Homeಕರ್ನಾಟಕ`ಹುಸಿ ರಾಷ್ಟ್ರೀಯತೆ’ ಎದುರು ಕರ್ನಾಟಕದ ಸುದೀರ್ಘ ಸಂಘರ್ಷ: ಟಿ.ಎ.ನಾರಾಯಣಗೌಡ

`ಹುಸಿ ರಾಷ್ಟ್ರೀಯತೆ’ ಎದುರು ಕರ್ನಾಟಕದ ಸುದೀರ್ಘ ಸಂಘರ್ಷ: ಟಿ.ಎ.ನಾರಾಯಣಗೌಡ

ತೇಜಸ್ವಿ ಸೂರ್ಯ, ಸಿ.ಟಿ.ರವಿಯಂಥ ನಾಯಕರುಗಳು ಹಿಂದಿ ಪರವಾಗಿ ಮಾತನಾಡಿರುವುದನ್ನು ಗಮನಿಸಿದ್ದೇವೆ. ಹಿಂದಿ ಸಾಮ್ರಾಜ್ಯಶಾಹಿ ನಮ್ಮೊಳಗೇ ಇಂಥ ಹಿಂದಿ ಏಜೆಂಟರನ್ನು ಸೃಷ್ಟಿಸುತ್ತದೆ.

- Advertisement -
- Advertisement -

ಈ ವರ್ಷ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಸರ್ಕಾರದ ಮಂತ್ರಿಗಳು ಅಧಿಕೃತ ರಾಜ್ಯೋತ್ಸವ ಸಮಾರಂಭಗಳಲ್ಲಿ ಕನ್ನಡ ಧ್ವಜಾರೋಹಣ ನಡೆಸಲಿಲ್ಲ. ಕೇವಲ ರಾಷ್ಟ್ರ ಧ್ವಜಾರೋಹಣ ನಡೆಸಿ, ಕಾರ್ಯಕ್ರಮಗಳನ್ನು ನಡೆಸಲಾಯಿತು. ನಾವು ಅಭಿಮಾನದಿಂದ ಒಪ್ಪಿ ಬಳಸುತ್ತಿರುವ ನಾಡಧ್ವಜಕ್ಕೆ ಅಧಿಕೃತತೆ ಇದೆಯೋ ಇಲ್ಲವೋ ಎಂಬ ಪ್ರಶ್ನೆಗಳು ಆರಂಭಗೊಂಡಿದ್ದು ಕೆಲವು ವರ್ಷಗಳಿಂದ. ದಶಕಗಳಿಂದ ಮ.ರಾಮಮೂರ್ತಿಯವರು ರೂಪಿಸಿದ ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜಾರೋಹಣ ಮಾಡುವ ಪರಿಪಾಠ ಜಾರಿಯಲ್ಲಿ ಇತ್ತು. ಆದರೆ ಭಾರತೀಯ ಜನತಾ ಪಕ್ಷ ಸರ್ಕಾರದ ಕೆಲವು ಮಂತ್ರಿಗಳು ಕಳೆದ ಎರಡು ವರ್ಷಗಳಿಂದ ಈ ಸಂಪ್ರದಾಯವನ್ನು ಮುರಿದಿದ್ದಾರೆ. ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನವೆಂಬರ್ 2ರಂದು `ನಮ್ಮ ಧ್ವಜ ನಮ್ಮ ಹೆಮ್ಮೆ’ ಎಂಬ ಹ್ಯಾಶ್‍ಟ್ಯಾಗ್‍ನಡಿಯಲ್ಲಿ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಹನ್ನೆರಡು ಸಾವಿರಕ್ಕೂ ಹೆಚ್ಚು ಟ್ವೀಟ್‍ಗಳಲ್ಲಿ ಮಂತ್ರಿಗಳ ನಿಲುವನ್ನು ಖಂಡಿಸಲಾಯಿತು. ನಮ್ಮ ಧ್ವಜ ನಮ್ಮ ಹೆಮ್ಮೆ ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್‍ನಲ್ಲಿತ್ತು.

