ಹಿರಿಯ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿ ಸಂಘಟನೆಯ ಸಕ್ರಿಯ ಕಾರ್ಯಕರ್ತೆ ಕೆ ಪದ್ಮಾ ಅವರು ಹೋರಾಟದ ಬದುಕನ್ನು ಮುಗಿಸಿದ್ದಾರೆ. ಬುಧವಾರ ರಾತ್ರಿ, ಬೆಂಗಳೂರಿನಲ್ಲಿ ಕೊನೆಯುಸಿಳೆದಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ತಮ್ಮನ್ನು ಬಾಧಿಸುತ್ತಿದ್ದ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸಿದ್ದರು. ನಿರಂತರ ಚಿಕಿತ್ಸೆಯೊಂದಿಗೆ ವರ್ಷಗಳನ್ನು ದೂಡಿದ್ದ ಪದ್ಮಾ ಅವರು ಬುಧವಾರ ಸಾವನ್ನಪ್ಪಿದ್ದಾರೆ. ತಮ್ಮ 62ನೇ ವಯಸ್ಸಿನಲ್ಲಿ ಹೋರಾಟ ಮತ್ತು ಹೋರಾಟದ ಸಂಗಾತಿಗಳನ್ನು ಅಗಲಿದ್ದಾರೆ.
ಮೂಲತಃ ಆಂಧ್ರಪ್ರದೇಶದವರಾದ ಪದ್ಮಾ ಅವರು ಕಳೆದ 20 ವರ್ಷಗಳಿಂದ ಕರ್ನಾಟಕದ ಚಳುವಳಿಗಳಲ್ಲಿ ಸಕ್ರಿಯವಾಗಿದ್ದರು. ಕರ್ನಾಟಕ ಜನಶಕ್ತಿ ಸಂಘಟನೆಯಲ್ಲಿದ್ದ ಪದ್ಮಾ ಅವರು ಕಾರ್ಮಿಕ ಮತ್ತು ಭೂಮಿ-ವಸತಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ತಮ್ಮ ಅನಾರೋಗ್ಯದ ನಡುವೆಯೂ ಹೋರಾಟ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ತೆರೆಮರೆಯ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಪದ್ಮಾ, ವೇದಿಕೆಗಳಿಂದ ದೂರ ಉಳಿದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿರುತ್ತಿದ್ದ ಪದ್ಮಾ ಅವರು ಎಲ್ಲ ವಿಚಾರಗಳಲ್ಲಿಯೂ ‘ಅಪ್‌ಡೇಟ್’ ಆಗಿರುತ್ತಿದ್ದರು. ತೆಲುಗು ಭಾಷೆಯಿಂದ ಹಲವಾರು ಬರಹಗಳನ್ನು ನಿರಂತರವಾಗಿ ಕನ್ನಡಕ್ಕೆ ಅನುವಾದ ಮಾಡುತ್ತಿದ್ದರು. ತೆಲುಗಿನ ಕ್ರಾಂತಿಕಾರಿ ಗೀತೆಗಳನ್ನೂ ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುತ್ತಿದ್ದರು.
ಇಂದು ಸಂಜೆ ಕೆಂಗೇರಿ ಬಳಿಯ ನಾಗದೇವನಹಳ್ಳಿಯ ಮನೆಯ ಬಳಿ ಸಂತಾಪ ಸಭೆ ನಡೆಯಲಿದ್ದು, ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಆಪ್ತರು ತಿಳಿಸಿದ್ದಾರೆ.


