ಕರ್ನಾಟಕ ಸರ್ಕಾರ ಕಾರ್ಮಿಕರ ದಿನವಾದ ಮೇ 1ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೊಂದಿಗೆ ಸಂಯೋಜಿತವಾಗಿರುವ 12,692 ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿದೆ.
ವಿಶೇಷ ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 12,692 ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಸುಮಾರು 9,000 ವಾಹನ ಚಾಲಕರು, ಸಹಾಯಕರು ಮತ್ತು ನಿರ್ವಾಹಕರನ್ನು ಕಾಯಂಗೊಳಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಪೌರಕಾರ್ಮಿಕರನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸಲು, ಅವರ ವೇತನವನ್ನು 7,000 ರೂ.ಗಳಿಂದ 17,000 ರೂ.ಗಳಿಗೆ ಹೆಚ್ಚಿಸಿ, ನೇರ ಬ್ಯಾಂಕ್ ವರ್ಗಾವಣೆಯ ವ್ಯವಸ್ಥೆ ಜಾರಿಗೊಳಿಸಲು ಹೇಗೆ ಶ್ರಮಿಸಿದ್ದರು ಎಂಬುದನ್ನು ಸಿಎಂ ಸಿದ್ದರಾಮಯ್ಯ ಕಾರ್ಮಿಕರ ದಿನಾಚರಣೆಯಲ್ಲಿ ನೆನಪಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಉಪಸ್ಥಿತರಿದ್ದರು. ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶ್ಲಾಘಿಸಿದ್ದಾರೆ. “ನೀವು ಬೆಂಗಳೂರಿನ ಸ್ವಚ್ಛತೆಯ ಸೇನಾನಿಗಳು. ನಿಮ್ಮ ಪ್ರಯತ್ನದಿಂದ ಬೆಂಗಳೂರು ಜಾಗತಿಕ ಮೆಚ್ಚುಗೆಯನ್ನು ಗಳಿಸಿದೆ” ಎಂದು ಡಿಕೆಶಿ ಕೊಂಡಾಡಿದ್ದಾರೆ.
ಚುನಾವಣೆಯ ಸಮಯದಲ್ಲಿ ನೀಡಿದ್ದ ಪ್ರಮುಖ ಭರವಸೆಯಾದ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ಮಾಡುವ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದು ಇದೇ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪೌರ ಕಾರ್ಮಿಕರನ್ನು ಕಾಯಂಗೊಳಿಸುವಿಕೆ 2013ರಲ್ಲಿ ಪ್ರಾರಂಭವಾದ ದೀರ್ಘ ಪ್ರತಿಭಟನೆಯ ಫಲವಾಗಿದೆ. ಚಂದ್ರಶೇಖರ್ ಸಮಿತಿಯ 2013ರ ಶಿಫಾರಸುಗಳು ಮತ್ತು ಅವುಗಳ ಸಂಪೂರ್ಣ ಅನುಷ್ಠಾನಕ್ಕಾಗಿ ಪ್ರಬಲ ಆಗ್ರಹಗಳು ವ್ಯಕ್ತವಾದ ಬಳಿಕ, ಕಾಂಗ್ರೆಸ್ ಸರ್ಕಾರ 2016ರಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಲು ನಿರ್ಧರಿಸಿತ್ತು. ಆ ನಿರ್ಧಾರವನ್ನು ಈಗ ಭಾಗಶಃ ಜಾರಿಗೆ ತಂದಿದೆ.
2016ಕ್ಕಿಂತ ಮೊದಲು, ಕಸ ಗುಡಿಸುವವರು ಮತ್ತು ತ್ಯಾಜ್ಯ ಸಂಗ್ರಹಕಾರರು ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಡಬಲ್ ಬಿಲ್ಲಿಂಗ್ ಮತ್ತು ಹಣ ದುರುಪಯೋಗದಂತಹ ಸಮಸ್ಯೆಗಳು ಗುತ್ತಿಗೆ ವ್ಯವಸ್ಥೆಯಲ್ಲಿ ಇತ್ತು. ಬಳಿಕ ಬಿಬಿಎಂಪಿ ಬಯೋಮೆಟ್ರಿಕ್ ದೃಢೀಕರಣವನ್ನು ಪರಿಚಯಿಸಿತು. ಪೌರಕಾರ್ಮಿಕರ ಸಂಖ್ಯೆಯನ್ನು 32,000 ದಿಂದ ಸುಮಾರು 18,000 ಕ್ಕೆ ಇಳಿಸಿತು. ವೇತನ, ಭತ್ಯೆ, ಇಪಿಎಫ್, ಗ್ರಾಚ್ಯುಟಿ ಮತ್ತು ಆರೋಗ್ಯ ವಿಮೆಯಂತಹ ಪ್ರಯೋಜನಗಳ ಅಡಿಯಲ್ಲಿ ಬರುವ ಎಲ್ಲಾ ಹಣವನ್ನು ನೇರ ಪಾವತಿ ವ್ಯವಸ್ಥೆ ಮಾಡಿತು.
₹39,000 ಸಂಬಳ, ₹10ಲಕ್ಷ ಇಡುಗಂಟು, ₹6,000 ಪಿಂಚಣಿ
ಕಾಯಂ ನೇಮಕಾತಿ ಸೌಲಭ್ಯ ಪಡೆದಿರುವ 12,692 ಪೌರ ಕಾರ್ಮಿಕರಿಗೆ ಇನ್ನು ಮುಂದೆ ತಿಂಗಳಿಗೆ ₹ 39,000 ವೇತನ, ನಿವೃತ್ತಿಯ ವೇಳೆ ₹10ಲಕ್ಷ ಇಡುಗಂಟು ಮತ್ತು ₹6,000 ಪಿಂಚಣಿ ಸಿಗಲಿದೆ.
“ಬಿಬಿಎಂಪಿಯ ‘ಡಿ ದರ್ಜೆ’ ನೌಕರರಿಗೆ ಸಿಗುವ ಸಂಬಳ ಮತ್ತು ಇತರ ಎಲ್ಲಾ ಸವಲತ್ತುಗಳು ಪೌರಕಾರ್ಮಿಕರಿಗೂ ಸಿಗಲಿವೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿಂದನೆ: ಸಿಟಿ ರವಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ


