ಸರಬರಾಜು ಮಾರ್ಗಗಳನ್ನು ಒಳಗೊಂಡಂತೆ ವಿದ್ಯುತ್ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸರ್ಕಾರದ ವಿದ್ಯುತ್ ಮಂಡಳಿ ಮತ್ತು ಭಾರತದ ಅದಾನಿ ಎನರ್ಜಿ ಸೊಲ್ಯೂಷನ್ಸ್ ನಡುವಿನ 736 ಮಿಲಿಯನ್ ಡಾಲರ್ ಒಪ್ಪಂದವನ್ನು ಕೀನ್ಯಾದ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಸರ್ಕಾರಿ ಸ್ವಾಮ್ಯದ ಕೀನ್ಯಾ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಕಂಪನಿ (ಕೆಟ್ರಾಕೊ) ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ನಡುವಿನ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಒಪ್ಪಂದಕ್ಕೆ ಈ ತಿಂಗಳ ಆರಂಭದಲ್ಲಿ ಸಹಿ ಹಾಕಲಾಗಿತ್ತು.
ಅಕ್ಟೋಬರ್ 11ರಂದು ಒಪ್ಪಂದದ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದ ಕೀನ್ಯಾ ಸರ್ಕಾರ, ಇದು (ಒಪ್ಪಂದ) ಪದೇ ಪದೇ ತಲೆದೂರುವ ವಿದ್ಯುತ್ ಸಮಸ್ಯೆ ಪರಿಹರಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಲಿದೆ ಎಂದು ಹೇಳಿತ್ತು.
ಅದಾನಿ ಜೊತೆಗಿನ 30 ವರ್ಷಗಳ ಒಪ್ಪಂದವನ್ನು ಪ್ರಶ್ನಿಸಿ ಕೀನ್ಯಾದ ಲಾ ಸೊಸೈಟಿ ಹೈಕೋರ್ಟ್ ಮೊರೆ ಹೋಗಿತ್ತು. ಒಪ್ಪಂದ ರದ್ದುಗೊಳಿಸಿದ ಹೈಕೋರ್ಟ್, ನ್ಯಾಯಾಲಯ ಹೇಳುವವರೆಗೆ ಸರ್ಕಾರದ ಒಪ್ಪಂದ ಸಂಬಂಧ ಯಾವುದೇ ಹೆಜ್ಜೆ ಇಡಬಾರದು ಎಂದಿದೆ.
ಕೀನ್ಯಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕಾಯ್ದೆ-2021ರ ಅಡಿಯಲ್ಲಿ ಸಾರ್ವಜನಿಕ ಯೋಜನೆಗಳಲ್ಲಿ ಖಾಸಗಿ ವಲಯದ ಪಾಲುದಾರಿಕೆಗೆ ಅವಕಾಶವಿದೆ. ಆದರೆ, ವಿದ್ಯುತ್ ಮಂಡಳಿ ಕೆಟ್ರಾಕೊ ಮತ್ತು ಅದಾನಿ ನಡುವಿನ ಒಪ್ಪಂದ ಕಾಯ್ದೆಯೆ ನಿಯಮಾನುಸಾರ ನಡೆದಿಲ್ಲ. ಒಪ್ಪಂದವನ್ನು ಸಂವಿಧಾನಕ್ಕೆ ವಿರುದ್ದವಾಗಿದೆ ಮತ್ತು ಗೌಪ್ಯತೆಯ ಆತಂಕವಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಲಾ ಸೊಸೈಟಿ ವಾದಿಸಿತ್ತು.
ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿ ಅದಾನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೀನ್ಯಾದ ಇಂಧನ ಸಚಿವಾಲಯ ಈ ಹಿಂದೆ ಹೇಳಿತ್ತು. ಆದರೆ, ಇದರಲ್ಲಿ ಲೋಪವಾಗಿದೆ ಎಂದು ಲಾ ಸೊಸೈಟಿ ಆರೋಪಿಸಿದೆ.
ನ್ಯಾಯಾಲಯ ಒಪ್ಪಂದವನ್ನು ರದ್ದುಪಡಿಸಿರುವ ಕುರಿತು ಅದಾನಿ ಸಮೂಹ ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎಂದು energy.economictimes ವರದಿ ಮಾಡಿದೆ.
ಕೀನ್ಯಾದ ಲಾ ಸೊಸೈಟಿ ಮತ್ತು ಮಾನವ ಹಕ್ಕುಗಳ ಆಯೋಗ ಜಂಟಿಯಾಗಿ ಅದಾನಿ ಜೊತೆಗಿನ ವಿಮಾನ ನಿಲ್ದಾಣದ ಮತ್ತೊಂದು ಪಾಲುದಾರಿಕೆಯ ಒಪ್ಪಂದವನ್ನೂ ಪ್ರಶ್ನಿಸಿದೆ. ಈ ಒಪ್ಪಂದ ಬಹಳ ದುಬಾರಿಯಾಗಿದೆ. ಉದ್ಯೋಗ ನಷ್ಟದ ಆತಂಕವಿದೆ ಮತ್ತು ಹಣಕ್ಕೆ ಮೌಲ್ಯವನ್ನು ಕಲ್ಪಿಸುವುದಿಲ್ಲ ಎಂದು ಎರಡೂ ಸಂಸ್ಥೆಗಳು ಹೇಳಿವೆ.
ಇದನ್ನೂ ಓದಿ : ಒಂದು ವರ್ಷದ ನಡುವೆ ಯುಎಸ್‌ನಲ್ಲಿ 90 ಸಾವಿರಕ್ಕೂ ಅಧಿಕ ಅಕ್ರಮ ಭಾರತೀಯ ವಲಸಿಗರ ಬಂಧನ : ವರದಿ