PC : ಈ ಸಂಚೆ

ಹಾಗೆ ನೋಡಿದರೆ ಇದು ಕೇವಲ ಬಾವುಟದ ವಿಷಯವಾಗಿರಲಿಲ್ಲ. ಬಾವುಟವೆಂಬುದು ನಿಮಿತ್ತ ಮಾತ್ರ. ಇತ್ತೀಚಿನ ದಿನಗಳಲ್ಲಿ ಭಾರತ ಒಕ್ಕೂಟ ವ್ಯವಸ್ಥೆಯ ಬೇರುಗಳು ಸಡಿಲವಾಗುತ್ತಿವೆ. ಒಕ್ಕೂಟದ ಸದಾಶಯಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಹತ್ತಿಕ್ಕಲಾಗುತ್ತಿದೆ. ಇದು ಬಹಳ ಸ್ಪಷ್ಟವಾಗಿ ಕನ್ನಡಿಗರ ಅರಿವಿಗೆ ಬರುತ್ತಿದೆ. ಬಾವುಟವೆಂಬುದು ಒಂದು ಸಂಕೇತವಷ್ಟೆ, ಆದರೆ ಸಮಸ್ಯೆ ಬಹಳ ದೊಡ್ಡದಾಗಿದೆ. ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಅದು ಒಂದು ಬಗೆಯ `ಹುಸಿ ರಾಷ್ಟ್ರೀಯತೆ’ಯ ಬೆನ್ನೇರಿದೆ. ಈ ಹುಸಿ ರಾಷ್ಟ್ರೀಯತೆಯು ಇಡೀ ದೇಶದಾದ್ಯಂತ ಎಲ್ಲ ವಿಷಯದಲ್ಲೂ ಏಕತ್ವವನ್ನು ಹೇರಲು ಪ್ರಯತ್ನಿಸುತ್ತದೆ. ಅದು ಪ್ರಾದೇಶಿಕ ಅಸ್ಮಿತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತದೆ. ನಾವು ರಾಷ್ಟ್ರಧ್ವಜವನ್ನು ಗೌರವಿಸುತ್ತೇವೆ. ಅದರ ಜತೆಯಲ್ಲೇ ನಮ್ಮ ನಾಡಧ್ವಜವನ್ನು ಪ್ರೀತಿಸುತ್ತ, ಆದರಿಸುತ್ತ ಬಂದಿದ್ದೇವೆ. ಆದರೆ ನೀವು ನಾಡಧ್ವಜವನ್ನು ಹಾರಿಸಲೇಬಾರದು, ದೇಶಕ್ಕೆಲ್ಲ ಒಂದೇ ಬಾವುಟವಿರಬೇಕು ಎನ್ನುವುದನ್ನು ಈ `ಹುಸಿ ರಾಷ್ಟ್ರೀಯತೆ’ ಹೇಳುತ್ತದೆ.

ಇದನ್ನೂ ಓದಿ: ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸದ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಟ್ವಿಟರ್ ಆಂದೋಲನಕ್ಕೆ ಕರೆ

ಇದು ಒಂದು ಉದಾಹರಣೆ ಮಾತ್ರ. ಬಹುತ್ವವನ್ನು ಘಾಸಿಗೊಳಿಸುವ ಹಲವು ನೀತಿಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸುತ್ತ ಬಂದಿದೆ. ಈ ಹಿಂದೆ ಇದ್ದ ಕಾಂಗ್ರೆಸ್ (ಯುಪಿಎ) ಸರ್ಕಾರವೂ ಇಂಥದ್ದೇ ನೀತಿಗಳನ್ನು ಅನುಸರಿಸುತ್ತಿತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಒಕ್ಕೂಟ ವಿರೋಧಿ ನಡೆಗಳ ವೇಗ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಆಕ್ರಮಣಕಾರಿಯಾಗಿ ತನ್ನ ನೀತಿಗಳನ್ನು ಹೇರುತ್ತಿದೆ. ಕಾಂಗ್ರೆಸ್ ಪಕ್ಷ (ಯುಪಿಎ) ಜಾರಿಗೆ ತರಲು ಯೋಜಿಸಿದ್ದ ಜಿಎಸ್‍ಟಿಯನ್ನು ಬಿಜೆಪಿ ಸರ್ಕಾರ `ಒಂದು ದೇಶ ಒಂದು ತೆರಿಗೆ’ ಹೆಸರಿನಲ್ಲಿ ಜಾರಿಗೆ ತಂದಿತು. ದೇಶಕ್ಕೆಲ್ಲ ಒಂದೇ ಮಾದರಿಯ ತೆರಿಗೆ ವ್ಯವಸ್ಥೆ ಇರಬೇಕು ಎಂಬ ಬಣ್ಣದ ಮಾತಿಗೆ ನಾವು ಬಲಿಯಾದೆವು. ವಾಸ್ತವವಾಗಿ ಜಿಎಸ್‍ಟಿ, ಒಕ್ಕೂಟದ ರಾಜ್ಯಗಳ ಹಕ್ಕನ್ನು ಕೇಂದ್ರ ಸರ್ಕಾರವೇ ಕಿತ್ತುಕೊಳ್ಳುವ ಪ್ರಯತ್ನವಾಗಿದೆ. ಅದರ ಫಲಿತವನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರ ಜಿಎಸ್‍ಟಿ ಒಪ್ಪಂದದ ಪ್ರಕಾರ ಕೊಡಬೇಕಾಗಿದ್ದ ಪರಿಹಾರದ ಹಣವನ್ನು ರಾಜ್ಯ ಸರ್ಕಾರಗಳಿಗೆ ಕೊಡದೆ ಬಾಕಿ ಉಳಿಸಿಕೊಂಡಿದೆ. ಅದು ಇನ್ನೂ ಒಂದು ಹೆಜ್ಜೆ ಮುಂದುಹೋಗಿ, ಬಾಕಿ ಹಣ ಕೊಡಲಾಗದು, ನೀವು ಹಣ ಬೇಕಿದ್ದರೆ ರಿಸರ್ವ್ ಬ್ಯಾಂಕ್‍ನಿಂದ ಸಾಲ ಪಡೆದುಕೊಳ್ಳಿ ಎಂದು ಹೇಳುತ್ತಿದೆ. ಜಿಎಸ್‍ಟಿ ಮಂಡಳಿಯಲ್ಲಿ ಕೇಂದ್ರ ಸರ್ಕಾರ ಶೇ.33.33ರಷ್ಟು ಮತಪ್ರಮಾಣವನ್ನು ಹೊಂದಿರುವುದರಿಂದ ಯಾವುದೇ ತೀರ್ಮಾನವನ್ನಾದರೂ ಅದು ಜಾರಿಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಜಿಎಸ್‍ಟಿ ಮಂಡಳಿಯಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಸಾಂಕೇತಿಕವಷ್ಟೇ. ಜಿಎಸ್‍ಟಿ ವ್ಯವಸ್ಥೆಯ ರಚನೆಯಲ್ಲೇ ಕೇಂದ್ರ ಸರ್ಕಾರ ದೊಡ್ಡಣ್ಣನ ಹಾಗೆ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ತಂತ್ರವನ್ನು ಹೆಣೆಯಲಾಗಿದೆ. ಈಗ ಈ ಬಲೆಗೆ ಎಲ್ಲ ರಾಜ್ಯಗಳು ಸಿಕ್ಕಿಬಿದ್ದಾಗಿದೆ.

ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಕಳೆದ ವರ್ಷ `ಒಂದು ದೇಶ ಒಂದು ಭಾಷೆ’ ಎಂಬ ಹೇಳಿಕೆಯನ್ನು ತೇಲಿಬಿಟ್ಟರು. ಅದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಯಿತು. ಇಡೀ ದೇಶ ಹಿಂದಿಮಯವಾಗಬೇಕು ಎಂಬುದು ಈ ಹೇಳಿಕೆಯ ತಾತ್ಪರ್ಯ. ಭಾರತ ಸ್ವತಂತ್ರಗೊಂಡ ನಂತರ ಅತ್ಯಂತ ವ್ಯವಸ್ಥಿತವಾಗಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುತ್ತ ಬರಲಾಯಿತು. ಈಗ ಬಿಜೆಪಿ ಸರ್ಕಾರ ಗೇರ್ ಬದಲಾಯಿಸಲು ಹೊರಟಿದೆ. ಎಲ್ಲ ರಾಜ್ಯಗಳಲ್ಲೂ ಹಿಂದಿಯೊಂದನ್ನೇ ಬಳಸುವಂತೆ ಮಾಡುವ ಪೂರ್ಣಪ್ರಮಾಣದ ಹಿಂದೀಕರಣಕ್ಕೆ ಅದು ಮುಂದಾಗಿದೆ. ಇಂಥ ಹಿಂದೀಕರಣದ ಪ್ರಯತ್ನಗಳು ಹಿಂದೆ ನಡೆದಾಗೆಲ್ಲ, ದಕ್ಷಿಣದ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ತಮಿಳುನಾಡು ಉಗ್ರಸ್ವರೂಪದಲ್ಲಿ ಪ್ರತಿಭಟಿಸಿತ್ತು. ಆದರೆ ಭಾರತೀಯ ಜನತಾ ಪಕ್ಷ ರಾಜಕೀಯವಾಗಿ ಪ್ರಬಲಗೊಳ್ಳುತ್ತಿರುವಂತೆ, ಆ ಪಕ್ಷದ ಪ್ರಾದೇಶಿಕ ನಾಯಕರುಗಳೇ ಹಿಂದಿಯ ತುತ್ತೂರಿಯನ್ನು ಊದಲು ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ತೇಜಸ್ವಿ ಸೂರ್ಯ, ಸಿ.ಟಿ.ರವಿಯಂಥ ನಾಯಕರುಗಳು ಹಲವಾರು ಸಂದರ್ಭಗಳಲ್ಲಿ ಹಿಂದಿ ಪರವಾಗಿ ಮಾತನಾಡಿರುವುದನ್ನು ನಾವು ಗಮನಿಸಿದ್ದೇವೆ. ಹಿಂದಿ ಸಾಮ್ರಾಜ್ಯಶಾಹಿ ನಮ್ಮೊಳಗೇ ಇಂಥ ಹಿಂದಿ ಏಜೆಂಟರನ್ನು ಸೃಷ್ಟಿಸುತ್ತದೆ. ಇದು ನಿಜಕ್ಕೂ ಅಪಾಯಕಾರಿ.

