ಕೇರಳದ ಮುನ್ಸಿಪಲ್ ಕಾರ್ಪೋರೇಶನ್ ಒಂದರ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಸಿಪಿಐ(ಎಂ) ಮಹಿಳಾ ಕೌನ್ಸಿಲರ್ ಒಬ್ಬರ ಅಪಹರಣ, ಆಸ್ಪತ್ರೆಗೆ ದಾಖಲು, ಪಕ್ಷಾಂತರ ಆಫರ್ ಹೀಗೆ ದೊಡ್ಡ ಹೈಡ್ರಾಮಕ್ಕೆ ಕಾರಣವಾಗಿದೆ.
ಎರ್ನಾಕುಲಂ ಜಿಲ್ಲೆಯ ಕೂತಟ್ಟುಕುಲಂ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಆಡಳಿತವಿದೆ. 13 ಮಂದಿ ಸದಸ್ಯರನ್ನು ಎಲ್‌ಡಿಎಫ್ ಹೊಂದಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಇದ್ದು, 11 ಸದಸ್ಯರನ್ನು ಹೊಂದಿದೆ.
ಕೂತಟ್ಟುಕುಲಂ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಐಸೋಲೇಶನ್ ವಾರ್ಡ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಯಡಿಎಫ್, ಮುನ್ಸಿಪಲ್ ಕೌನ್ಸಿಲ್ ಆಡಳಿತದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಶನಿವಾರ (ಜ.18) ಅಣಿಯಾಗಿತ್ತು. ಆದರೆ, ಆಡಳಿತರೂಢ ಎಲ್‌ಡಿಎಫ್ ಮುನ್ಸಿಪಲ್ ಸಭೆಯನ್ನೇ ಬಹಿಷ್ಕರಿಸಿತ್ತು.
ಎಲ್‌ಡಿಎಫ್ ಆಡಳಿತದ ಕುರಿತು ಅಸಮಾಧಾನ ಹೊಂದಿದ್ದ ಸಿಪಿಐ(ಎಂ) ಮಹಿಳಾ ಕೌನ್ಸಿಲರ್ ಕಲಾ ರಾಜು ಎಂಬವರು ಪಕ್ಷ ತೊರೆದು ಯುಡಿಎಫ್ ಬಣ ಸೇರುವ ಸೂಚನೆ ನೀಡಿದ್ದರು. ತಮ್ಮದೇ ಪಕ್ಷದ ವಿರುದ್ದ ಅವರು ಹೇಳಿಕೆಗಳನ್ನು ನೀಡುತ್ತಿದ್ದರು. ಅವಿಶ್ವಾಸ ನಿರ್ಣಯ ಮಂಡನೆಯ ಹಿನ್ನೆಲೆ ಶನಿವಾರ (ಜ.19) ಎಲ್‌ಡಿಎಫ್ ಕೌನ್ಸಿಲ್ ಸಭೆ ಬಹಿಷ್ಕರಿಸಿದ್ದರೂ, ಕಲಾ ರಾಜು ಮುನ್ಸಿಪಲ್ ಕಚೇರಿ ಬಳಿಗೆ ಬಂದಿದ್ದರು. ಈ ವೇಳೆ ಅವರನ್ನು ಅಪಹರಿಸಿ ಇಡೀ ದಿನ ಸಿಪಿಐ(ಎಂ) ಕಚೇರಿಯಲ್ಲಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ಕಲಾ ರಾಜು ಅವರು, “ಮುನ್ಸಿಪಲ್ ಕಚೇರಿ ಬಳಿಗೆ ಬಂದಾಗ ಎಲ್ಲರೆದುರು ನನ್ನ ಬಟ್ಟೆಯನ್ನು ಎಳೆದಾಡಿ, ಬಲವಂತವಾಗಿ ಸಿಪಿಐ(ಎಂ) ಪ್ರಾದೇಶಿಕ ಕಚೇರಿಗೆ ಕರೆದೊಯ್ದರು. ಅವಿಶ್ವಾಸ ನಿರ್ಣಯವನ್ನು ಬೆಂಬಲಿಸದಂತೆ ಒತ್ತಡ ಹೇರಿದರು. ಪಕ್ಷಕ್ಕೆ ದ್ರೋಹ ಬಗೆದು ನೀನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಸಿಪಿಐ(ಎಂ) ಪಕ್ಷದ ಎಲ್ಲಾ ಪುರುಷರು ಅಲ್ಲಿದ್ದರು” ಎಂದು ಆರೋಪಿಸಿದ್ದಾರೆ.
