ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ (ಸಿ-ಸೆಕ್ಷನ್) ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುಲು ವಿಶೇಷ ಕಾರ್ಯಕ್ರಮ ಅಥವಾ ಯೋಜನೆ ಜಾರಿಗೊಳಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ (ಡಿ.17) ಹೇಳಿದ್ದಾರೆ.
ವಿಧಾನಪರಿಷತ್‌ನ ಚಳಿಗಾಲದ ಅಧಿವೇಶನದಲ್ಲಿ ಎಂಎಲ್‌ಸಿ ಜಗದೇವ್ ಗುತ್ತೇದಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಸಿಸೇರಿಯ್ ಹೆರಿಗೆ ಅಥವಾ ಸಿ-ಸೆಕ್ಷನ್ ಪ್ರಮಾಣ 2021-2022 ರಲ್ಲಿ ಶೇಖಡ 35 ಇತ್ತು. ಇದು 2022-2023 ರಲ್ಲಿ ಶೇ. 38ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಈ ಪ್ರಮಾಣ ಶೇ.46ರಷ್ಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿ-ಸೆಕ್ಷನ್ ಪ್ರಮಾಣ ಶೇ.61ರಷ್ಟು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಆದಾಯ ಪಡೆಯಲು ಮತ್ತು ಸುಲಭವಾಗಿ ನಿರ್ವಹಿಸುವ ಸಲುವಾಗಿ ಖಾಸಗಿ ಆಸ್ಪತ್ರೆಗಳು ಹೆಚ್ಚು ಸಿಸೇರಿಯನ್ ಹೆರಿಗೆಗಳನ್ನು ಮಾಡುತ್ತಿವೆ. ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯ ಎಂದು ಸಚಿವರು ಹೇಳಿದ್ದಾರೆ.
ಸಿಸೇರಿಯನ್ ಹೆರಿಗೆ ತಡೆಯಲು ಜಾರಿಗೊಳಿಸುವ ಕಾರ್ಯಕ್ರಮದ ಸ್ವರೂಪ ಬಹುತೇಕ ಅಂತಿಮಗೊಂಡಿದೆ. ಮುಂದಿನ ತಿಂಗಳು ಅದನ್ನು ಪ್ರಕಟಿಸಲಾಗುವುದು. ಸಾಮಾನ್ಯ ಹೆರಿಗೆಗೆ ಹೆಚ್ಚಿನ ಆದ್ಯತೆ ಕೊಟ್ಟು, ಅತಿ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಸಿಸೇರಿಯನ್ ಮಾಡಲು ಆಸ್ಪತ್ರೆಗಳ ಸಿಬ್ಬಂದಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಹಲವಾರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ತೆರೆಯುವ ಮೂಲಕ ಬಾಣಂತಿಯರ ಆರೈಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸರ್ಕಾರದ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಚಿವರು ತನ್ನ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ.
ಪ್ರಸ್ತುತ, ಯೋಜಿತ 88 ಆಸ್ಪತ್ರೆಗಳಲ್ಲಿ 60 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ 24/7 ಸಮಗ್ರ ಪ್ರಸೂತಿ ಸೇವೆಗಳನ್ನು ನೀಡಲಾಗುತ್ತಿದೆ. ಸಿಸೇರಿಯನ್‌ಗಿಂತ ಸಾಮಾನ್ಯ ಹೆರಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ 46 ವ್ಯಕ್ತಿಗಳನ್ನು ಬಂಧಿಸಲಾಗಿದೆ. 2023-24 ರಲ್ಲಿ ರಾಜ್ಯದಲ್ಲಿ ಎಂಟು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿದ್ದು, ಸ್ಕ್ಯಾನಿಂಗ್ ಸೆಂಟರ್‌ಗಳು ಮತ್ತು ಆಸ್ಪತ್ರೆಗಳ ಮೇಲೆ ಹೆಚ್ಚಿನ ಕಣ್ಗಾವಲು ಇಟ್ಟಿರುವುದು ಈ ಅಪರಾಧಗಳ ಪತ್ತೆಗೆ ಕಾರಣವಾಯಿತು ಎಂದು ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದ್ದಾರೆ.
2018 ರಿಂದ ‘ಬಾಲಿಕಾ’ ಆನ್‌ಲೈನ್ ಸಾಫ್ಟ್‌ವೇರ್ ಮೂಲಕ ರಾಜ್ಯದ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳ ನೋಂದಣಿಯನ್ನು ಕಡ್ಡಾಯಗೊಳಿಸಿದ್ದು, ಸರ್ಕಾರವು ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (ಪಿಸಿಪಿಎನ್‌ಡಿಟಿ) ಕಾಯ್ದೆಯಡಿಯಲ್ಲಿ ಶಾಸನಬದ್ಧ ಸಮಿತಿಗಳನ್ನು ಜಿಲ್ಲೆಗಳಾದ್ಯಂತ ರಚಿಸಿದೆ. ಭ್ರೂಣಹತ್ಯೆ ತಡೆಗಟ್ಟಲು ಗ್ರಾಮ ಮಟ್ಟದಲ್ಲಿ ಲಿಂಗ ಅನುಪಾತದ ಡೇಟಾವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ನಕಲಿ ವೈದ್ಯರ ಸಮಸ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ದಿನೇಶ್ ಗುಂಡೂರಾವ್, ಕಳೆದ ಮೂರು ವರ್ಷಗಳಲ್ಲಿ ಕೋಲಾರ ಜಿಲ್ಲೆಯೊಂದರಲ್ಲೇ 134 ನಕಲಿ ಕ್ಲಿನಿಕ್‌ಗಳು ಪತ್ತೆಯಾಗಿವೆ ಎಂದು ತಿಳಿಸಿದರು. ಸ್ಥಳೀಯ ಸಮುದಾಯದ ಮುಖಂಡರು, ಧಾರ್ಮಿಕ ವ್ಯಕ್ತಿಗಳು ಮತ್ತು ಕೆಲವು ಶಾಸಕರ ವಿರೋಧವನ್ನು ಉಲ್ಲೇಖಿಸಿದ ಅವರು, ಆಪಾದಿತ ನಕಲಿ ವೈದ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣದ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ


