ಆರನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದ ಭಾಗವಾಗಿರುವ ವೇದ ಕಾಲದ ಸಂಸ್ಕೃತಿ ಕುರಿತು ಪಾಠ ಮಾಡದಂತೆ ಶಿಕ್ಷಕರಿಗೆ ಆದೇಶ ಹೊರಡಿಸುವುದಾಗಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿದ್ದಾರೆ.
ಪಠ್ಯದಲ್ಲಿರುವ ವೇದ ಕಾಲದ ಯಜ್ಞದ ಕುರಿತ ಮಾಹಿತಿ ತಪ್ಪು ಎಂಬ ಅಭಿಪ್ರಾಯದಲ್ಲಿ ಉಡುಪಿಯ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಚರ್ಚೆಯೂ ನಡೆದಿತ್ತು. ಹಾಗಾಗಿ ಈ ಪಠ್ಯದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿರುವ ಅಂಶಗಳಿವೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಆ ಪಾಠವನ್ನು ಕೈಬಿಡಲು ಸಚಿವ ಸುರೇಶ್ ಕುಮಾರ್ ಆದೇಶ ನೀಡುವುದಾಗಿ ಹೇಳಿದ್ದಾರೆಂದು ಡೆಕ್ಕನ್ ಹೆರಾಲ್ಡ್ ಸೇರಿದಂತೆ ಹಲವು ಪತ್ರಿಕೆಗಳು ವರದಿ ಮಾಡಿವೆ.

“ಉತ್ತರ ವೇದಗಳ ಕಾಲದಲ್ಲಿ, ಧಾರ್ಮಿಕ ಆಚರಣೆಗಳು ಸಂಕೀರ್ಣವೂ, ಕಠಿಣವೂ ಆದವು. ಯಾಗಯಜ್ಞಗಳ ಆಚರಣೆ ತೀವ್ರವಾಯಿತು. ಹವಿಸ್ಸಿನ ಹೆಸರಿನಲ್ಲಿ ಹಾಲು, ತುಪ್ಪ, ಧಾನ್ಯಗಳನ್ನು ಬೆಂಕಿಗೆ ಅರ್ಪಿಸುವುದು ಹೆಚ್ಚಾದಂತೆ ಆಹಾರದ ಬಿಕ್ಕಟ್ಟು ಉಲ್ಬಣಿಸಿತು. ಬ್ರಹ್ಮ, ವಿಷ್ಣು ಮತ್ತು ಶಿವ ಪ್ರಭಾವಿ ದೇವರುಗಳಾದರು. ಜೊತೆಗೆ ಲಕ್ಷ್ಮಿ, ಸರಸ್ವತಿ, ಪಾರ್ವತಿ, ಗಣೇಶ, ಸ್ಕಂದ ಮೊದಲಾದ ಪರಿವಾರ ದೇವ-ದೇವತೆಗಳು ಪ್ರಾಮುಖ್ಯತೆಗೆ ಬಂದವು” ಎಂದು 6ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ, ಇತಿಹಾಸದ 5ನೇ ಪಾಠದಲ್ಲಿ ಉಲ್ಲೇಖವಾಗಿದೆ.
ಈ ಮಾಹಿತಿ ತಪ್ಪಾಗಿದ್ದು, ಜೊತೆಗೆ ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುತ್ತವೆ ಎಂದು ಅದಮಾರು ಮಠದ ಸ್ವಾಮೀಜಿ ಹೇಳಿದ್ದರು.