ಕೇಂದ್ರ ಬಿಜೆಪಿ ಸರ್ಕಾರ `ಒಂದು ದೇಶ ಒಂದು ರೇಷನ್ ಕಾರ್ಡ್’ ವ್ಯವಸ್ಥೆಯನ್ನೂ ಜಾರಿಗೆ ತರುವ ಮಾತುಗಳನ್ನಾಡಿದೆ. ಇದೂ ಕೂಡ ಅತ್ಯಂತ ವ್ಯವಸ್ಥಿತವಾಗಿ ರಾಜ್ಯಗಳನ್ನು, ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳನ್ನು ದುರ್ಬಲಗೊಳಿಸುವ ತಂತ್ರ. ದಕ್ಷಿಣದ ರಾಜ್ಯಗಳು ಮೊದಲಿನಿಂದಲೂ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಪ್ರಗತಿಪರವಾಗಿವೆ, ಸಾಕಷ್ಟು ಮುಂದುವರೆದಿವೆ. ಈ ರಾಜ್ಯಗಳಲ್ಲಿ ಜನಸಾಂದ್ರತೆಯೂ ಕಡಿಮೆ. ಉತ್ತರದ ಬಿಹಾರ, ಉತ್ತರ ಪ್ರದೇಶದಂಥ ಬಡ ರಾಜ್ಯಗಳಲ್ಲಿ ಬಡತನದ ಜತೆಗೆ ಜನಸಾಂದ್ರತೆಯೂ ಹೆಚ್ಚು. ಕೇಂದ್ರ ಸರ್ಕಾರ ಈ ಜನರು ದಕ್ಷಿಣದ ರಾಜ್ಯಗಳಲ್ಲಿ ನೆಲೆಸಲು ಹಲವು ಬಗೆಯ ಅವಕಾಶಗಳನ್ನು ಒದಗಿಸುತ್ತಿದೆ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ರೈಲ್ವೆಯಂಥ ಇಲಾಖೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಮಾತ್ರ ಪರೀಕ್ಷೆಗಳನ್ನು ಮಾಡಿ, ಹಿಂದಿಯನ್ನರೇ ನೇಮಕವಾಗುವಂತೆ ಮಾಡುತ್ತ ಬರಲಾಗುತ್ತಿದೆ. ಅವರೆಲ್ಲ ಈಗ ದಕ್ಷಿಣದ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಇಂಥವರ ಅನುಕೂಲಕ್ಕಾಗಿಯೇ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಹೆಚ್ಚುಹೆಚ್ಚಾಗಿ ತೆರೆಯಲಾಗುತ್ತಿದೆ. `ಒಂದು ದೇಶ ಒಂದು ರೇಷನ್ ಕಾರ್ಡ್’ ಕೂಡ ಇದೇ ತಂತ್ರಗಾರಿಕೆಯ ಮುಂದುವರೆದ ಭಾಗ. ಇದೆಲ್ಲದರ ಪರಿಣಾಮವಾಗಿ ದಕ್ಷಿಣದ ರಾಜ್ಯಗಳಿಗೆ ಉತ್ತರದ ರಾಜ್ಯಗಳಿಂದ ವ್ಯಾಪಕವಾಗಿ ವಲಸೆ ನಡೆಯುತ್ತಿದ್ದು, ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯನ್ನರ ಪ್ರಾಬಲ್ಯ ದಿನೇದಿನೇ ಹೆಚ್ಚಾಗುತ್ತಲೇ ಇದೆ.

