Homeಕರ್ನಾಟಕಶಿಕ್ಷಕರು-ಉಪನ್ಯಾಸಕರನ್ನು ಉಸಿರುಗಟ್ಟಿಸುವ ಸೇವಾ ನಿಯಮಗಳು

ಶಿಕ್ಷಕರು-ಉಪನ್ಯಾಸಕರನ್ನು ಉಸಿರುಗಟ್ಟಿಸುವ ಸೇವಾ ನಿಯಮಗಳು

- Advertisement -
- Advertisement -

70-80ರ ದಶಕದಲ್ಲಿ ರಾಜ್ಯದ-ದೇಶದ ವಿಶ್ವವಿದ್ಯಾಲಯಗಳು ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದರ ಜೊತೆಗೆ ಚಳವಳಿಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಿದ್ದವು. ಅಲ್ಲಿ ಸರ್ಕಾರಗಳ ಸರಿತಪ್ಪುಗಳ ಚರ್ಚೆ-ಸಂವಾದ ನಡೆದು ಜನಾಭಿಪ್ರಾಯ ರೂಪಿಸಲಾಗುತ್ತಿತ್ತು. ಬಡವರ, ತುಳಿತಕ್ಕೊಳಗಾದ ದಮನಿತರ ಪರವಾದ ಹೋರಾಟಗಳು ಅಲ್ಲಿ ರೂಪುಗೊಳ್ಳುತ್ತಿದ್ದವು. ಅಲ್ಲಿನ ವಿದ್ಯಾರ್ಥಿಗಳು ದೊಡ್ಡದೊಡ್ಡ ನಾಯಕರಾಗಿ ಹೊರಬರುತ್ತಿದ್ದರು. ಇದಕ್ಕೆ ಅಲ್ಲಿನ ಪ್ರಾಧ್ಯಾಪಕರ ಕೊಡುಗೆ ಮಹತ್ವದಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಮೇಷ್ಟ್ರುಗಳಿಗೆ ವೇತನದಲ್ಲಿ ಒಳ್ಳೆಯ ಬೆಳವಣಿಗೆ ಕಾಣುವಂತೆ ಮಾಡಿ ಅವರ ಗಮನವನ್ನು ಬೇರೆಡೆಗೆ ಸೆಳೆಯಲಾಗಿದೆ. ಅದನ್ನು ಮೀರಿ ದನಿ ಎತ್ತುವವರ ಮೇಲೆ ಸೇವಾ ನಿಯಮಗಳೆಂಬ ಗುಮ್ಮ ತೋರಿಸಿ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಹಲವರು ಆರೋಪಿಸುತ್ತಿರುತ್ತಾರೆ.

ಇದು ಮುಂದುವರಿದು ಶಾಲಾ-ಕಾಲೇಜುಗಳವರೆಗೂ ವಿಸ್ತರಿಸಲಾಗುತ್ತಿದೆ. ಪ್ರಭುತ್ವದ ತಪ್ಪುಗಳನ್ನು ಪ್ರಶ್ನಿಸುವವರನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಶಿಕ್ಷಕರು-ಉಪನ್ಯಾಸಕರು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗ. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯುವುದು ಅತ್ಯವಶ್ಯಕ. ಆದರೆ ಕಳೆದ 2 ದಶಕಗಳಿಂದ ಶಿಕ್ಷಣಕ್ಕೆ ಸಂಬಂಧಿಸಿದ ಸರ್ಕಾರದ ನೀತಿ ನಿರ್ಧಾರಗಳಿಂದಲೂ ಶಿಕ್ಷಕರು-ಉಪನ್ಯಾಸಕರ ಸಮುದಾಯವನ್ನು ಒಳಗೊಳ್ಳುತ್ತಿಲ್ಲ. ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ಅಭಿಪ್ರಾಯ ಹಂಚಿಕೊಳ್ಳದಂತೆ ತಡೆಹಿಡಿಯಲಾಗುತ್ತಿದೆ. ಕಾಳಜಿಯುಳ್ಳ ಶಿಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಮಟ್ಟಿಗೆ ಪ್ರಭುತ್ವ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ದುರಂತ.

