ಅವೈಜ್ಞಾನಿಕ ಮತ್ತು ಅಸುರಕ್ಷಿತ ಮನೆ ಹೆರಿಗೆಗಳನ್ನು ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡುವಂತೆ ಕೇರಳದ ವೈದ್ಯರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ಏಪ್ರಿಲ್ 5 ರಂದು ಮಲಪ್ಪುರಂ ಜಿಲ್ಲೆಯ ಬಾಡಿಗೆ ಮನೆಯಲ್ಲಿ ಹೆರಿಗೆಯ ಸಮಯದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ ನಂತರ ಈ ಬೇಡಿಕೆ ಬಂದಿದೆ. ಹೆರಿಗೆ ನಂತರದ ಅತಿಯಾದ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದರು.
ರಾಜ್ಯದ ಆರೋಗ್ಯ ಸೇವೆಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ಪ್ರತಿನಿಧಿಸುವ ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ) ಈ ಘಟನೆಯನ್ನು ಬಲವಾಗಿ ಖಂಡಿಸಿದೆ. ವೈದ್ಯಕೀಯ ಬೆಂಬಲವಿಲ್ಲದೆ ಮನೆ ಹೆರಿಗೆಗಳನ್ನು ‘ಕ್ರಿಮಿನಲ್ ಪದ್ಧತಿ’ ಎಂದು ಸಂಸ್ಥೆ ಬಣ್ಣಿಸಿದೆ. ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಆಧುನಿಕ ವೈದ್ಯಕೀಯ ವಿಜ್ಞಾನವು ಇಷ್ಟೊಂದು ಮುಂದುವರೆದಿದ್ದರೂ ಸಹ, ಜನರು ಇನ್ನೂ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದ ಚಿಕಿತ್ಸಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂಬುದು ಆಘಾತಕಾರಿ ಎಂದು ಕೆಜಿಎಂಒಎ ಹೇಳಿದೆ.
ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿರುವ ಕೆಜಿಎಂಒಎ, ಕೇರಳವು ಸಾರ್ವಜನಿಕ ಆರೋಗ್ಯದಲ್ಲಿ, ವಿಶೇಷವಾಗಿ ತಾಯಿ ಮತ್ತು ಶಿಶು ಮರಣಗಳನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಸರ್ಕಾರ ಮತ್ತು ಆರೋಗ್ಯ ಕಾರ್ಯಕರ್ತರ ಹಲವು ವರ್ಷಗಳ ಕಠಿಣ ಪರಿಶ್ರಮದ ಮೂಲಕ ಈ ಸಾಧನೆಗಳು ಸಾಧ್ಯವಾಗಿವೆ ಎಂದಿದೆ.
“ಈ ಬೆಳವಣಿಗೆಗಳಿಂದ ಪ್ರತಿಯೊಬ್ಬ ನಾಗರಿಕನೂ ಪ್ರಯೋಜನ ಪಡೆಯಲು ಅರ್ಹ. ಆದರೆ, ಕೆಲವು ಜನರು ಜೀವಗಳನ್ನು ಅಪಾಯಕ್ಕೆ ಸಿಲುಕಿಸುವ ಹಿಂದುಳಿದ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆಜಿಎಂಒಎ ಪ್ರಕಾರ, ಕೇರಳದಲ್ಲಿ ಪ್ರತಿ ವರ್ಷ ಸುಮಾರು 3,00,000 ಹೆರಿಗೆಗಳು ನಡೆಯುತ್ತವೆ. ಅವುಗಳಲ್ಲಿ ಹೆಚ್ಚಿನವು ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದರೂ, ಸುಮಾರು 500 ಹೆರಿಗೆಗಳು ಇನ್ನೂ ಮನೆಯಲ್ಲಿಯೇ ಸಂಭವಿಸುತ್ತವೆ. ಇದರ ಹಿಂದಿನ ಕಾರಣವೆಂದರೆ ಅವೈಜ್ಞಾನಿಕ ಚಿಕಿತ್ಸಾ ವಿಧಾನಗಳಲ್ಲಿ ಕುರುಡು ನಂಬಿಕೆ ಅಥವಾ ಕೆಲವು ಗುಂಪುಗಳು ಅಥವಾ ವ್ಯಕ್ತಿಗಳು ಹರಡುವ ತಪ್ಪು ಮಾಹಿತಿ ಎಂದು ಅವರು ಹೇಳಿದರು.
ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಪ್ರತಿ ಮಗು ಮತ್ತು ತಾಯಿಗೆ ಸರಿಯಾದ ವೈದ್ಯಕೀಯ ಆರೈಕೆ ಪಡೆಯುವ ಹಕ್ಕಿದೆ. ಅವರ ಈ ಹಕ್ಕನ್ನು ನಿರಾಕರಿಸುವುದನ್ನು ಗಂಭೀರ ಅಪರಾಧವೆಂದು ನೋಡಬೇಕು ಎಂದು ಸಂಘವು ಹೇಳಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಮನೆ ಹೆರಿಗೆಗಳನ್ನು ಪ್ರಚಾರ ಮಾಡುವ ಜನರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಂತಹ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ. ಮಹಿಳೆಯ ಗಂಡನನ್ನು ವಶಕ್ಕೆ ತೆಗೆದುಕೊಂಡು ಅಪರಾಧಿಕ ನರಹತ್ಯೆಯ ಆರೋಪ ಹೊರಿಸಲಾಗಿದೆ ಎಂದು ಸಚಿವರು ದೃಢಪಡಿಸಿದರು.
ಈ ವರ್ಷ ಇಲ್ಲಿಯವರೆಗೆ, ಕೇರಳವು ಸುಮಾರು ಎರಡು ಲಕ್ಷ ಹೆರಿಗೆಗಳನ್ನು ದಾಖಲಿಸಿದೆ. ಅವುಗಳಲ್ಲಿ 382 ಮನೆಯಲ್ಲಿಯೇ ನಡೆದಿವೆ. ಅಸುರಕ್ಷಿತ ಮತ್ತು ಅವೈಜ್ಞಾನಿಕ ಮನೆ ಹೆರಿಗೆಗಳನ್ನು ತಡೆಯುವ ಜೊತೆಗೆ, ತಾಯಂದಿರು ಮತ್ತು ಮಕ್ಕಳ ಜೀವಗಳನ್ನು ರಕ್ಷಿಸಲು ಸರ್ಕಾರವು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈಗ ಸಂಘ ಒತ್ತಾಯಿಸಲಾಗುತ್ತಿದೆ.
‘ಬಂಗಾಳವನ್ನು ಒಡೆದು ಆಳುವುದಕ್ಕೆ ಸಾಧ್ಯವಿಲ್ಲ..’; ವಕ್ಫ್ ಕಾಯ್ದೆ ಜಾರಿಗೆ ತರುವುದಿಲ್ಲ ಎಂದ ಮಮತಾ ಬ್ಯಾನರ್ಜಿ