PC : Prajavani

ಕರ್ನಾಟಕ ರಕ್ಷಣಾ ವೇದಿಕೆ ಆರಂಭಗೊಂಡಿದ್ದು, 1999ರಲ್ಲಿ. ಅಕೌಂಟೆಂಟ್ ಜನರಲ್ (ಎಜಿ) ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ನೀಡದೇ ಇದ್ದಾಗ ಕರವೇ ತನ್ನ ಮೊದಲ ಪ್ರತಿಭಟನೆಯನ್ನು ದಾಖಲಿಸಿತ್ತು. ಅಲ್ಲಿಂದೀಚಿಗೆ ಇಪ್ಪತ್ತೊಂದು ವರ್ಷಗಳು ಸರಿದು ಹೋಗಿವೆ. ಕರವೇ ಮೊದಲಿನಿಂದಲೂ ಭಾವನಾತ್ಮಕ ಹೋರಾಟಗಳಿಗಿಂತ ಹೆಚ್ಚು ಕನ್ನಡಿಗರ ಬದುಕಿನ ಪ್ರಶ್ನೆಯನ್ನೇ ಮುಖ್ಯವಾಗಿಟ್ಟುಕೊಂಡು ಚಳವಳಿಯನ್ನು ರೂಪಿಸುತ್ತ ಬಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ `ರೈಲ್ವೆಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ನಡೆದ ಹೋರಾಟ’ ಇದಕ್ಕೆ ಒಂದು ಸ್ಪಷ್ಟ ಉದಾಹರಣೆ. ನೈರುತ್ಯ ರೈಲ್ವೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಬಿಹಾರಿಗಳನ್ನೇ ನೇಮಕ ಮಾಡಿಕೊಳ್ಳಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿತ್ತು. ಇದಕ್ಕಾಗಿ ಬಿಹಾರದಿಂದ ಪುಕ್ಕಟೆ ರೈಲುಗಳ ಮೂಲಕ ಅಭ್ಯರ್ಥಿಗಳನ್ನು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಗಳ ಕುರಿತ ಜಾಹೀರಾತುಗಳನ್ನು ಕೇವಲ ಹಿಂದಿ ಪತ್ರಿಕೆಗಳಲ್ಲಿ, ಬಿಹಾರದಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಲಾಗಿತ್ತು. ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಮಾತ್ರವೇ ಪರೀಕ್ಷೆಗಳನ್ನು ಬರೆಯುವ ಅವಕಾಶ ಇದ್ದಿದ್ದರಿಂದ ಕನ್ನಡಿಗರು ಪರೀಕ್ಷೆ ಬರೆದರೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವುದು ಸಾಧ್ಯವಿರಲಿಲ್ಲ. ಕರವೇ ಹಲವು ತಿಂಗಳ ಕಾಲ ತೀವ್ರ ಸ್ವರೂಪದ ಚಳವಳಿಯನ್ನು ರೂಪಿಸಿ ಪರೀಕ್ಷೆ ಮತ್ತು ನೇಮಕಾತಿಯನ್ನು ನಿಲ್ಲಿಸಿತು. ನೈರುತ್ಯ ರೈಲ್ವೆಯ ಹುಬ್ಬಳ್ಳಿ ಮತ್ತು ಬೆಂಗಳೂರಿನ ಪ್ರಧಾನ ಕಚೇರಿಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದವು. ಕರವೇ ಕಾರ್ಯಕರ್ತರು, ಮುಖಂಡರು ಅನೇಕ ರೀತಿಯ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಬೇಕಾಯಿತು. ನಂತರ ಮಮತಾ ಬ್ಯಾನರ್ಜಿ ರೈಲ್ವೆ ಇಲಾಖೆಯ ಸಚಿವರಾದಾಗ, ನಿಯಮಾವಳಿಗಳನ್ನು ಬದಲಿಸಿ, ಹಿಂದಿ, ಇಂಗ್ಲಿಷ್ ಜತೆಯಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆಗಳನ್ನು ಬರೆಯುವ ಅವಕಾಶ ಕಲ್ಪಿಸಿದರು. ಇದಲ್ಲದೆ, ರೈಲ್ವೆ ಇಲಾಖೆ ಇಡೀ ದೇಶದಲ್ಲಿ ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಜಾರಿಗೆ ತಂದರು. ಇದರ ಪರಿಣಾಮವಾಗಿ ಆಯಾ ರಾಜ್ಯದ ನಿರುದ್ಯೋಗಿ ಯುವಕ ಯುವತಿಯರು ಆಯಾ ರಾಜ್ಯದಲ್ಲಿ ಉದ್ಯೋಗ ಪಡೆಯುವಂಥ ವ್ಯವಸ್ಥೆ ಆರಂಭಗೊಂಡಿತು.

ಕರ್ನಾಟಕ ರಕ್ಷಣಾ ವೇದಿಕೆ ಐಬಿಪಿಎಸ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಮೋಸದ ಕುರಿತು ಪ್ರತಿಭಟನೆ ನಡೆಸಿತು. ಸ್ಟೇಟ್ ಬ್ಯಾಂಕ್‍ನಲ್ಲಿ ಕನ್ನಡಿಗರ ನೇಮಕಾತಿಗೆ ಆಗಿರುವ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳು ಕನ್ನಡವನ್ನು ಓದಲು, ಬರೆಯಲು ತಿಳಿದಿರುವುದು ಕಡ್ಡಾಯವೆಂಬ ನಿಯಮವನ್ನು ತಂದಿತು. ಇಂಥ ಹತ್ತಾರು ಸಂದರ್ಭಗಳಲ್ಲಿ ಕನ್ನಡಿಗರ ಬದುಕು, ಉದ್ಯೋಗದ ಹಕ್ಕುಗಳ ಕುರಿತು ಕಳೆದ ಇಪ್ಪತ್ತೊಂದು ವರ್ಷಗಳಿಂದ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದೆ.

