-ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು ಅಧಿಸೂಚನೆ
-ವಯನಾಡ್ ದುರಂತದ ಬಳಿಕ ಆರನೇ ಅಧಿಸೂಚನೆ
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ಕುರಿತು ಹಿರಿಯ ವಿಜ್ಞಾನಿ ಡಾ.ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರ್ಕಾರ ನಿವಾರಣೆ ಮಾಡಿದ್ದು, ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಪಶ್ಚಿಮ ಘಟ್ಟ ಸಂರಕ್ಷಣೆಗೂ ಜನ ಆದ್ಯತೆ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶತಮಾನಗಳಿಂದ ಜನ ಇಲ್ಲಿ ವಾಸಿಸುತ್ತಿದ್ದು, ಅರಣ್ಯದಂಚಿನ ಜನರೇ ಅರಣ್ಯ ರಕ್ಷಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಯೋಜನೆಗಳಿವೆ. ಜನರ, ಜನಪ್ರತಿನಿಧಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ ತಿಳಿಸಿದ್ದೇವೆ ಎಂದರು.
ಜಂಟಿ ಸರ್ವೆಗೆ ಸಂಬಂಧಿಸಿ ಕಂದಾಯ, ಅರಣ್ಯ ಸಚಿವರು, ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಜಂಟಿ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಜಂಟಿ ಸರ್ವೆಗೆ ಸಮಿತಿ ರಚಿಸಲಾಗಿದೆ. ಅದರಂತೆ ಮುಂದಿನ ಆರು ತಿಂಗಳಲ್ಲಿ ಸರ್ವೆ ನಡೆಸಿ ವಾಸ್ತವದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಈ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಯಲಿದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಹಸಿರೀಕರಣ, ಅರಣ್ಯ ಉಳಿಸಲು ಹೆಚ್ಚಿನ ಯೋಜನೆ ರೂಪಿಸಿದ್ದಾರೆ. 2023ರಿಂದ 2025ರ ಮಧ್ಯೆ ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗುವ ವಿಶ್ವಾಸ ಇದೆ ಎಂದರು.
ಕರ್ನಾಟಕದಲ್ಲಿ ಅರಣ್ಯ ನಾಶವಾಗಿದೆ ಎಂಬ ವರದಿ 2021-23ರ ಮಾರ್ಚ್ ವರೆಗಿನ ವರದಿ. ಆ ಸಮಯದಲ್ಲಿ ಈ ಹಿಂದಿನ ಸರ್ಕಾರ ಅಧಿಕಾರದಲ್ಲಿತ್ತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅರಣ್ಯ ಹಸುರೀಕರಣ, ಅರಣ್ಯ ಉಳಿಸಲು ಹೆಚ್ಚಿನ ಯೋಜನೆ ರೂಪಿಸಲಾಗಿದೆ. 2023ರಿಂದ 2025 ರಲ್ಲಿ ಕರ್ನಾಟಕ ರಾಜ್ಯದಲ್ಲಿಅರಣ್ಯ ಪ್ರದೇಶ ಜಾಸ್ತಿಯಾಗುವ ವಿಶ್ವಾಸ ಇದೆ ಎಂದರು.
ಸಂಸದ ಸಾಗರ್ ಖಂಡ್ರೆ, ಡಿಸಿಎಫ್ ಅಂತೋಣಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್, ವಿಮಲ್ ಬಾಬು, ಮಂಜುನಾಥ್, ಸಂಧ್ಯಾ, ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಭಾಗವಹಿಸಿದ್ದರು.
ಸುವರ್ಣ ಸೌಧದಲ್ಲಿ….
