Homeಕರ್ನಾಟಕಮಾನಗೇಡಿ ಶಾಸಕರೂ, ಹೊಣೆಗೇಡಿ  ನಾಯಕರೂ

ಮಾನಗೇಡಿ ಶಾಸಕರೂ, ಹೊಣೆಗೇಡಿ  ನಾಯಕರೂ

- Advertisement -
- Advertisement -

| ನೀಲಗಾರ |

ಬಿಜೆಪಿಯ ವಿಚಾರಕ್ಕೆ ನಂತರ ಬರೋಣ. ಈ ಸರ್ಕಾರ ಬೀಳಲು ಅದರ ಆಂತರಿಕ ಕಾರಣಗಳೇ ಪ್ರಧಾನ. ಅದಕ್ಕೆ ಎರಡೂ ಪಕ್ಷಗಳು ಸೇರಿ ಸರಳ ಬಹುಮತಕ್ಕಿಂತ ಕೆಲವೇ ಸೀಟುಗಳನ್ನಷ್ಟೇ ಹೆಚ್ಚು ಪಡೆದಿದ್ದರು ಎಂಬುದಷ್ಟೇ ಕಾರಣವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರುಗಳ ಹೊಣೆಗೇಡಿತನವೇ ಇದಕ್ಕೆ ಆಗಿಂದಾಗ್ಗೆ ಡೈನಮೈಟ್ ಇಡುತ್ತಲೇ ಬಂದಿತ್ತು. ಅದೀಗ ಸ್ಫೋಟಗೊಂಡಿದೆ ಅಷ್ಟೇ. ಹಾಗೆ ನೋಡಿದರೆ ಈ ಸಾರಿ ಪಕ್ಷ ಬದಲಿಸಲು ಹೊರಟಿರುವ ಎಲ್ಲರೂ ಬಿಜೆಪಿಯು ತಮ್ಮ ಆಯ್ಕೆಯ ಪಕ್ಷವೆಂದು ಬಗೆದಿಲ್ಲ. ಪಕ್ಷ ಬದಲಿಸಿರುವವರಲ್ಲಿ ಕೆಲವರಂತೂ ‘30 ಕೋಟಿಗೆ ಹರಾಜಾಗುವಷ್ಟು ಬಡವರೂ’ ಅಲ್ಲ. ಅಕ್ರಮ ಮತ್ತು ಸಕ್ರಮ ಮಾರ್ಗಗಳಲ್ಲಿ ನೂರಾರು ಕೋಟಿ ದುಡಿದಿರುವ ದೊಡ್ಡ ಕುಳಗಳು. ಈ ಪಕ್ಷಗಳ ಸಹವಾಸ ಬೇಡವೆಂದು ರಾಜೀನಾಮೆ ಕೊಟ್ಟಿರುವವರೇ ಹೆಚ್ಚಿನವರು. ಹಾಗೆಂದು ಅದಕ್ಕೆ ಸೈದ್ಧಾಂತಿಕ ಕಾರಣಗಳಿವೆಯೆಂದು ಅವರ ಮೇಲೆ ಆರೋಪ ಹೊರಿಸಬಾರದು. ಸಿದ್ಧಾಂತ ಮಾತನಾಡುತ್ತಿದ್ದ ಎಚ್.ವಿಶ್ವನಾಥ್ ಸಹಾ ಅಂಥದರಿಂದ ಬಹುದೂರ ಸಾಗಿ ಹೋಗಿದ್ದಾರೆ. ಉಳಿದವರಿಗೂ ಸಿದ್ಧಾಂತಗಳಿಗೂ ಸಂಬಂಧವಿಲ್ಲ. ಅಧಿಕಾರ, ಅಹಂಕಾರ ಮತ್ತು ಹಣ ಮಾಡಿಕೊಳ್ಳುವ ಆಯಕಟ್ಟಿನ ಜಾಗಗಳಿಗೆ ಅವಕಾಶ ಸಿಗಲಿಲ್ಲವೆಂಬ ‘ಸ್ವಾಭಿಮಾನ’ ಅಷ್ಟೇ ಅದಕ್ಕೆ ಕಾರಣ.

ಆದರೆ, ಇಂಥದೊಂದು ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯುವಲ್ಲಿ ಜಾಗ್ರತೆ ವಹಿಸುವ ಜವಾಬ್ದಾರಿ ಹೊತ್ತಿದ್ದ ಸಿದ್ದರಾಮಯ್ಯ, ದೇವೇಗೌಡ ಮತ್ತು ಕುಮಾರಸ್ವಾಮಿಯವರೇ ಇದಕ್ಕೆ ಪ್ರಮುಖ ಕಾರಣವಾಗಿದ್ದಾರೆ. ಅವರೇ ಶಾಸಕರನ್ನು ಬಿಟ್ಟು ಹೋಗಿ ಎಂದು ಹೇಳಿ ಕಳಿಸಿರದೆಹೋದರೂ, ಅವರ ವೈಫಲ್ಯವೇ ಇಂತಹ ಸ್ಥಿತಿಯನ್ನು ತಂದೊಡ್ಡಿದೆ. (ಈ ಕುರಿತ ಬಾಕ್ಸ್ ನೋಡಿ).