ಆದರೆ ಕನ್ನಡಿಗರು ಪ್ರತಿನಿತ್ಯ ಒಂದಲ್ಲೊಂದು ಸಮಸ್ಯೆಯನ್ನು ಎದುರುಗೊಳ್ಳುವ ಸಂದರ್ಭ ಎದುರಾಗಿದೆ. ಕೇಂದ್ರ ಸರ್ಕಾರದ ಬಹುತ್ವ ವಿರೋಧಿ ನೀತಿಗಳು, ಒಂದಿಲ್ಲೊಂದು ಬಗೆಯಲ್ಲಿ ಕನ್ನಡಿಗರನ್ನು ಹಣಿಯುತ್ತಿವೆ. ಹೀಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಮುಂದಿರುವ ಅತ್ಯಂತ ಮುಖ್ಯ ಗುರಿ, ಒಕ್ಕೂಟದ ಮೂಲತತ್ತ್ವಗಳ ಮೇಲೆ ಆಗುತ್ತಿರುವ ದಾಳಿಯನ್ನು ತಡೆಗಟ್ಟುವುದು. ಇದಕ್ಕಾಗಿ ಕರವೇ ಹಲವು ಬಗೆಯಲ್ಲಿ ತಯಾರಿಗಳನ್ನು ಸಹ ಮಾಡಿಕೊಳ್ಳುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ತುರುಕಲು ಯತ್ನಿಸಿದಾಗ ಕರವೇ ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಿ ಅದನ್ನು ತಡೆಗಟ್ಟಿತು. ಈ ಸಂದರ್ಭದಲ್ಲಿ ಒಂದು ದುಂಡು ಮೇಜಿನ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷ.

ಕೇಂದ್ರ ಸರ್ಕಾರದ ಒಕ್ಕೂಟ ವಿರೋಧಿ ನೀತಿಗಳು ಕೇವಲ ಕರ್ನಾಟಕವನ್ನು ಮಾತ್ರ ಬಾಧಿಸುತ್ತಿಲ್ಲ. ಎಲ್ಲ ಹಿಂದಿಯೇತರ ಭಾಷಾ ರಾಜ್ಯಗಳು, ವಿಶೇಷವಾಗಿ ದಕ್ಷಿಣದ ರಾಜ್ಯಗಳೂ ಇಂಥ ಸಂದರ್ಭದಲ್ಲಿ ಒಂದಾಗಿ ಧ್ವನಿಯೆತ್ತಬೇಕಿದೆ. ಇದಕ್ಕೆ ಸಮರ್ಪಕವಾದ ವೇದಿಕೆಗಳನ್ನು ನಿರ್ಮಿಸಬೇಕಿದೆ. ಕರವೇ ಇಂಥ ಕೆಲಸವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದೆ. ಇದಕ್ಕಾಗಿ ವಿವಿಧ ರಾಜ್ಯಗಳ ಭಾಷಾ ಹೋರಾಟಗಾರರು, ಜನಪ್ರತಿನಿಧಿಗಳ ಜತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದೆ.

