ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ಕ್ರಮದ ವಿರುದ್ಧ ಕೇರಳ ವಿಧಾನಸಭೆ ಸೋಮವಾರ (ಸೆ.29) ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪಾರದರ್ಶಕ ರೀತಿಯಲ್ಲಿ ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಎಸ್‌ಐಆರ್ ವಿರುದ್ಧ ಈಗಾಗಲೇ ಬಲವಾದ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸದನದಲ್ಲಿ ಮಂಡಿಸಿದ ನಿರ್ಣಯವನ್ನು ಬೆಂಬಲಿಸಿತು.
ನಿರ್ಣಯ ಮಂಡನೆ ವೇಳೆ, ಎಸ್‌ಐಆರ್ ಜಾರಿಗೆ ತರಲು ಚುನಾವಣಾ ಆಯೋಗ ತೆಗೆದುಕೊಂಡ ‘ಆತುರದ ಕ್ರಮ’ದ ಬಗ್ಗೆ ಮತ್ತು ಆ ಕ್ರಮದ ಹಿಂದೆ ದುರುದ್ದೇಶವಿದೆ ಎಂದು ಶಂಕಿಸಲಾಗಿರುವ ಬಗ್ಗೆ ಇರುವ ಕಳವಳಗಳನ್ನು ಸಿಎಂ ಸದನಕ್ಕೆ ತಿಳಿಸಿದರು.
ಚುನಾವಣಾ ಆಯೋಗವು ಎಸ್‌ಐಆರ್ ನಡೆಸಲು ಮುಂದಾಗಿರುವುದು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‍ಸಿ) ಜಾರಿಗೆ ತರುವ ‘ಹಿಂಬಾಗಿಲಿನ’ ಪ್ರಯತ್ನವಾಗಿದೆ ಎಂಬ ವ್ಯಾಪಕ ಕಳವಳಗಳ ಬಗ್ಗೆ ಅವರು ಗಮನಸೆಳೆದರು.
ಬಿಹಾರದಲ್ಲಿ ಇತ್ತೀಚೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆಯು ಅಂತಹ ಕಳವಳಗಳನ್ನು ದೃಢಪಡಿಸುತ್ತದೆ ಎಂದು ಹೇಳಿದೆ ಪಿಣರಾಯಿ ವಿಜಯನ್, ಇದು ‘ಹೊರಗಿಡುವ ರಾಜಕೀಯ’ ವನ್ನು ಪ್ರತಿಬಿಂಬಿಸುತ್ತದೆ ಎಂದರು.
ಬಿಹಾರದಲ್ಲಿ ಜಾರಿಗೆ ತರಲಾದ ಎಸ್‌ಐಆರ್ ಮತದಾರರ ಪಟ್ಟಿಯಿಂದ ಜನರನ್ನು ‘ತರ್ಕಬದ್ಧವಲ್ಲದ ಹೊರಗಿಡುವಿಕೆ’ಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ವಿಜಯನ್, ಅದೇ ಮಾದರಿಯನ್ನು ದೇಶದಾದ್ಯಂತ ಅನುಸರಿಸಲಾಗುತ್ತಿದೆಯೇ ಎಂಬ ಅನುಮಾನ ಇದೆ ಎಂದು ಹೇಳಿದರು.
ಬಿಹಾರ ಎಸ್‌ಐಆರ್ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವು ಸುಪ್ರೀಂ ಕೋರ್ಟ್‌ನ ಪರಿಗಣನೆಯಲ್ಲಿರುವಾಗ, ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಅನ್ನು ಜಾರಿಗೆ ತರಲು ಮಾಡಲಾಗುತ್ತಿರುವ ಪ್ರಯತ್ನಗಳನ್ನು ಸಿಎಂ ನಿರ್ಣಯದಲ್ಲಿ ಪ್ರಶ್ನಿಸಿದರು.
ದೀರ್ಘಾವಧಿಯ ಸಿದ್ಧತೆ ಮತ್ತು ಸಮಾಲೋಚನೆಯ ಅಗತ್ಯವಿರುವ ಎಸ್‌ಐಆರ್ ಅನ್ನು ಚುನಾವಣಾ ಆಯೋಗವು ತರಾತುರಿಯಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ಪ್ರಯತ್ನ ಎಂಬ ಭಯವಿದೆ ಎಂದು ಅವರು ಹೇಳಿದರು.
ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವವರು ಎಸ್‌ಐಆರ್ ಅನ್ನು ಬಳಸುವ ಸಾಧ್ಯತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ ಎಂದು ಹೇಳಿದರು.
ಚುನಾವಣಾ ಆಯೋಗವು ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಇಂತಹ ಪದ್ಧತಿಗಳಿಂದ ದೂರವಿರಬೇಕೆಂದು ವಿಧಾನಸಭೆಯು ಸರ್ವಾನುಮತದಿಂದ ಒತ್ತಾಯಿಸುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪಾರದರ್ಶಕ ರೀತಿಯಲ್ಲಿ ನಡೆಸಬೇಕೆಂದು ಕೂಡ ಆಗ್ರಹಿಸುತ್ತದೆ ಎಂದು ಸಿಎಂ ಹೇಳಿದರು.
ಕೆಲವು ಸದಸ್ಯರು ಸೂಚಿಸಿದ ತಿದ್ದುಪಡಿಗಳ ನಂತರ, ಸ್ಪೀಕರ್ ಎ.ಎನ್ ಶಂಸೀರ್ ಅವರು ಸದನವು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ ಎಂದು ಘೋಷಿಸಿದರು.
ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯ


