ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಚಾರ್ಟರ್ಡ್ ವಿಮಾನದಲ್ಲಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಚೆನ್ನೈನಿಂದ ದೆಹಲಿ ತೆರಳಿದ ವಿಜಯ್, ಮಧ್ಯಾಹ್ನ 11.30ರ ಸುಮಾರಿಗೆ ಸಿಬಿಐ ಕಚೇರಿಗೆ ತಲುಪಿದ್ದಾರೆ. ಆಧವ ಅರ್ಜುನ ಸೇರಿದಂತೆ ಟಿವಿಕೆ ಪಕ್ಷದ ಕೆಲ ನಾಯಕರು ಅವರಿಗೆ ಸಾಥ್ ನೀಡಿದ್ದರು.
ಬ್ಯಾರಿಕೇಡ್‌ಗಳಿಂದ ಸುತ್ತುವರಿದ ಸಿಬಿಐ ಕಚೇರಿಯ ಹೊರಗೆ ವಿಜಯ್ ಅವರ ಅಭಿಮಾನಿಗಳ ಒಂದು ಸಣ್ಣ ಗುಂಪು ಬೆಂಬಲ ವ್ಯಕ್ತಪಡಿಸಲು ಜಮಾಯಿಸಿತ್ತು. ಆದರೆ, ದೆಹಲಿ ಪೊಲೀಸರು ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದ್ದು ಭದ್ರತೆ ಬಿಗಿಯಾಗಿತ್ತು.
ಪ್ರಯಾಣ ಮತ್ತು ಸಿಬಿಐ ಕಚೇರಿ ಭೇಟಿ ಸಮಯದಲ್ಲಿ ವಿಜಯ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಟಿವಿಕೆ ಕೋರಿತ್ತು.
ಜನಸಂದಣಿ ನಿರ್ವಹಣೆಯಲ್ಲಿನ ಲೋಪಗಳು, ಕಾರ್ಯಕ್ರಮದ ಅನುಮತಿ, ಸುರಕ್ಷತಾ ಕ್ರಮಗಳು ಮತ್ತು ಸಾಂಸ್ಥಿಕ ಜವಾಬ್ದಾರಿಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ (ಭ್ರಷ್ಟಾಚಾರ ನಿಗ್ರಹ ಘಟಕದ ಅಡಿಯಲ್ಲಿ) ಸಿಬಿಐ ವಿಶೇಷ ತಂಡವು ವಿಜಯ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ವಿಚಾರಣೆ ಮುಂದುವರಿಯುವ ನಿರೀಕ್ಷೆಯಿದೆ (ಬಹುಶಃ ಎರಡನೇ ದಿನವೂ), ನಂತರ ಸಿಬಿಐ ಆರೋಪಪಟ್ಟಿ ಸಲ್ಲಿಸುವ ಬಗ್ಗೆ ನಿರ್ಧರಿಸಬಹುದು.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಬೆಳವಣಿಗೆಗಳ ಮಧ್ಯೆ ವಿಜಯ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ. ಟಿವಿಕೆ ಪಕ್ಷ ಮುಂದಿನ ಚುನಾವಣೆಯಲ್ಲಿ ಡಿಎಂಕೆ ಮತ್ತು ಬಿಜೆಪಿಯನ್ನು ಪ್ರಮುಖ ಪ್ರತಿಸ್ಪರ್ಧಿಗಳಾಗಿ ಪರಿಗಣಿಸಿದೆ.
ರಾಜಕೀಯದ ನಡುವೆ, ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ತಡೆ ಉಂಟಾಗಿದೆ. ಪೊಂಗಲ್‌ಗೆ (ಜ.9) ಬಿಡುಗಡೆಯಾಗಬೇಕಾಗಿದ್ದ ಸಿನಿಮಾ, ಪ್ರಮಾಣೀಕರಣದ ವಿಳಂಬದ ಕಾರಣ ಇನ್ನೂ ಬಿಡುಗಡೆಗೊಂಡಿಲ್ಲ. ಈ ವಿವಾದ ಈಗ ಸುಪ್ರೀಂ ಕೋರ್ಟ್ ತಲುಪಿದೆ.
2025ರ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 60 ಜನರು ಗಾಯಗೊಂಡಿದ್ದರು.