ಸುವರ್ಣಸೌಧ (ವಿಧಾನಪರಿಷತ್ತು): ಪಶ್ಚಿಮ ಘಟ್ಟದ ಕುರಿತಾಗಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಸಚಿವ ಸಂಪುಟದ ಉಪಸಮಿತಿಯಲ್ಲಿ ತಿರಸ್ಕರಿಸಲಾಗಿದ್ದು, ಸಚಿವ ಸಂಪುಟದ ಮುಂದೆಯೂ ವಿಷಯ ತಂದು ಅಲ್ಲಿಯೂ ವರದಿ ತಿರಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್ ಹೇಳಿದ್ದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಾಗಿ ಕೇಂದ್ರದಿಂದ ಪದೇ ಪದೇ ಒತ್ತಡ ಬರುತ್ತಿದೆ. ಆದರೆ ಅದನ್ನು ಒಪ್ಪುವ ಪ್ರಮೇಯವೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಕೇರಳ ಸರಕಾರ ಈಗಾಗಲೇ ತಿರಸ್ಕರಿಸಿದ್ದು, ಇಲ್ಲಿಯೂ ತಿರಸ್ಕಾರ ಮಾಡಬೇಕೆಂದರು. ಇದಕ್ಕೂ ಮೊದಲು ಮಾತನಾಡಿದ ಐವನ್ ಡಿಸೋಜಾ, ರಾಜ್ಯದ 10 ಜಿಲ್ಲೆ, 40 ತಾಲೂಕು, 1,576 ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಶೇ.20ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸಿ, ಅಲ್ಲಿ ಯಾವುದೇ ಕೈಗಾರಿಕೆ, ಅಭಿವೃದ್ಧಿ ಕಾರ್ಯಕೈಗೊಳ್ಳುವಂತಿಲ್ಲ. ದಕ್ಷಿಣ ಕನ್ನಡದ 45 ಗ್ರಾಮಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದಿದ್ದರು.
ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು ಅಧಿಸೂಚನೆ
ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸುವ ಬಗ್ಗೆ ಡಾ. ಕಸ್ತೂರಿ ರಂಗನ್ ವರದಿ ಆಧರಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಗುರುವಾರ (ಸೆ.26) ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು “ಈ ಹಿಂದಿನ ಬಿಜೆಪಿ ಸರ್ಕಾರ ವರದಿಯನ್ನು ತಿರಸ್ಕರಿಸಿ ಕೈಗೊಂಡಿದ್ದ ನಿರ್ಣಯವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ” ಎಂದಿದ್ದರು.

ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸಲು ಕೇಂದ್ರ ಸರ್ಕಾರ ಜುಲೈ 31, 2024ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು. 60 ದಿನಗಳಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ರಾಜ್ಯಗಳಿಗೆ ಸೂಚಿಸಿತ್ತು.
ಕಸ್ತೂರಿ ರಂಗನ್ ವರದಿಯು ಕರ್ನಾಟಕದ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು. ಇದರಲ್ಲಿ ಆಗಿದ್ದ ಕೆಲ ಲೋಪಗಳನ್ನು ತಿದ್ದುಪಡಿ ಮಾಡಿ, 19, 252.70 ಚದರ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿತ್ತು. ರಾಜ್ಯದ ವಿವಿಧ ಅರಣ್ಯ ಕಾನೂನುಗಳ ಅಡಿಯಲ್ಲಿ ಈಗಾಗಲೇ 16,164 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಆದ್ದರಿಂದ ಕರಡು ಅಧಿಸೂಚನೆ ತಿರಸ್ಕರಿಸಲಾಗಿದೆ ಎಂದು ಹೆಚ್.ಕೆ ಪಾಟೀಲ್ ವಿವರಿಸಿದ್ದರು.
ವಯನಾಡ್ ದುರಂತದ ಬಳಿಕ ಆರನೇ ಅಧಿಸೂಚನೆ
ಜುಲೈ 31, 2024ರ ಆರನೇ ಕರಡು ಅಧಿಸೂಚನೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಗುರುತಿಸಿತ್ತು.
ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದ ಕೇಂದ್ರ, ವಯನಾಡ್ ಭೂಕುಸಿತ ದುರಂತ ಸಂಭವಿಸಿದ ಬಳಿಕ 6ನೇ ಅಧಿಸೂಚನೆ ಪ್ರಕಟಿಸಿತ್ತು.