ಸರ್ಕಾರಿ ನೌಕರರ ಸೇವಾನಿಯಮಗಳು
ಸರ್ಕಾರಿ ನೌಕರರು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕೆಂಬ ಇರಾದೆಯಿಂದ ಕೆಲ ನಿಯಮಗಳನ್ನು ಹೇರಲಾಗಿದೆ. ರಾಜ್ಯದಲ್ಲಿ ಅವುಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್) ಎಂದು ಕರೆಯಲಾಗುತ್ತಿದೆ. ಅದರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು, ಉನ್ನತ ನೈತಿಕ ಆದರ್ಶಗಳನ್ನು ಹೊಂದಿರತಕ್ಕದ್ದು, ರಾಜಕೀಯವಾಗಿ ತಟಸ್ಥನಾಗಿರತಕ್ಕದ್ದು, ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ, ಅರ್ಹತಾದಾಯಕ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತತೆಯ ಮೂಲತತ್ವಗಳನ್ನು ಅಳವಡಿಸಿಕೊಂಡಿರತಕ್ಕದ್ದು, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ನಿರ್ವಹಿಸತಕ್ಕದ್ದು, ಸಾರ್ವಜನಿಕರಿಗೆ ಸ್ಪಂದನಾಶೀಲನಾಗಿರತಕ್ಕದ್ದು; ಸಂವಿಧಾನ ಮತ್ತು ಪುಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಚತೆಗೆ ಸ್ವತಃ ಬದ್ಧನಾಗಿರತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು; ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಸಮರ್ಥಿಸತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು ಎಂಬ ಈ ನಿಯಮಗಳು ಎಲ್ಲರಿಗೂ ಸಾಮಾನ್ಯವಾಗಿ ಅನ್ವಯಿಸುತ್ತವೆ.

ಈ ನಿಯಮಗಳನ್ನು ನಮ್ಮ ಸರ್ಕಾರಿ ನೌಕರರು ನಿಜವಾಗಿಯೂ ಅನುಸರಿಸುತ್ತಿದ್ದಾರೆಯೇ ಎಂದು ಪರಾಮರ್ಶಿಸಲು, ಮೌಲ್ಯಮಾಪನ ಮಾಡಲು ಸರ್ಕಾರದ ಬಳಿ ಯಾವುದೇ ಯಂತ್ರಾಂಗವಿಲ್ಲ. ಗಂಭೀರ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಾಗ ಮಾತ್ರ ನಿಯಮಗಳ ಆಧಾರದಲ್ಲಿ ಸುತ್ತೋಲೆಗಳನ್ನು ಕಳಿಸಿ ಎಚ್ಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಇದುವರೆಗೂ ಇಂತಹ 130 ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಆದರೂ ನೌಕರರು ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಮಾಡುವುದು, ನೌಕರರ ಸಂಘದ ಪದಾಧಿಕಾರಿಗಳು ಸ್ಥಳೀಯ ಶಾಸಕರ ಬೆಂಬಲಿಗರಂತೆ ವರ್ತಿಸುವುದು, ಭ್ರಷ್ಟಾಚಾರ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಇವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಶಿಕ್ಷಕರು-ಉಪನ್ಯಾಸಕರು ಮಾತ್ರ ಸರ್ಕಾರದ ನೀತಿ-ನಿರ್ಧಾರಗಳ ಅಪಾಯಗಳ ಬಗ್ಗೆ ಮಾತನಾಡಿದ್ದಲ್ಲಿ ಅವರನ್ನು ಟಾರ್ಗೆಟ್ ಮಾಡಿ ಶಿಸ್ತು ಕ್ರಮ ಜರುಗಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಕಾಳಜಿಯುಳ್ಳ ಶಿಕ್ಷಕರು-ಉಪನ್ಯಾಸಕರ ಟಾರ್ಗೆಟ್
ಕೇಂದ್ರ ಸರ್ಕಾರವು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (2020) ಜಾರಿಗೆ ತರುತ್ತಿದೆ. ಯಾವುದೇ ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗ ಹಿಂದಿನ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಕುರಿತು ಸಂಪೂರ್ಣ ಮೌಲ್ಯಮಾಪನ ನಡೆದು ಅದರ ಆಧಾರದಲ್ಲಿಯೇ ಹೊಸ ನೀತಿಯನ್ನು ರಚಿಸಬೇಕು. ಆದರೆ ಕೇಂದ್ರ ಸರ್ಕಾರ ಹಿಂದಿನ ನೀತಿಯ ವಿಮರ್ಶೆ ನಡೆಸದೇ ಏಕಾಏಕಿ ಹೊಸ ನೀತಿ ಜಾರಿಗೆ ಮುಂದಾಗಿದೆ. ಇದನ್ನು ವಿರೋಧಿಸಿ ಶಿಕ್ಷಣ ತಜ್ಞರು, ನಿವೃತ್ತ ಕುಲಪತಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳು, ಜನಪರ ಸಂಘಟನೆಗಳು ಪ್ರತಿಭಟನೆ ದಾಖಲಿಸಿದ್ದಾರೆ. ಆದರೆ ಈ ಕುರಿತು ಹಾಲಿ ಉಪನ್ಯಾಸಕರು, ಪ್ರಾಧ್ಯಾಪಕರು ಮತ್ತು ಶಿಕ್ಷಕರು ಮಾತನಾಡುತ್ತಿಲ್ಲ ಏಕೆ?

ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ ಶಿಕ್ಷಕರೇ ಅದರ ಬಗ್ಗೆ ಮಾತನಾಡದಿದ್ದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಸರ್ಕಾರದ ಈ ಸೇವಾ ನಿಯಮಗಳಲ್ಲಿ ಅಡಗಿದೆ. ಅಂದರೆ ಸರ್ಕಾರದ ನೀತಿಗಳ ವಿರುದ್ಧ ಶಿಕ್ಷಕರು ಮಾತನಾಡುವಂತಿಲ್ಲ! ಮಾತನಾಡಿದರೆ ನಿಮ್ಮ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೆದರಿಸಲಾಗುತ್ತಿದೆ.

ಕರ್ನಾಟಕದಲ್ಲಿ ಅಸಾಂವಿಧಾನಿಕವಾಗಿ, ಕಾನೂನುಗಳನ್ನು ಗಾಳಿಗೆ ತೂರಿ ತರಾತುರಿಯಲ್ಲಿ
ಪಠ್ಯ ಪುನರ್ ಪರಿಷ್ಕರಣೆ ಮಾಡಲಾಯ್ತು. ಆ ಮೂಲಕ ನಾಡಿನ ಮಹನೀಯರನ್ನು ಅವಮಾನಿಸಲಾಯ್ತು. ಇದರ ವಿರುದ್ಧ ನಾಡಿನ ಜನತೆ ಹೋರಾಟ ನಡೆಸಿದರು. ಹಲವು ಸ್ವಾಮೀಜಿಗಳು ಸರ್ಕಾರದ ನಡೆಯನ್ನು ಟೀಕಿಸಿದರು. ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ದೊಡ್ಡ ಹೋರಾಟ ಮಾಡಿದರು. ಕೊನೆಗೆ ಸರ್ಕಾರ ಸಮಿತಿಯನ್ನೇನೋ ವಿಸರ್ಜಿಸಿತು ಮತ್ತು ಕೆಲ ಪಾಠಗಳನ್ನು ಬದಲಾವಣೆ ಮಾಡಿತು; ಆದರೆ
ಇನ್ನೂ ಎಷ್ಟೋ ಅಪದ್ಧಗಳು ಪುನರ್ ಪರಿಷ್ಕರಣೆಯಲ್ಲಿ ಉಳಿದುಹೋಗಿವೆ. ಸರ್ಕಾರದ ಈ ಮಹಾನ್ ದುಷ್ಕೃತ್ಯವನ್ನು ಶಿಕ್ಷಕ ಸಮೂಹ ತೀವ್ರವಾಗಿ ವಿರೋಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದರು. ಆದರೆ ಬಹುತೇಕ ಶಿಕ್ಷಕರು ಸರ್ಕಾರದ ವಿರುದ್ಧ ಮಾತನಾಡಬಾರದೆಂಬ ನಿಯಮಕ್ಕೆ ಹೆದರಿ ಸುಮ್ಮನಾದರು!