ಈ ಪಠ್ಯಪುಸ್ತಕವು ಹಳೆಯದಾಗಿದ್ದು, ನಾವು ಈ ವರ್ಷ ಇದನ್ನು ಪರಿಷ್ಕರಿಸಿಲ್ಲ. ಈ ಪಾಠವನ್ನು ಮಾಡದಿರುವಂತೆ ಶಿಕ್ಷಕರಿಗೆ ಆದೇಶ ನೀಡುತ್ತೇನೆ. ಅದಾಗ್ಯೂ ಈಗಾಗಲೇ ಈ ಪುಸ್ತಕ ಮುದ್ರಣಗೊಂಡು ಎಲ್ಲಾ ಮಕ್ಕಳಿಗೂ ತಲುಪಿರುವುದರಿಂದ ಈ ವರ್ಷ ಈ ಅಂಶವನ್ನು ಪಠ್ಯದಿಂದ ತೆಗೆಯಲು ಸಾಧ್ಯವಿಲ್ಲ ಎಂದು ವಿಷಾದಿಸುತ್ತೇನೆ” ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ಈ ಕುರಿತು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ಪ್ರಾಧ್ಯಾಪಕರೊಬ್ಬರನ್ನು (ಹೆಸರು ಹೇಳಲಿಚ್ಚಿಸದ) ಮಾತನಾಡಿಸಿತು. “ಯಜ್ಞ,ಯಾಗ, ವೇದಗಳ ಕುರಿತು ನೀಡಿರುವ ಮಾಹಿತಿಯಲ್ಲಿ ತಪ್ಪು ಎಲ್ಲಿಯೂ ಇಲ್ಲ. ವೈದಿಕ ಸಾಹಿತ್ಯಗಳಾದ ವೇದ, ಉಪನಿಷತ್ತುಗಳು, ಅರಣ್ಯಕಗಳು, ಬ್ರಾಹ್ಮಣಕಗಳು, ಪುರಾಣಗಳು, ಶತಪಥ ಬ್ರಾಹ್ಮಣ ಮುಂತಾದವುಗಳಲ್ಲಿ ಈ ಯಜ್ಞಗಳ ಕುರಿತು ಉಲ್ಲೇಖವಿದೆ” ಎಂದು ಹೇಳಿದರು.
“ಯಜ್ಞಗಳಲ್ಲಿ ಬಲಿ ಕೊಡುವುದು, ಧಾನ್ಯಗಳು, ಹಾಲು, ತುಪ್ಪ, ವಸ್ತ್ರಗಳನ್ನೂ ಅಗ್ನಿಗೆ ಅರ್ಪಿಸುವುದು ವೇದೋತ್ತರ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಆದರೆ ಇದರಿಂದ ಆಹಾರ ಬಿಕ್ಕಟ್ಟು ಹೆಚ್ಚಾಯಿತು ಎನ್ನುವುದು ಸ್ವಲ್ಪ ಅತಿರೇಕವೆನಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ, ಆಗ ಯಜ್ಞಗಳನ್ನು ಮಾಡಿಸುತ್ತಿದ್ದವರು ರಾಜರು (ಕ್ಷತ್ರಿಯರು). ಕೆಲವೊಮ್ಮೆ ತಿಂಗಳುಗಟ್ಟಲೆ ಯಾಗಗಳು ನಡೆಯುತ್ತಿದ್ದವು. ಅಷ್ಟೂ ದಿನಗಳವರೆಗೆ ಯಜ್ಞಕುಂಡದಲ್ಲಿ ಬೆಂಕಿ ಆರದಿರಲು ಧವಸ, ಧಾನ್ಯ, ಹಾಲು, ತುಪ್ಪ, ಬಟ್ಟೆಗಳನ್ನು ಹಾಕುತ್ತಲೇ ಇರಬೇಕಿತ್ತು. ಹಾಗಾಗಿ ಆಹಾರದ ತೊಂದರೆಯೂ ಆಗಿರಬುಹುದು” ಎಂದು ಅವರು ಅಭಿಪ್ರಾಯಪಟ್ಟರು.
