ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ತೊರೆದು ಬಿಜೆಪಿ ಸೇರಿ ಸರ್ಕಾರದಲ್ಲಿ ಮಂತ್ರಿಯಾಗಿರುವ ವಲಸೆ ಸಚಿವರಲ್ಲಿ ಈಗ ಅಭದ್ರತೆಯ ಭೀತಿ ಆರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರದಿಂದಲೇ ತಮ್ಮ ಸ್ಥಾನಗಳ ಕುರಿತು ಚಿಂತಿತರಾಗಿರುವ ವಲಸೆ ಸಚಿವರಿಗೆ ಸೋಮವಾರ ಸ್ಫೋಟಗೊಂಡಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯನವರ ಕುರಿತಾದ ಹಫ್ತಾ ಆಡಿಯೋ ಇನ್ನಷ್ಟು ಭೀತಿಯನ್ನು ಉಂಟುಮಾಡಿದೆ.
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾ ರೆಡ್ಡಿಯವರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಅಬಕಾರಿ ಸಚಿವ ಕೆ. ಗೋಪಾಲಯ್ಯನವರ ವಿರುದ್ಧ ಬೆಂಗಳೂರಿನ ಎಸಿಬಿಯಲ್ಲಿ ದೂರು ದಾಖಲಿಸಿದೆ. ಕರ್ನಾಟಕ ರಾಷ್ಟ್ರ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷ ಮಂಜುನಾಥ್ ಎಸ್, ರಾಜ್ಯ ಕಾರ್ಯದರ್ಶಿ ರಘುರಾಮ್ ಎಸ್ ಭಟ್ ಎಸಿಬಿಯ ಎಡಿಜಿಪಿಯವರಿಗೆ ನೀಡಿರುವ ದೂರಿನಲ್ಲಿ ಕೆ.ಗೋಪಾಲಯ್ಯನವರು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಯುಪಿ ವಿಧಾನಸಭಾ ಚುನಾವಣೆ-ಆದಿತ್ಯನಾಥ್ ಮುಖ್ಯಮಂತ್ರಿ ಅಭ್ಯರ್ಥಿ: ಬಿಜೆಪಿ
ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಲಸೆ ಸಚಿವರಿಂದಲೆ ಸರ್ಕಾರ ದುರ್ಬಲವಾಗಿದೆ ಎಂಬ ಹೇಳಿಕೆಯನ್ನು ನೀಡಿ ಈಗಾಗಲೇ ಮೂಲ ಬಿಜೆಪಿಗರಿಗೆ ವಲಸೆ ಸಚಿವರ ಕುರಿತು ಇರುವ ಅಸಮಾಧಾನವನ್ನು ಹೊರಹಾಕಿದ್ದರು. ಈಗ ಕೆ. ಗೋಪಾಲಯ್ಯ ಅವರು ಜಿಲ್ಲೆಗಳಿಂದ ಪ್ರತಿ ತಿಂಗಳು 5 ಲಕ್ಷ ರೂಪಾಯಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಗೋಪಾಲಯ್ಯನವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ 4 ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ. ಇಷ್ಟಕ್ಕೆ ಗೋಪಾಲಯ್ಯನವರ ಮೇಲಿನ ಲಂಚ ಸ್ವೀಕಾರ ಪ್ರಕರಣ ತಣ್ಣಗಾಗಿಲ್ಲ.
ಅಬಕಾರಿ ಸಚಿವ ಕೆ. ಗೋಪಾಲಯ್ಯನವರ ಮೇಲಿನ ಲಂಚ ಸ್ವೀಕಾರದ ಆಡಿಯೋ ಈಗ ವಿರೋಧ ಪಕ್ಷಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯೆಡಿಯೂರಪ್ಪನವರ ಸರ್ಕಾರದ ಮೇಲೆ ಹರಿಹಾಯಲು ಒಳ್ಳೆಯ ಅಸ್ತ್ರವಾಗಿ ಮಾರ್ಪಟ್ಟಿದೆ. ಈಗಾಗಲೇ ಬಿಜೆಪಿಯ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ಮೇಲೆ 20 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಭಿನ್ನಮತ ಚಟುವಟಿಕೆ, ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ಬಗೆಗಿನ ಅಸಮಾಧಾನದ ಜೊತೆಗೆ ಭ್ರಷ್ಟಾಚಾರದ ಆರೋಪಗಳು ಸರ್ಕಾರದ ವರ್ಚಸ್ಸಿಗೆ ಸರಿಪಡಿಸಲಾಗದ ಧಕ್ಕೆಯನ್ನು ಉಂಟುಮಾಡಿದೆ.