“ನಾನು ಹಲವು ಗಂಟೆಗಳ ಕಾಲ ಸಿಪಿಐ(ಎಂ) ಕಚೇರಿಯಲ್ಲೇ ಇದ್ದೆ. ನಂತರ ಸಂಜೆ 4:30ಕ್ಕೆ ಮನೆಗೆ ಬಿಟ್ಟರು. ಅವರು ನನ್ನೊಂದಿಗೆ ಮಾತನಾಡಿದ ರೀತಿ ಮತ್ತು ಎಲ್ಲರ ಮುಂದೆ ನನ್ನ ಬಟ್ಟೆಗಳನ್ನು ಹಿಡಿದು ಎಳೆದು ಅವಮಾನಿಸಿದ ರೀತಿ ನನಗೆ ಹೆಚ್ಚು ನೋವುಂಟು ಮಾಡಿದೆ” ಎಂದು ಕಲಾ ರಾಜು ಹೇಳಿದ್ದಾರೆ.
ಆಪಾದಿತ ಅಪಹರಣ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಲಾ ಅವರ ಕುಟುಂಬವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೂತಟ್ಟುಕುಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕಲಾ ಅವರು ಪ್ರಸ್ತುತ ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ಸೇರುವಂತೆ ಆಫರ್
ಮುನ್ಸಿಪಲ್ ಕೌನ್ಸಿಲ್ ಹೈಡ್ರಾಮದ ಬಳಿಕ ತಮ್ಮ ಪಕ್ಷಕ್ಕೆ ಸೇರುವಂತೆ ಎರ್ನಾಕುಲಂ ಜಿಲ್ಲಾ ಕಾಂಗ್ರೆಸ್ ಕಲಾ ರಾಜು ಅವರಿಗೆ ಆಫರ್ ಕೊಟ್ಟಿದೆ. ಕಲಾ ಅವರು ಕೂಡ ಯುಡಿಎಫ್ ಬಣ ಸೇರುವ ಸೂಚನೆ ನೀಡಿದ್ದಾರೆ.
“ನನ್ನ ಜೀವನದ 25 ವರ್ಷಗಳನ್ನು ಸಿಪಿಎಂಗೆ ಅರ್ಪಿಸಿದ್ದೇನೆ. ನನ್ನ ಪತಿಯ ಮರಣದ ಆಘಾತದ ಹೊರತಾಗಿಯೂ, ನಾನು ಜನರು ಮತ್ತು ಪಕ್ಷ ಎರಡಕ್ಕೂ ಸೇವೆ ಸಲ್ಲಿಸಲು ಬದ್ಧಳಾಗಿದ್ದೆ. ಆದರೆ, ನಾನು ಅನುಭವಿಸಿದ ಅವಮಾನಕ್ಕೆ ಪಕ್ಷ ಬದಲಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇನೆ” ಎಂದು ಕಲಾ ಅವರು ಹೇಳಿದ್ದಾರೆ.
ಸಿಪಿಐ (ಎಂ) ಕಲಾ ಅವರನ್ನು ಏಕೆ ಗುರಿ ಮಾಡಿದೆ?
ಮಾಧ್ಯಮಗಳ ಜೊತೆ ಮಾತನಾಡಿರುವ ಕಲಾ ರಾಜು “ಮುನ್ಸಿಪಲ್ ಕೌನ್ಸಿಲ್ ಉಪಾಧ್ಯಕ್ಷ ಸನ್ನಿ ಕುರಿಯಕೋಸ್ ಅಧ್ಯಕ್ಷರಾಗಿದ್ದಾಗ, ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಬ್ಯಾಂಕ್‌ನಿಂದ ನನ್ನ ಕುಟುಂಬ 10 ಲಕ್ಷ ರೂ. ಸಾಲ ಪಡೆದಿತ್ತು. ಕೂತ್ತಟ್ಟುಕುಲಂ ಪಟ್ಟಣದಲ್ಲಿರುವ ನಮ್ಮ ಭೂಮಿಯ ಒಂದು ಭಾಗವನ್ನು ಒತ್ತೆ ಇರಿಸಿ ಆ ಸಾಲವನ್ನು ಪಡೆಯಲಾಗಿತ್ತು.”
“ಕೋವಿಡ್‌ನಿಂದ ನನ್ನ ಪತಿ ನಿಧನರಾದರು. ಈ ನಡುವೆ ಸಾಲ ಮರು ಪಾವತಿಸದ ಕಾರಣ ಬ್ಯಾಂಕ್ ಮುಟ್ಟುಗೋಲು ನೋಟಿಸ್ ನೀಡಿತು. ರಿಯಾಯಿತಿ ನೀಡುವಂತೆ ಕೋರಿದ್ದ ನನ್ನ ಮನವಿಯನ್ನು ತಳ್ಳಿ ಹಾಕಿತ್ತು. ನಾನು ಪಕ್ಷದ ನಾಯಕರನ್ನು ಸಂಪರ್ಕಿಸಿ ನನ್ನ ಕಳವಳವನ್ನು ವ್ಯಕ್ತಪಡಿಸಿದೆ. ಸನ್ನಿ ಸೇರಿದಂತೆ ನಾಯಕರು ಮಧ್ಯಪ್ರವೇಶಿಸಿ, ಪಕ್ಷವು ನಮಗೆ ಸಹಾಯ ಮಾಡಲಿದೆ ಎಂದಿದ್ದರು”.
“ಅವರು ನಮ್ಮ ಭೂಮಿಯನ್ನು 22.5 ಲಕ್ಷ ರೂ.ಗೆ ಮಾರಾಟ ಮಾಡಿ, ಬಂದ ಹಣವನ್ನು ಬ್ಯಾಂಕ್ ಬಾಕಿ ಪಾವತಿಸಲು ಬಳಸಿಕೊಂಡರು”.
“ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಲು ನೀವು ಯುಡಿಎಫ್ ಜೊತೆ ಒಪ್ಪಂದ ಮಾಡಿಕೊಂಡಿದ್ದೀರಿ ಎಂದು ಸಿಪಿಎಂ ನಾಯಕರು ನನ್ನ ವಿರುದ್ದ ಆರೋಪ ಮಾಡಿದ್ದಾರೆ. ನನ್ನ ಮತ್ತು ಯುಡಿಎಫ್ ಕೌನ್ಸಿಲರ್‌ಗಳ ನಡುವೆ ಯಾವುದೇ ಒಪ್ಪಂದವಾಗಲಿ, ಮಾತಕತೆಯಾಗಲಿ ನಡೆದಿಲ್ಲ. ಸಿಪಿಎಂ ನೇತೃತ್ವದ ಆಡಳಿತ ಪಕ್ಷದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲು ನಾನು ನಿರ್ಧರಿಸಿದ್ದೇನೆ. ಏಕೆಂದರೆ, ಪಕ್ಷವು ನನ್ನ ಮತ್ತು ನನ್ನ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ” ಎಂದು ಕಲಾ ಅವರು ವಿವರಿಸಿದ್ದಾರೆ.