ತಮಗೆ ಈ ಸಾಲಿನಲ್ಲೂ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣದಿಂದ ಕೆಲವರು ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ 7 ಸಾರಿ ಶಾಸಕರಾಗಿ 4 ಸಾರಿ ಸಚಿವರಾಗಿದ್ದ, ಕಳೆದ ಸಾಲಿನಲ್ಲಿ ಮೊದಲು ಸಾರಿಗೆ ಸಚಿವರು ಮತ್ತು ಗೃಹ ಸಚಿವರೂ ಆಗಿದ್ದ ರಾಮಲಿಂಗಾರೆಡ್ಡಿಯವರಿಗೆ ಈ ಸಾರಿಯೂ ಪ್ರಭಾವಿ ಖಾತೆ ಬೇಕಿತ್ತಂತೆ. ಅವರ ಮಗಳಿಗೂ ಟಿಕೆಟ್ ಕೊಟ್ಟು, ಅವರೂ ಶಾಸಕರಾಗಿದ್ದಾರೆ. ‘ತಮ್ಮ ತಂದೆಯ ಹಿರಿತನವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು’ ಎಂದು ಸಂಪುಟ ರಚನೆಯ ಸಂದರ್ಭದಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂದರೆ ಇಷ್ಟು ದಿನ ಸಿಕ್ಕ ಅಧಿಕಾರ ಸಾಲದು, ನಾವು ಗೆಲ್ಲುತ್ತಾ ಹೋದಂತೆ ನಮ್ಮ ಅಧಿಕಾರವು ನಿರಂತರವಾಗಿಯೂ ಇರಬೇಕು ಮತ್ತು ಅದರ ಪ್ರಮಾಣ ಹೆಚ್ಚಾಗುತ್ತಾ ಹೋಗಬೇಕು ಎಂಬುದು ಅವರ ಇರಾದೆ.

ಇನ್ನೊಂದು ರೀತಿಯವರಿದ್ದಾರೆ. ಅದು ಎರಡನೇ ಸಾರಿ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ಅಂಥವರು. ಅವರಿಗೆ ಬಿಡಿಎ ಅಧ್ಯಕ್ಷಗಿರಿಯನ್ನು ನೀಡಲಾಗಿತ್ತು. ಆದರೆ, ಆಯುಕ್ತರ ಮೂಲಕ ಅದರ ಮೇಲೆ ಹಿಡಿತ ಸಾಧಿಸಲು ಗೌಡರ ಕುಟುಂಬ ಯತ್ನಿಸಿತು. ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಜಿ.ಪರಮೇಶ್ವರ್‍ರು ‘ಬೆಂಗಳೂರು ಅಭಿವೃದ್ಧಿಯ ಹೆಸರಿನಲ್ಲಿ’ ಬರುವ ಕಮಾಯಿಯನ್ನೆಲ್ಲಾ ಕಬಳಿಸಲೆಂದೇ ಗೃಹ ಖಾತೆಯನ್ನೂ ಬಿಟ್ಟುಕೊಟ್ಟಿದ್ದರಿಂದ, ಎಲ್ಲಾ ಅವರೇ ತಿನ್ನುತ್ತಿದ್ದಾರೆ. ಹಾಗಾಗಿ ತನಗೇನೂ ಸಿಗುತ್ತಿಲ್ಲ ಎಂಬುದು ಅವರ ಅಳಲು.

ಶಾಸಕನಾದ ಮೇಲೆ ಮಂತ್ರಿಯಾಗಲೇಬೇಕು; ಅದರಲ್ಲೂ ಇಷ್ಟನೇ ಸಾರಿ ಶಾಸಕನಾಗಿದ್ದೇನೆ; ತಾನು ಈ ಸದ್ಯ ಮಂತ್ರಿಯಾಗಿರುವವರಿಗಿಂತ ಏನು ಕಡಿಮೆ; ಒಂದು ವೇಳೆ ಮಾಡದಿದ್ದರೆ ಹಣ ಮಾಡಿಕೊಳ್ಳುವ ಬೇರೆ ರೀತಿಯ ಅವಕಾಶವನ್ನಾದರೂ ಮಾಡಿಕೊಡಿ ಎಂಬುದು ಇವರೆಲ್ಲರ ವಾದ. ಇದಕ್ಕಿಂತ ರಾಜಕೀಯ ಕೊಳಕುತನ ಬೇರೆ ಇದೆಯೇ? ಹಾಗಂತ ಈ ಸಾರಿ ಮಂತ್ರಿಗಳಾದವರೆಲ್ಲರೂ ಬಹಳ ಅರ್ಹತೆಯುಳ್ಳವರೆಂದೇನೂ ಅಲ್ಲ. ಆದರೆ, ಕೆಲವರು ತಮ್ಮ ಸೀನಿಯಾರಿಟಿ ಅಥವಾ ಅರ್ಹತೆಯಿಂದ ಸ್ಥಾನ ಗಳಿಸಿದವರೂ ಇದ್ದಾರೆ. ಅಧಿಕಾರ ಸಿಗಬೇಕು, ಇಲ್ಲವೇ ಹಣ ಕಬಳಿಕೆಗೆ ಅವಕಾಶ ಸಿಗಬೇಕೆಂದರೆ ಮುಖ್ಯಮಂತ್ರಿಯ ಆಪ್ತ ವಲಯದಲ್ಲಿ ಇರಬೇಕು. ಆ ಜಾಗಕ್ಕೆ ಕುಮಾರಸ್ವಾಮಿ ಅವಕಾಶ ಮಾಡಿಕೊಡುತ್ತಿಲ್ಲ. ಸಿದ್ದರಾಮಯ್ಯನವರೂ ತಮಗೆ ಬೇಕಾದ ಕೆಲವರನ್ನು ಮಾತ್ರ ಸಚಿವ ಸಂಪುಟದೊಳಕ್ಕೆ ತೂರಿಸಿರುವುದು ಬಿಟ್ಟರೆ ಮಿಕ್ಕವರ ‘ಹಿತಾಸಕ್ತಿ’ ಕಾಪಾಡುತ್ತಿಲ್ಲವೆನ್ನುವುದು ಅವರುಗಳ ಗೋಳು.

