ಮಹಿಳೆಯರ ಆರೋಗ್ಯದ ಕಾಳಜಿಯಿಂದ ಮತ್ತು ಕೆಲಸದ ಸ್ಥಳದಲ್ಲಿ ಒಳಗೊಳ್ಳವಿಕೆಯನ್ನು ಉತ್ತೇಜಿಸುವ ಸಲುವಾಗಿ ಮಹಿಳಾ ಉದ್ಯೋಗಿಗಳಿಗೆ 12 ದಿನಗಳ ವಾರ್ಷಿಕ ಮುಟ್ಟಿನ ರಜೆ ನೀಡುವ ನೀತಿಯನ್ನು ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಐಟಿ ಉದ್ಯೋಗಿಗಳ ಸಂಘ (ಕೆಐಟಿಯು) ರಾಜ್ಯ ಕಾರ್ಮಿಕ ಆಯುಕ್ತ ಹೆಚ್.ಎನ್ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ಮುಟ್ಟಿನ ರಜೆ ನೀಡುವ ನೀತಿ ಜಾರಿಗೆ ತರಲು ಮುಂದಾಗಿದೆ. ಈ ನಡುವೆ 6 ದಿನಗಳ ರಜೆ ಸಾಲುವುದಿಲ್ಲ 12 ದಿನಗಳ ರಜೆ ನೀಡಬೇಕು ಎಂದು ಕೆಐಟಿಯು ಆಗ್ರಹಿಸಿದೆ.
The Karnataka State IT/ITeS Employees Union (KITU) has submitted a memorandum to the Labour Commissioner, urging the Karnataka Government to implement a 12-day annual menstrual leave policy, which is crucial for addressing the health and well-being of lakhs of working women pic.twitter.com/P0xGxnm0Cj
— Karnataka State IT/ITeS Employees Union (@kitu_hq) December 4, 2024
ಕೆಐಟಿಯು ಪದಾಧಿಕಾರಿಗಳಾದ ಸುಹಾಸ್ ಅಡಿಗ, ಚಿತ್ರಾ, ರಶ್ಮಿ ಮತ್ತು ಸಾರಿಕಾ ಅವರು ಡಿಸೆಂಬರ್ 4 ರಂದು ಬುಧವಾರ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಂಕೀರ್ಣ ಆರೋಗ್ಯ ಸವಾಲುಗಳನ್ನು ಪರಿಹರಿಸಲು 12 ದಿನಗಳ ರಜೆ ನೀತಿಯು ಅತ್ಯಗತ್ಯ ಎಂದು ಕೆಐಟಿಯು ನಾಯಕರು ಹೇಳಿದ್ದಾರೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಎದುರಿಸುವ ತೀವ್ರ ಸೆಳೆತ, ಆಯಾಸ ಮತ್ತು ಗಮನಾರ್ಹ ಹಾರ್ಮೋನ್ ಬದಲಾವಣೆಗಳಂತಹ ವಿವಿಧ ಸಮಸ್ಯೆಗಳನ್ನು ಉದಾಹರಣೆ ನೀಡಿ, 12 ದಿನಗಳ ರಜೆ ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಅತಿ ಮುಖ್ಯವಾಗಿದೆ. ಅದು ಅವರಿಗೆ ನ್ಯಾಯ ಒದಗಿಸುತ್ತದೆ ಎಂದಿದ್ದಾರೆ.
12 ದಿನಗಳ ರಜೆ ಕೆಲಸದ ಸ್ಥಳಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ. ಮಹಿಳೆಯರ ದೀರ್ಘ ಕಾಲದ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಮಹಿಳೆಯರು ಕೆಲಸದಲ್ಲಿ ಬಹಲ ಉತ್ಸುಕತೆಯಿಂದ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಲವು ರಾಷ್ಟ್ರಗಳು ಈಗಾಗಲೇ ಈ ಪ್ರಗತಿಪರ ನೀತಿಯನ್ನು ಅಳವಡಿಸಕೊಂಡಿದೆ ಎಂದು ಕೆಐಟಿಯು ನಾಯಕರು ಹೇಳಿದ್ದಾರೆ.
ಇದನ್ನೂ ಓದಿ : ವರ್ಷಕ್ಕೆ 6 ಮುಟ್ಟಿನ ರಜೆ ಜಾರಿ ಮಾಡಲಿರುವ ರಾಜ್ಯ ಸರ್ಕಾರ: ವರದಿ