ಯಡಿಯೂರಪ್ಪನವರ ಸರ್ಕಾರ ಭ್ರಷ್ಟ ಸರ್ಕಾರ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರ ತೊಡಗಿದ್ದು ವಿರೋಧ ಪಕ್ಷಗಳು ತಮ್ಮ ಆರೋಪಗಳ ಸುರಿಮಳೆಯ ಮೂಲಕ ಮೂಲಕ ಮತ್ತೊಂದಿಷ್ಟು ತುಪ್ಪ ಸುರಿಯುತ್ತಿದ್ದಾರೆ. ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ಹೊರಬರಲು ಅಬಕಾರಿ ಸಚಿವ ಕೆ. ಗೋಪಾಲಯ್ಯನವರ ತಲೆದಂಡವಾಗಬೇಕು ಎಂಬ ಕೂಗು ಬಿಜೆಪಿ ಸಚಿವರಿಂದಲೇ ಕೇಳಿಬಂದಿದೆ. ಕೆಲವು ಬಿಜೆಪಿ ನಾಯಕರು ಕೆ.ಗೋಪಾಲಯ್ಯನವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಮೊನ್ನೆ ಸೋಮವಾರ ಜೂನ್ 21 ರಂದು ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲಿನ ಅತ್ಯಾಚಾರದ ಪ್ರಕರಣದ ವಿಷಯ ಮತ್ತು ಗೋಪಲಾಯ್ಯನವರ ಆಡಿಯೋ ವಿಷಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಕ್ಯಾಬಿನೆಟ್ ಸಭೆ ಬಳಿಕ ಆರೋಗ್ಯ ಸಚಿವ ಕೆ ಸುಧಾಕರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಶ್ರೀಮಂತ್ ಪಾಟೀಲ್ ಸೇರಿ ಅನೇಕ ವಲಸೆ ಸಚಿವರು ಸಭೆ ಸೇರಿ ರಾಜ್ಯ ರಾಜಕೀಯದ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದಾರೆ.
ಕಳೆದ ಜನವರಿ ನಂತರ ಅಂದರೆ ಹಿಂದಿನ 6 ತಿಂಗಳಿನಲ್ಲಿ ಕೆ.ನಾಗೇಶ್ ಮತ್ತು ರಮೇಶ್ ಜಾರಕಿಹೋಳಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಈ ಹಿಂದೆ ಅಬಕಾರಿ ಸಚಿವರಾಗಿದ್ದ ನಾಗೇಶ್ ಅವರನ್ನು ಕೂಡ ಭ್ರಷ್ಟಾಚಾರದ ಆರೋಪದ ಮೇಲೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೆಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವ ವಲಸೆ ಸಚಿವರಲ್ಲಿ ಸದ್ಯ ನಡುಕ ಆರಂಭವಾಗಿದ್ದು ತಮ್ಮ ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಯಡಿಯೂರಪ್ಪನವರು ಇರುವ ವರೆಗೆ ನಮಗೆ ತೊಂದರೆಯಿಲ್ಲ. ಒಂದು ವೇಳೆ ಯಡಿಯೂರಪ್ಪನವರ ಬದಲಾವಣೆಯಾದರೆ ಮುಂದೆ ನಮ್ಮ ಕತೆ ಏನೆಂದು ತಿಳಿದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ವಲಸೆ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರ ಕೆ. ಗೋಪಾಲಯ್ಯನವರಿಂದ ರಾಜೀನಾಮೆಯನ್ನು ಪಡೆಯುತ್ತದೆಯೇ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿರೋಧ ಪಕ್ಷಗಳು ಮಾತ್ರ ಕೆ.ಗೋಪಾಲಯ್ಯನವರ ರಾಜೀನಾಮೆಗೆ ಬಿಗಿ ಪಟ್ಟು ಹಿಡಿದಿವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಭ್ರಷ್ಟಾಚಾರಗಳಿಂದ ತುಂಬಿ ಹೋಗಿದೆ. ಲಂಚ ನೀಡಿದ ಅಧಿಕಾರಿಗಳಿಗೆ ಮಾತ್ರ ಯಾಕೆ ಶಿಕ್ಷೆ? ಹಫ್ತಾ ಪಡೆಯುವ ಸಚಿವರಿಗೆ ಯಾವುದೇ ಶಿಕ್ಷೆ ಇಲ್ಲವೇ ಎಂದು ಸರಣಿ ಟ್ವೀಟ್‌ಗಳ ಮೂಲಕ ಕೆ.ಗೋಪಲಯ್ಯನವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಆಡಿಯೊ ಬಹಿರಂಗವಾಗುತ್ತಲೇ ಅಬಕಾರಿ ಇಲಾಖೆಯ ಮೂವರು ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಟ್ಟಿರಬಹುದಾದವರಿಗೆ ಶಿಕ್ಷೆ ಕೊಟ್ಟ ಮೇಲೆ ಈಸ್ಕೋಂಡಿರಬಹುದಾದವರಿಗೆ ಶಿಕ್ಷೆ ಇಲ್ಲ ಏಕೆ? ಅಧಿಕಾರಿಗಳ ಮೇಲಿನ ಕ್ರಮ ಭ್ರಷ್ಟಾಚಾರಕ್ಕಾಗಿಯೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದರು ಎಂಬ ಕಾರಣಕ್ಕೋ?
