ಹಲವು ದಿನಗಳ ಹಗ್ಗ-ಜಗ್ಗಾಟದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಂತಿಮವಾಗಿ ಲೈಂಗಿಕ ಕಿರುಕುಳ ತಡೆ (ಪಿಒಎಸ್‌ಹೆಚ್-ಪಾಶ್) ಕಾಯ್ದೆಯಡಿ ಆಂತರಿಕ ಸಮಿತಿ (ಐಸಿ)ಯನ್ನು ರಚಿಸಿದೆ. ಆದರೆ, ಸಮಿತಿ ರಚನೆ ವೇಳೆ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದೆ. ಪಾಶ್ ಕಾಯ್ದೆಯಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಹೊಸ ಸಮಿತಿಯಲ್ಲಿ ಬಹುಪಾಲು ಪುರುಷ ಸದಸ್ಯರಿದ್ದಾರೆ.
ಜನವರಿ 17ರಂದು ಪ್ರಕಟಿಸಿದ ಸಮಿತಿ ಸದಸ್ಯರ ಪಟ್ಟಿಯಲ್ಲಿ, ಕೆಎಫ್‌ಸಿಸಿ ಅಧ್ಯಕ್ಷ ಎಂ.ನರಸಿಂಹುಲು ಮತ್ತು ಕಾರ್ಯದರ್ಶಿ (ವಿತರಕರು) ಎಂ.ಎನ್ ಕುಮಾರ್, ಕೆಎಫ್‌ಸಿಸಿ ಮಾಜಿ ಪದಾಧಿಕಾರಿಗಳಾದ ಎನ್.ಎಂ ಸುರೇಶ್ ಮತ್ತು ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು, ನಿರ್ದೇಶಕ ಬಿ.ಎಲ್ ನಾಗರಾಜ್ (ನಾಗಣ್ಣ), ನಟಿ ಅನಿತಾರಾಣಿ ಮತ್ತು ಅನ್ನಪೂರ್ಣ ಎಂಬ ಎನ್‌ಜಿಒ ಪ್ರತಿನಿಧಿ ಇದ್ದಾರೆ. ಸಮಿತಿಯು ತನ್ನ ಸದಸ್ಯರ ಮೇಲೆ ಮಾತ್ರ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಫಿಲಂ ಚೇಂಬರ್ ಒಂದು ಪತ್ರದಲ್ಲಿ ತಿಳಿಸಿದೆ.

ಪಾಶ್ ಕಾಯ್ದೆಯು ಆಂತರಿಕ ಸಮಿತಿಯ ಒಟ್ಟು ಸದಸ್ಯರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಇರಬೇಕು ಎಂದು ಹೇಳುತ್ತದೆ. ಆದರೆ, ಕೆಎಫ್‌ಸಿಸಿ ಹೊಸದಾಗಿ ರಚಿಸಿರುವ ಸಮಿತಿಯ ಏಳು ಸದಸ್ಯರ ಪೈಕಿ ಐವರು ಪುರುಷರಿದ್ದಾರೆ. ಕೆಎಫ್‌ಸಿಸಿ ಅನ್ನಪೂರ್ಣ ಎಂಬ ಎನ್‌ಜಿಒ ಪ್ರತಿನಿಧಿಯೊಬ್ಬರನ್ನು ಸದಸ್ಯರಾಗಿ ಘೋಷಿಸಿದೆ. ಆದರೆ, ಅವರು ಮಹಿಳೆಯೇ ಎಂಬುವುದನ್ನು ಖಚಿತಪಡಿಸಿಲ್ಲ. ಹಾಗಾಗಿ, ಸದ್ಯಕ್ಕೆ ಸಮಿತಿಯಲ್ಲಿ ಅನಿತಾರಾಣಿ ಒಬ್ಬರೇ ಮಹಿಳಾ ಸದಸ್ಯರಿದ್ದಂತಾಗಿದೆ.
ಪಾಶ್ ಕಾಯ್ದೆಯ ಪ್ರಕಾರ, ಒಂದು ಆಂತರಿಕ ಸಮಿತಿ ಉದ್ಯೋಗದಾತರಿಂದ ನಾಮನಿರ್ದೇಶಿತ ಸದಸ್ಯರನ್ನು (members nominated by the employer) ಒಳಗೊಂಡಿರಬೇಕು. ಇದರಲ್ಲಿ ಪ್ರಿಸೈಡಿಂಗ್ ಆಫೀಸರ್ ಸೇರಿದ್ದಾರೆ, ಅವರು ಕೆಲಸದ ಸ್ಥಳದಲ್ಲಿ ಹಿರಿಯ ಮಹಿಳಾ ಉದ್ಯೋಗಿಯಾಗಿರಬೇಕು.
