತರ ಅವರ ಹೇಳಿಕೆಯನ್ನು ಇಲ್ಲಿ ಅಪ್‌ಡೇಟ್ ಮಾಡಲಾಗುವುದು.
ಇದನ್ನೂ ಓದಿ:ಬೀದಿಬದಿಯ ಬಡ ವ್ಯಾಪಾರಿಗಳ ಮೇಲೆ ದರ್ಪ ತೋರಿದ ಪಿಎಸ್‌ಐ ಅಮಾನತು



ಮಂಗಳೂರು ಮಹಾನಗರ ಪಾಲಿಕೆಯ ಈ ಕ್ರೌರ್ಯ ಕಂಡನಾರ್ಹ.