ಬೆಂಗಳೂರು ವಕೀಲರ ಸಂಘ (ಎಎಬಿ)ದ ಆಡಳಿತ ಮಂಡಳಿ ಮತ್ತು ಕಾರ್ಯಕಾರಿಣಿಯ ವಿವಿಧ ಹುದ್ದೆಗಳಲ್ಲಿ ಮಹಿಳಾ ವಕೀಲರಿಗೆ ಶೇಖಡ 33ರಷ್ಟು ಮೀಸಲಾತಿ ನೀಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಎಎಬಿ, ರಾಜ್ಯ ವಕೀಲರ ಪರಿಷತ್ತು ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್ ಬುಧವಾರ (ಜ.1) ಆದೇಶಿಸಿದೆ. ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ.
ಎಎಬಿ ಸದಸ್ಯೆ, 26 ವರ್ಷದ ವಕೀಲೆ ದೀಕ್ಷಾ ಎನ್.ಅಮೃತೇಶ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಈ ಆದೇಶ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ)ನಲ್ಲಿ ಮಹಿಳಾ ವಕೀಲರಿಗೆ ವಿವಿಧ ಹುದ್ದೆಗಳನ್ನು ಮೀಸಲಿಡಲು ಮೇ 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ ಆಧಾರದ ಮೇಲೆ ಎಎಬಿಯಲ್ಲಿಯೂ ಶೇ. 33ರಷ್ಟು ಹುದ್ದೆಗಳನ್ನು ಮಹಿಳಾ ವಕೀಲರಿಗೆ ಮೀಸಲಿಡಲು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.
ಬೆಂಗಳೂರು ವಕೀಲರ ಸಂಘದ ಹಾಲಿ ಪದಾಧಿಕಾರಿಗಳ ಅಧಿಕಾರವಧಿ 2024ರ ಡಿಸೆಂಬರ್ 19ರಂದು ಕೊನೆಗೊಂಡಿದೆ. 2025ರ ಫೆಬ್ರವರಿ 2ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನಿಗದಿಪಡಿಸುವಂತೆ ಬೆಂಗಳೂರು ವಕೀಲರ ಸಂಘ ಸೇರಿದಂತೆ ಅರ್ಜಿಯಲ್ಲಿ ಉಲ್ಲೇಖಿಸಿರುವ ಇತರೆ ಪ್ರತಿವಾದಿಗಳಿಗೆ ನಾವು 2024ರ ಡಿಸೆಂಬರ್ 23ರಂದು ಮನವಿ ಸಲ್ಲಿಸಿದ್ದೇವೆ. ಆದರೆ, ಅದನ್ನು ಪರಿಗಣಿಸಿಲ್ಲ ಎಂದು ವಕೀಲೆ ದೀಕ್ಷಾ ಎನ್.ಅಮೃತೇಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
“ಎಎಬಿಯ ಆಡಳಿತ ಮಂಡಳಿಯು ಐತಿಹಾಸಿಕವಾಗಿ ಪುರುಷ ವಕೀಲರ ಪ್ರಾಬಲ್ಯ ಹೊಂದಿದ್ದು, ಮಹಿಳೆಯರ ಪ್ರಾತಿನಿಧ್ಯ ಬಹಳ ಕಡಿಮೆಯಿದೆ. 2021-24ರಲ್ಲಿ 29 ಆಡಳಿತ ಮಂಡಳಿ ಸದಸ್ಯರ ಪೈಕಿ ಇಬ್ಬರು ಮಾತ್ರ ಮಹಿಳೆಯರಿದ್ದರು. ಈ ವೈವಿಧ್ಯತೆಯ ಕೊರತೆಯು ವಕೀಲ ವೃತ್ತಿಯು ಎತ್ತಿಹಿಡಿಯಲು ಬಯಸುವ ಸಮಾನತೆ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ದುರ್ಬಲಗೊಳಿಸುತ್ತದೆ. ಲಿಂಗ-ಆಧಾರಿತ ಮೀಸಲಾತಿಗಳನ್ನು ಅನುಷ್ಠಾನಗೊಳಿಸುವ ವಿಫಲತೆಯು ವ್ಯವಸ್ಥಿತ ಅಸಮಾನತೆಗಳನ್ನು ಶಾಶ್ವತಗೊಳಿಸುತ್ತದೆ ಮತ್ತು ಮಹಿಳಾ ವಕೀಲರು ಸಂಘದ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಿಗೆ ಕೊಡುಗೆ ನೀಡುವ ಅವಕಾಶವನ್ನು ನಿರಾಕರಿಸುತ್ತದೆ” ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಮೀಸಲಾತಿ ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಇದನ್ನೂ ಓದಿ : ಪುರುಷ ಭಕ್ತರು ಮೇಲಂಗಿ ತೆಗೆಯುವ ಪದ್ಧತಿ ಕೈಬಿಡಲು ದೇವಸ್ವಂ ಬೋರ್ಡ್ ಮುಂದಾಗಿದೆ : ಕೇರಳ ಸಿಎಂ ಪಿಣರಾಯಿ ವಿಜಯನ್