ಇದರ ಆಚೆಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ಎಂದು ಕೆಲವರು ಮಾತಾಡುತ್ತಿರುವುದೆಲ್ಲಾ ದೊಡ್ಡ ಬಳಾಂಗ್ ಎನ್ನುವುದು ಎಲ್ಲರಿಗಿಂತ ಹೆಚ್ಚು ಇಂತಹ ಮಹಾನುಭಾವರಿಗೆ ಮತ ಹಾಕಿದ ಜನರಿಗೆ ಗೊತ್ತು. ಉದಾಹರಣೆಗೆ ಕೆ.ಆರ್.ಪೇಟೆಯ ಶಾಸಕ ಕೆ.ಸಿ.ನಾರಾಯಣಗೌಡರ ಕ್ಷೇತ್ರಕ್ಕೆ ಹಿಂದಿನ ಸಾಲಿಗಿಂತ ಈ ಸಾರಿ ಏನು ಕಡಿಮೆಯಾಗಿತ್ತು ಎಂಬ ಬಗ್ಗೆ ಅವರೇನೂ ಅಂಕಿ-ಅಂಶ ಕೊಟ್ಟಿಲ್ಲ. ಪುತ್ರನ ಗೆಲುವಿಗಾಗಿ ಎಚ್‍ಡಿಕೆ ಮಂಡ್ಯ ಜಿಲ್ಲೆಗೆ ಬಹಳ ಉದಾರವಾಗಿಯೇ ಅನುದಾನ ಘೋಷಿಸಿದ್ದರು. ನಾರಾಯಣಗೌಡರ ನೋವೇ ಬೇರೆ (ಬಾಕ್ಸ್ ನೋಡಿ).

ಬೇರೆ ಬೇರೆ ರೀತಿಯ ಅಕ್ರಮ ಕೂಡಾವಳಿಗಳು ದೇಶಾದ್ಯಂತ ನಡೆದಿದೆ. ಪಕ್ಷಾಂತರ ನಿಷೇಧ ಕಾಯ್ದೆಗೆ ಮುಂಚೆ ಗಾಬರಿಗೊಳಿಸುವ ಮಟ್ಟಕ್ಕೆ ಪಕ್ಷಾಂತರ ನಡೆದಿತ್ತು. ಆ ನಂತರ ‘80ರ ದಶಕದಲ್ಲಿ ಈ ಕಾಯ್ದೆ ಬಂದ ನಂತರ ಅನರ್ಹತೆ ತಪ್ಪಿಸಿಕೊಳ್ಳಲು ಗುಂಪುಗುಂಪಾಗಿ ಪಕ್ಷಾಂತರ ಮಾಡತೊಡಗಿದರು. ಅದಕ್ಕೂ ಕಡಿವಾಣ ಬಿದ್ದ ಮೇಲೆ ಕರ್ನಾಟಕದಲ್ಲಿ ಯಡ್ಡಿ-ರೆಡ್ಡಿ ಜೋಡಿ ಕಂಡುಕೊಂಡ ಹೊಸ ವಿಧಾನವೇ ‘ಆಪರೇಷನ್ ಕಮಲ’. ಇದನ್ನು ಆಪರೇಷನ್ ಮಲ ಎಂದು ಹಲವರು ಹೀಯಾಳಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಎಚ್.ವಿಶ್ವನಾಥ್‍ರಂಥವರೂ ಸಹಾ ಇದಕ್ಕೆ ಒಳಗಾದ ಮೇಲೆ ಇನ್ನೇನು? ರಾಜಭವನದ ಮುಂದೆ, ‘ನೀವು ಬಿಜೆಪಿಯ ಆಪರೇಷನ್‍ಗೆ ಒಳಗಾಗಿದ್ದೀರಾ?’ ಎಂಬ ಪ್ರಶ್ನೆಯನ್ನು ಪತ್ರಕರ್ತರು ಅವರನ್ನು ಕೇಳಿದಾಗ ವಿಶ್ವನಾಥ್ ದನಿ ಎತ್ತರಿಸಿ ಮಾತನಾಡಿದರು. ‘ನಮ್ಮನ್ನು ಏನೆಂದು ತಿಳಿದುಕೊಂಡಿದ್ದೀರಿ. ಇಲ್ಲಿ ನಾವೆಲ್ಲಾ ಸೀನಿಯರ್ಸ್ ಇದ್ದೇವೆ’ ಎಂದು ಗುಡುಗಿದರು. ಆ ಗುಡುಗಿನಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇರಲಿಲ್ಲ.

ಅಧಿಕಾರಕ್ಕಾಗಿ ಬ್ಲಾಕ್‍ಮೇಲ್ ಮಾಡಿದ್ದಾರೇ ಹೊರತು, ಜನರ ಹಿತ, ಪ್ರಜಾಪ್ರಭುತ್ವದ ಮೌಲ್ಯಗಳು ಅಥವಾ ರಾಜ್ಯದ ಮರ್ಯಾದೆ ಇವ್ಯಾವುವೂ ಈ ಶಾಸಕರ ನಿಘಂಟಿನಲ್ಲಿ ಇಲ್ಲವೇ ಇಲ್ಲ ಎಂಬುದು ಸಾಬೀತಾಗಿದೆ. ಇಂತಹ ನಿರ್ಲಜ್ಜರು ಮುಂದಿನ ಚುನಾವಣೆಯಲ್ಲೂ ಹಣ ಹಂಚಿ ಗೆದ್ದು ಬರುತ್ತೇವೆಂಬ ಹಮ್ಮಿನಲ್ಲೇ ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ. ಇಂತಹ ಮಾನಗೇಡಿಗಳನ್ನು ರಾಜ್ಯದ ಜನತೆ ತಿರಸ್ಕರಿಸಿ ತಕ್ಕ ಪಾಠ ಕಲಿಸಬೇಕಿದೆ.