ಯಾವುದೇ ಹಿರಿಯ ಮಹಿಳೆ ಲಭ್ಯವಿಲ್ಲದಿದ್ದರೆ, ಪ್ರಿಸೈಡಿಂಗ್ ಆಫೀಸರ್ ಅನ್ನು ಉದ್ಯೋಗದಾತರ ಇತರ ಕಚೇರಿಗಳಿಂದ ಅಥವಾ ಬಾಹ್ಯ ಸಂಸ್ಥೆಗಳಿಂದ ನಾಮನಿರ್ದೇಶನ ಮಾಡಬಹುದು. ಸಮಿತಿಯು ಮಹಿಳೆಯರ ಪರವಾಗಿ ಬದ್ಧರಾಗಿರುವ ಅಥವಾ ಸಾಮಾಜಿಕ ಕಾರ್ಯ ಅಥವಾ ಕಾನೂನು ವಿಷಯಗಳಲ್ಲಿ ಅನುಭವ ಹೊಂದಿರುವ ಕನಿಷ್ಠ ಇಬ್ಬರು ಉದ್ಯೋಗಿ ಸದಸ್ಯರನ್ನು ಒಳಗೊಂಡಿರಬೇಕು.
ಹೆಚ್ಚುವರಿಯಾಗಿ, ಒಬ್ಬ ಬಾಹ್ಯ ಸದಸ್ಯರು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪರಿಚಿತವಾಗಿರುವ ಎನ್‌ಜಿಒ ಅಥವಾ ಸಂಘದಿಂದ ಬಂದಿರಬೇಕು ಎಂದು ಕಾನೂನು ಷರತ್ತು ವಿಧಿಸುತ್ತದೆ.
ಮಹಿಳಾ ಆಯೋಗ ಸೇರಿದಂತೆ ವಿವಿದೆಡೆಗಳ ಒತ್ತಡಕ್ಕೆ ಮಣಿದು ಡಿಸೆಂಬರ್ 2024ರ ಆರಂಭದಲ್ಲಿ ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಫಿಲಂ ಚೇಂಬರ್ 11 ಸದಸ್ಯರ ಪಾಶ್ ಸಮಿತಿ ರಚಿಸಿತ್ತು. ಆದರೆ, ಫಿಲಂ ಚೇಂಬರ್ ಚುನಾವಣೆಯ ನೆಪವೊಡ್ಡಿ ಘೋಷಣೆ ಮಾಡಿದ ಘಂಟೆಗಳ ಒಳಗೆ ಆ ಸಮಿತಿಯನ್ನು ರದ್ದು ಮಾಡಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಜಸ್ಟೀಸ್ ಹೇಮಾ ಸಮಿತಿ ಮಲಯಾಳಂ ಚಿತ್ರೋದ್ಯಮದ ಒಳಗೆ ನಡೆದಿರುವ ಮತ್ತು ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕರಾಳ ಸತ್ಯವನ್ನು ಬಿಚ್ಚಿಟ್ಟ ಬಳಿಕ, ಕರ್ನಾಟಕದಲ್ಲೂ ಸಮಿತಿಯೊಂದನ್ನು ರಚಿಸಿ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸರ್ಕಾರವನ್ನು ಆಗ್ರಹಿಸಲಾಗಿದೆ.
ನಟ, ನಟಿಯರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ. ರಾಜ್ಯ ಮಹಿಳಾ ಆಯೋಗವೂ ಸಮಿತಿ ನೇಮಿಸುವಂತೆ ಸರ್ಕಾರವನ್ನು ಕೋರಿದೆ. ಆ ವಿಷಯ ಈಗ ಸಿಎಂ ನಿರ್ಧಾರದ ಮೇಲೆ ನಿಂತಿದೆ.
ಈ ನಡುವೆ, ಪಾಶ್ ಕಾಯ್ದೆಯ ಪ್ರಕಾರ ಫಿಲಂ ಚೇಂಬರ್ ಆಂತರಿಕ ಸಮಿತಿ ರಚಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ರಾಜ್ಯ ಮಹಿಳಾ ಆಯೋಗ ಈ ವಿಷಯದ ಬೆನ್ನು ಬಿದ್ದು ಫಿಲಂ ಚೇಂಬರ್‌ಗೆ ಒತ್ತಡ ಹೇರಿತ್ತು. ಆದರೂ, ಸಮಿತಿ ರಚಿಸಲು ವಿಳಂಬ ಮಾಡುತ್ತಿದ್ದ ಫಿಲಂ ಚೇಂಬರ್ ವಿರುದ್ದ 2024ರ ನವೆಂಬರ್ 28ರಂದು ಪಾಶ್ ಕಾಯ್ದೆಯ ನೋಡಲ್ ಅಧಿಕಾರಿಯಾಗಿರುವ ಬೆಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ದೂರು ನೀಡಿತ್ತು.
