ಯುವಕನೋರ್ವ ತನ್ನ ಗೆಳತಿ, ಕುಟುಂಬ ಸದಸ್ಯರು ಸೇರಿ ಐವರನ್ನು ಹತ್ಯೆಗೈದು, ತಾನೂ ವಿಷ ಸೇವಿಸಿ ಪೊಲೀಸರ ಮುಂದೆ ಹಾಜರಾದ ಭಯಾನಕ ಘಟನೆ ಕೇರಳದ ತಿರುವನಂತಪುರ ಜಿಲ್ಲೆಯ ವೆಂಜರಮೂಡು ಮತ್ತು ಪಾಂಗೋಡ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೋಮವಾರ (ಫೆ.24) ನಡೆದಿದೆ.
ಆರೋಪಿ 23 ವರ್ಷದ ಅಫಾನ್ ಎಂದು ತಿಳಿದು ಬಂದಿದೆ. ಅಫಾನ್ ಸೋಮವಾರ ಸಂಜೆ 6.15ರ ಸುಮಾರಿಗೆ ವೆಂಜರಮೂಡು ಪೊಲೀಸ್ ಠಾಣೆಗೆ ತೆರಳಿ, “ತನ್ನ ಗೆಳತಿ ಸೇರಿ 6 ಮಂದಿಯನ್ನು ಹತ್ಯೆಗೈದಿದ್ದೇನೆ. ಮನೆಯಲ್ಲಿ ಗ್ಯಾಸ್ ಆನ್ ಮಾಡಿಟ್ಟಿದ್ದೇನೆ. ತಾನೂ ವಿಷ ಸೇವಿಸಿದ್ದೇನೆ” ಎಂದಿದ್ದಾನೆ.
ಯುವಕನ ಮಾತು ಕೇಳಿ ದಂಗಾದ ಪೊಲೀಸರು, ತಕ್ಷಣ ಆತನ ಮನೆಗೆ ಧಾವಿಸಿದ್ದಾರೆ. ಅಲ್ಲಿ ಆತನ 13 ವರ್ಷದ ಸಹೋದರ ಅಹ್ಸಾನ್ ಮತ್ತು ಗೆಳತಿ ಫರ್ಝಾನಾಳ ಮೃತದೇಹ ಕಂಡು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಶೆಮಿ ಜೀವನ್ಮರಣ ಹೋರಾಟದಲ್ಲಿದ್ದರು. ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಅಫಾನ್, ತನ್ನ ಸಹೋದರ ಅಹ್ಸಾನ್, ಗೆಳತಿ ಫರ್ಝಾನಾ, ಅಜ್ಜಿ ಸಲ್ಮಾ ಬೀವಿ, ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿದಾ (ಲತೀಫ್ ಅವರ ಪತ್ನಿ) ಮತ್ತು ತಾಯಿ ಶೆಮಿ ಸೇರಿ 6 ಮಂದಿಯ ಮೇಲೆ ದಾಳಿ ಮಾಡಿದ್ದಾನೆ. ಈ ಪೈಕಿ ಐವರು ಸಾವನ್ನಪ್ಪಿದ್ದು, ತಾಯಿ ಶೆಮಿ ಬದುಕುಳಿದಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ಅಫಾನ್ ಸುತ್ತಿಗೆಯಿಂದ ಹೊಡೆದು ಎಲ್ಲರನ್ನೂ ಹತ್ಯೆ ಮಾಡಿದ್ದಾನೆ. ಆತನ ಚಿಕ್ಕಪ್ಪ ಲತೀಫ್ ಅವರ ದೇಹ ಅವರ ಮನೆಯ ಲಿವಿಂಗ್ ರೂಮಿನ ಸೋಫಾದಲ್ಲಿ ಕುಳಿತ ಸ್ಥಿತಿಯಲ್ಲಿ ಕಂಡು ಬಂದಿದೆ. ಲತೀಫ್ ಅವನ ಪತ್ನಿ ಶಾಹಿದಾ ಅವರ ದೇಹ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ. ಗೆಳತಿ ಫರ್ಝಾನಾ ಅವರ ದೇಹ ಕೂಡ ಸೋಫಾದಲ್ಲಿ ಪತ್ತೆಯಾಗಿದ್ದು, ಅವರ ಮುಖವನ್ನು ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿತ್ತು.