ತಾನು ಬಾಗಿಲ ಹಿಂದೆ ಬಚ್ಚಿಟ್ಟುಕೊಳ್ಳುತ್ತೇನೆ, ನನ್ನನ್ನು ಹಿಡಿಯಬೇಡ ಎನ್ನುತ್ತಿರುವ ಬಿಜೆಪಿ

ಇನ್ನು ಬಿಜೆಪಿಯ ವಿಚಾರಕ್ಕೆ ಬರುವುದಾದರೆ, ಅವರ ಮಾತುಗಳನ್ನು ಯಾರು ನಂಬುತ್ತಾರೆಂದುಕೊಂಡಿದ್ದಾರೋ ಗೊತ್ತಿಲ್ಲ. ನಾವು ಆಪರೇಷನ್‍ಗೆ ಕೈ ಹಾಕಿಲ್ಲ. ಸುಮ್ಮನಿರಿ ಎಂದು ಹೈಕಮ್ಯಾಂಡ್ ಹೇಳಿದೆ ಇತ್ಯಾದಿಗಳನ್ನು ಒಬ್ಬರಾದ ಮೇಲೆ ಒಬ್ಬರು ಉದುರಿಸುತ್ತಲೇ ಇದ್ದರು. ಈ ಸಾರಿಯೂ ಕೇಂದ್ರ ಸಚಿವ ರಾಜನಾಥ್‍ಸಿಂಗ್ ಇದೇ ಮಾತನ್ನು ಹೇಳಿದ್ದಾರೆ.

ರಾಜೀನಾಮೆಗೆ ಮುಂದಾದ ಶಾಸಕರ್ಯಾರೂ ಧರ್ಮಾತ್ಮರಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿ ಖಂಡಿಸುವುದಾದರೆ ಅದಕ್ಕೆ ರಾಜೀನಾಮೆ ಏಕೆ ಕೊಡಬೇಕು? ಸರ್ಕಾರ ಬೀಳಲಿ ಎಂಬುದೇ ಉದ್ದೇಶವಾದರೆ ಅದರ ನಂತರ ಅವರು ಮನೆಯಲ್ಲಿ ಕೂರುವರೇ? ಪಕ್ಷೇತರರಾಗಿ ಸ್ಪರ್ಧಿಸುವರೇ? ಅಧಿಕಾರ ದಾಹ ಮತ್ತು ಲೂಟಿಯೇ ಪ್ರಧಾನ ಗುರಿಯಾಗಿರುವ ಈ ಶಾಸಕರು ಬಿಜೆಪಿಯ ಜೊತೆ ಮಾತಾಡಿಕೊಳ್ಳದೇ ಇದನ್ನೆಲ್ಲಾ ಮಾಡಿದರೇ? ಇದೊಂದು ಅನೈತಿಕವಾದ ಕೂಡಾವಳಿ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ರಾಜೀನಾಮೆ ಕೊಟ್ಟ ಶಾಸಕರನ್ನು ಎಚ್‍ಎಎಲ್ ಏರ್‍ಪೋರ್ಟಿನಲ್ಲಿ ಬಿಜೆಪಿ ಎಂಪಿ ರಾಜೀವ್ ಚಂದ್ರಶೇಖರ್‍ರ ಖಾಸಗಿ ವಿಮಾನ ಹತ್ತಿಸಿ ಮುಂಬೈಗೆ ಕಳಿಸಿಕೊಟ್ಟಿದ್ದು, ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್. ಅದನ್ನು ಇದುವರೆಗೆ ಯಾರೂ ಅಲ್ಲಗಳೆದಿಲ್ಲ. ಮುಂಬೈನಲ್ಲಿ ಸೋಫಿಟೆಲ್ ಹೋಟೆಲ್‍ಅನ್ನೇ ಆಯ್ದುಕೊಳ್ಳಲೂ ಕಾರಣವಿದೆ. ಅಲ್ಲಿಯೇ ಬಿಜೆಪಿಯ ಸಭೆಗಳೂ ನಡೆಯುತ್ತವೆ. ಆ ಹೋಟೆಲ್ ಮಾಲೀಕರು ಅಲ್ಲಿನ ಸಮ್ಮಿಶ್ರ ಸರ್ಕಾರದ ಆಪ್ತರು. ಹೋಟೆಲ್‍ನಲ್ಲೇ ಬಿಡಾರ ಹೂಡಿ ವ್ಯವಸ್ಥೆ ನೋಡಿಕೊಳ್ಳುತ್ತಿರುವವರು ಮುಂಬೈನ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷ ಮೋಹಿತ್ ಕಂಬೋಜ್. ಈತ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಸ್ಪರ್ಧೆ ಮಾಡಿದ ಅಭ್ಯರ್ಥಿಗಳಲ್ಲೇ ಅತ್ಯಂತ ಹೆಚ್ಚು ಆಸ್ತಿ ಘೋಷಣೆ ಮಾಡಿದ ವ್ಯಕ್ತಿ. ಇನ್ನೊಬ್ಬಾತ ಪ್ರಸಾದ್ ಲಾಡ್. ಮಹಾರಾಷ್ಟ್ರದ ವಿಧಾನಪರಿಷತ್‍ನ ಶಾಸಕ ಮಾತ್ರನಾಗಿರುವ ಈ ವ್ಯಕ್ತಿಯ ಕಾರಿಗೆ ಅಧಿಕೃತ ಸರ್ಕಾರೀ ಎಸ್ಕಾರ್ಟ್ ಇದೆ.