ಮೊದಲಿನಿಂದಲೂ ಜಲವಿವಾದಗಳ ಹೆಸರಿನಲ್ಲಿ ಕನ್ನಡಿಗರು ತಮ್ಮ ನೆರೆಯ ರಾಜ್ಯಗಳೊಂದಿಗೆ ಬಡಿದಾಡಿಕೊಂಡು ಇರುವಂತೆ ಮಾಡಲಾಗಿದೆ. ಕನ್ನಡಿಗರು, ತಮಿಳು, ತೆಲುಗರು, ಮಲಯಾಳಿಗಳು, ಮರಾಠಿಗರು ಪರಸ್ಪರ ಜಗಳವಾಡುತ್ತ ಇದ್ದಾಗ ಈ ಎಲ್ಲ ರಾಜ್ಯಗಳಲ್ಲೂ ಹಿಂದಿ ಭಾಷೆ ಮತ್ತು ಹಿಂದಿಯನ್ನರು ಬಂದು ಕುಳಿತರು. ಈಗ ಕಾಲ ಬದಲಾಗಿದೆ. ಹಿಂದಿಯನ್ನರಿಗಿಂತಲೂ ನಮಗೆ ಹತ್ತಿರದವರಾದ, ಬಹುತೇಕ ನಮ್ಮದೇ ಆಚಾರ-ವಿಚಾರಗಳನ್ನು ಹೊಂದಿರುವ ದಕ್ಷಿಣ ಭಾರತೀಯರೊಂದಿಗೆ ಸೇರಿ ನಾವು ಚಳವಳಿಗಳನ್ನು ರೂಪಿಸಬೇಕಿದೆ. ಭಾರತ ಒಕ್ಕೂಟದ ಮೂಲತತ್ತ್ವಗಳನ್ನು ಉಳಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಎಲ್ಲ ರಾಜ್ಯಗಳ ನಾಯಕರನ್ನು ಒಂದೆಡೆ ಸೇರಿಸುವ ಪ್ರಯತ್ನಗಳನ್ನು ಕರವೇ ನಡೆಸುತ್ತಿದೆ. `ನಮ್ಮ ಮೆಟ್ರೋ’ ಹೋರಾಟದ ಸಂದರ್ಭದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಭಾಷಾ ಪ್ರತಿನಿಧಿಗಳು ಇಂಥ ಪ್ರಯೋಗವನ್ನು ಸ್ವಾಗತಿಸಿದ್ದರು ಮತ್ತು ಇಂಥದ್ದೇ ಪ್ರಯೋಗಗಳನ್ನು ತಮ್ಮ ರಾಜ್ಯಗಳಲ್ಲೂ ನಡೆಸಲು ಉತ್ಸುಕರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಕರವೇ ಈ ಐಕ್ಯತೆಯ ಹೋರಾಟದಲ್ಲಿ ಮುಂಚೂಣಿ ಪಾತ್ರವನ್ನು ವಹಿಸುತ್ತದೆ.

PC : Prajavani

`ಕರ್ನಾಟಕದಿಂದ ಕನ್ನಡ ಎಂಬುದು’ ಕರ್ನಾಟಕ ರಕ್ಷಣಾ ವೇದಿಕೆ ಬಹಳ ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಬಂದ ಘೋಷವಾಕ್ಯ. ಒಕ್ಕೂಟದಲ್ಲಿ ನಾವು ಯಾರ ಅಡಿಯಾಳೂ ಅಲ್ಲ, ಸಮಾನ ಪಾಲುದಾರರು. ರಾಜ್ಯ ಸರ್ಕಾರಗಳಿಗೆ ಇನ್ನಷ್ಟು ಸ್ವಾಯತ್ತತೆಯನ್ನು ನೀಡುವ ಬದಲು, ರಾಜ್ಯಗಳ ಅಧಿಕಾರಗಳನ್ನು ಕಸಿಯುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಅದೇರೀತಿ ಬೇರೆ ರಾಜ್ಯಗಳಲ್ಲೂ ಅಲ್ಲಿನ ಭಾಷಾ ಸಮುದಾಯಗಳೇ ಸಾರ್ವಭೌಮವಾಗಬೇಕು. ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಉದ್ದೇಶವೂ ಅದೇ ಕಾರಣಕ್ಕೆ ಆಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ, ವ್ಯಾಪಾರ, ಉದ್ಯಮದ ಅವಕಾಶಗಳು ದೊರೆಯಬೇಕು. ಕನ್ನಡಿಗರಿಗೆ ಎಲ್ಲ ಬಗೆಯ ಮಾಹಿತಿಗಳೂ ಕೂಡ ಕನ್ನಡದಲ್ಲೇ ಸಿಗುವಂತಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಹಿಂದಿ ಅಥವಾ ಇನ್ಯಾವ ಭಾಷೆಯ ಹೇರಿಕೆಯೂ ನಡೆಯಕೂಡದು. ರಾಜಕೀಯ ಕಾರಣಗಳಿಗಾಗಿ, ದೇಶದ ಬಹುತ್ವವನ್ನು ನಾಶಗೊಳಿಸುವ ಯಾವುದೇ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ.

