ದೇಶದಲ್ಲಿ ಓಮಿಕ್ರಾನ್ ಆತಂಕ ಉಂಟಾಗಿದ್ದು, ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಮುನ್ನೆಚ್ಚರಿಕೆ ನೀಡಿವೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸೋಣ, ಯಾವ ಕಾರಣಕ್ಕೂ ಮತ್ತೊಂದು ಸಾವಿನ ಅಲೆಗೆ ಅವಕಾಶ ಕೊಡುವುದು ಬೇಡ. ಅಂಥ ಸಾವಿನ ಮೆರವಣಿಗೆ ಮತ್ತೆ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವನಾತ್ಮವಾಗಿ ಟ್ವೀಟ್ ಮಾಡಿದ್ದಾರೆ.
“ಕೋವಿಡ್ ಮೊದಲ ಅಲೆಯ ಆತಂಕ, ಎರಡನೇ ಅಲೆ ಸೃಷ್ಟಿಸಿದ ನರಕಯಾತನೆ ಎಂಥದ್ದು ಎಂದು ನಾವೆಲ್ಲ ಕಂಡು, ಅನುಭವಿಸಿದ್ದೇವೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಬದುಕುಳಿಯಲು ಪ್ರಾಣವಾಯುವೂ ಸಿಗದೇ ಉಸಿರು ಚೆಲ್ಲಿದ ಜೀವಗಳನ್ನು ನೆನೆಸಿಕೊಂಡರೆ ಕಣ್ಣುಗಳ ಕಟ್ಟೆಯೊಡೆಯುತ್ತದೆ. ಅಂಥ ಸಾವಿನ ಮೆರವಣಿಗೆ ಮತ್ತೆ ಬೇಡ. ಯಾರೂ ಎಚ್ಚರ ತಪ್ಪುವುದು ಬೇಡ” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಓಮಿಕ್ರಾನ್ ಆತಂಕ: ಸೌತ್ ಆಫ್ರಿಕಾದಿಂದ ಬಂದ ವ್ಯಕ್ತಿಗೆ ಸೋಂಕು, 3 ದೇಶಗಳಿಂದ ವಿಮಾನಯಾನ ಬಂದ್ ಮಾಡಿ- ಸಿಎಂ ಬೊಮ್ಮಾಯಿ
“ಕೊರೊನಾ ಹೊಸ ತಳಿ ಓಮಿಕ್ರಾನ್ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ವರದಿ ಇದೆ. ಭಾರತವೂ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಮಾರಕ ಮಾರಿ ಪುನಾ ಅಬ್ಬರಿಸುತ್ತಿದೆ. ಕೇಂದ್ರ ಸರಕಾರ, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಎಲ್ಲೆಡೆ ಕೆನ್ನಾಲಗೆ ಚಾಚಿರುವ ಕೊರೋನಾ ಹೊಸ ತಳಿಯನ್ನೆದುರಿಸಲು ನಮಗೊಂದಿಷ್ಟು ತಾಳ್ಮೆ ಬೇಕಿದೆ” ಎಂದಿದ್ದಾರೆ.
“ಕೊರೊನ ಶಿಷ್ಟಾಚಾರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸ್, ದೈಹಿಕ ಅಂತರ ಪಾಲನೆ ಮಹಾಮಾರಿ ನಿಯಂತ್ರಣಕ್ಕಿರುವ ಸರಳಸೂತ್ರಗಳು. ಅಗತ್ಯವಿದ್ದರೆ ಓಡಾಡಿ. ಹೊರಗೆ ಬಂದಾಗ ಮುನ್ನೆಚ್ಚರಿಕೆ ಜತೆಗೆ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಯಾವ ಕಾರಣಕ್ಕೂ ಮತ್ತೊಂದು ಸಾವಿನ ಅಲೆಗೆ ಅವಕಾಶ ಕೊಡುವುದು ಬೇಡ. ಇದು ನನ್ನ ವಿನಮ್ರ ಪ್ರಾರ್ಥನೆ” ಎಂದು ಜನಸಾಮಾನ್ಯರಲ್ಲಿ ಮನವಿ ಮಾಡಿದ್ದಾರೆ.
ಇತ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಓಮಿಕ್ರಾನ್ ಬಗ್ಗೆ ರಾಜ್ಯದಲ್ಲಿ ಕಟ್ಟುನಿಟ್ಟನ ಕ್ರಮ ಕೈಗೊಳ್ಳುತ್ತಿರುವುದರ ಕುರಿತು ಮಾಹಿತಿ ನೀಡಿದ್ದಾರೆ. “ಹೊರ ದೇಶದಿಂದ ಆಗಮಿಸುವ ಜನರನ್ನು ತಪಾಸಣೆಗೆ ಒಳಪಡಿಸಿ ನೆಗಟಿವ್ ರಿಪೋರ್ಟ್ ಬಂದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಇಲ್ಲವಾದಲ್ಲಿ ಕಂಟೈನ್‌ಮೆಂಟ್ ಸ್ಥಳಕ್ಕೆ ಸ್ಥಳಾಂತರಿಸುವುದು. ವಿಶೇಷವಾಗಿ ಓಮಿಕ್ರಾನ್ ಹೊಸ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ಹಾಂಕಾಂಗ್, ಬೊಟ್ಸ್ವಾನಾ ಈ ಮೂರು ದೇಶಗಳಿಂದ ನಗರಕ್ಕೆ ಪ್ರಯಾಣಿಕರ ಆಗಮನವನ್ನು ಸಂಪೂರ್ಣವಾಗಿ ನಿಷೇದಿಸಬೇಕೆನ್ನುವ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ” ಎಂದು ತಿಳಿಸಿದ್ದಾರೆ.