ನಿನ್ನೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದ ಯಡಿಯೂರಪ್ಪನವರು, ‘ಇದುವರೆಗೂ ಎಲ್ಲರೂ ಕಾದಿದ್ದೀರಿ. ಇನ್ನೆರಡು ದಿನ ಕಾಯಿರಿ. ನಮ್ಮ ಕತ್ತಲಿನ ದಿನಗಳು ಕಳೆದಿವೆ. ಬೆಳಕಿನ ದಿನಗಳು ಬರುತ್ತಿವೆ’ ಎಂದಿದ್ದಾರೆ. ದೇಶಾದ್ಯಂತ ಬಿಜೆಪಿ ಗೆದ್ದು, ಕರ್ನಾಟಕದಿಂದಲೂ ಅಭೂತಪೂರ್ವ ರೀತಿಯಲ್ಲಿ ಲೋಕಸಭಾ ಸದಸ್ಯರನ್ನು ಕಳಿಸಿದ ಮೇಲೂ ಅವರಿಗೆ ಇವು ಕತ್ತಲಿನ ದಿನಗಳಂತೆ. ಅಂದರೆ, ನೇರವಾಗಿ ತಾವೇ ಅಧಿಕಾರ ಅನುಭವಿಸಬೇಕು ಮತ್ತು ಲೂಟಿ ಹೊಡೆಯಬೇಕು ಎಂಬ ದಾಹ ಎದ್ದು ಕಾಣುತ್ತಿದೆ. ಅದನ್ನೇ ನಿರ್ಲಜ್ಜವಾಗಿ ತಮ್ಮ ಪಕ್ಷದ ಶಾಸಕರ ಮುಂದೆ ಹೇಳಿದ್ದಾರೆ. ಇದಕ್ಕಿಂತಲೂ ಭಂಡತನ ಇನ್ನೊಂದಿಲ್ಲ.

ಯಡಿಯೂರಪ್ಪನವರಂತೆಯೇ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳ ಹೊಣೆಗೇಡಿತನ ಮತ್ತು ಅವರುಗಳ ಅಧಿಕಾರ ಲಾಲಸೆಯೂ ಇದರಲ್ಲಿ ಎದ್ದು ಕಾಣುತ್ತಿದೆ. ಇವರೆಲ್ಲರೂ ಸೇರಿ ಕರ್ನಾಟಕವನ್ನು ಈ ಸ್ಥಿತಿಗೆ ತಂದಿಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಯುವ ಸಾಧ್ಯತೆ ಇಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದರೂ, ಸರ್ಕಾರದ ಬಹುಮತ ಕುಸಿಯುತ್ತದೆ. ಬಿಜೆಪಿ ಮತ್ತು ಪಕ್ಷೇತರ ಶಾಸಕರು ಸೇರಿದರೆ ಬಹುಮತ ಬಂದಂತೆ. ವಾಸ್ತವದಲ್ಲಿ ಇನ್ನೂ ಕನಿಷ್ಠ 15 ಜನ ಶಾಸಕರು ರಾಜೀನಾಮೆ ಕೊಡಲು ಸಿದ್ಧರಿದ್ದಾರೆ. ಅಂತಹವರನ್ನು ತಡೆಯಲು ಇದೀಗ ಅನರ್ಹತೆಯ ಹೆದರಿಕೆ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಶುಕ್ರವಾರದಿಂದ ಶುರುವಾಗುವ ಅಧಿವೇಶನದಲ್ಲಿ ಕುಮಾರಸ್ವಾಮಿ ಭಾಷಣ ಮಾಡಿ ರಾಜೀನಾಮೆ ಕೊಡುವ ಸಾಧ್ಯತೆಯೂ ಇದೆ. ಸರ್ಕಾರ ಬಿದ್ದರೂ ಈ ಶಾಸಕರನ್ನು ಅನರ್ಹರನ್ನಾಗಿಸಲೇಬೇಕೆಂಬ ಅಭಿಪ್ರಾಯವೂ ಕಾಂಗ್ರೆಸ್ಸಿನ ವಲಯದಲ್ಲಿದೆ.

ಜನರ ತಿರಸ್ಕಾರಕ್ಕೆ ಗುರಿಯಾಗಿರುವ ಸರ್ಕಾರ

ಅದೇನೇ ಇದ್ದರೂ ಈ ಸರ್ಕಾರವು ಉಳಿಯದಿರುವುದೇ ಲೇಸು. ರಾಜೀನಾಮೆ ಬರೆದು ಮುಂಬೈಗೆ ಓಡಿ ಹೋದವರಲ್ಲಿ ಆಸೆ ಹುಟ್ಟಿಸಲು ಇರುವ ಎಲ್ಲಾ ಮಂತ್ರಿಗಳೂ ರಾಜೀನಾಮೆ ಕೊಟ್ಟಿದ್ದಾರೆ. ಆ ಸ್ಥಾನಗಳಿಗೆ ಮುಂಬೈನಲ್ಲಿನ ನಿರ್ಲಜ್ಜರನ್ನು ತಂದು ಕೂರಿಸಿದರೆ, ಮೂರನೆಯ ಕಂತಿನಲ್ಲಿ ರಾಜೀನಾಮೆ ಕೊಡಲು ಸಿದ್ಧರಾಗಿರುವವರು ರಾಜೀನಾಮೆ ಕೊಡಲು ಮುಂದಾಗುತ್ತಾರೆ. ಅವರನ್ನೂ ಸಮಾಧಾನ ಪಡಿಸಬೇಕೆಂದರೆ, ಮೊದಲ ಕಂತಿನಲ್ಲಿ ಮಂತ್ರಿಯಾಗಿದ್ದವರು ಸುಮ್ಮನಿರಲ್ಲ. ಇಷ್ಟರ ಮೇಲೆ ಕಾಂಗ್ರೆಸ್‍ನಲ್ಲಿರುವ ಎರಡು ಬಣಗಳು ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಾರೆ.