ಡಿಸೆಂಬರ್ 14, 2024ರಂದು ಫಿಲಂ ಚೇಂಬರ್‌ಗೆ ಹೊಸ ಆಡಳಿತ ಬಂದ ಬಳಿಕವೂ, ಆಂತರಿಕ ಸಮಿತಿ ರಚಿಸುವ ಆಗ್ರಹ ಹೆಚ್ಚಾಯಿತು. ಹಾಗಾಗಿ, ಕೊನೆಗೂ ಫಿಲಂ ಚೇಂಬರ್ ಸಮಿತಿ ರಚಿಸಿದೆ. ಆದರೆ, ನಿಯಮಗಳನ್ನು ಉಲ್ಲಂಘಿಸಿದೆ.
ವಿರೋಧ ವ್ಯಕ್ತಪಡಿಸಿದ ಫೈರ್
ಫಿಲಂ ಚೇಂಬರ್ ರಚಿಸಿರುವ ಹೊಸ ಆಂತರಿಕ ಸಮಿತಿ ಅಥವಾ ಪಾಶ್ ಸಮಿತಿಗೆ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ (ಫೈರ್)’ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹೊಸ ಆಂತರಿಕ ಸಮಿತಿ ಅದರ ರಚನೆಯ ಉದ್ದೇಶಗಳನ್ನು ಪೂರೈಸುವ ನಂಬಿಕೆ ನಮಗಿಲ್ಲ. ಸಮಿತಿಯಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಮತ್ತು ಕನಿಷ್ಠ ಇಬ್ಬರು ಲಿಂಗ ಹಕ್ಕುಗಳಿಗಾಗಿ ಕೆಲಸ ಮಾಡಿದವರು ಅಥವಾ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ಕಾನೂನು ಜ್ಞಾನ ಹೊಂದಿರುವವರು ಇರಬೇಕು ಎಂದು ಫೈರ್ ಹೇಳಿದೆ.
ನಿಯಮದ ಪ್ರಕಾರ, ಹೊಸ ಸಮಿತಿಯ 7 ಮಂದಿ ಸದಸ್ಯರಲ್ಲಿ ಕನಿಷ್ಠ 4 ಮಂದಿ ಮಹಿಳೆಯರು ಇರಬೇಕಿತ್ತು. ಆದರೆ ಇಲ್ಲಿ ಇಬ್ಬರು ಮಾತ್ರ ಇದ್ದಾರೆ. ಫಿಲಂ ಚೇಂಬರ್‌ನಲ್ಲಿ ಕಳೆದ 6 ತಿಂಗಳಿನಿಂದ ಲಿಂಗ ಸಮಾನತೆ ಅಥವಾ ಲಿಂಗ ನ್ಯಾಯವನ್ನು ವಿರೋಧಿಸುತ್ತಿದ್ದ ಒಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ಲೈಂಗಿಕ ಕಿರುಕುಳ ಅಪರಾಧಿಗಳು/ಪರಭಕ್ಷಕರನ್ನು ಬೆಂಬಲಿಸುವ ಮೂಲಕ ಲಿಂಗ ಘನತೆಯನ್ನು ವಿರೋಧಿಸುವ ಇಂತಹ ವ್ಯಕ್ತಿಗಳು ಆಂತರಿಕ ಸಮಿತಿಯಲ್ಲಿ ಮಾತ್ರವಲ್ಲದೆ, ಫಿಲಂ ಚೇಂಬರ್ ಅನ್ನು ಪ್ರತಿನಿಧಿಸಲೂ ಅನರ್ಹರು ಎಂದಿದೆ.

ಹೊಸದಾಗಿ ರಚಿಸಲಾದ ಸಮಿತಿಗೆ ಈಗ ಅಥವಾ ಭವಿಷ್ಯದಲ್ಲಿ ಬಲಿಪಶುಗಳಿಗೆ ನ್ಯಾಯ ಒದಗಿಸುವುದು ಬಿಡಿ, ಲೈಂಗಿಕ ಕಿರುಕುಳ ಮತ್ತು ‘ಕಾಸ್ಟಿಂಗ್ ಕೌಚ್’ ಪ್ರಕರಣಗಳನ್ನು ಚಿಂತನಶೀಲವಾಗಿ ನಿರ್ವಹಿಸಲು ಸಾಧ್ಯವಾಗದಿರಬಹುದು ಎಂದು ಫೈರ್ ಕಳವಳ ವ್ಯಕ್ತಪಡಿಸಿದೆ.
ಯಾವುದೇ ಸಂಸ್ಥೆಯು ಎಷ್ಟೇ ಸದುದ್ದೇಶವನ್ನು ಹೊಂದಿದ್ದರೂ, ಅದರ ಸದಸ್ಯರ ಅರ್ಹತೆಯ ಮೇಲೆ ನಿಂತಿರುತ್ತದೆ. ಪಾಶ್ ಮಾರ್ಗಸೂಚಿಗಳ ಅಡಿಯಲ್ಲಿ ಒದಗಿಸಲಾದ ಮಾನದಂಡಗಳನ್ನು ಪೂರೈಸುವ ಸದಸ್ಯರನ್ನು ಆಂತರಿಕ ಸಮಿತಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. ರಾಜ್ಯ ಮಹಿಳಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ಫೈರ್ ಹೇಳಿದೆ.


