ಕೊಚ್ಚಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಪರ ಬೆಂಬಲದ ಸಂಕೇತವಾದ ‘ಕೆಫಿಯಹ್’ ಧರಿಸಿದ್ದಕ್ಕಾಗಿ ಕೇರಳ ಪೊಲೀಸರು ನಾಲ್ವರನ್ನು ಐದು ಗಂಟೆಗಳ ಕಾಲ ವಶಕ್ಕೆ ಪಡೆದಿರುವ ಘಟನೆ ನವೆಂಬರ್ 7ರಂದು ನಡೆದಿದೆ. ರಾಜ್ಯ ಪೊಲೀಸರ ಈ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಶಕ್ಕೆ ಒಳಗಾದವರನ್ನು ರೆಜಾಜ್, ಅಬ್ದುಲ್ಲಾ, ಅಮೀನ್ ಮತ್ತು ಮಿದ್ಲಾಜ್ ಎಂದು ಗುರುತಿಸಲಾಗಿದ್ದು, ಈ ಸ್ನೇಹಿತರ ಗುಂಪು ನವೆಂಬರ್ 7 ರ ಗುರುವಾರ ಟಿಕೆಟ್ ಸರದಿಯಲ್ಲಿ ಕಾಯುತ್ತಿದ್ದಾಗ ಪೊಲೀಸರು ಅವರನ್ನು ಸಂಜೆ 7 ಗಂಟೆಗೆ ಪಲರಿವಟ್ಟಂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಲಪ್ಪುರಂ ಅಪರಾಧ ವಿಭಾಗದ ಪೊಲೀಸರು ಅಮೀನ್ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ ಎಂದು ರೆಜಾಜ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೇರಳ ಬ್ಲಾಸ್ಟರ್ಸ್ ಎಫ್‌ಸಿ 28 ನಿಷೇಧಿತ ವಸ್ತುಗಳನ್ನು ಕ್ರೀಡಾಂಗಣದಲ್ಲಿ ನಿಷೇಧಿಸಿ ಪಟ್ಟಿ ಮಾಡಿತ್ತು. ಆದರೆ ಪ್ರೇಕ್ಷಕರು ಕೆಫಿಯೆಹ್ ಧರಿಸಿ ಪಂದ್ಯ ವೀಕ್ಷಿಸುವುದನ್ನು ಇದು ನಿಷೇಧಿಸಿರಲಿಲ್ಲ. ಫ್ರೆಂಚ್ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಅಭಿಮಾನಿಗಳು ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಫ್ರೀ ಪ್ಯಾಲೆಸ್ಟೈನ್ ಎಂದು ಹೇಳುವ ದೊಡ್ಡ ಟಿಫೊವನ್ನು ಬಿಚ್ಚಿಟ್ಟ ಘಟನೆಯ ಬೆನ್ನಲ್ಲೆ ಈ ಘಟನೆ ನಡೆದಿದೆ.
ವಶಕ್ಕೆ ಒಳಗಾಗಿರುವ ರೆಜಾಜ್ ಮಾತನಾಡಿ, ತಾವು ಪ್ರತಿಭಟನೆ ನಡೆಸುವ ಉದ್ದೇಶವನ್ನು ಹೊಂದಿಲ್ಲ,ಬದಲಾಗಿ ಪ್ಯಾಲೆಸ್ಟೈನ್ ಪರ ರಾಜಕೀಯದ ಕಾರಣಕ್ಕಾಗಿ ಕೆಫಿಯೆಹ್ ಧರಿಸಿದ್ದಾಗಿ ತಿಳಿಸಿದ್ದಾರೆ.
“ನಾವು ಯಾವುದೇ ಬ್ಯಾನರ್, ಫಲಕ ಅಥವಾ ಧ್ವಜವನ್ನು ಹಿಡಿದಿಲ್ಲ. ಟಿಕೆಟ್ ಲಭ್ಯವಿದೆ ಎಂದು ನನ್ನ ಸ್ನೇಹಿತರು ನನ್ನನ್ನು ಕರೆದಿದ್ದರಿಂದ ನಾನು ಪಂದ್ಯಕ್ಕೆ ಬಂದೆ. ನಾವು ಟಿಕೆಟ್ ಸರದಿಯಲ್ಲಿ ಕಾಯುತ್ತಿರುವಾಗ, ಸಹಾಯಕ ಪೊಲೀಸ್ ಆಯುಕ್ತರು ಕೆಫಿಯೆಹ್ ಎಂದರೇನು ಎಂದು ಕೇಳಿದರು. ಇದನ್ನು ಒಳಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ” ಎಂದು ರೆಜಾಜ್ ಹೇಳಿದ್ದಾರೆ.