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯ ಆಡಳಿತಾಧಿಕಾರಿಗಳನ್ನು ನಾವು ಶಿಕ್ಷಣ ವ್ಯವಸ್ಥೆಯ ಸ್ಟೇಕ್ ಹೋಲ್ಡರ್ಸ್ (ವಾರಸುದಾರರು, ಮಧ್ಯಸ್ಥಗಾರರು) ಎಂದು ಕರೆಯುತ್ತೇವೆ. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಸಂಘಟಿತರಾಗಿಲ್ಲ, ವಿದ್ಯಾರ್ಥಿಗಳು ಕಲಿಕೆಯಲ್ಲಿದ್ದಾರೆ. ಇನ್ನು ಶಿಕ್ಷಕರು ಸಂಘಟಿತರು, ಪ್ರಜ್ಞಾವಂತರೂ ಆಗಿದ್ದು ಅವರಿಗೆ ಸರಿತಪ್ಪುಗಳ ಸ್ಪಷ್ಟ ಅರಿವಿದೆ. ಆದರೆ ಅವರುಗಳನ್ನು ನಿಯಮಗಳ ಹೆಸರಿನಲ್ಲಿ ಸರ್ಕಾರ ಕಟ್ಟಿಹಾಕುತ್ತಿರುವುದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಶಾಲೆಗಳ ವಿಲೀನ ವಿರೋಧಿಸಿದ ಶಿಕ್ಷಕನ ಮೇಲೆ ಕ್ರಮ
ಇತ್ತೀಚೆಗೆ ರಾಜ್ಯದ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು 13,800 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವುದಾಗಿ ಘೋಷಿಸಿದರು. ಹೋಬಳಿ ಕೇಂದ್ರದಲ್ಲಿ ಶಾಲೆ ಇದ್ದು, ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದರು. ಯಥಾಪ್ರಕಾರ ಈ ನಿರ್ಧಾರ ಕೈಗೊಳ್ಳುವಾಗ ಅವರು ಯಾವುದೇ ಸ್ಟೇಕ್ ಹೋಲ್ಡರ್‌ಗಳ ಜೊತೆ ವಿಶಾಲ ಚರ್ಚೆ ನಡೆಸಿಲ್ಲ. ಸರ್ಕಾರದ ಈ ನಿರ್ಧಾರದಿಂದ ಬಡವರು, ತಳಸಮುದಾಯದವರು ಅದರಲ್ಲಿಯೂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬ ಆತಂಕಗಳು ಕೇಳಿಬಂದವು. ಪ್ರಜ್ಞಾವಂತ ಶಿಕ್ಷಕರಲ್ಲೊಬ್ಬರಾದ ವೀರಣ್ಣ ಮಡಿವಾಳರು ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಧಾರವನ್ನು ವಿರೋಧಿಸಿದರು. ಅಷ್ಟಕ್ಕೆ ಅವರಿಗೆ ನೋಟಿಸ್ ನೀಡಿದ ಶಿಕ್ಷಣ ಇಲಾಖೆ, ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಇಡಿ ವಿಚಾರಣೆಯಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್‌ ಆರೋಪ

