ಪತ್ತನಂತಿಟ್ಟದ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದಾರೆ.
ಪತ್ತನಂತಿಟ್ಟದ ಎಸ್‌ಎಂಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಅಮ್ಮು ಎ ಸಜೀವ್ (21) ನವೆಂಬರ್ 15ರಂದು ಶುಕ್ರವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಪತ್ರವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ತನಿಖೆಯ ಭಾಗವಾಗಿ ಪತ್ತನಂತಿಟ್ಟ ಪೊಲೀಸರು ಈಗಾಗಲೇ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ನಡುವೆ, ಅಮ್ಮು ಆಕೆಯ ಕೆಲ ಸಹಪಾಠಿಗಳಿಂದ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸುತ್ತಿದ್ದರು. ಅದು ಆಕೆಯ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಗಳು ಕಿರುಕುಳ ಅನುಭವಿಸುತ್ತಿರುವ ಆರೋಪ ಮಾಡಿ ಅಮ್ಮು ತಂದೆ ಸಜೀವ್ ಈ ಹಿಂದೆಯೇ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ಸಾವನ್ನಪ್ಪಿದ ದಿನ (ನ.15) ಸಂಜೆ 4 ಗಂಟೆಗೆ ಹೆತ್ತವರು ಮತ್ತು ಕಿರಿಯ ಸಹೋದರನಿಗೆ ಅಮ್ಮು ಕರೆ ಮಾಡಿದ್ದರು. ಆಕೆಯ ಸಂಭಾಷಣೆಯಲ್ಲಿ ಸಹಜತೆ ಇರಲಿಲ್ಲ. ಪ್ರತಿದಿನ ರಾತ್ರಿಯೂ ಅಮ್ಮು ಹೆತ್ತವರಿಗೆ ಕರೆ ಮಾಡುತ್ತಿದ್ದರು. ಆದರೆ, ನವೆಂಬರ್ 15ರಂದು ಆಕೆ ಕರೆ ಮಾಡಿಲ್ಲ. ಆದ್ದರಿಂದ ಪೋಷಕರು ಆಕೆಯ ಹಾಸ್ಟೆಲ್ ವಾರ್ಡನ್ ಅನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅಮ್ಮು ಹಾಸ್ಟೆಲ್‌ನಲ್ಲಿ ಬಿದ್ದು ಮೂಳೆ ಮುರಿತವಾಗಿದೆ. ಆಕೆಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ವಾರ್ಡನ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಹಾಸ್ಟೆಲ್‌ನಿಂದ ಅಮ್ಮುವನ್ನು ಪತ್ತನಂತಿಟ್ಟ ಸಾರ್ವಜನಿಕ ಆಸ್ಪತ್ರೆಗೆ ಮೊದಲು ಕರೆದೊಯ್ಯಲಾಗಿತ್ತು. ಅಲ್ಲಿಂದ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಇದು ಆತ್ಮಹತ್ಯೆ ಎಂಬುವುದನ್ನು ತಳ್ಳಿಹಾಕಿದ್ದು, ಅಮ್ಮು ಸಾವಿನ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ವಿವರವಾದ ತನಿಖೆಗೆ ಒತ್ತಾಯಿಸಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