“ಇದನ್ನು ಸಭ್ಯ ರೀತಿಯಲ್ಲಿ ಧರಿಸುವುಕ್ಕೆ ನಿಯಮಗಳು ಅಡ್ಡಿ ಮಾಡುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಈ ವೇಳೆ ಅವರು ನಮ್ಮ ಹೆಸರುಗಳನ್ನು ಕೇಳಿದ್ದು, ನಾನು ಅವರಿಗೆ ಹೆಸರು ಕೇಳಿದ ನಂತರ ನಮಗೆ ಕಾಯುವಂತೆ ಹೇಳಿದರು. ನಂತರ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಬಂದರು. ನಂತರ ಎಸಿಪಿ ಕೆಲವು ಫೋನ್ ಕರೆಗಳನ್ನು ಮಾಡಿ ಸ್ಪಷ್ಟನೆಗಾಗಿ ಠಾಣೆಗೆ ಬರುವಂತೆ ಹೇಳಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ನಮ್ಮನ್ನು ಧರ್ಮದ ಆಧಾರದ ಮೇಲೆ ಪ್ರಶ್ನಿಸಲಾಗಿದೆ ಎಂದು ಜನಪ್ರಿಯ ಸ್ವತಂತ್ರ ಪತ್ರಕರ್ತರೂ ಆಗಿರುವ ರೆಜಾಜ್ ವಿವರಿಸಿದ್ದಾರೆ. “ಮತ್ತೊಬ್ಬ ಬಂಧಿತ ವ್ಯಕ್ತಿ ಅಬ್ದುಲ್ಲಾ ಅವರು ತಿರುವನಂತಪುರಂನಲ್ಲಿ ನೆಲೆಸಿದ್ದು, ತಾನು ಮಸೀದಿಯೊಂದರಲ್ಲಿ ಧರ್ಮಗುರು ಎಂದು ಹೇಳಿದಾಗ, ಸರ್ಕಲ್ ಇನ್ಸ್‌ಪೆಕ್ಟರ್ ನೀವೆಲ್ಲರೂ ಮದರಸಾಗಳಿಗೆ ಹೋಗುತ್ತೀರಾ ಎಂದು ಕೇಳಿದ್ದಾರೆ” ಎಂದು ರೆಜಾಜ್ ಹೇಳಿದ್ದಾರೆ.
ನನ್ನ ಜೊತೆಗಿದ್ದ ನನ್ನ ಇತರ ಸ್ನೇಹಿತರು ಮಲಪ್ಪುರಂ ಮತ್ತು ಪಾಲಕ್ಕಾಡ್‌ನಿಂದ ಬಂದಿದ್ದರಿಂದ, ಪಂದ್ಯಕ್ಕೆ ಬೇರೆ ಜಿಲ್ಲೆಗಳಿಂದ ಏಕೆ ಒಟ್ಟಿಗೆ ಬಂದರು ಎಂದು ಸಿಐ ನಮ್ಮನ್ನು ಕೇಳಿದ್ದಾರೆ. ಅದಾಗ್ಯೂ, ಕೇರಳ ಬ್ಲಾಸ್ಟರ್ಸ್ ಪಂದ್ಯಕ್ಕೆ ಎರ್ನಾಕುಲಂ ನಿವಾಸಿಗಳು ಮಾತ್ರ ಹಾಜರಾಗುವುದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಂತರ ನಾವು ಒಬ್ಬರನ್ನೊಬ್ಬರು ಹೇಗೆ ತಿಳಿದಿದ್ದೇವೆ, ನಮ್ಮ ಉದ್ದೇಶವೇನು, ನಾವು ಯಾವ ಪುಸ್ತಕಗಳನ್ನು ಓದುತ್ತೇವೆ, ಇತರ ವಿಷಯಗಳ ಜೊತೆಗೆ ನಾವು ಹೊಂದಿರುವ ರಾಜಕೀಯದಂತಹ ಬಹಳಷ್ಟು ವೈಯಕ್ತಿಕ ವಿವರಗಳನ್ನು ಕೇಳಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶ | ವಾಟ್ಸಾಪ್ ಮೂಲಕ ಕನಿಷ್ಠ 100 ಸರ್ಕಾರಿ ಸೇವೆ ನೀಡುವ ಯೋಜನೆ
ಆಂಧ್ರಪ್ರದೇಶ | ವಾಟ್ಸಾಪ್ ಮೂಲಕ ಕನಿಷ್ಠ 100 ಸರ್ಕಾರಿ ಸೇವೆ ನೀಡುವ ಯೋಜನೆ