‘ತಮ್ಮ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಬಲಿ ಮತ್ತು ಮಾಂಸಾಹಾರ ಸೇವನೆಯ ಕುರಿತು ನಮಗೆ ಲಭ್ಯವಿರುವ, ಸಂಸ್ಕೃತ ಭಾಷೆಯಲ್ಲಿಯೇ ಇರುವ ವೈದಿಕ ಸಾಹಿತ್ಯದಲ್ಲಿ ಮಾಹಿತಿ ದೊರೆಯುತ್ತದೆ. ಹಾಗಾಗಿ ಈಗ ಈ ಪಾಠವನ್ನು ಕೈಬಿಡುತ್ತಿರುವ ಉದ್ದೇಶ ಸ್ಪಷ್ಟವಾಗಿದೆ. ಇದರಿಂದ ಮಕ್ಕಳಿಗೆ ನೀಡಬೇಕಾಗಿರುವ ವೈಚಾರಿಕ ಪ್ರಜ್ಞೆಯನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದು ಗುರುರಾಜ್ ಬೇಡೇಕಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನೆಹರೂ-ಶಾಸ್ತ್ರಿಗೆ ಸಂಬಂಧಿಸಿದ ವಿಷಯಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಯುಪಿ ಸರ್ಕಾರ
ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರು ಮತ್ತು ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಆರ್.ಇಂದಿರಾರವರು ಮಾತನಾಡಿ ‘ಯಾವುದೋ ಒಂದು ಒಳ್ಳೆಯ ಅಥವಾ ಕೆಟ್ಟ ಆಚರಣೆ/ವಿಷಯದ ಬಗ್ಗೆ ಸಂಕ್ಷಿಪ್ತ ವಿವರವನ್ನು ಮಾತ್ರ ನೀಡಲಾಗುತ್ತಿದೆ. ಹಾಗಾಗಿ ಇದರಲ್ಲಿ ಸರಿ-ತಪ್ಪುಗಳನ್ನು ಹುಡುಕುವ ಪ್ರಮೇಯವೇ ಇಲ್ಲ. ಯಾವುದೇ ವಿಷಯದ ಬಗ್ಗೆ ಸಮಗ್ರ ಕಲಿಕೆ ಆಗಬೇಕು. ಅದರಲ್ಲೂ ಸಮಾಜವನ್ನು ಒಟ್ಟುಗೂಡಿಸುವ, ಸಕಾರಾತ್ಮಕ ಮನೋಭಾವ ಬೆಳೆಸುವ ವಿಷಗಳ ಕಲಿಕೆ ಆಗಬೇಕು’ ಎಂದಿದ್ದಾರೆ.
‘ಅದಾಗ್ಯೂ, ಯಜ್ಞ-ಯಾಗಗಳಿಗೆ ಧವಸ, ಧಾನ್ಯ, ಹಾಲು, ತುಪ್ಪ ಇತ್ಯಾದಿಗಳನ್ನು ಹಾಕಿ ವಿನಾಕಾರಣ ವ್ಯಯಿಸುವುದು ನಿಜಕ್ಕೂ ಖಂಡನೀಯ. ಇಂತಹ ಅಪವ್ಯಯ ವೇದಗಳ ಕಾಲದಲ್ಲಿ ಮಾತ್ರವಲ್ಲ, ಈಗಲೂ ನಡೆಯುತ್ತಿದೆ. ಎಷ್ಟೋ ಜನ ಹಸಿವಿನಿಂದ ಸಾಯುತ್ತಿರುವಾಗ ಧಾನ್ಯಗಳನ್ನು ಬೆಂಕಿಗೆ ಹಾಕುವುದು, ಎಷ್ಟೋ ಜನರಿಗೆ ಮಾನ ಮುಚ್ಚಿಕೊಳ್ಳಲೂ ತುಂಡುಬಟ್ಟೆಯಿಲ್ಲದಿರುವಾಗ ಒಳ್ಳೆಯ ಬಟ್ಟೆಗಳನ್ನು ಬೆಂಕಿಗೆ ಹಾಕುವುದು ನಿಜಕ್ಕೂ ಖಂಡನೀಯ. ಇವುಗಳ ಕುರಿತು ವೈಚಾರಿಕ ಜ್ಞಾನವನ್ನು ಶಿಕ್ಷಕರು ಶಾಲೆಯಲ್ಲಿ ನೀಡಬೇಕು. ಪಠ್ಯಪುಸ್ತಕದಲ್ಲಿ ಇದ್ದರೆ ಮಾತ್ರ ಹೇಳಬೇಕು ಎನ್ನುವುದಕ್ಕಿಂತ ಪ್ರತಿ ತರಗತಿಯಲ್ಲಿಯೂ ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು’ ಎಂದರು.