ಒಟ್ಟಿನಲ್ಲಿ ಈ ಸರ್ಕಾರವು ನೆಟ್ಟಗೆ ಕೆಲಸ ಮಾಡುವ ಯಾವುದೇ ಸಾಧ್ಯತೆಯಿಲ್ಲ. ಅತ್ಯಧಿಕ ಬಹುಮತ ಬಂದರೆ ಸರ್ವಾಧಿಕಾರ. ಕಡಿಮೆ ಬಹುಮತ ಬಂದರೆ ಬ್ಲಾಕ್‍ಮೇಲ್ ರಾಜಕಾರಣ ಮತ್ತು ಕುದುರೆ ವ್ಯಾಪಾರ ಇದುವೇ ಇವತ್ತಿನ ಸಂಸದೀಯ ನಡವಳಿಕೆ ಎಂಬಂತಾಗಿಬಿಟ್ಟಿದೆ. ಹಾಗಾಗಿಯೇ ಕಳೆದ 14 ತಿಂಗಳ ಸರ್ಕಾರವು ಜನರ ಮನಸ್ಸಿನಲ್ಲಿ ಅಚ್ಚೊತ್ತಬಹುದಾದ ಯಾವ ಕೆಲಸವನ್ನೂ ಮಾಡಿಲ್ಲ. ಜನರ ಮನಸ್ಸಿನಲ್ಲಿ ಮೂಡಿರುವುದೆಂದರೆ ಇವರು ಮೊದಲ ತಿಂಗಳಿಂದಲೂ ಕಿತ್ತಾಡುತ್ತಿದ್ದಾರೆ ಎಂಬುದಷ್ಟೇ. ಅಂತಹುದೇ ಕಿತ್ತಾಟ ಮತ್ತು ಸಚಿವ ಸ್ಥಾನಗಳಿಗೆ ಮ್ಯೂಸಿಕಲ್ ಚೇರ್ ಮಾಡುವುದರ ಬದಲು ಸರ್ಕಾರವು ಬಿದ್ದು ಹೋಗುವುದೇ ಒಳ್ಳೆಯದು ಎಂಬುದು ಜನಾಭಿಪ್ರಾಯವೂ ಆಗಿದೆ.

ವಿಧಾನಸಭೆ ವಿಸರ್ಜನೆ ಮತ್ತು ಮಧ್ಯಂತರ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಒಲವು

ಒಂದು ಕಡೆ ಈ ಆಪರೇಷನ್‍ಅನ್ನು ನಡೆಸಲು ಬೇಕಾದ ಎಲ್ಲಾ ನೆರವು, ಮಾರ್ಗದರ್ಶನ ಮಾಡುತ್ತಿರುವ ಬಿಜೆಪಿ ಹೈಕಮಾಂಡ್ ಇದೇ ಸಂದರ್ಭದಲ್ಲಿ ಸರ್ಕಾರ ರಚನೆಗೆ ಒಲವು ಹೊಂದಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆದರೆ ಬಿಜೆಪಿಯು ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬುದು ಅದರ ಹೈಕಮಾಂಡ್ ಲೆಕ್ಕಾಚಾರ. ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್ ಜೆಡಿಎಸ್ ಶಾಸಕರುಗಳನ್ನು ಇಟ್ಟುಕೊಂಡು ಸರ್ಕಾರ ರಚಿಸಿದರೆ ಮೊದಲು ಅವರನ್ನು ಮಂತ್ರಿಗಳನ್ನಾಗಿಸಬೇಕು; ನಂತರ ಚುನಾವಣೆ ಎದುರಿಸಬೇಕು, ಅದರಲ್ಲಿ ಸೋಲಾದರೆ ಮುಖಭಂಗ ಅನುಭವಿಸಬೇಕಾಗುತ್ತದೆ. ಗೆದ್ದರೂ ಅರ್ಧದಷ್ಟು ಸಚಿವ ಸ್ಥಾನಗಳಲ್ಲಿ ಪಕ್ಷಕ್ಕೆ ಬಂದ ವಲಸಿಗರಿಗೇ ಆದ್ಯತೆ ನೀಡಬೇಕು. ಕೊಡದೇ ಇದ್ದಲ್ಲಿ ಅವರುಗಳ ಭಿನ್ನಮತವೂ ಒಳ್ಳೆಯದನ್ನು ಮಾಡುವುದಿಲ್ಲ ಎಂಬುದು ಬಿಜೆಪಿಯ ಹೈಕಮಾಂಡ್‍ನ ನಿಲುವು.

ಆದರೆ, ಈ ಸರ್ಕಾರ ವಿಸರ್ಜನೆ ಆಗಿಬಿಡಬೇಕು ಎಂಬ ಆಲೋಚನೆಯಿಂದ ಮಾತ್ರ ಅದು ಆಪರೇಷನ್‍ಗೆ ಮಹತ್ವ ಕೊಡುತ್ತಿದೆ. ಈ ಶಾಸಕರಲ್ಲಿ ಬಿಜೆಪಿಗೆ ಬರುವವರಿಗೆ ಟಿಕೆಟ್ ಕೊಡುವ ಕುರಿತು ಪರಿಶೀಲಿಸುವ ಭರವಸೆಯನ್ನು ಮಾತ್ರ ಅದು ನೀಡುವ ಸಂಭವವಿದೆ. ಆದರೆ, ಯಡಿಯೂರಪ್ಪನವರ ಆಲೋಚನೆ ಬೇರೆ ಇದೆ. ಚುನಾವಣೆಗೆ ಹೋದರೆ 150 ಗೆಲ್ಲುವುದು ಖಾತರಿಯಾದ್ದರಿಂದ, ಆಗ ಮುಖ್ಯಮಂತ್ರಿ ಕ್ಯಾಂಡಿಡೇಟ್ ತಾನಾಗಿರುವುದಿಲ್ಲ ಎಂಬುದೂ ಅವರಿಗೆ ಖಾತರಿಯಾಗಿದೆ. ಒಂದೋ ದಕ್ಷಿಣ ಕರ್ನಾಟಕದ ಒಕ್ಕಲಿಗ ನಾಯಕ ಅಥವಾ ಬಿ.ಎಲ್.ಸಂತೋಷ್ ಅಥವಾ ಈ ಸಾರಿ ಸಚಿವಗಿರಿ ಕೊಟ್ಟಿಲ್ಲದ ಅನಂತ್‍ಕುಮಾರ್ ಹೆಗಡೆ ಇವರಲ್ಲಿ ಒಬ್ಬರಿಗೆ ಮಣೆ ಹಾಕಲಾಗುತ್ತದೆ. ಹಾಗಾಗಿ ಈಗಲೇ ಸರ್ಕಾರ ರಚಿಸಬೇಕೆಂಬುದು ಅವರ ಇರಾದೆಯಾಗಿದೆ.

