“ಡೀಪ್ ಸೈನ್ಸ್ ಮತ್ತು ಸುಧಾರಿತ ಇಂಜಿನಿಯರಿಂಗ್ ವ್ಯವಸ್ಥೆ ಒದಗಿಸಲು ರಾಜ್ಯ ಬದ್ಧವಾಗಿದ್ದು, ಎಐ, ಸೈಬರ್-ಭದ್ರತೆ, ದತ್ತಾಂಶ ವಿಜ್ಞಾನ, ಅನಿಮೇಷನ್ ಮತ್ತು ರೊಬೊಟಿಕ್ಸ್‌ನಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಇಂದು ಆರಂಭವಾದ ಟೆಕ್ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕ್ವಾಂಟಮ್ ತಂತ್ರಜ್ಞಾನದ ಮಾರ್ಗ ಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ತಂತ್ರಜ್ಞಾನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಮುಂದಾಗಿರುವ ನಮ್ಮ ಸರ್ಕಾರ, ಮುಂದಿನ ಪೀಳಿಗೆಗಾಗಿ ಟೈರ್ 2 ನಗರಗಳನ್ನು ನಾವೀನ್ಯತೆಯ ಕ್ಲಸ್ಟರ್‌ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ” ಎಂದರು. ಜೊತೆಗೆ ತಂತ್ರಜ್ಞಾನದ ವಿಫುಲ ಬಂಡವಾಳ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಹೂಡಿಕೆದಾರರಿಗೆ ಕರೆ ನೀಡಿದರು.
ಇದೇ ವೇಳೆ ಈ ಎಲ್ಲ ಕ್ರಮಗಳು ಕೇವಲ ಆರ್ಥಿಕತೆಯನ್ನು ಕೇಂದ್ರೀಕರಿಸದೇ, ಸಮಾನ ಬೆಳವಣಿಗೆಗೂ ಬದ್ಧವಾಗಿವೆ. ರಾಜ್ಯದ ಪ್ರತಿ ಜಿಲ್ಲೆಯೂ ಹಾಗೂ ಯುವಪೀಳಿಗೆಯು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ನಮ್ಮ ಆಡಳಿತದ ಮಾದರಿಯು ಪಾರದರ್ಶಕತೆ, ನಿರೀಕ್ಷಿತ ನಡೆ ಹಾಗೂ ಸ್ಥಿರತೆಗೆ ಬದ್ಧವಾಗಿದೆ ಎಂದು ಹೇಳಿದರು.
ನಮ್ಮ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ರೂಪಿಸಿವೆ ಎಂದರು. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾಗಲಿ, ಸ್ಟಾರ್ಟ್ ಅಪ್ ಆಗಲಿ, ಶೈಕ್ಷಣಿಕ ಸಂಶೋಧನೆಯಾಗಲಿ, ಯಾವುದೇ ಕ್ಷೇತ್ರದ ಬಂಡವಾಳ ಹೂಡಿಕೆ ಕರ್ನಾಟಕ ರಾಜ್ಯ ತಾಣವಾಗಿವೆ. ಎಐ, ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ಮಾನವ ಪ್ರಗತಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.


