ನಟ-ರಾಜಕಾರಣಿ ವಿಜಯ್ ಅವರು ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯ್, “ಇದು ನಿಜಕ್ಕೂ ನಮಗೆ ತುಂಬಲಾರದ ನಷ್ಟ. ಯಾರು ಸಾಂತ್ವನದ ಮಾತುಗಳನ್ನಾಡಿದರೂ ನಮ್ಮ ಪ್ರೀತಿಪಾತ್ರರ ನಷ್ಟವು ಅಸಹನೀಯವಾದುದು. ಆದರೂ, ನಿಮ್ಮ ಕುಟುಂಬದ ಸದಸ್ಯನಾಗಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳನ್ನು ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ 2 ಲಕ್ಷ ರೂಪಾಯಿಗಳನ್ನು ನೀಡಲು ಉದ್ದೇಶಿಸಿದ್ದೇನೆ. ಇಂತಹ ನಷ್ಟದ ಸಂದರ್ಭದಲ್ಲಿ ಈ ಮೊತ್ತವು ಏನೂ ಅಲ್ಲ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯನಾಗಿ ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
ಮುಂದುವರಿದು, “ನನ್ನ ಹೃದಯ ಮತ್ತು ಮನಸ್ಸು ಆಳವಾದ ಭಾರದಿಂದ ತುಂಬಿಹೋಗಿದೆ. ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಅಪಾರ ದುಃಖದ ಮಧ್ಯೆ, ನನ್ನ ಹೃದಯ ಅನುಭವಿಸುವ ನೋವನ್ನು ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ. ನನ್ನ ಕಣ್ಣುಗಳು ಮತ್ತು ಮನಸ್ಸು ದುಃಖದಿಂದ ಆವೃತವಾಗಿವೆ” ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ತಮಿಳುನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. “ನಮ್ಮ ರಾಜ್ಯದ ಇತಿಹಾಸದಲ್ಲಿ, ಯಾವುದೇ ರಾಜಕೀಯ ಪಕ್ಷ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಪ್ರಾಣ ಕಳೆದುಕೊಂಡಿಲ್ಲ. ಭವಿಷ್ಯದಲ್ಲಿಯೂ ಇಂತಹ ದುರಂತ ಸಂಭವಿಸಬಾರದು” ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಕಾಲ್ತುಳಿತ ದುರಂತದ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸುವುದಾಗಿಯೂ ಅವರು ಘೋಷಿಸಿದ್ದಾರೆ.
ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ವಿಜಯ್ ರ್‍ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 39 ಜನರು ಸಾವನ್ನಪ್ಪಿದ್ದು, 56 ಜನರು ಗಾಯಗೊಂಡಿದ್ದಾರೆ.
ಕರೂರು ಕಾಲ್ತುಳಿತ। ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ, ಆಯೋಗದ ವರದಿ ಆಧರಿಸಿ ಮುಂದಿನ ಕ್ರಮ: ಸಿಎಂ ಸ್ಟಾಲಿನ್