ಈ ಕುರಿತು ನ್ಯಾಯಪಥದೊಂದಿಗೆ ಮಾತನಾಡಿದ ಶಿಕ್ಷಕ ವೀರಣ್ಣ ಮಡಿವಾಳರವರು, “ಒಬ್ಬ ಶಿಕ್ಷಕನಾಗಿ ಸರ್ಕಾರಿ ಶಾಲೆಗಳ ಬಗ್ಗೆ ಪ್ರೀತಿ ತೋರುವುದು ನನ್ನ ಕಾಳಜಿಯಲ್ಲವೇ? ಇದುವರೆಗೂ ಕಡಿಮೆ ಮಕ್ಕಳ ನೆಪವೊಡ್ಡಿ ಆಶ್ರಮ ಶಾಲೆಗಳನ್ನು ಮುಚ್ಚಲಾಗಿದೆ. ಹಾಸ್ಟೆಲ್‌ಗಳನ್ನು ಮುಚ್ಚಲಾಗಿದೆ. ಅಲ್ಲೆಲ್ಲ ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇವೆ. ಆ ನೋವಿನಲ್ಲಿ ನನ್ನ ಪ್ರತಿಕ್ರಿಯೆ ನೀಡಿದ್ದೇನೆ. ಅದರಿಂದ ಹಿಂದೆ ಸರಿಯುವುದಿಲ್ಲ ಎಂದರು.

“ನಾನು ನಮ್ಮ ಸರ್ಕಾರಿ ಶಾಲೆಯನ್ನು ಉತ್ತಮ ಕಲಿಕಾ ವಾತಾವರಣದ ಅಂದದ ಶಾಲೆಯಾಗಿ ಮಾಡಲು ಶ್ರಮಿಸಿದ್ದೇನೆ. ಅದಕ್ಕೆ ನೂರಾರು ಜನರು ಸಹಾಯ ಮಾಡಿದ್ದಾರೆ. ಈ ರೀತಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಆಗಬೇಕು ಎಂಬುದು ನಮ್ಮ ಕನಸು. ಬದಲಿಗೆ ಸರ್ಕಾರ ಶಾಲೆಗಳನ್ನು ಮುಚ್ಚುತ್ತಿದೆ. ಅದು ಸರಿಯಿಲ್ಲ. ಉತ್ತಮ ಸೌಲಭ್ಯಗಳನ್ನು ನೀಡಿ ಶಾಲೆಗಳ ಗುಣಮಟ್ಟ ಹೆಚ್ಚಿಸಿದರೆ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ ಎಂಬುದು ನನ್ನ ಅಭಿಪ್ರಾಯ. ಇದನ್ನು ಹೇಳುವುದು ನನ್ನ ಕರ್ತವ್ಯ. ಸರ್ಕಾರದ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ, ಏಕೆಂದರೆ ನಾನೇ ಹಿಂದೆ ಸರಿದರೆ ಉಳಿದ ಎಲ್ಲರೂ ಸರ್ಕಾರದ ಜನವಿರೋಧಿ ಕ್ರಮಗಳನ್ನು ಎತ್ತಿ ತೋರಿಸಲು ಹೆದರುತ್ತಾರೆ” ಎಂದರು.

ಈ ಕುರಿತು ಶಿಕ್ಷಣ ತಜ್ಞರಾದ ಡಾ.ವಿ.ಪಿ ನಿರಂಜನಾರಾಧ್ಯರವರು ಹೇಳುವುದು ಹೀಗೆ: “ಈ ದೇಶದ ನಾಗರಿಕ ಪ್ರಜೆಯಾದವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇಇರುತ್ತದೆ. ಅವರು ದೇಶದ ಆಗುಹೋಗುಗಳಿಗೆ ವೈಯಕ್ತಿಕ ಅಭಿಪ್ರಾಯ ನೀಡುವ ಹಕ್ಕು ಸಹ ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ವೀರಣ್ಣ ಮಡಿವಾಳರು ಶಾಲೆಗಳನ್ನು ಇಷ್ಟು ಪ್ರಮಾಣದಲ್ಲಿ ಮುಚ್ಚುವುದರಿಂದ ಏನಾಗಲಿದೆ ಎಂಬುದನ್ನು ಹೇಳಿದ್ದಾರೆ. ಶಿಕ್ಷಣ ಸಚಿವರಿಗೆ ನಿಜವಾದ ಕಾಳಜಿ ಇದ್ದರೆ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬೇಕಿತ್ತಲ್ಲವೇ? ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮುಂಚೆ ಮೂಲ ವಾರಸುದಾರರ ಜೊತೆ ಚರ್ಚೆ ಮಾಡುತ್ತಿಲ್ಲ ಏಕೆ? ಶಿಕ್ಷಕರು ಹೇಳಿರುವುದರಲ್ಲಿ ಏನೇನೂ ತಪ್ಪಿಲ್ಲ. ಅದನ್ನು ಗೌರವಿಸಿ ಅವರೊಂದಿಗೆ ಚರ್ಚಿಸಬೇಕೆ ಹೊರತು ಅವರ ಮೇಲೆ ನೋಟಿಸ್ ಕೊಡಿಸುವುದು ಒಂದು ರೀತಿಯ ಭಯೋತ್ಪಾದನೆಯಾಗಿದೆ” ಎಂದರು.