ಅಂದರೆ, ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪನವರು ನಾಲ್ಕನೇ ಬಾರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಅಲ್ಲಿಂದಾಚೆಗೆ ಮತ್ತಷ್ಟು ಭ್ರಷ್ಟಾಚಾರ ಮತ್ತು ಕರ್ನಾಟಕದ ನೆಲದಲ್ಲಿ ಇನ್ನಷ್ಟು ಜಾತಿ ಹಾಗೂ ಕೋಮು ಧ್ರುವೀಕರಣವು ನಡೆಯುತ್ತದೆ. ದೇಶದಲ್ಲಿ ಘಾತುಕ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಪಕ್ಷವು ಇನ್ನಷ್ಟು ಬಲದೊಂದಿಗೆ ತನ್ನ ಅಜೆಂಡಾವನ್ನು ಜಾರಿ ಮಾಡಲಿದೆ. ಅಂತಿಮವಾಗಿ ಯಡಿಯೂರಪ್ಪನವರ ಬಯಕೆ ಗೆಲ್ಲುತ್ತದೋ, ಬಿಜೆಪಿ ಹೈಕಮ್ಯಾಂಡ್‍ನ ಲೆಕ್ಕಾಚಾರ ಗೆಲ್ಲುತ್ತದಾ ನೋಡಬೇಕು.
ಬಹುಶಃ ಕರ್ನಾಟಕದ ಜನರು ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡುವ ಪರಿಸ್ಥಿತಿಯಲ್ಲಿಲ್ಲ.

ಕಾಫಿ ಪುಡಿ ಅಂಗಡಿ ಸೇರಿದ ಸಿದ್ದರಾಮಯ್ಯ ಮತ್ತು
ಬಲಿ ಕಾ ಬಕ್ರಾ ವಿಶ್ವನಾಥ್!

ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಕೆಲ ಕಾಲದ ನಂತರ ಎಚ್.ವಿಶ್ವನಾಥ್ ಪ್ರೆಸ್‍ಕ್ಲಬ್‍ನಲ್ಲಿ ಪತ್ರಕರ್ತರೊಬ್ಬರ ಜೊತೆ ಹೀಗೆ ಮಾತನಾಡಿದರು ಎಂಬ ಸುದ್ದಿ ಓಡಾಡಿತು.

ಪತ್ರಕರ್ತರು ವಿಶ್ವನಾಥ್‍ರನ್ನು ಕೇಳಿದ ಪ್ರಶ್ನೆ ಇದು: ‘ಸಾರ್ ಸಿದ್ದರಾಮಯ್ಯ, ಕಾಂಗ್ರೆಸ್‍ಗೆ ಬಂದಿದ್ದಾರಲ್ಲಾ.. ಈಗ ಅವರ ಸ್ಥಿತಿ ಹೇಗಿದೆ?’. ‘ಅವರ ಸ್ಥಿತಿ ಏನು ಅಂತ ಹೇಳುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಅಂದರೆ ಏನು ಅಂತ ಹೇಳ್ತೀನಿ. ಉಳಿದಿದ್ದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಒಂಥರಾ ಕಾಫಿ ಪುಡಿ ಅಂಗಡಿ ಇದ್ದ ‘ಹಾಗೆ. ಅಂಗಡಿಯ ಮುಂದೆಯೇ ಬೋರ್ಡ್ ಹಾಕಿರುತ್ತಾರೆ. ‘ಇಲ್ಲಿ ನಿಮ್ಮ ಬೀಜಗಳನ್ನು ಹುರಿದು, ಕುಟ್ಟಿ ಪುಡಿ ಮಾಡಿ ನಿಮಗೇ ಕೊಡಲಾಗುವುದು ಅಂತ’. ಕಾಂಗ್ರೆಸ್ ಪಕ್ಷದಲ್ಲಿ ಹೀಗೆ’ ವಿಶ್ವನಾಥ್ ಹೀಗೆ ಹೇಳಿದ್ದರು ಎಂದು ಸುದ್ದಿಯಾಗಿತ್ತು.

ಇಂತಹ ಹಲವು ಕಾರಣಗಳಿಂದಾಗಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್‍ಗೆ ತರಲು ಯತ್ನಿಸಿದವರಲ್ಲಿ ಒಬ್ಬರಾಗಿದ್ದ ವಿಶ್ವನಾಥ್‍ರ ಉದ್ದೇಶವೇನಾಗಿತ್ತು ಎಂಬ ಪ್ರಶ್ನೆಗಳಿದ್ದವು. ಏಕೆಂದರೆ ಇದಕ್ಕೆ ಮುಂಚೆ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧವಿರಲಿಲ್ಲ. ಬೇರೆ ಏನಿರದಿದ್ದರೂ ಎಚ್.ಡಿ.ದೇವೇಗೌಡರ ವಿರುದ್ಧ ವಿಶ್ವನಾಥ್‍ರಿಗೆ ಇದ್ದ ಸಿಟ್ಟು ಎಲ್ಲರಿಗೂ ಗೊತ್ತಿದ್ದುದರಿಂದ, ಹೆಚ್ಚಿನ ಚರ್ಚೆಯಾಗಲಿಲ್ಲ. ದೇವೇಗೌಡರನ್ನು ಸದಾ ಕುಟುಕುತ್ತಿದ್ದ ವಿಶ್ವನಾಥ್‍ರನ್ನು ಮೈಸೂರು ಕ್ಷೇತ್ರದ ಎಂಪಿ ಚುನಾವಣೆಯಲ್ಲಿ ಗೌಡರು ಸೋಲಿಸಿದರು. ನಂತರದ ದಿನಗಳಲ್ಲಿ ವಿಶ್ವನಾಥ್ ಮತ್ತು ಸಿದ್ದರಾಮಯ್ಯನವರಿಗೆ ಸರಿ ಬರಲಿಲ್ಲ, ಅವರು ಹೋಗಿದ್ದು ಸೀದಾ ಅದೇ ಗೌಡರ ಜೆಡಿಎಸ್‍ಗೆ!

