ರಾಜ್ಯದಲ್ಲಿ ಹೊಸ ವರ್ಷದ ಆಚರಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲು ಯೋಚಿಸಲಾಗುತ್ತಿದ್ದು, ತಜ್ಞರ ಸಮಿತಿಯ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.
’ದೇಶದಲ್ಲಿ ಓಮಿಕ್ರಾನ್ ಹೆಚ್ಚುತ್ತಿರುವಂತೆ ಕರ್ನಾಟಕಕ್ಕೆ ಅಪಾಯವಿದೆ. ವಿದೇಶಿ ಪ್ರಯಾಣಿಕರಿಗಿಂತ ಮಹಾರಾಷ್ಟ್ರ, ಕೇರಳ ಮತ್ತು ಇತ್ತೀಚೆಗೆ ತಮಿಳುನಾಡಿನಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದು ರಾಜ್ಯಕ್ಕೆ ಆತಂಕಕಾರಿ ಅಂಶವಾಗಿದೆ’ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
“ಈಗಿರುವ ನಿಯಮಗಳಲ್ಲಿ ಬದಲಾವಣೆ ಮಾಡುವ ಮುನ್ನ ನಾಳೆ (ಭಾನುವಾರ) ಬೆಂಗಳೂರಿನಲ್ಲಿ ತಜ್ಞರ ಸಮಿತಿ ಸದಸ್ಯರು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿರುವ ಬಗ್ಗೆ ನನಗೆ ಮಾಹಿತಿಯಿದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಓಮಿಕ್ರಾನ್ ಆತಂಕ: ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರದಿಂದ ನಿರ್ಬಂಧ
ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 32 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಈಗಾಗಲೇ ಸಾರ್ವಜನಿಕ ಸಭೆ, ಥಿಯೇಟರ್‌ಗಳಲ್ಲಿ ಮತ್ತು ಮದುವೆ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಅಗತ್ಯವನ್ನು ತಜ್ಞರ ಸಮಿತಿ ಶಿಫಾರಸು ಮಾಡಿಲ್ಲ.
ಓಮಿಕ್ರಾನ್ ರೂಪಾಂತರಿಯ ಆತಂದಿಂದ ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಹೊಸ ವರ್ಷದ ಸಂಭ್ರಮಾಚರಣೆ ಆರಂಭವಾಗಲಿರುವ ಡಿಸೆಂಬರ್ 30 ರಿಂದ ಜನವರಿ 2ರ ವರೆಗೆ ರಾಜ್ಯದಾದ್ಯಂತ ನಿರ್ಬಂಧ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಡಿಜೆ, ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ 50 % ಮಂದಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ತಿಳಿಸಲಾಗಿದೆ.
ಜೊತೆಗೆ ಬ್ರಿಗೇಡ್ ರಸ್ತೆ ಶಾಪ್ಸ್ ಅಂಡ್ ಅಸ್ಟಾಬ್ಲಿಷ್ ಮೆಂಟ್ ಅಸೋಸಿಯೇಷನ್ ಕೂಡ ಈ ವರ್ಷ ಕೂಡ ಸಂಭ್ರಮಾಚರಣೆ ಮಾಡದಿರಲು ಮುಂದಾಗಿದೆ.