“ಜನರನ್ನು ಮೌನಗೊಳಿಸಲು ಸರ್ಕಾರ ಮುಂದಾಗಿದೆ. ಏಕೆಂದರೆ ಜನ ಮಾತಾಡಿದಷ್ಟು ಸರ್ಕಾರದ ಹುಳುಕು ಬಯಲಾಗಲಿದೆ. ಹಾಗಾಗಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಆರೋಗ್ಯಕರ ಚರ್ಚೆ ನಡೆಯಬೇಕಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಈ ಭಯ ಹುಟ್ಟಿಸುವ ಕೆಲಸ ನಿಜವಾಗಿಯೂ ಒಳ್ಳೆಯದಲ್ಲ. ಅದರಲ್ಲಿಯೂ ಮೂಲಭೂತವಾಗಿ ಮಾತನಾಡಬೇಕಿರುವವರು ಶಿಕ್ಷಕರು. ಏಕೆಂದರೆ ಅವರಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿದೆ. ಆ ಕ್ಷೇತ್ರದಲ್ಲಿ ಅವರಿಗೆ 20-30 ವರ್ಷಗಳ ಅನುಭವವಿದ್ದು ಅದರ ಕಷ್ಟ, ನೋವು-ನಲಿವು ತಿಳಿದಿರುತ್ತದೆ. ಅವರನ್ನು ಗೌರವಿಸುವುದು ಬಿಟ್ಟು ಅವರ ಬಾಯ್ಮುಚ್ಚಿಸುವುದು ಸರಿಯಲ್ಲ ಎಂದರು.

“ನಿಯಮಗಳು ಯಾವಾಗಲೂ ಹೊಸ ಸಮಾಜವನ್ನು ಆರೋಗ್ಯಕರವಾಗಿ ಕಟ್ಟಿಕೊಳ್ಳಲು ಇರುವುದೇ ಹೊರತು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕಾಗಿ ಅಲ್ಲ. ಇಲ್ಲದಿದ್ದರೆ ಅವು ಬ್ರಿಟಿಷ್ ವಸಾಹತುಶಾಹಿ ಕಾನೂನುಗಳ ಪಳೆಯುಳಿಕೆ ಆಗಿಬಿಡುತ್ತವೆ. ಇದೊಂದು ದಮನಕಾರಿ ನೀತಿ ಆಗಿಬಿಡುತ್ತದೆ. ಯಾವ ಪ್ರಜ್ಞಾವಂತರೂ ಸಹ ಇದನ್ನು ಒಪ್ಪಲು ಸಾಧ್ಯವಿಲ್ಲ. ಇನ್ನೊಬ್ಬರ ವಿಚಾರಗಳನ್ನು ಒಪ್ಪದಿದ್ದರೂ ಗೌರವಿಸಬೇಕು ಎಂಬುದನ್ನು ನಮ್ಮ ಪ್ರಜಾಪ್ರಭುತ್ವ ಹೇಳುತ್ತದೆ. ಅದನ್ನು ಶಿಕ್ಷಣ ಸಚಿವರು ಅರಿತುಕೊಳ್ಳಬೇಕು. ನಾನಂತೂ ಶಿಕ್ಷಕ ವೀರಣ್ಣ ಮಡಿವಾಳರ ಪರ ನಿಲ್ಲುತ್ತೇನೆ” ಎಂದರು.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿಯೂ ಸಹ ಉಪನ್ಯಾಸಕರೊಬ್ಬರು ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದರು. ಸರ್ಕಾರ ಶಾಲೆಗಳನ್ನು ಮುಚ್ಚವ ಬದಲು ಮತ್ತಷ್ಟು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸುತ್ತಿದ್ದರು. ಅವರು ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದು ಆರೋಪಿಸಿ ಅವರಿಗೆ ಶಿಕ್ಷೆಯ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ಅದರ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಹೋರಾಡಿದರು. ಕೊನೆಗೆ ತೀರ್ಪು ಅವರ ಪರ ಬಂದು ಅವರ ವರ್ಗಾವಣೆ ರದ್ದಾಗಿದೆ.

