ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಇಂದಿನಿಂದ (ಆಗಸ್ಟ್ 11, ಸೋಮವಾರ) ಆರಂಭಗೊಳ್ಳಲಿದೆ. ಈಗಾಗಲೇ ಆಡಳಿತ ಮತ್ತು ಪ್ರತಿಪಕ್ಷಗಳು ತಮ್ಮ ತಮ್ಮ ಅಸ್ತ್ರಗಳನ್ನು ಸಿದ್ದಪಡಿಸಿಕೊಂಡು ಸದನ ಕಣದಲ್ಲಿ ಕದನಕ್ಕೆ ಸಿದ್ದತೆ ಮಾಡಿಕೊಂಡಿವೆ.
ಆಗಸ್ಟ್ 22ರವರೆಗೆ ಒಟ್ಟು 9 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಗೆ ಸಿಲುಕಿಸಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿದ್ದತೆ ಮಾಡಿಕೊಂಡರೆ, ಅತ್ತ ಆಡಳಿತ ಪಕ್ಷ ಕೂಡ ಕೆಲವೊಂದು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ತಯಾರಿ ನಡೆಸಿದೆ.
ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರದ ಕೊರತೆ, ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ, ಧರ್ಮಸ್ಥಳದ ಎಸ್‌ಐಟಿ ತನಿಖೆ, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಸ್ತೆ ಸಾರಿಗೆ ನೌಕರರ ಮುಷ್ಕರ, ಬೆಂಗಳೂರಿನಲ್ಲಿ ಬಾಲಕನನ್ನು ಅಪಹರಿಸಿ ಹತ್ಯೆ ಮತ್ತು ರಾಜ್ಯದ ವಿವಿದೆಡೆ ನಡೆದ ಕೊಲೆಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು.
ಅಲ್ಲದೆ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ, ಹಳೆ ವರದಿ ಅಂಗೀಕರಿಸದೇ ಹೊಸ ಜಾತಿ ಗಣತಿ ನಿರ್ಧಾರ, ಎಸ್‌ಸಿ-ಎಸ್‌ಟಿಗೆ ಮೀಸಲಾದ ಅನುದಾನ ಬೇರೆಡೆ ವರ್ಗಾವಣೆ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ, ಬಿಜೆಪಿ ಶಾಸಕರನ್ನ ಗುರಿಯಾಗಿಸಿ ಎಫ್‌ಐಆರ್, ಮಹದಾಯಿ ವಿವಾದ ಇತ್ಯಾದಿ ವಿಷಯಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ಏರ್ಪಡುವ ಸಾಧ್ಯತೆ ಇದೆ.
ಆಡಳಿತ ಪಕ್ಷ, ಕಾರು ಚಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದ ಡಾ.ಕೆ ಸುಧಾಕರ್ ವಿರುದ್ದ ಎಫ್‌ಐಆರ್ ದಾಖಲಾಗಿರುವುದು, ರೌಡಿ ಶೀಟರ್ ಹತ್ಯೆ ಪ್ರಕರಣದಲ್ಲಿ ಕೆ.ಆರ್. ಪುರ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿರುವುದು, ಕೇಂದ್ರ ಸರ್ಕಾರ ಸರಿಯಾಗಿ ರಸಗೊಬ್ಬರ ಪೂರೈಸಿಲ್ಲ ಎಂಬ ಆರೋಪ ಮತ್ತು ವಿಶೇಷವಾಗಿ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನದ ಆರೋಪವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷವನ್ನು ಕಟ್ಟಿ ಹಾಕುವ ಸಾಧ್ಯತೆ ಇದೆ.
ಈ ನಡುವೆ, ಒಳಮೀಸಲಾತಿ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸುವಂತೆ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒತ್ತಾಯಿಸುವ ಸಾಧ್ಯತೆ ಇದೆ. ಈ ಬಗ್ಗೆ ಆಗಸ್ಟ್ 16ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದು, ಆ ಬಳಿಕ ಸರ್ಕಾರ ಸದನದಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ.
ಕಳೆದ ಅಧಿವೇಶನದ ಕಲಾಪದ ವೇಳೆ ಅಮಾನತ್ತಿಗೆ ಒಳಗಾಗಿದ್ದ 18 ಶಾಸಕರ ಅಮಾನತು ರದ್ದು ಕ್ರಮವನ್ನು ಸಭಾಧ್ಯಕ್ಷರು ಸೋಮವಾರವೇ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸದನದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತದೆ.
ಈ ಬಾರಿಯ ಅಧಿವೇಶನದಲ್ಲಿ ‘ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ 2025’, ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ)ಮಸೂದೆ 2025 ಸೇರಿದಂತೆ 17 ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ದತೆ ನಡೆಸಿದೆ ಎಂಬ ಮಾಹಿತಿ ದೊರೆತಿದೆ.
ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87ರಷ್ಟು ಹಣ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ


