ತಮಿಳುನಾಡಿನ ಬಳಿಕ ಕೇರಳ ವಿಧಾನಸಭೆಯಲ್ಲೂ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮಂಗಳವಾರ (ಜ.20) ಜಟಾಪಟಿ ನಡೆದಿದೆ. ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣದಲ್ಲಿನ ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಲ ಸಾಲುಗಳನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಉದ್ದೇಶಪೂರ್ವಕವಾಗಿ ಓದದೆ ಬಿಟ್ಟಿದ್ದಾರೆ. ಇನ್ನೂ ಕೆಲ ಸಾಲುಗಳನ್ನು ಮಾರ್ಪಡಿಸಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
112 ನಿಮಿಷಗಳ ಸುದೀರ್ಘ ಭಾಷಣ ಮಾಡಿ ರಾಜ್ಯಪಾಲರು ನಿರ್ಗಮಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ, ಸಚಿವ ಸಂಪುಟ ಅನುಮೋದಿಸಿದ ಭಾಷಣದಲ್ಲಿನ ಕೆಲವು ಸಾಲುಗಳನ್ನು ರಾಜ್ಯಪಾಲರು ಕೈಬಿಟ್ಟಿದ್ದಾರೆ ಅಥವಾ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಂತ್ರಿ ಮಂಡಲ ಅನುಮೋದಿಸಿದ ಅಧಿಕೃತ ನೀತಿ ಭಾಷಣವು ಹಾಗೆಯೇ ಉಳಿಯಬೇಕು ಎಂದು ಒತ್ತಿ ಹೇಳಿದ್ದಾರೆ.
ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೇರುತ್ತಿದೆ ಎಂದು ಹೇಳಲಾಗಿದ್ದ ಭಾಷಣದ 12ನೇ ಪ್ಯಾರಾವನ್ನು ರಾಜ್ಯಪಾಲರು ಓದಿಲ್ಲ. ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ದೀರ್ಘಕಾಲ ತಡೆಹಿಡಿದಿರುವ ಬಗ್ಗೆ ಮತ್ತು ಈ ವಿಷಯದಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕುರಿತಾದ 15ನೇ ಪ್ಯಾರಾವನ್ನು ಕೈಬಿಟ್ಟಿದ್ದಾರೆ ಮತ್ತು ತೆರಿಗೆ ಹಂಚಿಕೆಗೆ ಸಂಬಂಧಿಸಿದ ಭಾಗದಲ್ಲಿ “ಇದು ನನ್ನ ಸರ್ಕಾರದ ನಂಬಿಕೆ” ಎಂಬ ಸಾಲನ್ನು ರಾಜ್ಯಪಾಲರು ಸ್ವತಃ ಸೇರಿಸಿ ಓದಿದ್ದಾರೆ ಎಂದು ಸಿಎಂ ಆರೋಪ ಮಾಡಿದ್ದಾರೆ.
ರಾಜ್ಯಪಾಲರು ತೆರಳಿದ ನಂತರ, ಸಿಎಂ ಪಿಣರಾಯಿ ವಿಜಯನ್ ಅವರು ರಾಜ್ಯಪಾಲರು ಕೈಬಿಟ್ಟ ಭಾಗಗಳನ್ನು ಸದನದಲ್ಲಿ ಓದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ವಿಧಿ 176ರ ಪ್ರಕಾರ, ರಾಜ್ಯ ಸಚಿವ ಸಂಪುಟ ಅನುಮೋದಿಸಿದ ಭಾಷಣವನ್ನು ರಾಜ್ಯಪಾಲರು ಹಾಗೆಯೇ ಓದಬೇಕು ಎಂದು ಸಿಎಂ ಪ್ರತಿಪಾದಿಸಿದ್ದಾರೆ.
“ಮುಖ್ಯಮಂತ್ರಿ ಸೂಚಿಸಿರುವ ವಿಷಯವು ಬಹಳ ನಿರ್ಣಾಯಕವಾಗಿದೆ. ಸಂಪುಟ ಅನುಮೋದಿಸಿರುವ ವಿಷಯದಲ್ಲಿ ಬದಲಾವಣೆ ಮಾಡುವುದು ಮತ್ತು ಕೈಬಿಡುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಸಂಪುಟ ಅನುಮೋದಿತ ಭಾಷಣವನ್ನೇ ಸದನದ ಸದಸ್ಯರು ಮತ್ತು ಮಾಧ್ಯಮಗಳಿಗೆ ನೀಡಲಾಗುತ್ತದೆ” ಎಂದು ಹೇಳುವ ಮೂಲಕ ಸ್ಪೀಕರ್ ಎ.ಎನ್. ಶಂಸೀರ್ ಮುಖ್ಯಮಂತ್ರಿಯ ಮಾತನ್ನು ಬೆಂಬಲಿಸಿದ್ದಾರೆ.
“ಈ ರೀತಿಯ ಸಂದರ್ಭಗಳಲ್ಲಿ ರಾಜ್ಯಪಾಲರನ್ನು ಅವಮಾನಿಸುವ ರೀತಿಯೇ ತಮಿಳುನಾಡು ಮತ್ತು ಕೇರಳದಲ್ಲೂ ನಡೆಯುತ್ತಿದೆ” ಎಂದು ಗೋವಾ ಮಾಜಿ ರಾಜ್ಯಪಾಲ ಮತ್ತು ಹಿರಿಯ ಬಿಜೆಪಿ ನಾಯಕ ಪಿ.ಎಸ್. ಶ್ರೀಧರನ್ ಪಿಳ್ಳೈ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆಯು ಕೇಂದ್ರ-ರಾಜ್ಯ ಸಂಬಂಧಗಳು, ರಾಜ್ಯಪಾಲರ ಸಾಂವಿಧಾನಿಕ ಪಾತ್ರ ಮತ್ತು ಶಾಸಕಾಂಗ ಸಂಪ್ರದಾಯಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.


