ಕೇರಳ ಸರಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿ ಮುಂದುವರಿದಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ವಿರುದ್ಧ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ರಾಜ್ಯಪಾಲರ ವಿರುದ್ಧ ಕೇಂದ್ರದ ಮೊರೆ ಹೋಗುವುದಾಗಿ ಇತ್ತೀಚೆಗೆ ಪಿಣರಾಯ್ ವಿಜಯನ್ ಹೇಳಿದ್ದರು. ಮೂಲಗಳ ಪ್ರಕಾರ, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯಗಳು ಮತ್ತು ಕಟ್ಟುಪಾಡುಗಳನ್ನು ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಸಿಎಂ ಪಿಣರಾಯ್ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಯಾವುದೇ ನಿರ್ದಿಷ್ಟ ಬೇಡಿಕೆಯನ್ನು ಸಲ್ಲಿಸದಿದ್ದರೂ, ರಾಜ್ಯಪಾಲರು ಪ್ರಚೋದನೆಗಳನ್ನು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಪ್ರತಿಭಟನೆಯ ನಡುವೆ ರಾಜ್ಯಪಾಲರು ಇತ್ತೀಚೆಗೆ ಕೋಝಿಕ್ಕೋಡ್ ನಗರಕ್ಕೆ ಭೇಟಿ ನೀಡಿದ್ದನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬದ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. ರಾಜ್ಯದ ವಿರುದ್ಧ ರಾಜ್ಯಪಾಲರ ನಿಲುವು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಹದಗೆಡಿಸಬಹುದು ಎಂದು ಪಿಣರಾಯ್ ವಿಜಯನ್ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳ ಸರಕಾರ-ರಾಜ್ಯಪಾಲರ ಜಟಾಪಟಿ:
2019ರಲ್ಲಿ ಕೇಂದ್ರ ಸರ್ಕಾರ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜ್ಯಪಾಲರಾಗಿ ನೇಮಕಗೊಳಿಸಿದ ದಿನಗಳಿಂದಲೇ ರಾಜ್ಯಪಾಲರು ಮತ್ತು ಕೇರಳ ಸರ್ಕಾರದ ನಡುವೆ ಹಲವು ವಿಚಾರಗಳಿಗೆ ಜಟಾಪಟಿ ನಡೆದಿದೆ. 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದ ಕೇರಳ ಸರ್ಕಾರ, ಜ.13 ರಂದು ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ರಾಜ್ಯ ಸರ್ಕಾರ ಕೋರ್ಟ್ ಮೆಟ್ಟಿಲೇರಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯಪಾಲರು, ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಈ ವಿಷಯವನ್ನು ಮೊದಲು ನನಗೆ ತಿಳಿಸಬೇಕಿತ್ತು. ಸರ್ಕಾರ ಕೋರ್ಟ್‌ಗೆ ಹೋದ ವಿಚಾರ ಪತ್ರಿಕೆಗಳ ಮೂಲಕ ಗೊತ್ತಾಗಿದೆ. ನಾನು ಕೇವಲ ರಬ್ಬರ್ ಸ್ಟಾಂಪ್ ಅಲ್ಲ. ಸರ್ಕಾರ ಶಿಷ್ಟಾಚಾರ ಮತ್ತು ಸೌಜನ್ಯ ಉಲ್ಲಂಘಿಸಲಾಗಿದೆ ಎಂದು ಹೇಳಿದ್ದರು.
ಬಳಿಕ ಕೇರಳದ 9 ವಿಶ್ವವಿದ್ಯಾನಿಲಯಗಳಿಗೆ ಉಪ ಕುಲಪತಿಗಳ ನೇಮಕ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಜಟಾಪಟಿ ಉಂಟು ಮಾಡಿತ್ತು. 2022ರ ಅ.22ರಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಏಕಾಏಕಿ ಕೇರಳದ 9 ವಿವಿಗಳ ಉಪ ಕುಲಪತಿಗಳ ರಾಜೀನಾಮೆ ಕೇಳಿದ್ದರು. ರಾಜ್ಯಪಾಲರ ದಿಢೀರ್ ನಿರ್ಧಾರಕ್ಕೆ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಉಪ ಕುಲಪತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಬಳಿಕ ಸರ್ಕಾರ, ಉಪ ಕುಲಪತಿಗಳನ್ನು ನೇಮಿಸುವ ಅಧಿಕಾರದಿಂದ ರಾಜ್ಯಪಾಲರನ್ನೇ ಕೆಳಗಿಳಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ಆದರೆ, ಈ ಮಸೂದೆಗೆ ಅಂಗೀಕಾರಕ್ಕೆ ರಾಜ್ಯಪಾಲರು ಸಹಿ ಹಾಕುವುದಿಲ್ಲ ಎಂದು ತಿಳಿದು ಸುಗ್ರಿವಾಜ್ಞೆ ಹೊರಡಿಸಲಾಗಿತ್ತು.
ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳನ್ನು ಇತ್ಯರ್ಥಪಡಿಸುವಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿಳಂಬ ಮಾಡಿದ್ದರು. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಸುಮಾರು 8 ಮಸೂದೆಗಳು ವಿಲೇವಾರಿಗೆ ಬಾಕಿಯಿದೆ. ಈ ನಡುವೆ ಡಿಸೆಂಬರ್ 11ರಂದು ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದರು. ರಾಜ್ಯಪಾಲರು ದೆಹಲಿಗೆ ಪ್ರಯಾಣಿಸಲು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತೆರಳುವ ದಾರಿ ಮಧ್ಯೆ ಈ ಘಟನೆ ನಡೆದಿತ್ತು. ತಕ್ಷಣ ಕಾರಿನಿಂದ ಕೆಳಗಿಳಿದಿದ್ದ ರಾಜ್ಯಪಾಲರು, ಸಿಎಂ ಕಳಿಸಿದ ಗೂಂಡಾಗಳು ನನ್ನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಉದ್ದೇಶ ಅವರಿಗಿತ್ತು ಎಂದು ಮಾದ್ಯಮಗಳ ಮುಂದೆ ಹೇಳಿದ್ದರು.
ಇದನ್ನು ಓದಿ: ತಮಿಳುನಾಡು: 30 ಹಿಂದೂ ಕುಟುಂಬಗಳಿಗೆ ಆಶ್ರಯ ನೀಡಿದ ಮಸೀದಿ


