ಕೇರಳದಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ಛತ್ತೀಸ್‌ಗಢದ ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್ ಕಾರ್ಯರ್ತರು ಭಾಗಿಯಾಗಿದ್ದಾರೆ ಎಂದು ಆಡಳಿತರೂಢ ಸಿಪಿಐ(ಎಂ) ನಾಯಕರು ಆರೋಪಿಸಿದ್ದಾರೆ.
ಸ್ಥಳೀಯ ಸ್ವ-ಆಡಳಿತ ಸಚಿವ ಎಂ.ಬಿ ರಾಜೇಶ್ ಆರಂಭದಲ್ಲಿ ಈ ಆರೋಪ ಮಾಡಿದ್ದು, ಇದನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಕೂಡ ಬೆಂಬಲಿಸಿದ್ದಾರೆ.
ಡಿಸೆಂಬರ್ 18ರಂದು ಪಾಲಕ್ಕಾಡ್‌ನ ವಲಯಾರ್‌ನಲ್ಲಿ ಗುಂಪೊಂದು ರಾಮ್ ನಾರಾಯಣ್ ಬಘೇಲ್ ಎಂಬ ಛತ್ತೀಸ್‌ಗಢದ ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ ಮಾಡಿತ್ತು.
ಬಘೇಲ್ ಮೇಲೆ ದಾಳಿ ಮಾಡುವಾಗ ಕೆಲ ಆರೋಪಿಗಳು “ನೀನು ಬಾಂಗ್ಲಾದೇಶದವನಾ?” ಎಂದು ಕೇಳಿ ಥಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಘೇಲ್ ಸಂಘ ಪರಿವಾರದ ಕೋಮು ರಾಜಕೀಯದ ಬಲಿಪಶು ಎಂದು ರಾಜೇಶ್ ಆರೋಪಿಸಿದ್ದಾರೆ. “ಇದು ಕೇವಲ ಗುಂಪು ಹತ್ಯೆಯಲ್ಲ. ಆರೋಪಿಗಳಲ್ಲಿ ಸಿಪಿಐ(ಎಂ) ಕಾರ್ಯಕರ್ತರನ್ನು ಕೊಲೆ ಮಾಡಲು ಯತ್ನಿಸಿದ ಕ್ರಿಮಿನಲ್ ಹಿನ್ನೆಲೆಯುಳ್ಳ ಆರ್‌ಎಸ್‌ಎಸ್ ಕಾರ್ಯಕರ್ತರು ಸೇರಿದ್ದಾರೆ. ಬಘೇಲ್ ಅವರನ್ನು ಬಾಂಗ್ಲಾದೇಶದವರೇ ಎಂದು ಕೇಳಿ ಹತ್ಯೆ ಮಾಡಲಾಗಿದೆ” ಎಂದು ರಾಜೇಶ್ ಹೇಳಿದ್ದಾರೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೂಡ ಈ ಕೊಲೆಯಲ್ಲಿ ಆರ್‌ಎಸ್‌ಎಸ್ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಈ ನಡುವೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಘೇಲ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಕಂದಾಯ ಸಚಿವ ಕೆ. ರಾಜನ್, ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಸಂಪುಟ ನಿರ್ಧರಿಸುತ್ತದೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ಸಚಿವರ ಭರವಸೆಯನ್ನು ಪರಿಗಣಿಸಿ, ಬಘೇಲ್ ಕುಟುಂಬ ಪ್ರತಿಭಟನೆ ಹಿಂಪಡೆದಿದ್ದು, ಮೃತದೇಹ ಸ್ವೀಕರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.