ಅಲ್ಲಿ ಜಿ.ಟಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರೂ (ಅವರ ಸ್ವಂತ ಕ್ಷೇತ್ರವಲ್ಲದ) ಹುಣಸೂರಿನಿಂದ ಇವರಿಗೇ ಟಿಕೆಟ್ ಸಿಕ್ಕು ಎಂಎಲ್‍ಎ ಆದರು. ‘ನನಗೆ ರಾಜಕೀಯ ಪುನರ್ಜನ್ಮ ಕೊಟ್ಟ ದೇವೇಗೌಡರಿಗೆ’ ಎಂದೇ ಧನ್ಯವಾದಗಳನ್ನು ಅರ್ಪಿಸಿದರು. ಮಂತ್ರಿ ಮಾಡದೇ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ಎಚ್.ವಿಶ್ವನಾಥ್ ಏನೆಂದುಕೊಂಡಿದ್ದರೋ ಗೊತ್ತಿಲ್ಲ. ಜೆಡಿಎಸ್ ಅಪ್ಪ ಮಕ್ಕಳ ಜೊತೆಗೆ ಮೊಮ್ಮಕ್ಕಳದ್ದೂ ಪಕ್ಷವಾಗುತ್ತಿದ್ದ ಸಂದರ್ಭವದು. ಹೀಗಿದ್ದೂ ಅಧ್ಯಕ್ಷ ಪದವಿ ಒಪ್ಪಿಕೊಂಡರು. ಬಹಿರಂಗವಾಗಿ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಡುತ್ತಿದ್ದ ಸಿದ್ದರಾಮಯ್ಯನವರನ್ನು ಕುಟುಕುತ್ತಿದ್ದರೇ ಹೊರತು, ಗೌಡರ ಕುಟುಂಬವನ್ನಲ್ಲ.

ಇಂತಹ ವಿಶ್ವನಾಥ್ ಇದೀಗ ಬಿಜೆಪಿಗೆ ಹೋಗಿದ್ದಾರೆ. ಸರಿಯೋ ತಪ್ಪೋ ಕಾಫಿ ಪುಡಿ ಅಂಗಡಿ ಕಾಂಗ್ರೆಸ್‍ನ ಮೇಲೆ ಸಿದ್ದರಾಮಯ್ಯ ಹಿಡಿತ ಸಾಧಿಸಿದ್ದಾರೆ. ಏಕೆಂದರೆ, ಕಾಂಗ್ರೆಸ್ ಪ್ರಾಬಲ್ಯ ಕಳೆದುಕೊಳ್ಳುತ್ತಿದ್ದ ದಿನಗಳಲ್ಲಿ ಅವರು ಮಾಸ್ ಲೀಡರ್ ಆಗಿ ಎಂಟ್ರಿ ಕೊಟ್ಟಿದ್ದರು. ಸ್ವಂತದ್ದೇ ಆದ ಕ್ಷೇತ್ರವೂ ಇಲ್ಲದ ಎಚ್.ವಿಶ್ವನಾಥ್ ವಿಪರೀತ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿಗೆ ಹೋಗಿದ್ದಾರೆ. ಕೋಮುವಾದದ ವಿಚಾರ ಅವರಿಗೆ ಅರ್ಥವಾಗದಷ್ಟು ಅವಕಾಶವಾದ ತಲೆದೋರಿದೆ ಎಂದುಕೊಂಡರೂ, ಉಳಿದಂತೆ ಯಾವ ಮೌಲ್ಯಗಳ ವಿಚಾರವನ್ನೂ ಅವರು ಇನ್ನು ಮುಂದೆ ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ಬಲಿ ಕಾ ಬಕ್ರಾ ಆಗದೇ ಇನ್ನೇನು ತಾನೇ ಆಗಿಯಾರು?

ಒಳಗೊಳಗೇ ತಂತ್ರಗಳನ್ನು ಹೆಣೆಯುವುದು, ಜಾತ್ಯಾತೀತ ನಿಲುವನ್ನು ಒಂದು ಮೌಲ್ಯವಾಗಿ ಸ್ವೀಕರಿಸದೇ ಇರುವುದು ಇತ್ಯಾದಿ ಗುಣಗಳು ಅವರಲ್ಲಿ ಮೊದಲಿಂದಲೂ ಇದ್ದವು. ಆದರೂ ಸಾರ್ವಜನಿಕವಾಗಿ ತಮ್ಮ ಮಾತುಗಳಿಂದ ಸದಭಿಪ್ರಾಯ ಗಳಿಸಿದ್ದ ಅವರ ಇಂದಿನ ನಡೆ ರಾಜಕಾರಣಿಯೆಂದರೆ ಹೀಗೇನೇ, ಯಾರಾದರೂ ಸರಿ ಅವರಿಗೆ ಅಧಿಕಾರವಲ್ಲದೇ ಇನ್ನೇನೂ ಮುಖ್ಯವಲ್ಲ ಎಂಬ ಸಂದೇಶ ಕೊಟ್ಟಿದೆ. ಇದರಿಂದ ವಿಶ್ವನಾಥ್ ನುಣುಚಿಕೊಳ್ಳುವುದು ಸಾಧ್ಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...