ವೆಂಜರಮೂಡು ಮತ್ತು ಪಾಂಗೋಡ್ ಪೊಲೀಸ್ ಠಾಣೆಗಳ ವ್ಯಾಪ್ತಿಯ ಮೂರು ಪ್ರದೇಶಗಳಾದ ವೆಂಜರಮೂಡು, ಎಸ್.ಎನ್ ಪುರಂ ಮತ್ತು ಪಾಂಗೋಡ್‌ನಲ್ಲಿ ಕೊಲೆಗಳು ನಡೆದಿವೆ. ಪೊಲೀಸರ ಪ್ರಕಾರ, ಆರೋಪಿ ಅಫಾನ್ ವೆಂಜರಮೂಡಿನಲ್ಲಿರುವ ತನ್ನ ಮನೆಯಿಂದ ಪಾಂಗೋಡಿಗೆ ಸುಮಾರು 25 ಕಿ.ಮೀ ದೂರ ಪ್ರಯಾಣಿಸಿ, ಅಲ್ಲಿ ಮೊದಲು ತನ್ನ ಅಜ್ಜಿಯನ್ನು ಕೊಂದಿದ್ದಾನೆ. ನಂತರ 4 ಕಿ.ಮೀ ಪ್ರಯಾಣಿಸಿ ಎಸ್.ಎನ್ ಪುರಂನ ಕೂನನ್‌ವೆಂಗದಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮರನ್ನು ಅವರ ಮನೆಯಲ್ಲೇ ಹತ್ಯೆ ಮಾಡಿದ್ದಾರೆ. ಅಲ್ಲಿಂದ ವೆಂಜರಮೂಡಿನ ಮನೆ ಕಡೆಗೆ ಪ್ರಯಾಣಿಸಿದ ಆತ, ದಾರಿ ಮಧ್ಯೆ ಗೆಳತಿ ಫರ್ಝಾನಳನ್ನು ಕರೆದುಕೊಂಡು ಬಂದಿದ್ದಾನೆ. ಮನೆಗೆ ತಲುಪಿದ ನಂತರ, ಸಹೋದರ ಅಹ್ಸಾನ್, ಗೆಳತಿ ಫರ್ಝಾನ ಮತ್ತು ತಾಯಿ ಶೆಮಿ ಮೇಲೆ ದಾಳಿ ಮಾಡಿದ್ದಾನೆ.
ಘಟನೆ ಸಂಬಂಧ ವೆಂಜರಮೂಡು ಮತ್ತು ಪಾಂಗೋಡ್ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ನಡುವೆ ಸರಣಿ ಕೊಲೆಗಳು ನಡೆದಿವೆ. ಆದರೆ, ಆರೋಪಿಯ ಸರಿಯಾದ ಹೇಳಿಕೆಯನ್ನು ಪಡೆಯಲು ಸದ್ಯಕ್ಕೆ ಸಾಧ್ಯವಾಗದ ಕಾರಣ ಪ್ರತಿ ಕೊಲೆಯ ನಿಖರವಾದ ಸಮಯವನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಆರೋಪಿ ವಿಷ ಸೇವಿಸಿದ್ದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿರುವನಂತಪುರಂ ಗ್ರಾಮೀಣ ಎಸ್ಪಿ ಸುದರ್ಶನ್ ಕೆ.ಎಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಆರೋಪಿ ಅಫಾನ್ ಪೊಲೀಸರ ಮುಂದೆ ಶರಣಾಗುವ ಮೊದಲು ವಿಷ ಸೇವಿಸಿದ್ದರು. ಅವರನ್ನು ಪ್ರಸ್ತುತ ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ವಾಮನಪುರಂ ಶಾಸಕ ಡಿ.ಕೆ. ಮುರಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಮ್ಮ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಅದು ವಿಫಲವಾದರೆ ಯಾರಾದರು ಬದುಕುಳಿಯಬಹುದೆಂಬ ಭಯದಿಂದ, ಸ್ವತಃ ನಾನೇ ಕೊಲ್ಲುವ ತೀರ್ಮಾನ ಮಾಡಿದೆ” ಎಂಬುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ಶಾಸಕ ಡಿ.ಕೆ. ಮುರಳಿ ಹೇಳಿದ್ದಾರೆ.
ವಿದೇಶದಲ್ಲಿ ವಾಹನಗಳ ಬಿಡಿಭಾಗಗಳ ವ್ಯವಹಾರ ನಡೆಸುತ್ತಿದ್ದ ಅಫಾನ್‌ನ ತಂದೆ, ಇತ್ತೀಚೆಗೆ ವಿಸಿಟಿಂಗ್ ವೀಸಾದಲ್ಲಿ ತೆರಳಿದ್ದರು. ಅವರ ವ್ಯವಹಾರ ಕುಸಿದು ಕುಟುಂಬ ಭಾರೀ ಸಾಲದಲ್ಲಿ ಸಿಲುಕಿತ್ತು. ಅಫಾನ್‌ನ ತಾಯಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಿರಿಯ ಸಹೋದರ ಅಹ್ಸಾನ್ ವೆಂಜರಮೂಡು ಶಾಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕುಟುಂಬಸ್ಥರು ತನಗೆ ಹಣ ನೀಡದ ಕಾರಣ ಅಫಾನ್ ಅಸಮಾಧಾನಗೊಂಡಿದ್ದ ಎಂದು ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಪೊಲೀಸರು ಇದನ್ನು ಇನ್ನೂ ದೃಢಪಡಿಸಿಲ್ಲ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸೌಜನ್ಯ : thenewsminute.com
ಮೂವರು ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ 18 ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರ


