ಭೂಕುಸಿತ, ಜಲಪ್ರಳಯ ದುರಂತ ಸಂಭವಿಸಿರುವ ವಯನಾಡ್‌ಗೆ ನೆರವು ನೀಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ ರಾಜೇಶ್ ಅವರು ಸೋಮವಾರ ಸದನದಲ್ಲಿ ಮಂಡಿಸಿದ ನಿರ್ಣಯದಲ್ಲಿ, ಜು.30ರಂದು ವಯನಾಡಿನ ಮೆಪ್ಪಾಡಿ ಪಂಚಾಯತ್‌ನ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಪ್ರದೇಶಗಳಲ್ಲಿ ಸಂಭವಿಸಿದ್ದ ಭೂಕುಸಿತಗಳಿಂದ ಉಂಟಾಗಿರುವ ವಿನಾಶಗಳನ್ನು ವಿವರಿಸುವ ಜ್ಞಾಪಕ ಪತ್ರವನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಇದುವರೆಗೂ ಯಾವುದೇ ತಕ್ಷಣದ ನೆರವು ದೊರಕಿಲ್ಲ ಮತ್ತು ಕೇಂದ್ರದಿಂದ ನೆರವು ಪಡೆಯುವಲ್ಲಿ ವಿಳಂಬವು ಭೂಕುಸಿತಗಳಲ್ಲಿ ಬದುಕುಳಿದವರ ಪುನರ್ವಸತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗಿದೆ.
ಭೂಕುಸಿತದಿಂದ ಸಂತ್ರಸ್ತರಾದವರ ಬ್ಯಾಂಕ್ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಮತ್ತು ತಕ್ಷಣವೇ ಆರ್ಥಿಕ ನೆರವು ನೀಡಲು ಕೇಂದ್ರ ಕ್ರಮಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ವಯನಾಡ್‌ನಲ್ಲಿ ಸಂಭವಿಸಿರುವುದು ದೇಶದಲ್ಲಿ ವರದಿಯಾದ ಅತ್ಯಂತ ಭೀಕರ ಭೂಕುಸಿತ ದುರಂತಗಳಲ್ಲಿ ಒಂದಾಗಿದೆ ಎಂದಿರುವ ಸಚಿವರು, ಇದು ಜಿಲ್ಲೆಯ ಸಂಪೂರ್ಣ ಚಿತ್ರಣವನ್ನೇ ಬದಲಿಸಿದೆ ಎಂದು ಹೇಳಿದ್ದಾರೆ.
ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ವೈಯಕ್ತಿಕ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವು ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಇದನ್ನೂ ಓದಿ : ನಿಜ್ಜರ್ ಹತ್ಯೆಯ ವಿವಾದ ಉಲ್ಬಣ: ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿ, ತನ್ನ ಅಧಿಕಾರಿಯನ್ನು ಹಿಂತೆಗೆದುಕೊಂಡ ಭಾರತ