ಹಂಪಿ ವಿಶ್ವವಿದ್ಯಾನಿಲಯ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ವಿಜಯ್ ಅವರನ್ನು ನಾನುಗೌರಿ.ಕಾಂ ಮಾತನಾಡಿಸಿದಾಗ, ‘ಯಾವುದೇ ಚುನಾಯಿತ ಸರ್ಕಾರಕ್ಕೆ ಪಠ್ಯ ಬದಲಾವಣೆ ಮಾಡುವ ಅಧಿಕಾರವಿದೆ. ಆದರೆ ಅದು ತಜ್ಞರ ಸಮಿತಿಯನ್ನೊಳಗೊಂಡಂತೆ ಒಂದು ಪ್ರಕ್ರಿಯೆಯ ಮೂಲಕ ನಡೆಯಬೇಕೇ ಹೊರತು ಏಕಾಏಕಿ ಯಾವುದೇ ವಿಷಯವನ್ನು ತೆಗೆಯಲೂ ಸಾಧ್ಯವಿಲ್ಲ, ಸೇರಿಸಲೂ ಸಾಧ್ಯವಿಲ್ಲ’ ಎಂದು ಹೇಳಿದರು.
‘ಪ್ರತಿಯೊಬ್ಬ ಇತಿಹಾಸಕಾರರೂ, ತಮಗೆ ಸಾಕ್ಷ್ಯಗಳು ದೊರೆತಿರುವ ಅಥವಾ ತಾವು ಅಧ್ಯಯನ ಮಾಡಿರುವ ಯಾವುದೇ ವಿಷಯದ ಬಗ್ಗೆ, ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಿರುತ್ತಾರೆ. ಹಾಗಾಗಿ ಯಾವುದು ಸರಿ-ತಪ್ಪು ಎಂದು ಹೇಳಲು ಸಾದ್ಯವಿಲ್ಲ. ಹಾಗಾಗಿ ಏನೇ ಮಾಡುವುದಿದ್ದರೂ ನಿರ್ದಿಷ್ಟ ಪ್ರಕ್ರಿಯೆಯ ಮೂಲಕವೇ ಮಾಡಬೇಕಾಗುತ್ತದೆ’ ಎಂದು ಹೇಳಿದರು.
ಇದರ ಕುರಿತು ಪ್ರತಿಕ್ರಿಯೆ ಪಡೆಯಲು ಶಿಕ್ಷಣ ಸಚಿವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಶಿಕ್ಷಣ ಸಚಿವರೇ ಹೇಳಿರುವಂತೆ, ಪಠ್ಯಪುಸ್ತಕ ಈಗಾಗಲೇ ಮುದ್ರಣಗೊಂಡು ವಿದ್ಯಾರ್ಥಿಗಳ ಕೈಸೇರಿರುವುದರಿಂದ ವಿವಾದಿತ ಪಾಠವನ್ನು ತೆಗೆಯಲು ಸಾಧ್ಯವಿಲ್ಲ. ಹಾಗಾಗಿ ಈ ಪಾಠವನ್ನು ಮಾಡದಿರುವಂತೆ ಶಿಕ್ಷಕರಿಗೆ ಆದೇಶ ಹೊರಡಿಸುತ್ತೇನೆ ಎಂದಿದ್ದಾರೆ.
“ಶಿಕ್ಷಕರು 4ನೇ ಪಾಠವನ್ನು ಮುಗಿಸಿ, ನೇರವಾಗಿ 6ನೇ ಪಾಠವನ್ನು ಮಾಡಲು ಮುಂದಾದಾಗ, ವಿದ್ಯಾರ್ಥಿಗಳು 5ನೇ ಪಾಠ ಯಾಕೆ ಮಾಡುತ್ತಿಲ್ಲ/ಮಾಡಿಲ್ಲ ಎಂದು ಪ್ರಶ್ನಿಸುತ್ತಾರೆ. ಆಗ ಶಿಕ್ಷಕರು ಏನು ಉತ್ತರ ಕೊಡಬಹುದು? ಇದಕ್ಕೆ ಶಿಕ್ಷಣ ಸಚಿವರು ಏನು ಹೇಳುತ್ತಾರೆ?
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಸೇರಿದಂತೆ ಮಹತ್ವದ ಪಠ್ಯಗಳನ್ನು ಕೈಬಿಟ್ಟ ರಾಜ್ಯ ಸರ್ಕಾರ