ಈ ಕುರಿತು ಮಾತನಾಡಿದ ಅವರು, “ಸರ್ಕಾರಿ ನೌಕರರು ಸಹ ಈ ದೇಶದ ಪ್ರಜೆಗಳು. ಅವರಿಗೂ
ಮತದಾನದ ಹಕ್ಕು ಇದೆ. ಸರ್ಕಾರಿ ಸಂಬಳ ಪಡೆಯುತ್ತಾರೆ ಎಂಬ ಮಾತ್ರಕ್ಕೆ ಸರ್ಕಾರದ ತಪ್ಪುಗಳ ಕುರಿತು ಮಾತನಾಡಬಾರದು ಎಂಬುದು ವಸಾಹತುಶಾಹಿ ಮನಸ್ಥಿತಿ. ನಾವು ಸಂಬಳ ಪಡೆಯುವುದು ಮಾಡುವ ಕೆಲಸಕ್ಕಾಗಿಯೇ ಹೊರತು ಸರ್ಕಾರದ ವಿರುದ್ಧ ಮಾತನಾಡದಿರುವುದಕ್ಕೆ ಅಲ್ಲ. ಸರ್ಕಾರ ಶಿಕ್ಷಣದ ಕುರಿತು ಯಾವುದೇ ಮಹತ್ವದ ನಿರ್ಧಾರ ಜಾರಿಗೊಳಿಸುವಮುನ್ನ ಶಿಕ್ಷಕರು, ಉಪನ್ಯಾಸಕರ ಸಲಹೆ ಪಡೆಯಬೇಕು. ನಮ್ಮ ಆಶಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದೇ ಹೊರತು ದುರ್ಬಲಗೊಳಿಸುವುದಿಲ್ಲ. ಆದರೆ ಸರ್ಕಾರದ ಉದ್ದೇಶ ಕೆಟ್ಟದ್ದಾಗಿರುವುದರಿಂದ ಅದರ ವಿರುದ್ಧ ಯಾರು ದನಿಯೆತ್ತಬಾರದೆಂದು ಈ ನಿಯಮಗಳನ್ನು ಮುಂದೆ ಇಟ್ಟು ಹತ್ತಿಕ್ಕಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭುತ್ವಗಳು ದಮನದ ಮೂಲಕ ಜನರನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಜನರೊಟ್ಟಿಗೆ ಚರ್ಚೆ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಹಾಗಾಗಿ ಶಿಕ್ಷಕರು ಉಪನ್ಯಾಸಕರ ಮೇಲಿನ ಅಧಿಕಾರ ದುರುಪಯೋಗದ ಕ್ರಮಗಳನ್ನು ನಿಲ್ಲಿಸಬೇಕು. ಶಿಕ್ಷಕ ಸಮುದಾಯವೂ ಇದರ ಬಗ್ಗೆ ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...