ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಹೊರಬಂದರು. ಅಬಕಾರಿ ನೀತಿ ‘ಹಗರಣ’ಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ ಅವರು ಹೊರಬಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ಭಾರಿ ಮಳೆಯ ನಡುವೆಯೇ ಕೇಜ್ರಿವಾಲ್ ಅವರು ಜೈಲು ಆವರಣದಿಂದ ನಿರ್ಗಮಿಸಿದರು. ಅವರ ಪತ್ನಿ ಸುನೀತಾ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್, ಭಗವಂತ್ ಮಾನ್ ಸೇರಿದಂತೆ ಎಎಪಿಯ ಹಿರಿಯ ನಾಯಕರು ಹಾಜರಿದ್ದರು.
ಕಾರಿನ ಸನ್‌ರೂಫ್ ಮೂಲಕ ನಿಂತು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಕೇಜ್ರಿವಾಲ್, ತಿಹಾರ್ ಜೈಲಿನ ಹೊರಗೆ ಜಮಾಯಿಸಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. “ಜೈಲ್ ಕೆ ಟೇಲ್ ಟೂಟ್ ಗಯೇ, ಕೇಜ್ರಿವಾಲ್ಜಿ ಛೂಟ್ ಗಯೇ” ಎಂದು ಎಎಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
“ಮಳೆಯಲ್ಲಿ ನನಗಾಗಿ ಕಾದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಅವರು ನನ್ನನ್ನು ಜೈಲಿಗೆ ಹಾಕಿದರು, ಅವರು ಕೇಜ್ರಿವಾಲ್ ಅವರನ್ನು ಕಂಬಿ ಹಿಂದೆ ಹಾಕಿದರೆ ನೈತಿಕ ಸ್ಥೈರ್ಯ ಕುಗ್ಗುತ್ತದೆ ಎಂದು ಅವರು ಭಾವಿಸಿದರು. ಇಂದು ನಾನು ಜೈಲಿನಿಂದ ಹೊರಬಂದಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನನ್ನ ನೈತಿಕ ಸ್ಥೈರ್ಯ 100ರಷ್ಟು ಹೆಚ್ಚಾಗಿದೆ. ನನ್ನ ಶಕ್ತಿ 100 ಪಟ್ಟು ಹೆಚ್ಚಾಗಿದೆ” ಎಂದು ಕೇಜ್ರಿವಾಲ್ ಹೇಳಿದರು.
साज़िश पर सत्य की जीत हुई। तिहाड़ जेल से बाहर आए CM @ArvindKejriwal। LIVE https://t.co/jjRpRDUiEh
— AAP (@AamAadmiParty) September 13, 2024
“ನನ್ನ ಜೀವನ ದೇಶಕ್ಕೆ ಮುಡಿಪಾಗಿದೆ, ನನ್ನ ಜೀವನದ ಪ್ರತಿ ಕ್ಷಣ, ಪ್ರತಿ ರಕ್ತ ಹನಿಯೂ ದೇಶಕ್ಕೆ ಸಮರ್ಪಿತವಾಗಿದೆ. ನಾನು ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ನೋಡಿದ್ದೇನೆ, ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ದೇವರು ನನ್ನನ್ನು ಪ್ರತಿ ಹೆಜ್ಜೆಯಲ್ಲಿಯೂ ಬೆಂಬಲಿಸಿದ್ದಾನೆ. ಏಕೆಂದರೆ, ನಾನು ಸತ್ಯವಂತ ಮತ್ತು ಪ್ರಾಮಾಣಿಕನಾಗಿದ್ದೆ” ಎಂದು ಅವರು ಹೇಳಿದರು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕೇಜ್ರಿವಾಲ್‌ಗೆ ರಿಲೀಫ್ ನೀಡಿತು. ಆದರೆ, ಮುಖ್ಯಮಂತ್ರಿ ಕಚೇರಿಗೆ ಭೇಟಿ ನೀಡುವುದನ್ನು ಅಥವಾ ಯಾವುದೇ ಅಧಿಕೃತ ದಾಖಲೆಗಳಿಗೆ ಸಹಿ ಮಾಡುವುದನ್ನು ನಿರ್ಬಂಧಿಸಿತು.
ಮಾರ್ಚ್ 21 ರಂದು ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಮೇ 10 ರಂದು ಮಧ್ಯಂತರ ಜಾಮೀನು ಪಡೆದಿದ್ದರು.
ಕೇಜ್ರಿವಾಲ್ ಅವರ ಜಾಮೀನಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ, ಸುಪ್ರೀಂ ಕೋರ್ಟ್ ಅವರಿಗೆ ಕೇವಲ ಷರತ್ತುಬದ್ಧ ಜಾಮೀನು ನೀಡಿರುವುದರಿಂದ ಮುಖ್ಯಮಂತ್ರಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರು ಮದ್ಯ ನೀತಿ ಪ್ರಕರಣದಲ್ಲಿ ಆರೋಪಿಯಾಗಿ ಮುಂದುವರಿದಿದ್ದಾರೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಎಪಿ, ಅರವಿಂದ್ ಕೇಜ್ರಿವಾಲ್ ಅವರಂತಹ “ಕಠಿಣ ಪ್ರಾಮಾಣಿಕ” ನಾಯಕನನ್ನು ಜೈಲಿನಲ್ಲಿಟ್ಟಿದ್ದಕ್ಕಾಗಿ ಆಡಳಿತ ಪಕ್ಷವು ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಅಬಕಾರಿ ನೀತಿ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ಆದೇಶವು ಬಿಜೆಪಿಯ “ಸುಳ್ಳು”ನ್ನು ಬಹಿರಂಗಪಡಿಸಿದೆ ಎಂದು ಪಕ್ಷವು ಹೇಳಿದೆ.
“ಇದು ಕೇಜ್ರಿವಾಲ್‌ಗೆ ನೀಡಿದ ಜಾಮೀನಿನ ವಿಷಯವಲ್ಲ. ಬಿಜೆಪಿ ನೇತೃತ್ವದ ಕೇಂದ್ರಕ್ಕೆ ತನ್ನ ಸರ್ವಾಧಿಕಾರವನ್ನು ನಿಲ್ಲಿಸುವಂತೆ ನ್ಯಾಯಾಲಯವು ದೊಡ್ಡ ಸಂದೇಶವನ್ನು ನೀಡಿದೆ” ಎಂದು ಹಿರಿಯ ಎಎಪಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಇದನ್ನೂ ಓದಿ; ಇಡಿ ಪ್ರಕರಣದ ಜಾಮೀನು ವಿಫಲಗೊಳಿಸಲು ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು: ನ್ಯಾ. ಭುಯಾನ್


