ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಸೆಪ್ಟೆಂಬರ್ 16 ರಂದು ಮಹಿಳಾ ಕಲಾವಿದರೊಂದಿಗೆ ಸಭೆ ನಡೆಸಲಿದೆ.
ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಯವರು ಪತ್ರ ಬರೆದಿರುವ ಹಿನ್ನೆಲೆ, ಕೆಎಫ್‌ಸಿಸಿ ಸಭೆ ಕರೆದಿದೆ ಎಂದು ವರದಿಗಳು ಹೇಳಿವೆ.
ನಾಗಲಕ್ಷ್ಮಿ ಚೌಧರಿ ಅವರು ತಮ್ಮ ಪತ್ರದಲ್ಲಿ ಕೇರಳದ ಹೇಮಾ ಸಮಿತಿ ವರದಿಯನ್ನು ಉಲ್ಲೇಖಿಸಿದ್ದು, ಲೈಂಗಿಕ ದೌರ್ಜನ್ಯ, ಕಿರುಕುಳ, ಬೆದರಿಕೆಗಳು ಮತ್ತು ಮಾನಸಿಕ ಹಿಂಸೆ ಸೇರಿದಂತೆ ಕೇರಳ ಚಲನಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹಲವು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿರುವುದರಿಂದ ಕಲಾವಿದರು ಸಭೆ ಹಾಜಾರಾಗುವ ಸಾಧ್ಯತೆಯ ಬಗ್ಗೆ ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 16ರ ತಾತ್ಕಾಲಿಕ ದಿನಾಂಕವನ್ನು ಸಭೆಗೆ ನಿಗದಿಪಡಿಸಲಾಗಿದೆ. ಸೋಮವಾರ (ಸೆ. 9) ಸಭೆಯ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ” ಎಂದು ಸುರೇಶ್ ಹೇಳಿದ್ದಾರೆ.
ಲೈಂಗಿಕ ಹಿಂಸೆ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ’ (FIRE)ಈಗಾಗಲೇ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಆರಂಭದಲ್ಲಿ FIRE ಮುಖ್ಯಮಂತ್ರಿಗೆ ಪತ್ರ ಬರೆದಿತ್ತು. ಅದಕ್ಕೆ ಸಿನಿಮಾ ಕಲಾವಿದರು, ಸಾಹಿತಿಗಳು, ಪತ್ರಕರ್ತರು ಮತ್ತು ಹೋರಾಟಗಾರರು ಸೇರಿದಂತೆ 153 ಮಂದಿ ಸಹಿ ಹಾಕಿದ್ದರು. ಬಳಿಕ FIRE ವತಿಯಿಂದ ನಟ, ನಟಿಯರು ಸಿಎಂ ಭೇಟಿಯಾಗಿ ಸಮಿತಿ ರಚನೆಗೆ ಆಗ್ರಹಿಸಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಪ್ರತ್ಯೇಖವಾಗಿ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
“ಚಿತ್ರರಂಗದ ಹಲವು ವಿಷಯಗಳಲ್ಲಿ ಮೌನ ವಹಿಸಿರುವ ಇತಿಹಾಸ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಲಾವಿದರ ಸಂಘಕ್ಕೆ ಇದೆ. ಈ ಹಿಂದೆ ಗೀತರಚನೆಕಾರ ಮತ್ತು ಸಂಗೀತ ಸಂಯೋಜಕ ಹಂಸಲೇಖ ಅವರನ್ನು ಗುರಿಯಾಗಿಸಿ ಅಕ್ಷರ, ಭಾಷಣ ದಾಳಿಯಾದಾಗ ಈ ಸಮಿತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತನ್ನ ಕಲಾವಿದರನ್ನು ಬೆಂಬಲಿಸುವ ಕಾರ್ಯವನ್ನೂ ಮಾಡಿಲ್ಲ ಎಂದು” ದಿ ನ್ಯೂಸ್ ಮಿನಿಟ್ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಟೀಕಿಸಿದೆ.
ಕೊಲೆ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿರುವ ನಟ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಆರೋಪ 2011ರಲ್ಲಿ ಕೇಳಿ ಬಂದಿತ್ತು. ಈ ವಿಚಾರದಲ್ಲಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ರಾಜಿ ಪಂಚಾಯಿತಿ ಮಾಡಲು ಆಗ ದಿವಗಂತ ನಟ ಅಂಬರೀಶ್ ಮಧ್ಯಸ್ಥಿಕೆ ವಹಿಸಿದ್ದರು. ಇದರ ಫಲವಾಗಿ ವಿಜಯಲಕ್ಷ್ಮಿ ರಾಜಿಗೆ ಒಪ್ಪಿಕೊಂಡರೂ ಒಂದು ಷರತ್ತು ವಿಧಿಸಿದ್ದರು. ತನ್ನ ವೈವಾಹಿಕ ಜೀವನಲ್ಲಿ ಮಧ್ಯ ಪ್ರವೇಶಿಸಿದ ಆರೋಪದ ಮೇಲೆ ನಟಿ ನಿಕಿತಾ ತುಕ್ರಾಲ್ ಅವರನ್ನು ಕನ್ನಡ ಚಲನಚಿತ್ರೋದ್ಯಮದಿಂದ ನಿಷೇಧಿಸಬೇಕೆಂದು ಅವರು ಒತ್ತಾಯಿಸಿದ್ದರು. ಅದಕ್ಕೆ ಒಪ್ಪಿದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ನಿಕಿತಾ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಿತ್ತು.
ಮತ್ತೊಂದು ಘಟನೆಯಲ್ಲಿ , 2015 ರಲ್ಲಿ ತಮ್ಮ ‘ವಿಸ್ಮಯ’ ಚಿತ್ರದ ಚಿತ್ರೀಕರಣ ವೇಳೆ ನಟ ಅರ್ಜುನ್ ಸರ್ಜಾ ಅವರು ಕಿರುಕುಳ ನೀಡಿದ್ದಾರೆ ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಆ ಬಳಿಕ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಯಿತು ಎಂದು ಸ್ವತಃ ಶ್ರುತಿ ಹರಿಹರನ್ ಹೇಳಿಕೊಂಡಿದ್ದರು. ಶ್ರುತಿ ಅವರ ಆರೋಪ ಸಂಬಂಧ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಬದಲು ಫಿಲ್ಮ್ ಚೇಂಬರ್ ಇಬ್ಬರ ನಡುವೆ ‘ರಾಜಿ’ ಮಾಡಲು ಪ್ರಯತ್ನಿಸಿತ್ತು. ಆದರೆ, ಶ್ರುತಿ ತನ್ನ ಆರೋಪಗಳನ್ನು ಹಿಂಪಡೆಯಲು ನಿರಾಕರಿಸಿದ್ದರು. ಬಳಿಕ ಅರ್ಜುನ್ ಸರ್ಜಾ ಅವರು ಶ್ರುತಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ : ಕೊಯಮತ್ತೂರು | 12 ಮಂದಿ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ: ವೈದ್ಯನ ಬಂಧನ


