ತಿದ್ದುಪಡಿ ಮಾಡಿದ ಭಾಗಗಳೂ ಸೇರಿದಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ಸಂಪೂರ್ಣ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆಯುತ್ತಿರುವ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಗಳ ಕುರಿತ ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಹೇಮಾ ಸಮಿತಿ ವರದಿ ಬಿಚ್ಚಿಟ್ಟಿದೆ. ಅದನ್ನು ಆಧರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎ.ಮುಷ್ತಾಕ್ ಹಾಗೂ ನ್ಯಾಯಮೂರ್ತಿ ಎಸ್. ಮಾನು ಅವರಿದ್ದ ವಿಭಾಗೀಯ ಪೀಠ, ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಿರುವನಂತಪುರ ನಿವಾಸಿ ನವಾಝ್ ಎಂಬುವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಪೀಠ, ಹೇಮಾ ಸಮಿತಿಯ ವರದಿಯು ಗಂಭೀರ ಆರೋಪಗಳನ್ನು ಒಳಗೊಂಡಿದೆ ಎಂದು ಹೇಳಿದೆ.
ಪಿಐಎಲ್‌ಗೆ ಸಂಬಂಧಿಸಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, ಹೇಮಾ ಸಮಿತಿ ವರದಿಯಲ್ಲಿನ ಆರೋಪಗಳ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ರಾಜ್ಯ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು “ಯಾರಾದರು ದೂರು ನೀಡದ ಹೊರತು ಈ ವಿಚಾರದಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ” ಎಂದು ಪೀಠಕ್ಕೆ ಹೇಳಿದ್ದಾರೆ.
ಇದನ್ನೂ ಓದಿ : ಕಲರ್‌ಫುಲ್ ಜಗತ್ತಿನ ಕರಾಳತೆ ತೆರೆದಿಟ್ಟ ‘ಜಸ್ಟೀಸ್ ಹೇಮಾ ಸಮಿತಿ’ ವರದಿ