2/4— H D Kumaraswamy (@hd_kumaraswamy) June 22, 2021
ಕರ್ನಾಟಕ ಕಾಂಗ್ರೆಸ್ ಕೂಡ ಕೆ.ಗೋಪಾಲಯ್ಯನವರ ಹಫ್ತಾ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಅಬಕಾರಿ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ಉಗ್ರ ಹೋರಾಟದ ಎಚ್ಚರಿಕೆಯನ್ನೂ ಸಹ ನೀಡಿದೆ.
ಹಿಂದಿನ ಅಬಕಾರಿ ಸಚಿವರು ಅಧಿಕಾರಿಗಳಿಗೆ ಹಣಕ್ಕೆ ಪೀಡಿಸುವುದನ್ನ ಇಂದಿನ ಸಚಿವರೂ ಮುಂದುವರೆಸಿ @BJP4Karnataka ಭ್ರಷ್ಟಾಚಾರದ ಪರಂಪರೆಗೆ ತಮ್ಮ ಕೊಡುಗೆನ್ನೂ ನೀಡಿದ್ದಾರೆ!
ಅಭಕಾರಿ ಲಂಚವತಾರದ ಬಗ್ಗೆ ಹಿಂದೆಯೇ ಪತ್ರ ತಲುಪಿದ್ದರೂ ಸುಭಗನಂತೆ ಮಾತನಾಡುವ ಪ್ರಧಾನಿಯ ಮೌನ ಬಿಜೆಪಿ ಭ್ರಷ್ಟಾಚಾರಕ್ಕೆ 'ಮೋದಿ ಒಪ್ಪಿಗೆ ಮುದ್ರೆ' ಒತ್ತಿದಂತೆ. pic.twitter.com/9oExExUQyc
— Karnataka Congress (@INCKarnataka) June 22, 2021
ಸಚಿವರ ಭ್ರಷ್ಟಾಚಾರಕ್ಕೆ ಅಧಿಕಾರಿಗಳ ತಲೆದಂಡವೇಕೆ?
ಆರೋಪವಿರುವುದು ಸಚಿವರ ವಿರುದ್ಧ, ಸಚಿವರನ್ನು ತನಿಖೆಗೆ ಒಳಪಡಿಸುವುದನ್ನ ಬಿಟ್ಟು ಅಧಿಕಾರಿಗಳನ್ನು ಅಮಾನತುಗೊಳಿಸಿ ಪ್ರಕರಣ ಮುಚ್ಚಿಹಾಕಿ ಸಚಿವರನ್ನು ಬಚಾವು ಮಾಡುವ ಈ ತಂತ್ರ ಸಾಕು.@BSYBJP ಅವರೇ, ಕೂಡಲೇ ಈ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಿ, ಸತ್ಯಾಸತ್ಯತೆ ಹೊರಬರಲಿ.
— Karnataka Congress (@INCKarnataka) June 22, 2021
ಅಬಕಾರಿ ಸಚಿವ ಕೆ.ಗೋಪಾಲಯ್ಯನವರ ರಾಜೀನಾಮೆಗೆ ವಿರೋಧ ಪಕ್ಷಗಳ ಒತ್ತಡ, ಬಿಜೆಪಿಯ ಒಳಗಿನವರ ಒತ್ತಾಯ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ವಲಸೆ ಸಚಿವರಲ್ಲಿ ಇನ್ನಿಲ್ಲದ ನಡುಕ ಆರಂಭವಾಗಿದೆ. ರಾಜ್ಯ ಸರ್ಕಾರದಲ್ಲಿ ತಮಗೆ ಹಿನ್ನಡೆಯಾಗುತ್ತಿರುವುದನ್ನು ಗಮನಿಸುತ್ತಿರುವ ಕೆಲ ವಲಸೆ ಸಚಿವರು ಸದ್ಯದಲ್ಲೇ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಮುಂದೆ ಮೂಲ ಬಿಜೆಪಿಗರ ವಿರುದ್ಧ ದೂರನ್ನು ನೀಡಲು ನಿರ್ಧರಿಸಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕ ಭೇಟಿಯ ಸಂದರ್ಭದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ನಮಗೆ ದೆಹಲಿಗೆ ಬಂದು ಹೈಕಮಾಂಡ್ ಭೇಟಿಯಾಗಲು ಹೇಳಿದ್ದಾರೆ. ನಮ್ಮ ಸಮಸ್ಯೆಗಳನ್ನು ನಾವು ಹೈಕಮಾಂಡ್ ಮುಂದೆ ಇಡುತ್ತೇವೆ. ಕೆಲ ನಾಯಕರು ಬಿಜೆಪಿ ಸರ್ಕಾರ ರಚನೆಯಾಗಲು ನಮ್ಮ ಪಾತ್ರವೂ ಇರುವದನ್ನು ಮರೆತು ನಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ರಾಜೇಶ್ ಹೆಬ್ಬಾರ್
ಇದನ್ನೂ ಓದಿ : ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆ: ಸಚಿವ ಸುಧಾಕರ್ ಮಾಹಿತಿ


