ಕೇದಾರನಾಥ ಯಾತ್ರೆಯನ್ನು ಉತ್ತರಾಖಂಡ ಸರ್ಕಾರ ನಿಲ್ಲಿಸಿಲ್ಲ. ಬದಲಿಗೆ ‘ಉನ್ನತ’ ಆದೇಶಗಳಿಂದ ನಿಲ್ಲಿಸಲಾಗಿದೆ ಎಂದು ಉತ್ತರಾಖಂಡದ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಆರೋಪಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ನಡುವೆಯೂ ಉತ್ತರಾಖಂಡದಲ್ಲಿ ಕುಂಭಮೇಳ ನಡೆಸಿದ ಟೀಕೆಗೆ ಗುರಿಯಾಗಿದ್ದ ಮಾಜಿ ಸಿಎಂ ತೀರತ್ ಸಿಂಗ್ ರಾವತ್‌ರವರನ್ನು ಮೇ ಅಂತ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗದೆ. ಅವರ ಬದಲಿಗೆ ಪುಷ್ಕರ್ ಸಿಂಗ್ ಧಾಮಿ ಈಗ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಆರೋಪದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.
ನಾನು ಸಿಎಂ ಆಗಿದ್ದಾಗ, ನಾವು ಹಂತ ಹಂತವಾಗಿ ಯಾತ್ರೆಗೆ ಅವಕಾಶ ನೀಡಿದ್ದೆವು. ಲಸಿಕೆ ಹಾಕಿದ ಜನರು ಮತ್ತು ಕೋವಿಡ್ ಮುಕ್ತ ಜಿಲ್ಲೆಗಳ ಜನರು ಕೇದಾರನಾಥ ಯಾತ್ರೆ ಭೇಟಿ ಮಾಡಲು ಅನುಮತಿಸಬೇಕು ಎಂದು ನಾನು ನಂಬುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಈ ಬಾರಿಯ ಕೇದಾರನಾಥ ಯಾತ್ರೆಯನ್ನು ಮೊಟಕುಗೊಳಿಸಿದೆ. ಆದರೆ ಮೇಲಿನ ಆದೇಶಗಳು ಯಾತ್ರೆನ್ನು ತಡೆಯುತ್ತಿವೆ ಎಂದು ಮಾಜಿ ಸಿಎಂ ಹೇಳುವ ಮೂಲಕ ಅವರು ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.
ಮುಂದಿನ ವರ್ಷದ ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದನ್ನು ಗೆಲ್ಲುವುದಕ್ಕಾಗಿಯೇ ಭಕ್ತಾಧಿಗಳನ್ನು ಒಲೈಸಲು ಈ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ಭಾರೀ ವಿರೋಧದ ನಡುವೆಯೂ ಕುಂಭಮೇಳ ನಡೆಸಲಾಗಿತ್ತು. ಈಗ ಅದನ್ನೆ ದಾಳವಾಗಿಟ್ಟುಕೊಂಡು ಮಾಜಿ ಸಿಎಂ ಪ್ರತಿಕ್ರಿಯಿಸಿದ್ದಾರೆ.
ಉತ್ತರಾಖಂಡದಲ್ಲಿ 2017ರಲ್ಲಿ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇದರ ನಾಯಕರಾಗಿ ರಾವತ್ ಆಯ್ಕೆಯಾಗಿದ್ದರು. ಆದರೆ ಕಾರ್ಯವೈಖರಿ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದರು. ರಾವತ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದಿದ್ದರೆ, ರಾಜೀನಾಮೆ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ಕಳೆದ ಮಾರ್ಚ್‌ನಲ್ಲಿ ಅವರು ರಾಜೀನಾಮೆ ನೀಡಿದ್ದರು.
ಮುಖ್ಯಮಂತ್ರಿಯಿಂದ ಕೆಳಗಿಳಿದ ನಂತರವೂ ಸಹ “ಕೊರೊನಾ ವೈರಸ್ ಒಂದು ಜೀವಂತ ಜೀವಿ, ನಮ್ಮಂತೆ ಅದಕ್ಕೂ ಬದುಕುವ ಹಕ್ಕು ಇದೆ” ಎಂದು ತ್ರಿವೇಂದ್ರ ಸಿಂಗ್ ರಾವತ್ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದರು.
ಅವರ ನಂತರ ಸಿಎಂ ಆದ ತೀರತ್ ಸಿಂಗ್ ರಾವತ್ ತಜ್ಞರ ವಿರೋಧದ ನಡುವೆಯೂ ಕುಂಭಮೇಳವನ್ನು ನಡೆಸಿ ಅದನ್ನು ಸಮರ್ಥಿಸಿಕೊಂಡಿದ್ದರು. ಅದರಿಂದಾಗಿಯೇ ಲಕ್ಷಾಂತರ ಜನಕ್ಕೆ ಕೋವಿಡ್ ತಗುಲಿದೆ ಎಂದು ತಜ್ಞರು ಆರೋಪಿಸಿದ್ದರು. ಮುಖ್ಯಮಂತ್ರಿಯಾಗಿ ಮುಂದುವರೆಯಲು ಆರು ತಿಂಗಳೊಳಗೆ ಅವರು ಯಾವುದಾದರೂ ಸದನದ ಸದಸ್ಯರಾಗಬೇಕಿತ್ತು. ಉತ್ತರಾಖಂಡದಲ್ಲಿ ವಿಧಾನ ಪರಿಷತ್ ಅಸ್ತಿತ್ವದಲ್ಲಿಲ್ಲ. ಅಲ್ಲದೇ ಕೊರೊನಾ ಕಾರಣದಿಂದ ಚುನಾವಣಾ ಆಯೋಗವು ಸದ್ಯಕ್ಕೆ ಉಪ ಚುನಾವಣೆ ನಡೆಸುವುದು ಕಷ್ಟಕರ ಎಂಬ ಕಾರಣ ನೀಡಿ ಬಿಜೆಪಿ ಹೈಕಮಾಂಡ್ ಅವರನ್ನು ಮೇ ಅಂತ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದೆ. ಈಗ ಪುಷ್ಕರ್ ಸಿಂಗ್ ಧಾಮಿ ನೂತನ ಸಿಎಂ ಆಗಿದ್ದಾರೆ.
ಇದನ್ನೂ ಓದಿ: Explainer: ಬಿಜೆಪಿಯು ಉತ್ತರಾಖಂಡ ಸಿಎಂ ಬದಲಿಸಿದ್ದು ಮಮತಾ ಬ್ಯಾನರ್ಜಿಯನ್ನು ಕೆಳಗಿಳಿಸಲೇ?