`ಒಂದು ದೇಶ ಒಂದು ಧರ್ಮ, ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಸಂಸ್ಕೃತಿ, ಒಂದು ದೇಶ ಒಂದು ತೆರಿಗೆ’ ಇದೆಲ್ಲವೂ ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃ ಸಂಘಟನೆ ಆರ್‌ಎಸ್‍ಎಸ್ ಮೂಲ ಸಿದ್ಧಾಂತವಾಗಿರಬಹುದು. ಆದರೆ ಅದು ದೇಶದ ಐಕ್ಯತೆಗೆ ಧಕ್ಕೆ ತರುತ್ತದೆ, ದೇಶವನ್ನು ಒಂದುಗೂಡಿಸುವ ಬದಲು ವಿಘಟನೆಯತ್ತ ಕೊಂಡೊಯ್ಯುತ್ತದೆ. ಕನ್ನಡಿಗರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವಂತಾಗಲು ಬಹುದೊಡ್ಡ ಸಂಘರ್ಷಕ್ಕೆ ತಯಾರಾಗಬೇಕಿದೆ. ನಾವು ಸೆಣೆಸುತ್ತಿರುವುದು ಸಣ್ಣಪುಟ್ಟ ಶಕ್ತಿಯೊಂದಿಗಲ್ಲ. ನಮ್ಮೆದುರಿನ ಶತ್ರು `ಹುಸಿ ರಾಷ್ಟ್ರೀಯತೆ’ಯ ಹೆಸರಿನಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾನೆ. ಹೀಗಾಗಿ ಒಬ್ಬ ಪ್ರಾಮಾಣಿಕ ಕನ್ನಡ ಕಾರ್ಯಕರ್ತನನ್ನು ಮುಂದಿನ ದಿನಗಳಲ್ಲಿ `ರಾಷ್ಟ್ರವಿರೋಧಿ’ ಎಂದು ಸುಲಭವಾಗಿ ಬ್ರಾಂಡ್ ಮಾಡುವ ಸಾಧ್ಯತೆಗಳಿರುತ್ತದೆ. ಹೀಗಾಗಿ ನಮ್ಮೆದುರಿನ ಹಾದಿ ಕಠಿಣವಾಗಿದೆ. ಕರವೇ ಎಷ್ಟೇ ಕಷ್ಟಗಳು ಎದುರಾದರೂ ಈ ಶಕ್ತಿಗಳ ಎದುರು ನಿಂತು ಚಳವಳಿ ಸಂಘಟಿಸಲಿದೆ.

ಟಿ.ಎ.ನಾರಾಯಣಗೌಡ

ಕರ್ನಾಟಕ ಮತ್ತು ಕನ್ನಡ ಪರ ಹೋರಾಟಗಳನ್ನು ರೂಪಿಸಿ ಮುನ್ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಸಂಸ್ಥಾಪಕರಲ್ಲೊಬ್ಬರು ಮತ್ತು ಸದ್ಯದ ರಾಜ್ಯಾಧ್ಯಕ್ಷರು. ನಾಡು-ನುಡಿ ಹೋರಾಟಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯದ ಉದ್ದಗಲಕ್ಕೂ ಓಡಾಡಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.


ಇದನ್ನೂ ಓದಿ: ತಾತ್ಸಾರ ತೊರೆದು ಸ್ವಾಯತ್ತತೆಗಾಗಿ – ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸರ್ವತಂತ್ರ ಸ್ವತಂತ್ರ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಒಕ್ಕೂಟ ವ್ಯವಸ್ಥೆಗೆ ಸಾಂವಿಧಾನಿಕ ನೀತಿ ನಿಯಮಗಳಿಗೆ ಬದ್ಧರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಆಡಳಿತವನ್ನು ಸರಿಯಾಗಿ ಕೊಡಬೇಕು ಇಲ್ಲದಿದ್ದರೆ ಜನಸಾಮಾನ್ಯರ ಭಾವನೆಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಆದುದರಿಂದ ಸಮಸ್ತ ಭಾರತೀಯರು ಎಚ್ಚರಿಕೆಯಿಂದ ಕೇಂದ್ರ ಪಟ್ಟಿ ರಾಜ್ಯಪಟ್ಟಿ ಸಮವರ್ತಿ ಪಟ್ಟಿ ಕಾನೂನುಗಳನ್ನು ನೀತಿ-ನಿಯಮಗಳನ್ನು ನಿರಂತರವಾಗಿ ನಾವು ಗಮನಿಸದಿದ್ದರೆ ನಮ್ಮ ಆಡಳಿತ ವ್ಯವಸ್ಥೆಯು ಸರ್ವಾಧಿಕಾರದ ಅಡ್ಡದಾರಿಯನ್ನು ಹಿಡಿದು ನಾವೆಲ್ಲರೂ ಅತಂತ್ರರಾಗಿ ಪರಾಧೀನ ರಾಗಿ ನಮ್ಮ ಸ್ವತಂತ್ರ ವ್ಯಕ್ತಿತ್ವವನ್ನು ಕಳೆದುಕೊಂಡು ಸಮಗ್ರ ಭಾರತದ ಅಖಂಡ ಭಾರತದ ಅಸ್ತಿತ್ವವು ಅವನತಿಯ ಹಾದಿಯನ್ನು ಹಿಡಿಯುವುದು ಬಹಳ ಕಾಲವಿಲ್ಲ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...