ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಕಾಯ್ದೆಗಳ ರದ್ದತಿ ಮಸೂದೆ 2021 ಮಂಡನೆಯಾಗಿ ಅಂಗೀಕಾರವಾಗಿದೆ. ರೈತರ ಚಾರಿತ್ರಿಕ ಹೋರಾಟಕ್ಕೆ ಅಧಿಕೃತ ಗೆಲುವು ಸಂದಿದೆ. ಆದರೆ ರೈತರ ಪ್ರತಿಭಟನೆ ಮಾತ್ರ ಮುಗಿದಿಲ್ಲ. ಎಂಎಸ್‌ಪಿ ಖಾತ್ರಿಗೆ ಕಾನೂನು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ರೈತರು ಹೋರಾಟ ಮುಂದುವರೆಸಿದ್ದಾರೆ. ದೇಶಾದ್ಯಂತದ ಜನ ದೆಹಲಿ ಗಡಿಗಳನ್ನು ತಲುಪಿ ಬೆಂಬಲ ಸೂಚಿಸುತ್ತಿದ್ದಾರೆ. ಅದರಂತೆ ಕರ್ನಾಟಕದಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿ ಯುವಜನರ ತಂಡ ರೈತ ಹೋರಾಟ ಬೆಂಬಲಿಸಲು ದೆಹಲಿಗೆ ಹೊರಟಿದೆ.
ರಾಜ್ಯದಲ್ಲಿ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತ ಹೋರಾಟ ಕರ್ನಾಟಕ, ಐಕ್ಯ ಹೋರಾಟ ಸಮಿತಿ ಮತ್ತು ಎಐಕೆಎಸ್‌ಸಿಸಿಯ ಭಾಗವಾಗಿರುವ ಕರ್ನಾಟಕ ಜನಶಕ್ತಿ ತಂಡವು ದೆಹಲಿಯಾನ 2 ಹೆಸರಿನಲ್ಲಿ ದೆಹಲಿಗೆ ಹೊರಟಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಕರ್ನಾಟಕ ಜನಶಕ್ತಿ ರಾಜ್ಯಸಮಿತಿ ಸದಸ್ಯರಾದ ಸರೋವರ್ ಬೆಂಕಿಕೆರೆ ಮಾತನಾಡಿ, “ವ್ಯಕ್ತಿಯೊಬ್ಬನ ಪ್ರತಿಷ್ಠೆ ಮತ್ತು ಖಾಸಗೀ ಕಂಪನಿಗಳಿಗೆ ಲಾಭ ಮಾಡಿಕೊಡಲು ಮಾತ್ರ ಬಂದಿದ್ದ ಕರಾಳ ಕೃಷಿ ಕಾಯ್ದೆ ರೈತರ ಹೋರಾಟದಿಂದ ವಾಪಾಸ್ಸಾಗಿದೆ. ಇದು ರೈತರ ಗೆಲುವು ಮಾತ್ರವಲ್ಲ ಇಡೀ ದೇಶದ ಜನರ ಗೆಲವು, ಅನ್ನ ತಿನ್ನುವವರ ಪ್ರತಿಯೊಬ್ಬರ ಗೆಲುವು. ಈ ಭಂಡ ಸರ್ಕಾರ ಕಾಯ್ದೆ ಮಾತ್ರ ವಾಪಾಸ್ ತಗೆದುಕೊಂಡಿದೆ ಆದರೆ ಎಮ್.ಎಸ್.ಪಿ ಅನ್ನು ಶಾಸನಬದ್ಧ ಗೊಳಿಸುವ ತೀರ್ಮಾನ ಇನ್ನೂ ಮಾಡಿಲ್ಲ. ಹುತಾತ್ಮ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಆ ಸಾವುಗಳಿಗೆ ಕ್ಷಮೆ ಕೇಳಬೇಕು. ಹಾಗಾಗಿ ಈ ಹೋರಾಟ ಇನ್ನೂ ಜಾರಿಯಲ್ಲಿದೆ. ಅದನ್ನು ಸೇರಿಕೊಳ್ಳಲು ನಾವು ಹೊರಟಿದ್ದೇವೆ” ಎಂದರು.
ಇದೊಂದು ಐತಿಹಾಸಿಕ ಹೋರಾಟವೇ ಹೌದು. ಇದನ್ನು ಬೆಂಬಲಿಸಿ ರಾಜ್ಯದಲ್ಲಿ ಸೈಕಲ್ ಜಾಥಾ, ಹಳ್ಳಿಯಾನ ದಂತಹ ಪ್ರಚಾರಾಂದೋಲನವನ್ನು ನಾವು ಮಾಡಿದ್ದೆವು. ಎಲ್ಲಾ ಹೋರಾಟಗಳಲ್ಲಿಯೂ ಭಾಗಿಯಾಗಿದ್ದೆವು. ವಿದ್ಯಾರ್ಥಿ ಯುವಜನರಾಗಿ, ರೈತರ ಮಕ್ಕಳಾಗಿ ದೆಹಲಿಯ ರೈತ ಹೋರಾಟದಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಮತ್ತೊಮ್ಮೆ ದೆಹಲಿಗೆ ಹೊರಟಿದ್ದೇವೆ. ರಾಜ್ಯದಲ್ಲಿಯೂ ಕೃಷಿ ವಿರೋಧಿ, ಜನವಿರೋಧಿ ನೀತಿಗಳು ಜಾರಿಯಾಗಿದ್ದು ಅವುಗಳನ್ನೂ ವಾಪಾಸ್ ಪಡೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ ಮತ್ತು ಅಂತಹ ಹೋರಾಟಗಳಲ್ಲಿಯೂ ಭಾಗವಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿಯೂ ಸಹ ಕರ್ನಾಟಕ ಜನಶಕ್ತಿಯ ಭಾಗವಾಗಿ ನೂರಕ್ಕೂ ಹೆಚ್ಚು ರೈತರು, ಯುವಜನರು ದೆಹಲಿ ಗಡಿಗಳಿಗೆ ತಲುಪಿ ಒಂದು ವಾರಗಳ ಕಾಲ ಇದ್ದು ರೈತ ಹೋರಾಟದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳು ವಾಪಸ್: ದೆಹಲಿ ಗಡಿಗಳಲ್ಲಿ ರೈತರ ಸಂಭ್ರಮಾಚರಣೆ



ಕರ್ನಾಟಕ ದಿಂದ ಹೊರಟಿರುವ ಜನ ಶಕ್ತಿ ತಂಡಕ್ಕೆ ಅಭಿನಂದನೆಗಳು. ಇತಿಹಾಸದ ಪುಟಗಳಲ್ಲಿ ಸೇರಿ ಹೋಗಲಿರುವ ಹೋರಾಟದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಬಂಧುಗಳಿಗೆ ಭೀಮ ವಂದನೆಗಳು.